ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in
ಪಾಂಡವರಿದ್ದ ಎಡೆಗೆ ಬಂದ ದ್ರುಪದನ ಪುರೋಹಿತನು ತನ್ನ ಮಾತನ್ನು ಮುಂದುವರಿಸುತ್ತಾ ಹೀಗೆ ಹೇಳಿದನು:
"ಕುರುವಂಶದಲ್ಲಿ ಜನಿಸಿದವನಿಗೆ (ಎಂದರೆ ಪಾಂಡುಪುತ್ರನಿಗೆ) ತನ್ನ ಮಗಳನ್ನು ಕೊಡಬೇಕು - ಎಂಬ ಬಯಕೆ ದ್ರುಪದರಾಜನಿಗೆ ಇದ್ದದ್ದೇ. ದ್ರುಪದರಾಜನ ಹೃದಯದಲ್ಲಿ ಸದಾ ಇದ್ದ ಆಸೆಯೇನು ಗೊತ್ತೇ? : ದುಂಡಾಗಿಯೂ ನೀಳವಾಗಿಯೂ ಇರುವ ಬಾಹುಗಳುಳ್ಳ ಅರ್ಜುನನು ನನ್ನೀ ಮಗಳನ್ನು ಧರ್ಮಮಾರ್ಗದಿಂದಲೇ ಮದುವೆಯಾಗಬೇಕು – ಎಂಬುದು; ನನ್ನ ಈ ಆಸೆಯು ಪೂರೈಸಿದಲ್ಲಿ ಇದು ನನ್ನ ಸುಕೃತ (ಸುಕೃತವೆಂದರೆ ಭಾಗ್ಯ); ಇದುವೇ ನನ್ನ ಪಾಲಿಗೆ ಯಶಸ್ಸು, ಪುಣ್ಯ, ಹಾಗೂ ಹಿತವಾದದ್ದು" – ಎಂಬುದಾಗಿ.
ಈ ರೀತಿಯಾಗಿ ವಿನಯದಿಂದ ನುಡಿದ ಪುರೋಹಿತನನ್ನು ಒಮ್ಮೆ ನೋಡಿದನು, ರಾಜ ಯುಧಿಷ್ಠಿರ. ಮತ್ತು ಬಳಿಯೇ ಇದ್ದ ಭೀಮಸೇನನಿಗೆ ಈ ರೀತಿಯಾಗಿ ಆಜ್ಞೆಯಿತ್ತನು: "ಭೀಮ, ಈತನು ದ್ರುಪದರಾಜನ ಪುರೋಹಿತ. ಈತನಿಗೆ ಪಾದ್ಯವನ್ನೂ ಅರ್ಘ್ಯವನ್ನೂ ಕೊಡು (ಕಾಲ್ತೊಳೆಯಲು ಕೊಡುವ ನೀರು ಪಾದ್ಯ. ಹಾಗೆಯೇ ಹಸ್ತ-ಶುದ್ಧಿಗಾಗಿ ಕೊಡುವ ನೀರು ಅರ್ಘ್ಯ). ಈತನಿಗೆ ಅಭ್ಯಧಿಕವಾದ (ಎಂದರೆ ತುಂಬಾ ಹೆಚ್ಚಿನದಾದ) ಗೌರವವನ್ನು ಸಲ್ಲಿಸತಕದ್ದು".
ಭೀಮನು ಅಂತೆಯೇ ಮಾಡಿದನು. ಆ ಗೌರವವನ್ನು ಹರ್ಷದಿಂದ ಸ್ವೀಕರಿಸಿದ ಪುರೋಹಿತನು ಸುಖಾಸೀನನಾದನು. ಆತನನ್ನು ಕುರಿತು ಯುಧಿಷ್ಠಿರನು ಹೀಗೆ ಹೇಳಿದನು:
" ತನ್ನ ಮಗಳನ್ನು ತನ್ನ ಮನಸ್ಸಿಗೆ ತೋರಿದಂತೆ ದ್ರುಪದರಾಜನು ಕೊಟ್ಟುಬಿಟ್ಟಿಲ್ಲ; ಬದಲಾಗಿ ಸ್ವಧರ್ಮಕ್ಕೆ ಅನುಸಾರವಾಗಿ (ಎಂದರೆ ಕ್ಷತ್ರಿಯಧರ್ಮಕ್ಕೆ ಅನುಗುಣವಾಗಿ) ಶುಲ್ಕವನ್ನು ನಿಗದಿಮಾಡಿದ್ದಾನೆ. ವೀರನಾದ ಅರ್ಜುನನೂ ಅಂತೆಯೇ ಅವಳನ್ನು ಪಡೆದಿದ್ದಾನೆ.
ದ್ರುಪದನು ವರ್ಣ-ಶೀಲ-ಕುಲ-ಗೋತ್ರಗಳನ್ನೇನೂ ನಿಗದಿಮಾಡಲಿಲ್ಲ. ಬಿಲ್ಲನ್ನು ಸಜ್ಜುಗೊಳಿಸಬೇಕು; ಲಕ್ಷ್ಯವನ್ನು ಭೇದಿಸಬೇಕು: ಅದನ್ನು ಸಾಧಿಸಿದವನಿಗೆ ನನ್ನ ಮಗಳನ್ನು ಕೊಡುವುದು - ಎಂದು ನಿಗದಿಮಾಡಿದ್ದನು.
ಅದಕ್ಕನುಗುಣವಾಗಿಯೇ ಈ ಮಹಾತ್ಮನಾದರೂ ರಾಜರುಗಳ ಸ್ತೋಮದಲ್ಲಿಯೇ ಕೃಷ್ಣೆಯನ್ನು ಗೆದ್ದಿರುವುದು. ಪರಿಸ್ಥಿತಿಯು ಹೀಗಿರಲು, ಸೋಮವಂಶದ ರಾಜನಾಗಿದ್ದುಕೊಂಡು, ಸುಖವನ್ನು ಕಳೆದುಹಾಕುವ ಸಂತಾಪವನ್ನು ದ್ರುಪದನು ಮಾಡಿಯಾನೇ? ಸರ್ವಥಾ ಇಲ್ಲ. ಆತನ ಬಯಕೆಯು ಏನಿತ್ತೋ ಅದೀಗ ಸಂಪನ್ನವಾಗುತ್ತಿದೆ. ಈ ರಾಜಕುಮಾರಿಯೂ ಉತ್ತಮಳೆಂದೇ ಅತ್ಯಂತ ಸ್ವೀಕಾರ್ಯಳೆಂದೇ ಭಾವಿಸುತ್ತೇನೆ, ಓ ಬ್ರಾಹ್ಮಣನೇ.
ಅಲ್ಪಬಲದವರಾರೂ ಆ ಬಿಲ್ಲಿಗೆ ಹೆದೆಯೇರಿಸಲು ಶಕ್ತರಾಗರು; ಅಸ್ತ್ರವಿದ್ಯೆಯಲ್ಲಿ ಶಿಕ್ಷಿತರಲ್ಲದವರೂ ಅಷ್ಟೇ; ಹಾಗೆಯೇ ನೀಚಕುಲೋತ್ಪನ್ನರಾರೂ ಹಾಗೆ ಲಕ್ಷ್ಯಪಾತನ (ಪಾತನವೆಂದರೆ ಬೀಳಿಸುವುದು)ದಲ್ಲಿ ಸಮರ್ಥರಾಗರು.
ಹೀಗಿರಲು ಪಾಂಚಾಲರಾಜನು ತನ್ನ ಮಗಳ ನಿಮಿತ್ತ ಶೋಕಿಸಲು ಇಲ್ಲೇನೂ ಇಲ್ಲ; ಮತ್ತಾವನೇ ಮನುಷ್ಯನೂ ಸಹ ಹಾಗೆ ಲಕ್ಷ್ಯವನ್ನು ಭೇದಿಸಲಾರ."
ಯುಧಿಷ್ಠಿರನು ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಪಾಂಚಾಲರಾಜನ ಕಡೆಯಿಂದ ತ್ವರಿತವಾಗಿ ಮತ್ತೊಬ್ಬನು ಬಂದು ಹೀಗೆ ಹೇಳಿದನು:
"ಮಗಳ ವಿವಾಹದ ನಿಮಿತ್ತ ಸುಪರಿಷ್ಕೃತವಾದ ಭೋಜನವನ್ನು ದ್ರುಪದರಾಜನು ಸಿದ್ಧಪಡಿಸಿದ್ದಾನೆ. ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ತಾವು ಅದಕ್ಕಾಗಿ ಬನ್ನಿ, ಕೃಷ್ಣೆಯನ್ನೂ ಕರೆತನ್ನಿ. ವಿಳಂಬ ಮಾಡಬೇಡಿ. ಇದೋ ಸುವರ್ಣಕಮಲಗಳಿಂದಲೂ ಒಳ್ಳೆಯ ಕುದುರೆಗಳಿಂದಲೂ ಕೂಡಿದ ರಥಗಳು ಬಂದಿವೆ, ರಾಜರಿಗೆ ಅರ್ಹವಾದಂತಹ ಅವನ್ನು ಹತ್ತಿ, ಪಾಂಚಾಲರಾಜನ ಅರಮನೆಗೆ ಸರ್ವರೂ ಸೇರಿ ಬನ್ನಿ" ಎಂದನು.