Sunday, October 22, 2023

ವ್ಯಾಸ ವೀಕ್ಷಿತ - 58 ತಾವಾರೆಂದು ಯುಧಿಷ್ಠಿರನು ದ್ರುಪದನಿಗೆ ತಿಳಿಸಿಕೊಟ್ಟದ್ದು (Vyaasa Vikshita - 58 Tavarendu Yudhishthiranu Drupadanige Tilisikottaddu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)


ಭೋಜನಾನಂತರ ದ್ರುಪದನು ಪಾಂಡವರ ಬಳಿ ಬಂದು ಅವರನ್ನು ಪ್ರಶ್ನಿಸುತ್ತಾನೆ:

ತಮ್ಮನ್ನು ಏನೆಂಬುದಾಗಿ ನಾವು ತಿಳಿಯಬಹುದು, ಸ್ವಾಮಿ?: ಕ್ಷತ್ತ್ರಿಯರೆಂದೋ ಬ್ರಾಹ್ಮಣರೆಂದೋ? ಗುಣಸಂಪನ್ನರಾದ ವೈಶ್ಯರೆಂದೋ, ಶೂದ್ರಜಾತಿಯಲ್ಲಿ ಜನಿಸಿದವರೆಂದೋ? ಅಥವಾ, ಮಾಯಾವಲಂಬಿಗಳಾಗಿ (ಎಂದರೆ ನಿಜಸ್ವರೂಪವನ್ನು ತೋರ್ಪಡಿಸಿಕೊಳ್ಳದೆ) ಎಲ್ಲೆಡೆ ಸಂಚರಿಸುವ ವಿಪ್ರರೆಂದೋ? ಅಥವಾ ದ್ರೌಪದಿಯನ್ನು ಪಡೆಯಲೋಸುಗ ಕೇವಲದರ್ಶಕರ ರೂಪದಲ್ಲಿ ಬಂದಿರುವ ದೇವತೆಗಳೆಂದೋ?  ತಾವು ಸತ್ಯವನ್ನು ಹೇಳಬೇಕು. ನಮಗಿಲ್ಲಿ ಮಹಾಸಂದೇಹವೇ ಉಂಟಾಗಿದೆ.  ನಮ್ಮ ಸಂಶಯಗಳು ಕೊನೆಗೊಂಡು ನಮ್ಮ ಮನಸ್ಸಿಗೆ ಸಂತುಷ್ಟಿಯು ಉಂಟಾಗುವುದಷ್ಟೆ? ನಮ್ಮ ಭಾಗ್ಯವು ಶುಭವಾಗುವುದಷ್ಟೆ?

ತಮ್ಮ ಇಚ್ಛೆಗೆ ಅನುಸಾರವಾಗಿ ಸತ್ಯವನ್ನೇ ಹೇಳಿರಿ. ಸತ್ಯವು ರಾಜರಿಗೊಂದು ಶೋಭೆ. 'ಇಷ್ಟ'ಕ್ಕಿಂತಲೂ 'ಪೂರ್ತ'ಕ್ಕಿಂತಲೂ ಸತ್ಯವೇ ಹಿರಿದಾದುದಲ್ಲವೆ? ('ಇಷ್ಟ'ವೆಂದರೆ ಅಗ್ನಿಹೋತ್ರ, ವೇದರಕ್ಷಣ, ವೈಶ್ವದೇವ ಮುಂತಾದುದು; 'ಪೂರ್ತ'ವೆಂದರೆ ಬಾವಿ ತೋಡಿಸುವುದು, ಅನ್ನದಾನ ಮುಂತಾದುದು. ಇಷ್ಟಗಳೂ ಪೂರ್ತಗಳೂ ಪುಣ್ಯಕಾರ್ಯಗಳೇ. ಇವನ್ನು ಮಾಡುವುದು ಶ್ರೇಷ್ಠ; ಆದರೆ ಸತ್ಯವನ್ನು ಹೇಳುವುದು ಮತ್ತೂ ಶ್ರೇಷ್ಠ- ಎಂಬ ಭಾವ). ಎಂದೇ ಅಸತ್ಯವನ್ನು ನುಡಿಯಬಾರದಲ್ಲವೇ?

ದೇವತೆಯ ಹಾಗೆ ಬೆಳಗುತ್ತಿರುವವನೇ, ಶತ್ರುಗಳನ್ನು ಮೆಟ್ಟುವವನೇ, ನಿನ್ನ ಉತ್ತರವನ್ನು ಪಡೆದೊಡನೆಯೇ ವಿಧಿಪೂರ್ವಕವಾದ ವಿವಾಹಕ್ಕಾಗಿ ನಾನು ಸನ್ನಾಹಮಾಡಬಹುದು - ಎಂದನು.

ಆಗ ಯುಧಿಷ್ಠಿರನು ಹೇಳಿದನು:

"ರಾಜನೇ, ನೀನು ಚಿಂತಿತನಾಗಬೇಕಿಲ್ಲ. ನೀನು ಇದನ್ನು ಕೇಳಿ ಸಂತೋಷಿಸುವೆ. ನೀನು ಬಯಸಿದುದೇನೋ ಅದೇ ಇಂದು ಘಟಿಸಿದೆ, ನಿಸ್ಸಂಶಯವಾಗಿಯೂ. ನಾವು ಕ್ಷತ್ರಿಯರು - ಮಹಾತ್ಮನಾದ ಪಾಂಡುವಿನ ಮಕ್ಕಳು. ನಾನು ಜ್ಯೇಷ್ಠ. ಇವರಿಬ್ಬರು ಭೀಮಸೇನ, ಅರ್ಜುನರು. ಇವರಿಬ್ಬರೇ ನಿನ್ನ ಮಗಳನ್ನು ರಾಜಸಭೆಯಲ್ಲಿ ಗೆದ್ದವರು. ಅದೋ ಅವರಿಬ್ಬರು ಯಮಳರು (ಅವಳಿಗಳು: ನಕುಲ- ಸಹದೇವರು). ಮತ್ತು ತಾಯಿ ಕುಂತಿಯು ಕೃಷ್ಣೆಯಿರುವೆಡೆಯಲ್ಲಿಯೇ ಇರುವಳು (ಎಂದರೆ ತಮ್ಮ ಅಂತಃಪುರದಲ್ಲಿ).

ನಿನ್ನ ಮನಸ್ಸಿನ ದುಃಖ ಕಳೆಯಲಿ, ನಾವು ಕ್ಷತ್ರಿಯರೇ. ಒಂದು ಹ್ರದದಿಂದ (ಎಂದರೆ ಸರೋವರದಿಂದ) ಮತ್ತೊಂದು ಹ್ರದಕ್ಕೆ ಬಂದಿರುವ ಪದ್ಮಿನಿಯ ಹಾಗೆ ಅವಳಿದ್ದಾಳೆ (ಪದ್ಮಿನಿಯೆಂದರೆ ಕಮಲದ ಬಳ್ಳಿ. ತಾತ್ಪರ್ಯವಿದು: ಕೃಷ್ಣೆಯು ಇನ್ನು ಮುಂದೆ ನಮ್ಮೊಂದಿಗಿದ್ದೂ ಮೊದಲಿನಂತೆಯೇ ಸುಖವಾಗಿರುವವಳು).

ನಾನು ಹೇಳಿರುವುದೆಲ್ಲವೂ ಸತ್ಯವೇ, ಮಹಾರಾಜನೇ. ತಾವು ನಮಗೆ ಹಿರಿಯರು, ನಮಗೆ ಶ್ರೇಷ್ಠವಾದ ಆಶ್ರಯ."

ಯುಧಿಷ್ಠಿರನ ಮಾತುಗಳನ್ನು ಕೇಳಿದ ದ್ರುಪದರಾಜನ ಕಣ್ಣಲ್ಲಿ ಆನಂದಾಶ್ರುವೇ ತುಂಬಿಕೊಂಡಿತು. ಸಂತೋಷ(ಗದ್ಗದಿತನಾ)ದ ಕಾರಣ ಯುಧಿಷ್ಠಿರನಿಗೆ ಏನೂ ಹೇಳಲಾರದಾದನು,ದ್ರುಪದ. ತನ್ನ ಹರ್ಷವನ್ನು ಯತ್ನದಿಂದ ತಡೆದುಕೊಂಡು, ಯುಧಿಷ್ಠಿರನನ್ನು ಕುರಿತು ಅನುರೂಪವಾದ ಮಾತುಗಳನ್ನು ಆಡಿದನು. (ವಾರಣಾವತ)ನಗರದಿಂದ ಅವರುಗಳು ತಪ್ಪಿಸಿಕೊಂಡುಹೋದ ಬಗೆಯನ್ನು ಕೇಳಿದನು. ಆ ಪಾಂಡವನೂ ಅನುಕ್ರಮವಾಗಿ ಅದೆಲ್ಲವನ್ನೂ ಹೇಳಿದನು. ಕುಂತೀಪುತ್ರನ ಆ ಭಾಷಿತವನ್ನು ಕೇಳಿ (ಭಾಷಿತವೆಂದರೆ ನುಡಿ), ಧೃತರಾಷ್ಟ್ರನನ್ನು ನಿಂದಿಸಿದನು, ಆ ದ್ರುಪದ. ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನಲ್ಲದೆ, ಪ್ರತಿಜ್ಞೆಯನ್ನೂ ಮಾಡಿದನು - ರಾಜ್ಯವು ದೊರೆಯುವಂತಾಗಿಸುವುದಾಗಿ.

ಆ ಬಳಿಕ ಕುಂತಿ-ಕೃಷ್ಣೆಯರೂ, ಭೀಮಾರ್ಜುನರೂ, ನಕುಲ-ಸಹದೇವರೂ ರಾಜನು ಸೂಚಿಸಿದ ಮಹತ್ತಾದ ಭವನವನ್ನು ಪ್ರವೇಶಿಸಿದರು. ದ್ರುಪದನಿಂದ ಆದೃತರಾದ (= ಟ್ಟ) ಅವರು ಅಲ್ಲೇ ವಾಸಿಸಿದರು.

ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.