Saturday, September 30, 2023

ಪರಮ ಪಾವನೆಯಾದ ಅಹಲ್ಯಾ (Parama Pavaneyada Ahalya)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)
ಪಂಚಕನ್ಯೆಯರಲ್ಲಿ ಮೊದಲಿಗೆ ನಾವು ಸ್ಮರಣೆ ಮಾಡಬೇಕಾದವಳು ಅಹಲ್ಯಾ. ಅವಳು ಗೌತಮ ಮಹರ್ಷಿಗಳ ಪತ್ನೀ. ಗೌತಮರು ಸಪ್ತರ್ಷಿಗಳಲ್ಲಿ ಒಬ್ಬರು. ಅಹಲ್ಯೆಯು ಅಂತರಂಗ ಹಾಗೂ ಬಾಹ್ಯ ಸೌಂದರ್ಯಕ್ಕೆ ಪ್ರಸಿದ್ಧಳಾಗಿದ್ದವಳು. ಇಂದ್ರನು ಅವಳನ್ನು ವರಿಸಬೇಕು ಎಂದು ಇಚ್ಛಿಸಿದ್ದ, ಆದರೆ ಬ್ರಹ್ಮದೇವರ ಆಶಯಂತೆ ಮಹರ್ಷಿ ಗೌತಮರನ್ನು ವಿವಾಹವಾಗಿ ಅವರ ಸಹಧರ್ಮಿಣಿ ಆಗುತ್ತಾಳೆ. ಸುಕುಮಾರಿಯಾಗಿ ಬೆಳೆದರೂ ಪತಿಯ ತಪೋಮಯವಾದ ಜೀವನಕ್ಕೆ ಹೊಂದಿಕೊಂಡು ಅವರ ಪ್ರೀತಿಗೆ ಪಾತ್ರಳಾಗಿದ್ದಳು. ಇಂದ್ರ ಅವಳನ್ನು ಮೊದಲಿನಿಂದಲೂ ಬಯಸುತ್ತಿದ್ದ. ಒಮ್ಮೆ ಗೌತಮರು ಆಶ್ರಮದಲ್ಲಿ ಇಲ್ಲದ ಸಮಯವನ್ನು ನೋಡಿ ತಾನೇ ಗೌತಮ ಋಷಿಗಳ ರೂಪವನ್ನು ಧರಿಸಿ ಅಹಲ್ಯೆಯ ಮುಂದೆ ಬಂದು, ಸರಸೋಕ್ತಿಗಳನ್ನಾಡಿ ಅಹಲ್ಯೆಯ ಮನಸ್ಸನ್ನು ಸೂರೆಗೊಂಡ. ಅಹಲ್ಯೆಗೆ ಇವನು ತನ್ನ ಪತಿ ಅಲ್ಲ, ದೇವೇಂದ್ರನೇ ತನ್ನ ಪತಿಯ ರೂಪವನ್ನು ಧರಿಸಿ ಬಂದಿದ್ದಾನೆ ಎಂಬುದಾಗಿ ಅನುಮಾನ ಬಂದರೂ, ಕ್ಷಣಕಾಲ ತನ್ನ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡು ತನ್ನ ಪಾತಿವ್ರತ್ಯಕ್ಕೆ ಭಂಗ ತಂದುಕೊಂಡಳು. ಆ ಸಮಯದಲ್ಲಿ ಆಶ್ರಮಕ್ಕೆ ಆಗಮಿಸಿದ ಗೌತಮರಿಗೆ ಅಲ್ಲಿ ನಡೆದ ಅಧರ್ಮದ ಅರಿವಾಗಿ ಇಂದ್ರ ಹಾಗೂ ಅಹಲ್ಯೆ ಇಬ್ಬರಿಗೂ ಶಾಪವನ್ನು ಕೊಟ್ಟರು. ಇಂದ್ರನಿಗೆ ಅವನ ತಪ್ಪಿಗೆ ಅನುಗುಣವಾಗಿ ಅಂಗಹೀನನಾಗು ಎಂಬ ಶಾಪವಾದರೆ, ಅಹಲ್ಯೆಗೆ ಅವಳಿಂದ ಆದ ಪಾಪ ಕೃತ್ಯಕ್ಕೆ ಅನೇಕ ಸಾವಿರ ವರ್ಷಗಳ ಕಾಲ ಅದೃಶ್ಯಳಾಗಿ ಆಶ್ರಮದ ಪರಿಸರದಲ್ಲಿ ತಪಸ್ಯೆಯನ್ನು ಆಚರಿಸು ಎಂಬುದಾಗಿ. ಅವಳ ತಪಸ್ಯೆಯು ಪರಿಪಕ್ವವಾಗಿ ದೋಷಗಳೆಲ್ಲವೂ ತೊಳೆದು ಹೋದಾಗ ಈ ಜಾಗಕ್ಕೆ ಶ್ರೀರಾಮಚಂದ್ರನ ಪಾದಸ್ಪರ್ಶವಾಗುತ್ತದೆ ಅಂದಿಗೆ ಅವಳ ಶಾಪದ ಅವಧಿ ಮುಗಿಯುತ್ತದೆ. ಶ್ರೀರಾಮಚಂದ್ರನ ದೃಷ್ಟಿಪ್ರಸಾದದಿಂದ ಪವಿತ್ರಳಾಗಿ ನೀನು ಪುನಃ ನನ್ನನ್ನು ಸೇರುವೆ, ಎಂಬುದಾಗಿ. ಕಲ್ಲಾಗಿ ಹೋಗು ಎಂಬುದಾಗಿಯೂ ಶಪಿಸಿರುವುದರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ತ್ರಿಕಾಲ ಜ್ಞಾನಿಗಳಾಗಿದ್ದ ಪತಿಯ ಶಾಪದಂತೆಯೇ ಅಹಲ್ಯೆಯು ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ, ಅದೃಶ್ಯಳಾಗಿ ಅಪವಿತ್ರಳಾದ ತನ್ನನ್ನು ಶುದ್ಧಿ ಪಡಿಸಿಕೊಂಡು ಪುನಃ ಮೊದಲಿನಂತೆಯೇ ಪರಿಶುದ್ಧಳಾಗಲು ತಪಸ್ಯೆಯಲ್ಲಿ ನಿರತಳಾಗುತ್ತಾಳೆ. ತಪಸ್ಸು ಎಂದರೆ ಸುಡುವುದು ಎಂದೇ ಅರ್ಥ. ಯಾವ ಕಾರ್ಯದಿಂದ ತನ್ನ ದೋಷಗಳೆಲ್ಲವೂ ಸುಟ್ಟು ಪಾಪಗಳೆಲ್ಲವೂ ನಾಶವಾಗುತ್ತದೆಯೋ ಅಂತಹ ಕಾರ್ಯವೇ ತಪಸ್ಸು. ಅಹಲ್ಯೆಯು ಅಂತಹ ತಪಸ್ಸನ್ನು ಅನೇಕ ಸಾವಿರ ವರ್ಷಗಳವರೆಗೆ ಆಚರಿಸಿದ ಪರಿಣಾಮ ಅವಳಿಂದ ಆದ ಪಾಪವೆಲ್ಲವೂ ದಹಿಸಲ್ಪಟ್ಟು ಶ್ರೀರಾಮಚಂದ್ರನ ದರ್ಶನಕ್ಕೆ ಯೋಗ್ಯತೆಯನ್ನು ಪಡೆದುಕೊಳ್ಳುತ್ತಾಳೆ. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ವಿಶ್ವಾಮಿತ್ರರ ಜೊತೆಗೆ ಗೌತಮ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿದೊಡನೆಯೇ, ಅವನ ಪಾದ ಸ್ಪರ್ಶದಿಂದ  ಅದೃಶ್ಯಳಾಗಿದ್ದ ಅಹಲ್ಯೆಯು ದಿವ್ಯವಾದ ತೇಜಸ್ಸಿನಿಂದ ಲೋಕದ ಕಣ್ಣಿಗೆ ಕಾಣಿಸಿಕೊಳ್ಳುತ್ತಾಳೆ. 

ಶ್ರೀರಾಮ ಹಾಗೂ ಲಕ್ಷ್ಮಣರು ಅಹಲ್ಯೆಯ ಪಾದಗಳಿಗೆ ನಮಸ್ಕರಿಸುತ್ತಾರೆ. ಯಾರ ನಾಮ ಸ್ಮರಣೆಯಿಂದ ಸಮಸ್ತ ಪಾಪಗಳೂ ಭಸ್ಮವಾಗುತ್ತವೆಯೋ ಅಂತಹ ಶ್ರೀರಾಮಚಂದ್ರಪ್ರಭುವೇ ಅವಳಿಗೆ ನಮಸ್ಕರಿಸಿದ ಅಂದ ಮೇಲೆ ಅವಳ ತಪಸ್ಸಿನ ಪ್ರಭಾವ ಅದರಿಂದಾದ ಪಾವಿತ್ರ್ಯ  ಎಷ್ಟು ಎಂಬುದು ಊಹೆಗೂ ನಿಲುಕದ ವಿಷಯ. ಅವಳು ತನ್ನಿಂದ ಆದ ಪಾಪಕ್ಕೆ ಪ್ರಾಯಶ್ಚಿತ್ತ ಹೊಂದಿ ತಪಸ್ಯೆಯ ಮೂಲಕ ಅತ್ಯಂತ ಪರಿಶುದ್ಧಳಾಗಿ ಶ್ರೀರಾಮಚಂದ್ರನ ಗೌರವಕ್ಕೆಪಾತ್ರಳಾಗುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಗೌತಮ ಮಹರ್ಷಿಗಳೂ  ಅಲ್ಲಿಗೆ ಬರುತ್ತಾರೆ. ಅಹಲ್ಯೆಯೊಂದಿಗೆ ಯಥಾವಿಧಿಯಾಗಿ ಶ್ರೀರಾಮ ಲಕ್ಷ್ಮಣರ ಸತ್ಕಾರ ಮಾಡುತ್ತಾರೆ. ಅಹಲ್ಯೆಯು ಪುನಃ ಗೌತಮ ಮಹರ್ಷಿಗಳೊಂದಿಗೆ ಪರಿಶುದ್ಧವಾದ ಜೀವನವನ್ನು ಪ್ರಾರಂಭಿಸಿ  ಪರಮ ಪತಿವ್ರತೆಯಾಗಿ ಬೆಳಗುತ್ತಾಳೆ. ಅವಳ ಕಠಿಣವಾದ ತಪಸ್ಯೆ ಹಾಗೂ ಶ್ರೀರಾಮಚಂದ್ರನ ಸಂದರ್ಶನದ ಫಲವಾಗಿ ಅವಳಲ್ಲಿದ್ದ ಕೊಳೆಯೆಲ್ಲವೂ ತೊಳೆದು ಹೋಗಿ ಅವಳು ಒಂದು ನೂತನ, ಪವಿತ್ರತಮವಾದ ಜನ್ಮವನ್ನೇ ಪಡೆದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾಳೆ. ಅಹಲ್ಯೆಯ ಮನಸ್ಸು ಒಂದು ಕ್ಷಣ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಅವಳಿಂದ ಪತಿದ್ರೋಹದಂತಹ ಮಹಾಪಾತಕವೇ ನಡೆಯಿತು. ಆದರೆ ಪತಿಯೂ , ಬ್ರಹ್ಮರ್ಷಿಯೂ ಆದ ಗೌತಮರು ಅವಳಿಗೆ ನೀಡಿದ ಶಾಪ ಅವಳಿಗೆ ವರವಾಗಿಯೇ ಪರಿಣಮಿಸಿತು. ಮಹಾತ್ಮರ ಶಾಪವೂ ಅನುಗ್ರಹದಂತೆಯೇ ಕೆಲಸ ಮಾಡಿ ಪತಿತರಾದ ಜೀವಿಗಳ ಉದ್ಧಾರಕ್ಕೆ ಕಾರಣವಾಗುತ್ತದೆ. ಅವರು ನೀಡಿದ ಶಿಕ್ಷೆ ಕೇವಲ punishment ಅಲ್ಲ. ನೀನು ನಾಶವಾಗಿ ಹೋಗು ಎಂಬುದಾಗಿಯೋ ಅಥವಾ ಅವಳಿಗೆ ಅಧೋಗತಿಯನ್ನು ಉಂಟುಮಾಡುವ ಇನ್ಯಾವುದೇ ಶಾಪವನ್ನು ಅವರು ನೀಡಲಿಲ್ಲ. ವಿವಾಹವೆಂದರೆ ಪತಿ ಪತ್ನಿಕೇವಲ ಭೌತಿಕವಾಗಿ ಜೊತೆಗೆ ಬಾಳುವುದಷ್ಟೇ ಅಲ್ಲ. ಅವರಿಬ್ಬರ ಮನಸ್ಸುಗಳು ಹೃದಯಗಳು ಒಂದಾಗಿ ದೈವಿಕ ಹಾಗೂ ಅಧ್ಯಾತ್ಮಿಕ ಜೀವನದಲ್ಲಿಯೂ ಒಟ್ಟಿಗೆ ಹೆಜ್ಜೆಯನ್ನು ಇಡಬೇಕಾದ ಸಂಸ್ಕಾರ. ಪತಿಯಾದವನು ಪತ್ನಿಯನ್ನು ಎಲ್ಲ ರೀತಿಯಿಂದಲೂ ಉದ್ಧಾರ ಮಾಡಬೇಕು. ತಾನು ಭಗವನ್ಮಾರ್ಗದಲ್ಲಿ ನಡೆದು ಅವಳನ್ನೂ ನಡೆಸಿ ಮೂಲಸ್ಥಾನವಾದ ಭಗವಂತನ ನೆಲೆಗೆ ಕೊಂಡೊಯ್ಯುವ ಕರ್ತವ್ಯ ಪತಿಯದ್ದೇ ಆಗಿರುತ್ತದೆ. ಹಾಗಾಗಿ ಗೌತಮರು ಅಹಲ್ಯೆಗೆ ಗುರುವಿನ ಸ್ಥಾನದಲ್ಲಿದ್ದುಕೊಂಡು ಅವಳಿಗೆ ನೀಡಿದ ಶಿಕ್ಷೆ ಅಥವಾ ಶಾಪ, ಶಿಕ್ಷಾ - ವಿದ್ಯೋಪಾದಾನೇ ಎಂಬಂತೆ ಅವಳಿಗೆ ನೀಡಿದ ಶಿಕ್ಷಣವೇ ಆಗಿದೆ. ಬಾಹ್ಯ ದರ್ಶನದ ಯೋಗ್ಯತೆಯನ್ನು ಕಳೆದುಕೊಂಡಿದ್ದ ಅವಳು ಪತಿಯ ಶಾಪದಂತೆ ಅದೃಶ್ಯಳಾಗುತ್ತಾಳೆ.

ತಪಸ್ಯೆಯಿಂದ ಅತ್ಯಂತ ಪರಿಶುದ್ಧಳಾದ ಅಹಲ್ಯೆಯನ್ನು ಶ್ರೀರಾಮಚಂದ್ರನೇ ಮೊದಲು ಸಂದರ್ಶಿಸಿ ಅವಳಿಗೆ ಪರಮ ಪಾವನತ್ವವನ್ನು ತಂದು ಕೊಡುತ್ತಾನೆ. ಪಾಪ ಕಳೆದ ಮೇಲೂ ಅಂತಹವರನ್ನು ಹಿಂದಿನ ಪಾಪದ ದೃಷ್ಟಿಯಿಂದಲೇ ನೋಡಿದರೆ ಹಾಗೆ ನೋಡಿದವರಿಗೆ ಪಾಪ ಬರುತ್ತದೆ ಎಂದು ಶ್ರೀರಂಗಪ್ರಿಯ ಸ್ವಾಮಿಗಳು ಹೇಳಿದ್ದು ಇಲ್ಲಿ ಸ್ಮರಣೀಯ. ಪರಮ ಪಾವನೆಯಾದ ಅಂತಹ ಅಹಲ್ಯೆಯ ಸ್ಮರಣೆಯಿಂದ ನಮ್ಮ ಪಾತಕಗಳೂ ನಾಶವಾಗಿ ನಮಗೂ ಪಾವಿತ್ರ್ಯ  ಉಂಟಾಗುವುದರಲ್ಲಿ ಸಂಶಯವಿಲ್ಲ.

ಸೂಚನೆ : 30/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.