Sunday, September 24, 2023

ದೇವಾಲಯಕ್ಕೆ ಹೋಗುವುದರಿಂದ ದೊರಕುವ ಲಾಭವೇನು? (Devalayakke Hoguvudarinda Dorakuva Labhavenu?)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಇತ್ತೀಚೆಗೆ ನಡೆದ ಒಂದು ಘಟನೆ, ನಮ್ಮ ನಾಡಿನ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆಯೊಂದು ಅದ್ಭುತವಾದ ಸಾಧನೆಯನ್ನು ಮಾಡಿ ವಿಶ್ವದ ಪ್ರಶಂಸೆಗೆ ಪಾತ್ರವಾಯಿತು. ಆ ಸಂಸ್ಥೆಯ ಪ್ರಮುಖರೊಬ್ಬರು ಆ ಸಾಧನೆಯ ನಂತರ ಒಂದು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಅವರ ದೇವಾಲಯದ ಭೇಟಿಯ ಕುರಿತಾದ ಪತ್ರಕರ್ತರೊಬ್ಬರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರವನ್ನು ನೀಡುತ್ತಾರೆ, ನಾನು ಬಾಹ್ಯವಾದ ವಸ್ತುಗಳ ಬಗ್ಗೆ ಅರಿಯಲು ವಿಜ್ಞಾನವನ್ನು(Science) ಅವಲಂಬಿಸಿದ್ದೇನೆ, ಹಾಗೆಯೇ ಅಂತರಂಗದ ಅರಿವಿಗೆ ದೇವಾಲಯಕ್ಕೆ ಬರುತ್ತೇನೆ.
ಸಾಮಾನ್ಯವಾಗಿ ಜನರು ಯಾವ ಯಾವ ಕಾರಣಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂಬುದಾಗಿ ವಿಚಾರಮಾಡುವುದಾದರೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಜೀವನದಲ್ಲಿ ಯಾವುದಾದರೂ ಕ್ಲೇಶಕ್ಕೆ ಸಿಲುಕಿದಾಗ ಅದನ್ನು ಪರಿಹಾರ ಮಾಡು ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಲು ಭೇಟಿ ಕೊಡುವುದಿದೆ, ಇನ್ನು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ತಾವು ಓದಿದ ವಿಷಯವೇ ಪರೀಕ್ಷೆಯಲ್ಲಿ ಬರಲಿ ಎಂಬುದನ್ನು ಬೇಡುವುದಕ್ಕೋ ಅಥವಾ ಪರೀಕ್ಷಾ ಭಯ ನಿವಾರಣೆಗೋ ಭೇಟಿ ಕೊಡುತ್ತಾರೆ. ಹಾಗೆಯೇ ಕೆಲವರು ತಮ್ಮ ದಿನಚರಿಯಲ್ಲಿ ಹತ್ತಿರದ ದೇವಾಲಯಗಳಿಗೆ ಹೋಗುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ, ಪ್ರವಾಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರುವುದಿದೆ. ಇನ್ನು ಕೆಲವರು ದೇವಾಲಯಗಳ ಕಲಾವಿನ್ಯಾಸವನ್ನು ವೀಕ್ಷಿಸಿ ಆನಂದಿಸಲು ಭೇಟಿ ನೀಡುತ್ತಾರೆ. ಹಾಗೆಯೇ ಮನಸ್ಸಿಗೆ ಶಾಂತಿ ಸಮಾಧಾನವನ್ನರಸಿ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆಯೂ ಹೇರಳವಾಗಿಯೇ ಇದೆ. ಇತ್ಯಾದಿಯಾಗಿ ಅನೇಕ ಕಾರಣಗಳಿಗಾಗಿ ದೇವಾಲಯಕ್ಕೆ ಭೇಟಿಕೊಡುವುದನ್ನು ನಮ್ಮ ಸುತ್ತ ಮುತ್ತಲೂ ಕಾಣುತ್ತೇವೆ. ದೇವಾಲಯಕ್ಕೆ ಹೋಗುವುದರಿಂದ ಈ ಎಲ್ಲ ಲಾಭಕ್ಕಿಂತ ಮಿಗಿಲಾದ ಇನ್ನೊಂದು ಪರಮ ಲಾಭವನ್ನು ಪಡೆಯಬಹುದು, ಅದೇ ಅಂತರಂಗದ ಅರಿವು ಎಂಬುದನ್ನು ಜ್ಞಾನಿಗಳು ಸಾರಿದ್ದಾರೆ.

ಅಂತರಂಗದ ಅರಿವು ಎಂದರೇನು? ದೇವಾಲಯಗಳಿಗೆ ಹೋಗುವುದರಿಂದ ಅದನ್ನು ಹೇಗೆ ಪಡೆಯಬಹುದು? ದೇವಾಲಯಗಳು ಹೀಗೆಯೇ ಇರಬೇಕು ಎಂದು ನಕ್ಷೆಯನ್ನು ರಚಿಸಿ, ಶಿಲ್ಪಿಗಳ ಮೂಲಕ ಅದನ್ನು ನಿರ್ಮಾಣ ಮಾಡಿಸಿ, ಅಲ್ಲಿಗೆ ಹೋಗಿ ಬರುವ ಪದ್ಧತಿಯನ್ನು ತಂದವರು ಯಾರು? ಎಂದರೆ ನಮ್ಮ ಭಾರತೀಯ ಮಹರ್ಷಿಗಳು. ಮಹರ್ಷಿಗಳು ತಮ್ಮ ತಪಸ್ಯೆಯಿಂದ ಅಂತರಂಗದ ದ್ವಾರವನ್ನು ತೆರೆಸಿಕೊಂಡು, ಮನಸ್ಸನ್ನು ಒಳಮುಖವಾಗಿ ಹರಿಸಿದರು. ತಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನ ದರ್ಶನವನ್ನು ಮಾಡಿ ಅಪರಿಮಿತವಾದ ಆನಂದವನ್ನು, ಶಾಂತಿಯನ್ನು ಅನುಭವಿಸಿದರು. ಈ ದೇಹವೇ ಒಂದು ದೇವಾಲಯ ಅಂದರೆ ದೇವನಿರುವ ಸ್ಥಾನ ಎಂಬುದನ್ನು ಮನಗಂಡರು. ಅದನ್ನು ಲೋಕಕ್ಕೆ ಅರ್ಥ ಮಾಡಿಸಿ ಎಲ್ಲರೂ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟು ತಮ್ಮೊಳಗಿರುವ ಭಗವಂತನ ದರ್ಶನ ಮಾಡಿ ಆ ಸೌಖ್ಯವನ್ನು ಅನುಭವಿಸಲೇ ಬೇಕು ಆಗಲೇ ಪ್ರತಿಯೊಬ್ಬರ ಜೀವನಕ್ಕೆ ಸಾರ್ಥಕತೆ ದೊರೆಯುವುದು ಎಂಬುದಾಗಿ ಭಾವಿಸಿದರು. ಲೋಕದ ಮನಸ್ಸನ್ನು ಅತ್ತ ತಿರುಗಿಸಲು ಭಾರತೀಯ ಸಂಸ್ಕೃತಿಯನ್ನು ರೂಪಿಸಿ ಕೊಟ್ಟರು. ಆ ಸಂಸ್ಕೃತಿಯ ಒಂದು ಅಂಗವೇ ನಮ್ಮ ದೇವಾಲಯಗಳು ಹಾಗೂ ಅಲ್ಲಿನ ಶಿಲ್ಪಗಳು.

ಮಹರ್ಷಿಗಳು ತಮ್ಮ ದೇಹದಲ್ಲಿಯೇ ದೇವನನ್ನು ದರ್ಶಿಸಿದ್ದರಿಂದ, ಆ ದೇಹವನ್ನೇ ಹೋಲುವ ಒಂದು ಪ್ರತಿಕೃತಿ ( model) ಯನ್ನು ದೇವಾಲಯದ ರೂಪದಲ್ಲಿ ರಚನೆ ಮಾಡಿಸಿದರು. ನಮ್ಮ ದೇಶದಲ್ಲಿರುವ ಅನೇಕ ಆದರ್ಶವಾದ ದೇವಾಲಯಗಳು ಮಾನವ ದೇಹದ ಪ್ರತೀಕವೇ ಆಗಿವೆ. ಆಗಮಶಾಸ್ತ್ರದ ಆಧಾರದ ಮೇಲೆ ರಚಿತವಾಗಿರುವ ದೇವಾಲಯಗಳಲ್ಲಿ ನಮ್ಮ ದೇಹದಲ್ಲಿರುವ ಅಂಗಗಳನ್ನೇ ಹೋಲುವ ಸ್ಥಾನಗಳಿದ್ದು, ನಾವು ನಮ್ಮ ಮನಸ್ಸನ್ನು ಹಿಮ್ಮುಖವಾಗಿ ತಿರುಗಿಸಿ ಹೇಗೆ ಸಂಚಾರ ಮಾಡಿದಾಗ ದೇವನ ದರ್ಶನ ಪಡೆಯಬಹುದು ಎಂಬುದಕ್ಕೆ ನಕ್ಷೆಯೇ ಆಗಿದೆ ಈ ದೇವಾಲಯಗಳು. ಉದಾಹರಣೆಗೆ ದೇವಾಲಯದಲ್ಲಿ ದೇವತಾಮೂರ್ತಿಯನ್ನು ಜ್ಞಾನಿಗಳಿಂದ ಪ್ರಾಣಪ್ರತಿಷ್ಠೆ ಮಾಡಿಸಿ ಸ್ಥಾಪಿಸಿರುವ ಗರ್ಭಗೃಹವು ದೇವಾಲಯದ ಶಿರ:ಪ್ರದೇಶ ಎಂದು ಕರೆಸಿಕೊಳ್ಳುತ್ತದೆ. ಹಾಗೆಯೇ ಮುಂದಿನ ಭಾಗಗಳು ಕಂಠ, ಹೃದಯ ಮೊದಲಾಗಿ ಮಾನವ ದೇಹದ ಅವಯವಗಳ ಹೆಸರನ್ನೇ ಹೊತ್ತಿವೆ. ನಮ್ಮ ದೇಹದಲ್ಲಿಯೂ ಪರಮಾತ್ಮನು ಬೆಳಗುವುದು ಶಿರಸ್ಸಿನ ಸಹಸ್ರಾರ ಚಕ್ರದಲ್ಲಿ. ಸಾಧಕರು ಮನಸ್ಸನ್ನು ಹಿಮ್ಮುಖವಾಗಿಸಿ ಕ್ರಮ ಕ್ರಮವಾಗಿ ಸಾಗಿ ಅವರವರ ಪ್ರಕೃತಿ ಧರ್ಮಕ್ಕೆ ಅನುಗುಣವಾಗಿ ಅನೇಕ ದೇವತೆಗಳ ದರ್ಶನ ಪಡೆದು ಅಂತಿಮವಾಗಿ ಪರಮಾತ್ಮನ ದರ್ಶನ ಪಡೆಯುತ್ತಾರೆ ಎಂಬುದನ್ನು ಅನುಭವಿಗಳು ಉಲ್ಲೇಖಸಿದ್ದಾರೆ. ಅದರ ಪ್ರತಿಬಿಂಬದಂತೆಯೇ ದೇವಾಲಯಗಳ ರಚನೆಯೂ ಮಾಡಲ್ಪಟ್ಟಿದೆ. ಆ ಹೊರ ದೇವಾಲಯವನ್ನು ಪ್ರವೇಶಿಸಿ ಸಾಗುವಾಗ ಈ ಎಲ್ಲ ಅಂಶಗಳೂ ಮನಸ್ಸಿಗೆ ಬಂದರೆ ನಮ್ಮ ಅಂತರಂಗದ ದ್ವಾರವೂ ತೆರೆಯಲು ಅನುಕೂಲವಾಗುತ್ತದೆ. ಅಂತೆಯೇ ದೇವಾಲಯದ ಗರ್ಭಗೃಹದ ಮುಂದೆ ಬಿಳಿ, ಕೆಂಪು ಮತ್ತು ಕಪ್ಪು ಹೀಗೆ ಮೂರು ಬಣ್ಣಗಳ ತೆರೆಯನ್ನು ಸರಿಸಿ ದೇವನ ದರ್ಶನ ಮಾಡಿಸುತ್ತಾರೆ. ಆ ಮೂರು ಬಣ್ಣಗಳು ನಮ್ಮೊಳಗಿನ ಸತ್ವ, ರಜಸ್ಸು ಮತ್ತು ತಮಸ್ಸುಗಳೆoಬ ಮೂರು ಗುಣಗಳ ಪ್ರತೀಕ, ಆ ಮೂರು ಗುಣಗಳನ್ನು ದಾಟಿದಾಗ, ತ್ರಿಗುಣಾತೀತನಾದ ಪರಮಾತ್ಮನ ದರ್ಶನವಾಗುತ್ತದೆ ಎಂಬುದೇ ಇದರ ಮರ್ಮ. ಸಂಕ್ಷಿಪ್ತವಾಗಿ ಕೆಲವು ಅಂಶಗಳನ್ನು ನೆನಪಿಸಿಕೊಂಡದ್ದಾಗಿದೆ. ಹೀಗೆ ಎಲ್ಲಾ ರೀತಿಯಿಂದಲೂ ಭಾರತೀಯ ದೇವಾಲಯಗಳು ನಮ್ಮ ಅಂತರಂಗವನ್ನೇ ಸ್ಮರಣೆಗೆ ತರುವಂತೆ, ಅಂತರಂಗದ ಅರಿವನ್ನು ಮೂಡಿಸಿ ನಮ್ಮೊಳಗಿರುವ ದೇವನ ದರ್ಶನ ಮಾಡಿಸಲು ಸಹಕಾರಿಯಾಗಿವೆ. ಭೂಮಿಯಲ್ಲಿ ವೈಕುಂಠವನ್ನು ನೆನಪಿಗೆ ತರಲು ಜ್ಞಾನಿಗಳು ಮೆಮೊರಿ ಹಾಲ್ (ಸ್ಮಾರಕ ಮಂದಿರ) ಕಟ್ಟಿದರು. ಆ ಮೆಮೊರಿ ಹಾಲ್ ಗಳೇ ನಮ್ಮ ದೇಶದ ದೇವಾಲಯಗಳು. ನಾವು ಆ ದೇವಾಲಯದಲ್ಲಿ ಪ್ರವೇಶಿಸಿದರೆ ಅದರ ಪ್ಲಾನ್ ನಲ್ಲಿ ಅದು ಒಂದು ಯಾನವಾಗಿ, ವಿಮಾನವಾಗಿ ನಮ್ಮನ್ನು ವೈಕುಂಠದವರಿಗೂ ಏರಿಸುವ ವಿಷಯವಿರುವುದು ತಿಳಿದು ಬರುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ. ಈ ರೀತಿಯಾಗಿ ಮಹರ್ಷಿಗಳು ಆಮೂಲಾಗ್ರ ದೃಷ್ಟಿಯಿಂದ ರಚಿಸಲ್ಪಟ್ಟ ದೇವಾಲಯಗಳನ್ನು ಆ ಭಾವನೆಯಿಂದ ಸಂದರ್ಶಿಸಿ ಅವುಗಳ ಅಂತಸ್ಸತ್ಯವನ್ನು ಅರಿತು ಪರಮ ಲಾಭವನ್ನು ಪಡೆಯಬೇಕಾಗಿದೆ.

ಸೂ
ಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.