Sunday, September 24, 2023

ಅಷ್ಟಾಕ್ಷರೀ​ - 44 ಏಷ ಧರ್ಮಃ ಸನಾತನಃ (Astakshara Darshana 44 Esha Dharmah Sanatanah

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

ಪ್ರತಿಕ್ರಿಯಿಸಿರಿ (lekhana@ayvm.in)"ಇದು ಸನಾತನಧರ್ಮ" ಎಂಬ ಮಾತು ಹಲವೆಡೆ ಬರುತ್ತದೆ. ಏನು ಹಾಗೆಂದರೆ? - ಎಂಬುದು ಜಿಜ್ಞಾಸ್ಯವಾದ ವಿಷಯ. ಏತಕ್ಕೆ ಇದು ಜಿಜ್ಞಾಸ್ಯವಾಗಿದೆ? - ಎಂಬುದನ್ನು ಬಾಯಿಬಿಟ್ಟೇ ಹೇಳಬೇಕಿಲ್ಲ. ಈಗಿದು ಎಲ್ಲೆಡೆ ಚರ್ಚಿತವಾಗುತ್ತಿದೆ.   ಕೆಲವರಿಗೆ ಮಾಡಲು ಕೆಲಸವಿರುವುದಿಲ್ಲ; ಸಾಲದೆಂಬಂತೆ, ಅನರ್ಥವೆಸಗಲು ಬೇಕಾದ ನಾಲ್ಕು ಅಂಶಗಳು ಅವರಲ್ಲಿರುತ್ತವೆ.

ಅವಾವುವೆಂಬುದನ್ನು ಪಂಚತಂತ್ರವು ಆರಂಭದಲ್ಲೇ ಪಟ್ಟಿಮಾಡುತ್ತದೆ: ಯೌವನ, ಹಣ, ಅಧಿಕಾರ, ಮತ್ತು ಅವಿವೇಕ. ರಾಜಕಾರಣಿಗಳಲ್ಲಿ ಇವು ನಾಲ್ಕೂ ಮೇಳೈಸಿದಾಗ ಅವರ ನಡೆ-ನುಡಿಗಳ ಬಗೆಯನ್ನು ಬಣ್ಣಿಸಲಾಗದು! ಕಾರಣವೇ ಇಲ್ಲದೆ, ಒಂದು ಕುಂಟುನೆಪವೂ ಇಲ್ಲದೆ, ಸನಾತನಧರ್ಮವನ್ನು ದೂಷಿಸಲಾಗುತ್ತಿದೆಯಲ್ಲವೇ? ಯೋಚಿಸಿ ಮಾತನಾಡುವುದು ಜಾಣತನ; ಆದರೆ ಮತ್ತೊಬ್ಬರ ಮತವನ್ನೋ ಆಚರಣೆಯನ್ನೋ ಅವಹೇಳನಮಾಡಲೆಂದೇ ಹೊರಟವರಿಗೆ, ಜವಾಬ್ದಾರಿಯಿಂದ ಮಾತನಾಡಬೇಕೆಂಬ ಉದ್ದೇಶವೇ ಇರದಷ್ಟೆ?

ಪ್ರಸ್ತುತ-ವಿಷಯ, ಸನಾತನಧರ್ಮ. "ಇದು ಸನಾತನಧರ್ಮ" ಎಂಬ ಮಾತು ಮನುಸ್ಮೃತಿಯಲ್ಲಿ(ಲ್ಲೂ) ಬರುತ್ತದೆ. ಮನುವು ಹೇಳಿರುವ ಮಾತು ಅಚ್ಚುಕಟ್ಟಾಗಿದೆ: "ಸತ್ಯವನ್ನು ನುಡಿಯಬೇಕು, ಪ್ರಿಯವಾದುದನ್ನು ನುಡಿಯಬೇಕು; ಸತ್ಯವನ್ನು ಅಪ್ರಿಯವಾದ ರೀತಿಯಲ್ಲಿ ಹೇಳಬಾರದು; ಪ್ರಿಯವೆಂದು ಅಸತ್ಯವಾಗಿ ನುಡಿಯಬಾರದು. ಇದುವೇ ಸನಾತನ ಧರ್ಮ" - ಎಂದು. ಮನುವಿನ ಹಲವು ನುಡಿಮುತ್ತುಗಳಲ್ಲಿ ಇದೂ ಒಂದು. ಪಿಳ್ಳೆನೆವಕ್ಕಾದರೂ ಮನುವನ್ನು ಬೈಯುತ್ತಲೇ ಇರಬೇಕೆನ್ನುವ ವ್ರತವುಳ್ಳವರಿಗೆ ಯಾರೂ ತಿಳಿವಳಿಕೆ ಕೊಡಲಾಗದಷ್ಟೆ?

"ಮನುವಲ್ಲ, ನಮಗೆ ಬೇಕಾದುದು; ನಮಗೆ ಬೇಕಾದುದು ಬುದ್ಧ!" – ಎನ್ನುವವರಿರಬಹುದು. ಅವರಿಗೊಂದು ಆಶ್ಚರ್ಯವು ಕಾದಿದೆ. ಏಕೆಂದರೆ ಬುದ್ಧನೂ ಅದೇ ಮಾತನ್ನೇ (ಪಾಳಿಯಲ್ಲಿ) ಆಡಿರುವನು! "ಏಸ ಧಮ್ಮೋ ಸನಂತನೋ" – ಎಂದು. ಅವನು ಹೇಳುವ ಮಾತಿದು: ವೈರದಿಂದ ವೈರವು ಎಂದೂ ಶಮನಗೊಳ್ಳುವುದಿಲ್ಲ; ಬದಲಾಗಿ, ಅವೈರದಿಂದ ವೈರವು ಶಮನಗೊಳ್ಳುವುದು; ಇದುವೇ ಸನಾತನಧರ್ಮ - ಎಂದು. (ಮನುವಿನ ಮಾತು ಮಾತನ್ನು ಕುರಿತಾದುದು; ಬುದ್ಧನ  ಮಾತು ಮನಸ್ಸನ್ನು ಕುರಿತಾದುದು. ಒಳ್ಳೆಯ ಮಾತಿನಿಂದಾಗಿ ಒಳ್ಳೆಯ ಮನಸ್ಸು; ಒಳ್ಳೆಯ ಮನಸ್ಸಿನಿಂದಾಗಿ ಒಳ್ಳೆಯ ಮಾತು.) ಅಲ್ಲಿಗೆ, "ಸನಾತನಧರ್ಮವನ್ನು ಚೆನ್ನಾಗಿ ಬೈದೆ"ನೆಂದುಕೊಂಡವರು ಬೌದ್ಧಮತವನ್ನೂ ಜೊತೆಗೇ ಬೈದಿರುವರೆಂದೇ!

ಹಾಗಾದರೆ ಸನಾತನಧರ್ಮವೆಂದರೇನು? ಸನಾತನ ಎಂಬ ಪದವೂ ಅದರ ಭಾವವೂ ಋಗ್ವೇದದಲ್ಲೇ ಉಂಟು, ಅಷ್ಟು ಪ್ರಾಚೀನವದು! ರಾಮಾಯಣ-ಮಹಾಭಾರತಗಳಲ್ಲೂ ಹಲವೊಮ್ಮೆ ಕಾಣಸಿಗುವುದು. 'ಸನಾತನ' ಎಂದರೆ ಬಹಳ ಹಿಂದಿನಿಂದಲೂ, ವಾಸ್ತವವಾಗಿ ಸದಾಕಾಲವೂ, ಇರುವಂತಹುದು. ಎಂದೆಂದೂ ಇರುವುದನ್ನೇ ಸನಾತನವೆನ್ನುವುದು. "ನೀನು ಸನಾತನ ಪುರುಷ!" ಎಂದು ಕೃಷ್ಣನನ್ನು ಕುರಿತು ಹೇಳುತ್ತಾನೆ, ಅರ್ಜುನ - ವಿಶ್ವರೂಪದರ್ಶನ-ಸಂದರ್ಭದಲ್ಲಿ.

'ಧರ್ಮ'ವೆಂದರೇನು? ಇಂದಂದುಕೊಂಡಿರುವಂತೆ ಅದು ಬರೀ "ಮತಾಚಾರಗಳ ಕಂತೆ" ಯಲ್ಲ. ಧರ್ಮವೆಂಬ ಪದವನ್ನು ಎರಡು ಅರ್ಥಗಳಲ್ಲಿ ಸ್ಪಷ್ಟವಾಗಿ ಬಳಸಲಾಗಿರುವುದನ್ನು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು. ಸಾಧ್ಯ ಹಾಗೂ ಸಾಧನ - ಎಂಬಿವೇ ಅದರ ಎರಡು ಅರ್ಥಗಳು. ಅದಕ್ಕೆ ಅವರೇ ಕೊಟ್ಟ ಸರಳೋದಾಹರಣೆಯೇ ಇದೆ.

ನಂಜನಗೂಡಿಗೆ ಹೊರಟಿರುತ್ತೇವೆನ್ನಿ. ದಾರಿಯಲ್ಲಿ ನಂಜನಗೂಡಿನ ದಿಕ್ಕನ್ನು ತೋರಿಸುವ ಕೈಮರವಿರುತ್ತದೆ. ಅದರ ಮೇಲೆ "ನಂಜನಗೂಡು" ಎಂದು ಬರೆದಿರುತ್ತದೆ. ಹೆಸರನ್ನು ನೋಡಿ, ಅದನ್ನೇ ನಂಜನಗೂಡೆಂದು ಹಿಡಿದು ಕುಳಿತುಬಿಟ್ಟರೆ ನಂಜನಗೂಡು ಸಿಕ್ಕಂತಾಯಿತೇ? ನಾವು ಹೋಗಬೇಕಾದ ಗುರಿ, ಅಥವಾ ಸಾಧ್ಯವು, ನಂಜನಗೂಡು. ಅದಕ್ಕೆ ಸಾಧನವೆಂದರೆ ದಿಗ್ದರ್ಶಿಯಾದ ಈ ಕೈಮರ. ಅದು ತೋರಿಸುವ ದಿಕ್ಕನ್ನು ಹಿಡಿದು, ತದನುಸಾರ ಮುಂದಕ್ಕೆ ನಡೆಯಬೇಕು, ಅಲ್ಲವೇ? ಹೀಗೆ ಇಲ್ಲಿ ಸಾಧ್ಯದ ಹೆಸರೇ ಸಾಧನಕ್ಕೂ ಬಂದಿದೆ!

ಭಗವಂತನಾದ ಕೃಷ್ಣನನ್ನೇ 'ಸನಾತನಧರ್ಮ'ವೆಂದು ಮಹಾಭಾರತದಲ್ಲಿ ಕರೆದಿದೆ. ರಾಮನನ್ನೂ 'ಧರ್ಮವೇ ಮೈತಾಳಿಬಂದವನು' ಎಂಬುದಾಗಿ ರಾಮಾಯಣವು ಚಿತ್ರಿಸಿದೆ. ಭಗವಂತನಲ್ಲಿ ಒಂದಾಗುವುದೇ ನಮ್ಮ ಜೀವನದ ಗುರಿ: ಅದು ಸಾಧ್ಯಧರ್ಮ. ಅದನ್ನು ಸಾಧಿಸಲಿಕ್ಕಾಗಿಯೇ ಶಾಸ್ತ್ರಗಳಲ್ಲಿ ಇದನ್ನು ಮಾಡು, ಇದನ್ನು ಮಾಡಬೇಡ ಎಂದಿರುವುದು: ಅದು ಸಾಧನಧರ್ಮ. 'ಧರ್ಮಂ ಚರ' ಎಂದು ಹೇಳಿರುವುದು ಈ ಸಾಧನಧರ್ಮವನ್ನೇ. ಸಾಧನಧರ್ಮವನ್ನು ಅನುಷ್ಠಿಸಬೇಕು, ಸಾಧ್ಯಧರ್ಮಪ್ರಾಪ್ತಿಗಾಗಿ: ಅಲ್ಲಿಗೆ, ಧರ್ಮವೇ ಮಾರ್ಗವಾಯಿತು, ಧರ್ಮವೇ ಲಕ್ಷ್ಯವಾಯಿತು! ಧರ್ಮಮಾರ್ಗದಲ್ಲಿ ಸಾಗಿ ನಮ್ಮ ಮೂಲಧರ್ಮವಾದ ಭಗವದ್ಯೋಗವನ್ನು ಹೊಂದಬೇಕು.

ಜೀವ-ದೇವರ ಸಂಬಂಧವು ಸನಾತನವಾದುದು. ಭಗವತ್-ಸ್ವರೂಪದಿಂದ ಬೇರಾದಾಗ, ಅದನ್ನು ಮತ್ತೆ ಪಡೆಯಲು ಬಯಸುವುದೂ, ಅದಕ್ಕಾಗಿ ಯತ್ನಮಾಡುವುದೂ ಸನಾತನವಾದುವೇ. ಹೀಗೆ ಮೂಲಧರ್ಮಪ್ರಾಪ್ತಿಗಾಗಿ ಸಾಧನಧರ್ಮವನ್ನಾಚರಿಸುವುದೇ ಈ ಸನಾತನಧರ್ಮ.

ಸನಾತನವಾದುದನ್ನರಿತು ಆಚರಿಸುವುದು ಧರ್ಮ; ಅರಿಯದೆ ದೂಷಿಸುವುದು ಅಧರ್ಮ.

ಸೂಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.