Sunday, September 24, 2023

ವ್ಯಾಸ ವೀಕ್ಷಿತ - 55 ದ್ರೌಪದಿಯನ್ನು ಒಯ್ದವರಾರು?(Vyaasa Vikshita - 55 Draupadiyannu Oydavararu?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ದ್ರೌಪದಿಯನ್ನು ಒಯ್ದವರು ಪಾಂಡವರು - ಎಂಬ ಅರಿವು ಈವರೆಗೆ ಮೂಡಲಿಲ್ಲ, ದ್ರುಪದರಾಜನಿಗೆ. ಎಂದೇ ಅತ್ಯಂತ ಚಿಂತಿತನಾಗಿದ್ದ ಆತನು, ಈಗ ಹಿಂತಿರುಗಿದ ಧೃಷ್ಟದ್ಯುಮ್ನನನ್ನು ಕಾತರನಾಗಿ ಕೇಳಿದನು:

ಮಗನೇ, ಕೃಷ್ಣೆಯು ಎಲ್ಲಿಗೆ ಹೋದಳು? ಅವರನ್ನು ಕರೆದೊಯ್ದವರಾರು?: ಅವಳು ಯಾರೋ ಹೀನಜಾತಿಯವರ ಕೈಸೇರಲಿಲ್ಲ ತಾನೆ? ಕೆಸರು ಮೆತ್ತಿದ ಕಾಲನ್ನು ನನ್ನ ತಲೆಯ ಮೇಲೆ ಇಟ್ಟಂತಾಗಿಲ್ಲ ತಾನೆ? ಮಾಲೆಯು ಹೋಗಿ ಶ್ಮಶಾನದಲ್ಲಿ ಬೀಳಲಿಲ್ಲ ತಾನೆ? ಸಮಾನವರ್ಣನಾದ ಕ್ಷತ್ರಿಯಶ್ರೇಷ್ಠರಲ್ಲೊಬ್ಬನೋ ಅಥವಾ ನಮಗಿಂತಲೂ ಶ್ರೇಷ್ಠವರ್ಣವೆನಿಸುವ ಬ್ರಾಹ್ಮಣರಲ್ಲೊಬ್ಬನೋ ಅವಳ ಕೈಹಿಡಿದಿರುವನಷ್ಟೆ? ನಿಮ್ನವರ್ಣದವನಾರೋ ಅವಳನ್ನು ಸ್ಪರ್ಶಿಸಿದ್ದಾಗಿ, ನನ್ನ ತಲೆಯ ಮೇಲೆ ಆತ ತನ್ನ ಎಡಗಾಲಿಟ್ಟಂತಾಗಿಲ್ಲವಷ್ಟೆ? 'ಪುರುಷಶ್ರೇಷ್ಠನಾದ ಅರ್ಜುನನೊಂದಿಗೇ ಅವಳ ಸಂಯೋಗವಾಗಿರುವುದು' - ಎಂದು ಕೇಳಿದೆನಾದರೆ ಬಹಳವೇ ಸಂತೋಷಪಡುವೆ, ಎಂದೆಂದೂ ದುಃಖಿಸೆ! ಆ ಕಾರಣಕ್ಕಾಗಿಯೇ, ಪುತ್ರನೇ, ನನ್ನ ಮಗಳನ್ನು ಗೆದ್ದಿರುವಾತನು ಯಾರೆಂದು ಯಥಾರ್ಥವಾಗಿ ಹೇಳು. ಕುರುಶ್ರೇಷ್ಠನೆನಿಸಿದವನು ವಿಚಿತ್ರವೀರ್ಯ; ಆತನ ಮೊಮ್ಮಕ್ಕಳು (ಎಂದರೆ ಪಾಂಡವರು) ಇನ್ನೂ ಬದುಕಿರುವರಷ್ಟೆ? ಬಿಲ್ಲನ್ನು ಹೆದೆಯೇರಿಸಿ ಲಕ್ಷ್ಯವನ್ನು ಭೇದಿಸಿದವನು ಕುಂತಿಯ ಮಕ್ಕಳಲ್ಲಿ ಕೊನೆಯನಾದವ(ಅರ್ಜುನ)ನೇ ಹೌದಷ್ಟೆ?"

ಅಪ್ಪನು ಹೀಗೆ ಕೇಳಲಾಗಿ, ಧೃಷ್ಟದ್ಯುಮ್ನನು ಈವರೆಗೆ ನಡೆದದ್ದನ್ನೂ, ಕೃಷ್ಣೆಯನ್ನು ಯಾರೊಯ್ದರೆಂಬುದನ್ನೂ ಮಹಾಸಂತೋಷದಿಂದಲೇ ತಿಳಿಸಿದನು.

"ಅಪ್ಪ, ಆ ಯುವಕನಿದ್ದನಲ್ಲಾ! ವಿಶಾಲವಾದ ಹಾಗೂ ಕೆಂಪಾದ ಕಣ್ಣುಗಳಿಂದ ಕೂಡಿದ್ದವನು; ಕೃಷ್ಣಾಜಿನವನ್ನು ಧರಿಸಿದ್ದವನು; ದೇವತೆಗಳಿಗೆ ಸಮಾನವೆನಿಸುವ ರೂಪವನ್ನು ಹೊಂದಿದ್ದವನು; ಶ್ರೇಷ್ಠವಾದ ನಮ್ಮ ಬಿಲ್ಲಿಗೆ ಹಗ್ಗವನ್ನು ಕಟ್ಟಿದವನು; ಲಕ್ಷ್ಯವನ್ನು ಭೂಮಿಯ ಮೇಲೆ ಉರುಳಿಸಿದವನು; ಚುರುಕಾಗಿದ್ದವನು. ಆತನು ಅದೆಂತು ಕಾದಾಡಿದನು!

ದೈತ್ಯರ ನಡುವೆ (ದಿತಿಯ ಮಕ್ಕಳು ದೈತ್ಯರು; ಅವರ ನಡುವೆ ಎಂದರೆ ರಾಕ್ಷಸರ ನಡುವೆ) ಇಂದ್ರನು (ಧೀರಗಂಭೀರವಾಗಿ) ನಡೆದಾಡುವನಲ್ಲವೇ? ಹಾಗೂ (ತತ್ಕಾರಣ) ಇತರ ದೇವತೆಗಳಿಂದಲೂ ಋಷಿಗಳಿಂದಲೂ ಸೇವಿಸಲ್ಪಡುವನಷ್ಟೆ? ಹಾಗೆ ಇಲ್ಲಿ ಶತ್ರುರಾಜರ ನಡುವೆ ಕಾದಾಡಿ, ವಿಪ್ರವರ್ಯರಿಂದ ಸುತ್ತುವರಿಯಲ್ಪಟ್ಟು ಪೂಜಿತನಾದವನನ್ನು ಕಂಡಿರುವೆಯಲ್ಲವೇ? ಆತನ ಅಜಿನವನ್ನು ಹಿಡಿದುಕೊಂಡು ಆತನನ್ನೇ ಅನುಸರಿಸಿ ಹೋದಳು, ನಮ್ಮ ಕೃಷ್ಣೆ. ಅದಂತೂ, ಗಂಡಾನೆಯನ್ನು ಹೆಣ್ಣಾನೆಯು ಪರಮಸಂತೋಷದಿಂದ ಅನುಸರಿಸುವ ಹಾಗಿತ್ತು!

ಆದರೆ ಆಗ ಅಲ್ಲಿದ್ದ ರಾಜರುಗಳು ಇದನ್ನು ಸಹಿಸದಾದರು. ಕೋಪಗೊಂಡ ಅವರು ಆತನ ಮೇಲೆ ಬಿದ್ದರು. ಆಗ ಆದದ್ದೇನು? ಚೆನ್ನಾಗಿ ಬೆಳೆದಿದ್ದ ಮರವೊಂದನ್ನು ಕೈಗೆತ್ತಿಕೊಂಡವನಾಗಿ ಒಬ್ಬನು ಬಂದು ಆ ರಾಜಸ್ತೋಮವನ್ನು ಸದೆಬಡಿದನಲ್ಲವೆ? - ಕ್ರುದ್ಧನಾದ (ಎಂದರೆ ಕೋಪಗೊಂಡ) ಯಮನು ಪ್ರಾಣಿಗಳನ್ನು ಸಂಹಾರಮಾಡಿಬಿಡುವ ಹಾಗೆ!

ಆ ರಾಜರುಗಳೆಲ್ಲ ನೋಡುತ್ತಿರುವಂತೆಯೇ ಆ ಇಬ್ಬರು ನರಶ್ರೇಷ್ಠರು (ಎಂದರೆ, ವಾಸ್ತವವಾಗಿ ಭೀಮಾರ್ಜುನರು) - ಚಂದ್ರಸೂರ್ಯರ ಹಾಗೆ ಕಂಗೊಳಿಸುತ್ತಿದ್ದವರು! - ಕೃಷ್ಣೆಯನ್ನು ಕರೆದುಕೊಂಡು ಹೊರಟರು. ಅವರು ಹೋದದ್ದು ಊರಾಚೆಯಿದ್ದ ಕುಂಬಾರನ ಕರ್ಮಶಾಲೆಗೆ.

ನಾನವರನ್ನು ಅನುಸರಿಸಿಹೋದೆ. ಅಲ್ಲೊಬ್ಬಳು ನಾರಿಯು ಕುಳಿತಿದ್ದಳು. ಅನಲದ ಶಿಖೆಯಂತೆ (ಎಂದರೆ ಬೆಂಕಿಯ ಜ್ವಾಲೆಯ ಹಾಗೆ) ಅವಳೂ ತೋರುತ್ತಿದ್ದಳು. ಅವಳು ಅವರುಗಳ ತಾಯಿಯಿರಬೇಕು - ಎಂದು ನನ್ನ ಊಹೆ - ಎಂದನು. 

ಸೂಚನೆ : 24/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.