Monday, September 4, 2023

ಯಕ್ಷ ಪ್ರಶ್ನೆ 53 Yaksha prashne 53


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in

ಪ್ರಶ್ನೆ – 52 ಧನ್ಯಪುರುಷರಲ್ಲಿ ಉತ್ತಮ ಗುಣ ಯಾವುದು  ?

ಉತ್ತರ - ದಾಕ್ಷ್ಯ

ಧರ್ಮಕ್ಕೆ ಅವಿರೋಧವಾದ ಪದ ಯಾವುದು? ಎಂಬ ಪ್ರಶ್ನೆಯ ಉತ್ತರರೂಪವಾಗಿ ದಾಕ್ಷ್ಯ ಎಂಬ ವಿಷಯವನ್ನು ಈ ಹಿಂದೆ ವಿವರಿಸಿದ್ದಾಗಿದೆ. ಅಲ್ಲಿ ದಾಕ್ಷ್ಯ ಎಂದರೇನು? ಆ ಪದದ ಅರ್ಥ ಸಂಸ್ಕೃತಭಾಷೆಯ ಆಧಾರದಲ್ಲಿ ಯಾವುದು? ಇತ್ಯಾದಿ ವಿಚಾರಗಳು ಅಲ್ಲಿ ವಿವರಿಸಲ್ಪಟ್ಟಿವೆ. ಇನ್ನೂ ಉಳಿದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡುತ್ತೇನೆ. ಕೆಲವು ವಿಷಯಗಳು ಪುನರಾವರ್ತನೆಯಾಗಬಹುದು. ಇನ್ನು ಕೆಲವು ಹೊಸವಿಷಯಗಳೂ ಬರಬಹುದು. ಆದರೂ ಈ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಇದು ಅನಿವಾರ್ಯ ಎಂದು ಭಾವಿಸುತ್ತೇನೆ. 

ಮಾನವ ಧನ್ಯತೆಯನ್ನು ಪಡೆಯಬೇಕಾದರೆ ಅನೇಕ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಂತಹ ಗುಣಗಳಲ್ಲಿ ದಾಕ್ಷ್ಯ ಎನ್ನುವ ಗುಣವು ಬಹಳ ಮುಖ್ಯವಾದದ್ದು. ದಾಕ್ಷ್ಯ ಎಂದರೆ ದಕ್ಷತೆ. ಸಾಮರ್ಥ್ಯ ಅಥವಾ ಯೋಗ್ಯತೆ ಎಂದು. ಈ ಯೋಗ್ಯತೆ ಬರಬೇಕಾದರೆ ಮಾಡುವ ಕಾರ್ಯದಲ್ಲಿ ಕುಶಲತೆ ಬೇಕಾಗುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ  ಇದಕ್ಕೆ 'ಯೋಗ' ಎಂದು ಕರೆಯಲಾಗಿದೆ. ಯೋಗವೇ ಸಾಮರ್ಥ್ಯವನ್ನು ಕೊಡುತ್ತದೆ. ಯೋಗವೆಂದರೆ ಸಂಯೋಗ-ಸೇರುವಿಕೆ. ಮನುಷ್ಯನು ಧನ್ಯನಾಗಬೇಕಾದರೆ ಅನೇಕ ಮಾನವೀಯ ಗುಣಗಳ ಒಡೆಯನಾಗಬೇಕು. ಅಂದರೆ ಅವನ ಎಲ್ಲಾ ಕಾರ್ಯಗಳಿಗೂ ಸಾಧನೀಭೂತಗಳಾದ ಆತ್ಮಾ, ಮನಸ್ಸು, ಇಂದ್ರಿಯ, ಮತ್ತು ಬಾಹ್ಯದಲ್ಲಿ ಸಿಗುವ ಸಾಧನ ಸಾಮಗ್ರಿಗಳು, ಇವುಗಳ ಮೇಲೆ ಸ್ವಾಮ್ಯ ಇರಬೇಕಾಗುತ್ತದೆ. 'ಇವೆಲ್ಲವೂ ಇಂದು ಸರಳರೇಖೆಯಲ್ಲಿ ಬರಬೇಕಪ್ಪ' ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಅಂದರೆ ಇಲ್ಲಿ ಆತ್ಮನೇ ಅನುಭವೀ. ಆತ್ಮವು ಮನಸ್ಸಿನ ಜೊತೆ, ಮನಸ್ಸು ಇಂದ್ರಿಯದ ಜೊತೆ, ಇಂದ್ರಿಯ ಮುಂದಿನ ವಸ್ತುಗಳ ಜೊತೆ ಸೇರಿದಾಗ ಕಾರ್ಯ ಪೂರ್ಣವಾಗುತ್ತದೆ. ಇವಿಷ್ಟು ಒಂದು ಕಾರ್ಯಕ್ಕೆ ಸೇರುವುದೇ ಒಂದು ಯೋಗ. ಇದೇ ದಕ್ಷತೆ. ಈ ದಕ್ಷತೆಯೇ ಮುನುಷ್ಯನನ್ನು ಉದ್ದೇಶಿತ ಗುರಿಯತ್ತ ಕೊಂಡೊಯ್ಯುತ್ತದೆ.

ಮಾನವ ಮಾನವನಾಗಿ ಇರಬೇಕು. ಹಾಗಿಲ್ಲದಿದ್ದರೆ ದಾನವ-ಅಸುರನಾಗಬಹುದು. ಮಾನವನಾಗಿ ಉಳಿಸಲು ಅವನಲ್ಲಿ ದಕ್ಷತೆ ಇರಬೇಕಾಗುತ್ತದೆ. ಪ್ರತಿಯೊಂದು ವಸ್ತುವೂ ಅದರದ್ದೇ ಆದ ಸ್ವಭಾವದಲ್ಲಿ ಇದ್ದರೆ ಮಾತ್ರ ಅದರಿಂದ ಉಪಯೋಗ. ಹಾಲು ಹಾಲಿನ ಸ್ವಭಾವದಲ್ಲಿ ಇರಬೇಕು. ಸ್ವಲ್ಪ ಹುಳಿಯ ವಾಸನೆ ಬಂದರೆ 'ಹಾಲು ಹಾಳಾಗಿದೆ' ಎನ್ನುತ್ತೇವೆ. ಹಾಲು ಅದರ ಯೋಗ್ಯತೆಯಿಂದ ಕೂಡಿದ್ದರೆ ಮಾತ್ರ ಹಾಲಿನಿಂದ ದೇಹಕ್ಕೆ ಎಲ್ಲಾ ಬಗೆಯ ಆರೋಗ್ಯಕ್ಕೆ ಬೇಕಾದ ಅಂಶ ಸಿಗುತ್ತದೆ. ಅಂತೆಯೇ ಮನುಷ್ಯನು ಇರಬೇಕಾದ ಸ್ವಭಾವದಿಂದ ಕೂಡಿದ್ದರೆ ಅದು ಅವನ ದಕ್ಷತೆ. ಒಂದು ಕಾರ್ಯ ಸಿದ್ಧವಾಗಬೇಕಾದರೆ ಯಾವ ಸಾಮಗ್ರಿ ಅತಿಮುಖ್ಯವಾದು? ಎಂಬುದನ್ನು ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು "ಕೇವಲ ಹೊರಗಿನ ಸಾಮಾಗ್ರಿಯನ್ನು ಸಂಪಾದಿಸಿದ ಮಾತ್ರಕ್ಕೆ ಕಾರ್ಯಸಿದ್ಧಿಯಾಗಲಾರದು. ಹಣ, ಕಟ್ಟಡ, ಸಹಕಾರಗಳು, ಸಲಕರಣೆಗಳು ಎಲ್ಲಾ ಬಹಿರಂಗ ಸಾಮಗ್ರಿಗಳು. ಇವೆಲ್ಲಾ ಏಕದೇಶವಾಗುವುದು. ಅಂತರಂಗಸಾಮಗ್ರಿಯು ಸೇರಿ ಪೂರ್ಣದೇಶವಾಗುವುದು" ಎಂದು. ಇಂತಹ ಅಂತರಂಗ ಸಾಮಗ್ರಿಗಳಲ್ಲಿ ದಕ್ಷತೆ ಅತಿಮುಖ್ಯವಾದುದು. ಯಾವೆಲ್ಲಾ ಬಹಿರಂಗ ಸಾಮಗ್ರಿಗಳಿದ್ದರೂ ದಕ್ಷತೆಯೆಂಬ ಅಂತರಂಗದ ಸಾಮಗ್ರಿ ಇಲ್ಲದಿದ್ದರೆ ಆ ಮಾನುಷ್ಯ ಧನ್ಯನಾಗಲಾರ. 

ಸೂಚನೆ : 03/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.