Sunday, September 17, 2023

ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರು (Pratah Smaraniyarada Panncakanyeyaru Pratah Smaraniyarada Pancakanyeyaru)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಪೀಠಿಕೆ

ನಾವು ಪ್ರತಿನಿತ್ಯವೂ ಪಠಣ ಮಾಡುವಂತಹ ಶ್ಲೋಕಗಳಲ್ಲಿ ಪ್ರಸಿದ್ಧವಾದ ಶ್ಲೋಕ-

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾl
ಪಂಚಕನ್ಯಾ: ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಅಹಲ್ಯಾ, ದ್ರೌಪದೀ, ಸೀತಾ, ತಾರಾ ಹಾಗೆಯೇ ಮಂಡೋದರೀ , ಈ ಐದು ಮಂದಿ ಕನ್ಯೆಯರನ್ನು ನಿತ್ಯವೂ ಸ್ಮರಣೆ ಮಾಡಿಕೊಂಡರೆ ಮಹಾಪಾತಕಗಳು (ಪಾಪಗಳು) ನಾಶವಾಗುತ್ತವೆ, ಎಂದು. ಈ ಐವರ ಬಗ್ಗೆ ಒಂದು ಸಂಕ್ಷಿಪ್ತವಾದ ಪರಿಚಯ ಮಾಡಿಕೊಳ್ಳುವುದಾದರೆ, ಅಹಲ್ಯಾ, ಗೌತಮ ಮಹರ್ಷಿಗಳ ಪತ್ನೀ, ದ್ರೌಪದೀ ದೃಪದರಾಜನ ಮಗಳು, ಯಜ್ಞಕುಂಡದಿಂದ ಜನಿಸಿ ಬಂದವಳು, ಪಂಚಪಾಂಡವರ ಪತ್ನೀ. ಸೀತಾ, ಜನಕ ಮಹಾರಾಜನ ಪುತ್ರಿ, ಜನಕ ಮಹಾರಾಜನು ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಆ ಭೂಮಿಯಲ್ಲಿ ಅವನಿಗೆ ದೊರಕಿದವಳು. ಜಾನಕಿ, ಮೈಥಿಲೀ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವವಳು, ಶ್ರೀರಾಮಚಂದ್ರನ ಅರ್ಧಾoಗಿನಿ. ತಾರಾ, ವಾನರ ರಾಜನಾಗಿದ್ದ ವಾಲಿಯ ಹೆಂಡತಿ ಮತ್ತು ಮಂಡೋದರೀ ರಾಕ್ಷಸರಾಜನಾದ ರಾವಣನ ಪತ್ನೀ.

ಈ ಶ್ಲೋಕದ ಬಗ್ಗೆ ಕೆಲವೊಂದು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮೊದಲನೆಯದು, ಕನ್ಯೆ ಎಂದರೆ ಸಾಮಾನ್ಯವಾಗಿ ಮದುವೆ ಆಗದ ಹೆಣ್ಣು ಮಗಳು ಎನ್ನುವ ರೂಡಿ ಇದೆ. ಆದರೆ ಈ ಐದು ಮಂದಿಯರಿಗೂ ವಿವಾಹವಾಗಿದೆ, ಗೃಹಿಣಿಯರು, ಇವರನ್ನು ಹೇಗೆ ಕನ್ಯೆಯರು ಎಂಬ ಶಬ್ಧದಿಂದ ಕರೆಯಬಹುದು ? ಹಾಗಾಗಿ ಈ ಶ್ಲೋಕಕ್ಕೆ, ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕo ನಾ ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಎಂಬ ಬದಲಾವಣೆಯನ್ನು ಮಾಡಿಕೊಂಡು ಪಠಣ ಮಾಡುವ ರೂಢಿಯೂ ಬಂದಿದೆ. ಈ ಐದು ಮಂದಿಯರನ್ನು ನಾ ಅಂದರೆ ಮನುಷ್ಯನಾದವನು ಸ್ಮರಣೆ ಮಾಡಿಕೊಂಡರೆ ಪಾಪಗಳು ನಾಶವಾಗುತ್ತವೆ,ಎಂಬುದಾಗಿ. ಇಲ್ಲಿ ಕನ್ಯಾ ಎಂಬ ಪದವನ್ನೇ ಉಪಯೋಗಿಸಿಲ್ಲ. ಹಾಗೆಯೇ ಮೇಲ್ನೋಟಕ್ಕೆ ನೋಡಿದಾಗ ಸೀತೆ ಮತ್ತು ಮಂಡೋದರಿಯನ್ನು ಹೊರತುಪಡಿಸಿ ಉಳಿದವರ ನಡೆ ಲೋಕದ ದೃಷ್ಟಿಯಿಂದ ಅಷ್ಟು ಆದರ್ಶವಾಗಿದ್ದಂತೆ ತೋರುವುದಿಲ್ಲ, ಕೆಲವೊಂದು ದೋಷವನ್ನು ಹೊತ್ತುಕೊಂಡಂತೆ ಭಾಸವಾಗುತ್ತದೆ, ಇವರ ಸ್ಮರಣೆಯಿಂದ ನಮ್ಮ ಪಾಪಗಳು ಹೇಗೆ ದೂರವಾಗುತ್ತವೆ ? ಉದಾಹರಣೆಗೆ ಅಹಲ್ಯೆ ತನ್ನ ಪತಿಯಾದಂತಹ ಗೌತಮರು ಆಶ್ರಮಲ್ಲಿ ಇಲ್ಲದಿರುವ ಸಮಯದಲ್ಲಿ ಪತಿ ವೇಷಧಾರಿಯಾದಂತಹ ಇಂದ್ರನ ಕಾಮಕ್ಕೆ ವಶವಾದಳು, ದ್ರೌಪದಿಗೆ ಐದು ಮಂದಿ ಪತಿಯರು ಇದು ಲೋಕದ ನಡೆಗಿಂತ ವಿಭಿನ್ನವಾಗಿದೆ, ಹಾಗೆಯೇ ವಾಲಿಯ ಪತ್ನಿಯಾದಂತಹ ತಾರಾ ವಾಲಿಯ ನಿಧನದ ನಂತರ ಸುಗ್ರೀವನ ಜೊತೆಗೆ ಅವನ ಅಂತ:ಪುರದಲ್ಲಿಯೇ ಇರುತ್ತಾಳೆ, ಇವರುಗಳ ಚರಿತ್ರೆ ಈ ರೀತಿಯ ಕೆಲವೊಂದು ವೈಚಿತ್ರ್ಯದಿಂದ ಕೂಡಿದೆ. ಸೀತೆಯಂತೂ ಪರಮ ಪಾವನೆ, ಜಗನ್ಮಾತೆ. ಅವಳ ಸ್ಮರಣಮಾತ್ರದಿಂದಲೇ ನಮ್ಮಲ್ಲಿ ಪಾವನತ್ವ ಉಂಟಾಗುವುದು ನಿಶ್ಚಿತ. ಹಾಗಾಗಿ ಸೀತೆಯನ್ನು ಇವರ ಗುಂಪಿಗೆ ಸೇರಿಸಿರುವುದು ಸರಿಯೇ? ಮತ್ತು ಮಂಡೋದರಿಗೆ ರಾವಣನ ಪತ್ನಿ ಎಂಬುದೊಂದು ಕಪ್ಪುಚುಕ್ಕೆ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಸೀತೆಯಂತೆಯೇ ಪವಿತ್ರಳು, ಮಹಾಪತಿವ್ರತೆ. ಪತಿಯನ್ನು ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನೇ ಪಟ್ಟಿದ್ದಾಳೆ. ಅವಳನ್ನೂ ಸಹ ಇವರ ಗುಂಪಿಗೆ ಸೇರಿಸಿ, ಇವರೊಂದಿಗೆ ಸ್ಮರಣೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಹೊಂದುತ್ತದೆ? ಇತ್ಯಾದಿಯಾಗಿ ಸಂದೇಹ ಮೂಡುವುದು ಸಹಜ. ಇವರುಗಳ ಜೀವನದ ಬಗ್ಗೆ ಪರಿಪೂರ್ಣವಾದ ನೋಟ ಇಲ್ಲದೇ ಇರುವಾಗ ಇಂತಹ ಪ್ರಶ್ನೆಗಳು ಮೂಡುತ್ತವೆ.

ಮೊದಲನೆಯದಾಗಿ ಕನ್ಯೆ ಎಂಬ ಪದದ ಅರ್ಥ ಏನು ಎಂಬುದನ್ನು ನೋಡೋಣ. ಕನ್ಯಾ ಎಂಬ ಪದ ಸಂಸ್ಕೃತ ಭಾಷೆಯ ಪದ, ಕನಿ ದೀಪ್ತೌ ಎಂಬುದು ಇದರ ಮೂಲರೂಪ. ವಿಶೇಷ ದೀಪ್ತಿ ಹೊಂದಿರುವವರು, ಎಂಬುದಾಗಿ ಅರ್ಥ. ದೀಪ್ತಿ ಎಂದರೆ ಪ್ರಕಾಶ, ಬೆಳಕು ಎಂಬುದಾಗಿ. ವಿಶೇಷವಾದ ಪ್ರಕಾಶವನ್ನು ಹೊಂದಿರುವವರೇ ಕನ್ಯೆಯರು. ಯಾವುದದು ವಿಶೇಷ ಪ್ರಕಾಶ ಎಂದರೆ ಎಲ್ಲೆಲ್ಲೂ ಬೆಳಗುತ್ತಿರುವ, ಜ್ಞಾನಿಗಳಿಗೆ ಅಂತರಂಗದ ಸಾಧನೆಯಿಂದ ಗೋಚರವಾಗುವ ಆಧ್ಯಾತ್ಮ ಪ್ರಕಾಶ. ಸೂರ್ಯ, ಚಂದ್ರಾದಿ ಎಲ್ಲಾ ಪ್ರಕಾಶಗಳಿಗೂ ಬೆಳಕನ್ನು ಹರಿಸುವ ಪರಮಾತ್ಮ ಪ್ರಕಾಶ. ಅಂತಹ ಪ್ರಕಾಶವನ್ನು ತನ್ನಲ್ಲಿ ಹೊಂದಿ ಬೆಳಗುವಳೇ ಕನ್ಯಾ. "ಸ್ತ್ರೀಯರಿಗೆ ವಿವಾಹವಾದ ಮೇಲೆ ಸಂಸಾರ ಜೀವನದಿಂದ ವಿಶಿಷ್ಟ ದೀಪ್ತಿಯು ಮರೆಯಾಗುತ್ತದೆ. ಈ ಅಹಲ್ಯಾದಿಗಳು ವಿವಾಹಿತರಾದರೂ ಇತರರಂತೆ ಅವರಿಗೆ ವಿಶೇಷವಾದ ದೀಪ್ತಿ-ಪ್ರಕಾಶವು ಉಳಿದೇ ಇತ್ತು. ಇದೇ ಅವರ ಹಿರಿಮೆ ಎಂದು ಭಾವಿಸಿದಾಗ, ಅವರ ಆತ್ಮದೀಪ್ತಿಯ ಕಡೆಗೆ ಗಮನ ಸೆಳೆಯುವಂತಾದರೆ ಪಂಚಕನ್ಯೆಯರು ಸದಾ ಸ್ಮರಣೀಯರೇ ಆಗುವವರು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ. ಮಹರ್ಷಿಗಳಿಂದ ಲೋಕಕ್ಕೆ ಕೊಡಲ್ಪಟ್ಟ ಈ ಶ್ಲೋಕದ ಒಳ ಅರ್ಥ ಹಾಗೂ ಈ ಐದು ಮಂದಿ ಸ್ತ್ರೀರತ್ನರ ಮಹಿಮೆಯನ್ನು ಜ್ಞಾನಿಗಳಿಂದ ತಿಳಿಯಲ್ಪಟ್ಟಾಗ ಸಂಶಯಕ್ಕೆ ಆಸ್ಪದವಿರುವುದಿಲ್ಲ. ಈ ಅಹಲ್ಯಾ ಮುಂತಾದವರಲ್ಲಿ ಹೇಗೆ ಆ ವಿಶೇಷವಾದ ಆತ್ಮಪ್ರಕಾಶ, ವಿಶಿಷ್ಟವಾದ ಕಾಂತಿಯನ್ನು ನೀಡಿತ್ತು? ಹೇಗೆ ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ? ಅವರನ್ನು ಹೇಗೆ ಸ್ಮರಣೆ ಮಾಡಿಕೊಂಡರೆ ನಮ್ಮ ಪಾಪಗಳು ನಾಶವಾಗುತ್ತವೆ? ಎಂಬುದನ್ನು ಒಬ್ಬೊಬ್ಬರ ಜೀವನದ ವಿಶೇಷತೆಗಳ ಮೇಲೂ ನಮ್ಮ ನೋಟವನ್ನು ಹರಿಸಿ ಮುಂದಿನ ಸಂಚಿಕೆಗಳಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಸೂಚನೆ : 17/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.