Sunday, September 10, 2023

ಆನಂದಾಮೃತವನ್ನು ಕರ್ಷಿಸುವ ಅಮೃತವರ್ಷಿಣಿ (Anandamrtavannu Karsisuva Amrstavarsini)

  ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರಾದ ಮುತ್ತುಸ್ವಾಮಿ ದೀಕ್ಷಿತರ (1776-1835 ಕ್ರಿ.ಶ) ಜೀವನದಲ್ಲಿ ಒಂದು ಕುತೂಹಲಕಾರಿ ಪ್ರಸಂಗ ನಡೆಯಿತು. ಕ್ಷಾಮ ಪೀಡಿತ ಮಾರ್ಗದ ಮೂಲಕವಾಗಿ ಎತ್ತಿನ ಗಾಡಿಯಲ್ಲಿ ಎಟ್ಟಿಯಾಪುರಕ್ಕೆ ಹೋಗುತ್ತಿದ್ದರು. ಅವರ ಧರ್ಮಪತ್ನಿ ತೀವ್ರವಾದ ಬಾಯಾರಿಕೆಯನ್ನು ವ್ಯಕ್ತಪಡಿಸಿದರು. ನೀರನ್ನೆಲ್ಲೂ ಕಾಣದೆ, ದೇವಿ ಉಪಾಸಕರಾದ ದೀಕ್ಷಿತರು, ಒಡನೆಯೇ ಅಮೃತೇಶ್ವರಿ ದೇವಿಯನ್ನು ಸ್ತುತಿಸುತ್ತಾ ಅಮೃತವರ್ಷಿಣಿ ರಾಗದಲ್ಲಿ, "ಆನಂದಾಮೃತ ಕರ್ಷಿಣಿ ಅಮೃತವರ್ಷಿಣಿ…" ಎಂದು ಕೃತಿಯನ್ನು ರಚಿಸಿ, ಅವರ ಶಿಷ್ಯನಾದ ತೇವೂರ್ ಸುಬ್ರಹ್ಮಣ್ಯಅಯ್ಯರ್ ಅನ್ನುವವನಿಗೆ ಕಲಿಸಿ ಹಾಡಿಸುತ್ತಾರೆ. ಹಾಡು ಮುಗಿಯುತ್ತಲೇ, ಮೋಡಕವಿದು, ಜೋರಾಗಿ ಮಳೆ ಸುರಿಯುತ್ತದೆ. ಮೊಣಕಾಲಿನಷ್ಟು ಆಳವಾದ ನೀರಿನಲ್ಲಿ ಪ್ರಯಾಣ ಮುಂದುವರಿಸಿ ಎಟ್ಟಿಯಾಪುರ ತಲುಪುತ್ತಾರೆ. 


ಇದು ಪವಾಡವೇ? ನಿತ್ಯ ಅನುಷ್ಠಾನ, ಮಂತ್ರ ಜಪ, ಹೋಮಾದಿಗಳನ್ನು ಆಚರಿಸುತ್ತಿದ್ದ ದೀಕ್ಷಿತರಂತಹ ಕೆಲವರಿಂದ ಮಾತ್ರ ಸಾಧ್ಯವೇ? ಶಿಷ್ಯ ಪರಂಪರೆಯಲ್ಲಿ ನಮ್ಮವರೆಗೆ ತಲುಪಿರುವ ಇದೇ ಕೃತಿಯನ್ನು ನಾವಿಂದು ಹಾಡಿದಾಗಲೆಲ್ಲಾ ಮಳೆ ಸುರಿಯುತ್ತಿದೆಯೇ?  ಕೇವಲ ಮಳೆ  ಬಾರದಿದ್ದಾಗ ಹಾಡುವ ರಾಗವೆಂದು ಸಂಪ್ರದಾಯವನ್ನು ಮಾತ್ರ ಉಳಿಸಿಕೊಂಡಿದ್ದೇವೆಯೆ? ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಇಂದು ವಿಮಾನಗಳಿಂದ ರಾಸಾಯನಿಕ ವಸ್ತುಗಳನ್ನು ಮೋಡಗಳ ಮೇಲೆ ಬಿತ್ತರಿಸಿ, ಬೇಕಾದ ಸ್ಥಳಗಳಲ್ಲಿ ಮಳೆಯನ್ನು ಬರಿಸಲು ಸಾಧ್ಯವಿದೆಯಲ್ಲ! ಎಂದೂ ಆಧುನಿಕ ವಿಜ್ಞಾನದಿಂದ ಶಿಕ್ಷಿತರಾದ ನಮ್ಮಗಳ ಬುದ್ಧಿಗೆ ಅನ್ನಿಸಬಹುದು. 


ಸಂಗೀತ  ಸಾಹಿತ್ಯಗಳ ಅನ್ಯೋನ್ಯ ಸಂಬಂಧ


 ಜ್ಞಾನ–ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ಸಂಗೀತ-ಸಾಹಿತ್ಯಗಳ ಅನ್ಯೋನ್ಯ ಸಂಬಂಧದ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದರು. ಸಂಗೀತ–ಸಾಹಿತ್ಯಗಳನ್ನು ಭಗವಂತನ ಇಚ್ಛೆಯಂತೆ, ವಿದ್ಯೆಗಳಾಗಿ ಲೋಕಕ್ಕೆ ಅಮೃತ ಧಾರೆಯಾಗಿ ಹರಿಸುತ್ತಿರುವಳು ದೇವಿ. 


"ಕರೆಂಟ್ ಹರಿಸಲು ಕಾಪರ್ ವೈರ್ ಹೇಗೆ ಅವಶ್ಯವೋ ಹಾಗೇ, 'ವಾಕ್ಕು', ವಿದ್ಯೆಯನ್ನು ಹೊರತರಲು ಮಾಧ್ಯಮವಾಗಿದ್ದು, ನಾದ ಮೂಲದಿಂದ ಪರಾ, ಪಶ್ಯಂತೀ, ಮಧ್ಯಮಾ ಹಾಗೂ ವೈಖರೀಗಳೆಂಬ ನಾಲ್ಕು ದಶೆಗಳಲ್ಲಿ ವಿಕಾಸವಾಗುತ್ತೆ. ಶಬ್ದ ರೂಪದಲ್ಲಿ ಗೋಚರವಾಗುವುದು ವೈಖರೀ. ಉಳಿದ ಮೂರು ನಾದರೂಪಗಳು."


 ಪ್ರಣವ ಮೂಲದಿಂದ ಹೊರಟು, ಸಪ್ತಸ್ವರಗಳಾಗಿ ವಿಸ್ತಾರ ಹೊಂದಿ, ಒಂದು ಅಪೇಕ್ಷೆಗೆ ಅನುಗುಣವಾಗಿ ರಾಗಗಳು ಹುಟ್ಟುತ್ತವೆ. ಸಾಹಿತ್ಯದೊಡನೆ ಅದರ ರಸವನ್ನೂ ಹೊರಹೊಮ್ಮಿಸುವಂತಿರಬೇಕು ರಾಗಗಳು. ಸಂಗೀತ ಕಲೆಯನ್ನು ದೈವದ ಗುಣಗಾನಕ್ಕಾಗಿ ಬಳಸಿ,  ಭಗವಂತನನ್ನು ಒಲಿಸಿಕೊಂಡಲ್ಲಿ, ಜೀವನಕ್ಕೆ ಒಂದು ಸ್ನಾನ, ಅದರಿಂದ ನಿತ್ಯವೂ ಅಮೃತಪಾನವೂ ದೊರಕುತ್ತೆ. 


ದೀಕ್ಷಿತರ ಪ್ರಾರ್ಥನೆ


ಸುಬ್ರಹ್ಮಣ್ಯನಿಂದ ಅನುಗೃಹೀತರಾಗಿ, ದೀಕ್ಷಿತರು ದೈವಭಾಷೆಯಾದ ಸಂಸ್ಕೃತ ಹಾಗೂ ಸಂಗೀತಗಳಲ್ಲಿ ಪಾಂಡಿತ್ಯ ಹೊಂದಿದ್ದರಲ್ಲದೆ, ಮಂತ್ರ-ತಂತ್ರ-ಶಾಸ್ತ್ರ-ಜೋತಿಷ್ಯಗಳನ್ನೂ ಬಲ್ಲವರು. ಶ್ರೀವಿದ್ಯಾ ಉಪಾಸಕರು. ಅಷ್ಟಾಂಗ ಯೋಗವನ್ನು ಬಲ್ಲವರು; ನಿತ್ಯವೂ ಸಂಗೀತದಿಂದ ದೇವಿಯನ್ನು ಪೂಜಿಸುತ್ತಿದ್ದರು. ಯೋಗಬಲದಿಂದ ತೋರಬಹುದಾದ ಪವಾಡಗಳಿಂದ ಜನರನ್ನು ಮೆಚ್ಚಿಸುವ ಧ್ಯೇಯ ಅವರದ್ದಲ್ಲ. ಜನರು ಕಷ್ಟಗಳನ್ನು ಅವರಲ್ಲಿ ತೋಡಿಕೊಂಡಾಗ,  ಲೋಕ ಹಿತ ದೃಷ್ಟಿಯಿಂದಲೇ ದೇವಿಯನ್ನು ಪ್ರಾರ್ಥಿಸುತ್ತಿದ್ದರು. "ಆನಂದ(ಧ್ಯಾನಮಗ್ನ  ಶಿವನ ಸ್ಥಿತಿ)ವೆಂಬ ಅಮೃತವನ್ನು ಕರ್ಷಿಸುವವಳೇ, ಅಮೃತವನ್ನು ವರ್ಷಿಸುವವಳೇ, ಸುವೃಷ್ಟಿಯನ್ನು ಸುರಿಸುವವಳೇ, ನಿನ್ನನ್ನು ಸದಾ ಚಿಂತಿಸುತ್ತೇನೆ (ಧ್ಯಾನ ಮಾಡುತ್ತೇನೆ).  ತಾಯೇ ಅಮೃತೇಶ್ವರಿ, ನೀರನ್ನು ವರ್ಷಿಸು"- ಎಂದೇ ಈ ಸಂದರ್ಭದಲ್ಲಿಯೂ ಪ್ರಾರ್ಥಿಸಿದರು.  


ಇಂದೂ ಮಳೆ ಬರಿಸುವುದು ಸಾಧ್ಯವೇ?

ಇದೇ ಕೃತಿಯ ಗಾಯನ, ನಮ್ಮ ಇಂದಿನ ವೈಖರೀ ರೂಪಕ್ಕೆ ಸೀಮಿತವಾಗಿರುವ ಕಲಿಕೆಯಿಂದ, ತಕ್ಷಣದಲ್ಲಿ ಮಳೆ ಸುರಿಸುವುದು ಅಸಂಭವ. ಅದರ ಹಿಂದಿನ ನಾದರೂಪಗಳನ್ನು ಅರಿತು ಕೂಡಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯ. 

ಮಹರ್ಷಿ ಸಂಸ್ಕೃತಿಯ ಪರಿಪೂರ್ಣ ನೋಟ- ಅರ್ಥಾತ್ ಪ್ರಕೃತಿಯ ಸಹಜ ನಡೆ, ದೇವತಾ ಪ್ರಕೋಪ ನಿವಾರಣೆ, ದೈವಾನುಗ್ರಹದ ಸನ್ನಿವೇಶಗಳು ಇಂದು ಬಹುಮಟ್ಟಿಗೆ ಲುಪ್ತವಾಗಿವೆ. 


ಇಂದಿಗೂ ಗುರ್ವನುಗ್ರಹವನ್ನು ಹಿಂದಿಟ್ಟುಕೊಂಡು, ಶಿಸ್ತಿನಿಂದ, ಶಾಸ್ತ್ರಬದ್ಧವಾಗಿ, ಗುರುಮುಖೇನ ಕಲಿತಲ್ಲಿ, ಈ ಉತ್ತಮ ರಚನೆಗಳು ಕಾಲಕ್ರಮೇಣ ಅವುಗಳ ಮನೋಭೂಮಿಕೆಗೆ ನಮ್ಮನ್ನು ಸೆಳೆಯುತ್ತಾ, ಸರಿದಾರಿಗೆ ಖಂಡಿತವಾಗಿಯೂ ಕೊಂಡೊಯ್ಯುತ್ತವೆ. ಇಂತಹ ಉತ್ತಮ ವಾಗ್ಗೇಯಕಾರರು,  ರಚಿಸಿದ ಕೃತಿಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸನ್ಮತಿ, ಸದ್ಬುದ್ಧಿಗಳನ್ನು ದೇವಿಯು ಕರುಣಿಸಲೆಂದು ಪ್ರಾರ್ಥಿಸೋಣ.


ಸೂಚನೆ : 9/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.