Monday, September 4, 2023

ವ್ಯಾಸ ವೀಕ್ಷಿತ - 53 ದ್ರೌಪದಿ ಯಾರ ಪತ್ನಿ?(Vyaasa Vikshita - 53 Draupadi Yara Patni?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಹೀಗೆ ಹೇಳಲಾಗಿ, ಆ ಕುರುವೀರನು ಕ್ಷಣಕಾಲ ಯೋಚಿಸಿ, ಕುಂತಿಯನ್ನು ಸಂತೈಸಿ, ಅರ್ಜುನನನ್ನು ಕುರಿತಾಗಿ ಹೀಗೆ ಹೇಳಿದನು:

"ಫಾಲ್ಗುನನೇ (ಎಂದರೆ ಅರ್ಜುನನೇ), ದ್ರೌಪದಿಯನ್ನು ಗೆದ್ದು ತಂದಿರುವವನು ನೀನು. ಆದ್ದರಿಂದ ಈಕೆಯು ನಿನ್ನೊಂದಿಗೆ ಪತ್ನಿಯಾಗಿ ಇರುವುದೇ ಶೋಭಿಸುವುದು. ಎಂದೇ, ಓ ಶತ್ರುಸಂಹಾರಕನೇ, ಅಗ್ನಿಯನ್ನು ಬೆಳಗಿಸು, ಹಾಗೂ (ಆ ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು) ನೀನು ಇವಳನ್ನು ವಿಧಿವತ್ತಾಗಿ (ಎಂದರೆ ಶಾಸ್ತ್ರಕ್ರಮಾನುಸಾರವಾಗಿ) ವಿವಾಹವಾಗು" ಎಂದನು.

ಅದಕ್ಕೆ ಅರ್ಜುನನು ಹೇಳಿದನು: "ಅಣ್ಣ! ನನ್ನನ್ನು ಅಧರ್ಮದಲ್ಲಿ ಭಾಗಿಯನ್ನಾಗಿ ಮಾಡಬೇಡ. ಇದು ಶಿಷ್ಟ-ದೃಷ್ಟವಾದ ಧರ್ಮವಲ್ಲ. (ಎಂದರೆ ಶಿಷ್ಟಾಚಾರಸಂಪನ್ನರು ಕಂಡುಕೊಂಡಿರುವಂತಹುದಲ್ಲ). ಮೊದಲು ವಿವಾಹವಾಗಬೇಕಾದದ್ದು ನೀನು (ಅಣ್ಣನಿಗಿಂತ ಮೊದಲು ತಮ್ಮನು ಮದುವೆಯಾಗುವುದು ಧರ್ಮ-ಸಂಮತವಲ್ಲವಾದ್ದರಿಂದ); ಆಮೇಲೆ ಭೀಮನು; ಆ ಬಳಿಕ ನಾನು; ಆ ಬಳಿಕ ನಕುಲ, ಹಾಗೂ ಆ ನಂತರ ಸಹದೇವ. ನಾವು ನಾಲ್ಕೂ ಜನರೂ ಮತ್ತು ದ್ರೌಪದಿಯೂ ನಿನ್ನ ಆಜ್ಞೆಯಂತೆ ವರ್ತಿಸತಕ್ಕವರು. ಹೀಗಿರಲು, ಧರ್ಮ್ಯವೂ (ಧರ್ಮ್ಯವೆಂದರೆ ಧರ್ಮಸಂಮತವಾದದ್ದು) ಕೀರ್ತಿಕರವೂ ಆದ ಕರ್ತವ್ಯವು ಏನಿರಬಹುದೋ ಅದನ್ನು ಚೆನ್ನಾಗಿ ಆಲೋಚಿಸಿ ಮಾಡುವುದು ಸರಿ. ಹಾಗೆಯೇ ಪಾಂಚಾಲರಾಜನಿಗೂ ಯಾವುದು ಹಿತವಾಗಬಹುದೋ ಅದನ್ನು ನಮಗೆ ಅಪ್ಪಣೆ ಮಾಡು. ನಾವುಗಳು ನಿನ್ನ ವಶವರ್ತಿಗಳು (ಎಂದರೆ ನೀ ಹೇಳಿದಂತೆ ಕೇಳತಕ್ಕವರು)" ಎಂದನು.

ಭಕ್ತಿಯಿಂದಲೂ ಸ್ನೇಹದಿಂದಲೂ ಅರ್ಜುನನು ಹೇಳಿದ ಮಾತುಗಳನ್ನು ಕೇಳಿದ ಪಾಂಡವರ ದೃಷ್ಟಿಯು ದ್ರೌಪದಿಯತ್ತ ಚಲಿಸಿತು. ಅವಳೂ ಇವರೆಲ್ಲರತ್ತ ದೃಷ್ಟಿಬೀರಿದುದನ್ನು ಇವರೂ ಗ್ರಹಿಸಿದರು. ಇವರ ಹೃದಯದಲ್ಲಿ ದ್ರೌಪದಿಯು ನೆಲೆಸಿದಳು. ಅಸಾಧಾರಣತೇಜಸ್ವಿಗಳಾದ ಪಾಂಡವರೆಲ್ಲರಲ್ಲಿ ಅವಳನ್ನು ಕುರಿತಾದ ಕಾಮಭಾವವು ಅಂಕುರಿತವಾಯಿತು. ದ್ರೌಪದಿಯ ರೂಪವಾದರೂ ಅತ್ಯಂತ ಕಮನೀಯವಾದದ್ದು. ಮಿಕ್ಕೆಲ್ಲರ ಸೌಂದರ್ಯವನ್ನು ಮೀರಿಸುವಂತೆಯೇ ಬ್ರಹ್ಮನು ಆಕೆಯನ್ನು ಸೃಷ್ಟಿ ಮಾಡಿರುವುದೂ.

ಎಲ್ಲರ ಆಕಾರ-ಭಾವಗಳನ್ನು ಯುಧಿಷ್ಠಿರನು ಗಮನಿಸಿಕೊಂಡನು (ಆಕಾರವೆಂದರೆ ಹೊರಗೆ ತೋರುವ ಲಕ್ಷಣಗಳು; ಭಾವವೆಂದರೆ ಅವಕ್ಕೆ ಕಾರಣವಾದ ಅಂತರಂಗಸ್ಥಿತಿ); ವ್ಯಾಸರ ಮಾತನ್ನೂ ಮನಸ್ಸಿಗೆ ತಂದುಕೊಂಡನು; ದ್ರೌಪದಿಯ ನಿಮಿತ್ತವಾಗಿ ಸೋದರರಲ್ಲಿ ಒಡಕು ಮೂಡಿಬಿಡಬಾರದೆಂಬ ಆಶಯದಿಂದ ಹೀಗೆಂದನು: "ಶುಭಳಾದ ಈ ದ್ರೌಪದಿಯು ನಮಗೆಲ್ಲರಿಗೂ ಭಾರ್ಯೆಯಾಗುವಳು."

ಜ್ಯೇಷ್ಠಭ್ರಾತೃವಿನ ಆ ಮಾತುಗಳನ್ನು ಕೇಳಿ ಎಲ್ಲಾ ಪಾಂಡವರೂ ಆ ಮಾತುಗಳನ್ನೇ ಮನಸ್ಸಿನಲ್ಲಿ ಮೆಲುಕುಹಾಕುತ್ತಾ ಮೌನವಾಗಿ ಕುಳಿತರು.

ಅಷ್ಟರಲ್ಲಿ ಆ ಕುಂಬಾರನ ಮನೆಗೆ ಬಲರಾಮನೊಡಗೂಡಿ ಶ್ರೀಕೃಷ್ಣನು ಆಗಮಿಸಿದನು. ಕೃಷ್ಣನು ವೃಷ್ಣಿವಂಶದ ವೀರ; ಪಾಂಡವರು ಕುರುವಂಶದ ವೀರರು. ಪಾಂಡವರು ಕುಳಿತಿದ್ದ ಎಡೆಗೆ ಆತನು ಬಂದನು. ಅಜಾತಶತ್ರುವೆನಿಸಿದ್ದ ಯುಧಿಷ್ಠಿರನ ಸುತ್ತಲೂ ಈ ಪಾಂಡುವೀರರು ಕುಳಿತಿದ್ದರು.

ಧರ್ಮಾತ್ಮರಲ್ಲಿ ಶ್ರೇಷ್ಠನಾದ ಯುಧಿಷ್ಠಿರನ ಬಳಿ ಶ್ರೀಕೃಷ್ಣನು ಸಾರಿ ಆತನ ಪದಗಳನ್ನು ಮುಟ್ಟಿ, "ನಾನು ಕೃಷ್ಣ" ಎಂದು ಹೇಳಿಕೊಳ್ಳುತ್ತಾ ನಮಸ್ಕರಿಸಿದನು. ಬಲರಾಮನೂ ಸಹ ಅಂತೆಯೇ ಯುಧಿಷ್ಠಿರನಿಗೆ ನಮಸ್ಕರಿಸಿದನು. ಪಾಂಡವರಿಗೆಲ್ಲರಿಗೂ ಸಂತೋಷವಾಯಿತು. ಕೃಷ್ಣ-ಬಲರಾಮರು ತಮ್ಮ ಸೋದರತ್ತೆಯಾದ ಕುಂತಿಗೂ ಪಾದಮುಟ್ಟಿ ನಮಸ್ಕಾರಮಾಡಿದರು.

ಯುಧಿಷ್ಠಿರನು ಕೃಷ್ಣನನ್ನು ಕುರಿತು ಕುಶಲಪ್ರಶ್ನೆಯನ್ನು ಮಾಡಿದನು. ಆಮೇಲೆ, "ನಾವು ನಿಗೂಢವಾಗಿ ವಾಸಿಸುತ್ತಿದ್ದರೂ ನಿನಗದು ಹೇಗೆ ಗೊತ್ತಾಯಿತು ವಾಸುದೇವ?"  - ಎಂದು ಕೇಳಿದನು.

ಸೂಚನೆ : 03/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.