Monday, August 28, 2023

ಅಷ್ಟಾಕ್ಷರೀ​ - 42 ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ (Astakshara Darshana 42 Aptah Shishtah Vibuddhaste)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) ಯೌವನವು ಯಾರಿಗೆ ಬೇಡ? ಯಯಾತಿಯಿಂದ ಆರಂಭಿಸಿ ಎಲ್ಲರಿಗೂ ಬೇಕಾದದ್ದೇ ಅದು. ಯೌವನವೆಂದರೆ ಉಕ್ಕುವ ಶಕ್ತಿ, ಉಕ್ಕುವ ಉತ್ಸಾಹಗಳು. ದೊಡ್ಡಸಾಧನೆಗಳಿಗೆ ಅದುವೇ ಸರಿಯಾದ ಕಾಲ. ಬಲ-ಉತ್ಸಾಹಗಳಿದ್ದಲ್ಲಿ ಯಾವುದು ತಾನೆ ಅಸಾಧ್ಯ? ಉತ್ಸಾಹಿಗಳಿದ್ದಲ್ಲಿ ನಿರುತ್ಸಾಹಿಗಳಿಗೂ ಒಂದಿಷ್ಟು ಉತ್ಸಾಹ ಅಂಟುವುದೇ!

 ಉತ್ಸಾಹವೇನೋ ತುಂಬ ಉಂಟು, ಆದರೆ ಹೆಚ್ಚು ಶಕ್ತಿಯಿಲ್ಲ– ಎಂದಲ್ಲಿ ಹೆಚ್ಚಿನ ಸಾಧನೆಯಾಗುವ ನಿರೀಕ್ಷೆಯಿಲ್ಲ. ಬದಲಾಗಿ ಬಲವು ಬೇಕಾದಷ್ಟಿದ್ದೂ ಉತ್ಸಾಹವೇ ಇಲ್ಲದಿದ್ದಲ್ಲಿ ಆಗಲೂ ಏನು ತಾನೆ ಸಾಧನೆಯಾದೀತು? ಕುಂಭಕರ್ಣನಿಗೇನು ಕಡಿಮೆ ಬಲವಿತ್ತೇ? ಆದರೆ ಸದಾ ನಿದ್ರಾಳು! ಹಾಗಿದ್ದರೇನು ಬಂತು? ಅತಿನಿದ್ರೆಯೆಂಬುದು ತಮಸ್ಸಿನ ಪ್ರಭಾವ. ಮಹಾಶಕ್ತಿಶಾಲಿಯಾಗಿದ್ದೂ ತಮೋಮಯನಾಗಿದ್ದರೆ ಸಾಧನೆಯು ಸೊನ್ನೆಯೇ.

ಆದರೆ ರಾವಣನ ನಡೆ ಇದಕ್ಕೆ ವಿರುದ್ಧವಾದದ್ದು: ಅದೆಂತೆಂತಹ ಸಾಧನೆಗಳನ್ನು ಮಾಡಿಬಿಟ್ಟ ಅವನು! ವೇದಾಧ್ಯಯನಸಂಪನ್ನ ಹಾಗೂ ಶಿವಭಕ್ತ, ಆತ. ಕೈಲಾಸವನ್ನೇ ಅಲ್ಲಾಡಿಸಿದ! ಅಲ್ಲೇ ನಂದಿಯನ್ನೇ ಕೆಣಕಿದ! ಉಗ್ರತಪಸ್ಸನ್ನು ಮಾಡಿ, ದೇವ-ಗಂಧರ್ವ-ದಾನವರಾರಿಂದಲೂ ಮರಣ ಬರದಂತಹ ವರ ಪಡೆದ. ಇಷ್ಟು ಬಲಶಾಲಿ ಕೊನೆಗೆ ಮಾಡಿದುದೇನು? ವೇದವತಿಯನ್ನು ಬಲಾತ್ಕರಿಸಿದ, ರಂಭೆಯ ಮೇಲೂ  ಬಲಪ್ರಯೋಗ ಮಾಡಿದ! ತಾನು ಕೆಣಕಿದ ನಂದಿ-ರಂಭೆ-ವೇದವತಿಯರಿಂದ ಹಿಡಿಶಾಪಗಳನ್ನು ಪಡೆದ! ಹತ್ತು ತಲೆಗಳಿದ್ದರೇನು? ಒಂದನ್ನೂ ಉಪಯೋಗಿಸದೆ ಸ್ವನಾಶಕ್ಕೆ ದಾರಿಮಾಡಿಕೊಂಡ. ತನ್ನ ಅದಮ್ಯದರ್ಪ-ಪಾರುಷ್ಯಗಳ ಕಹಿಫಲವನ್ನನುಭವಿಸಿದ. ಇವೆಲ್ಲಾ ರಜೋಗುಣಭರಿತರ ಲಕ್ಷಣಗಳೇ.

ಅಲ್ಲಿಗೆ, ಬರೀ ಬಲದಿಂದಲೂ ಪ್ರಯೋಜನವಿಲ್ಲ; ಬರೀ ಉತ್ಸಾಹದಿಂದಲೂ ಅಷ್ಟೆ; ಬಲೋತ್ಸಾಹಗಳೆರಡೂ ಇದ್ದರೂ ಅರಿವು ಬೇಕು: ಜೀವನದಲ್ಲಿ ಸಾಗಬೇಕಾದ ದಿಕ್ಕು ಯಾವುದು? – ಎಂಬುದರರಿವು; ಸಾಧಿಸಬೇಕಾದ ಜೀವನಲಕ್ಷ್ಯವೇನು? - ಎಂಬುದರರಿವು.

ಜೀವನದ ಲಕ್ಷ್ಯ, ಅದಕ್ಕೆ ಸುಮಾರ್ಗ - ಎಂಬಿವನ್ನು ತಿಳಿಸುವ ಪುಸ್ತಕಗಳು ಹಲವಿರಬಹುದು. ಆದರೆ ನಮಗೇನೋ ಸಮಸ್ಯೆ ಬಂದಾಗ ಅವು ಸಾಲದಾಗುವುವು; ಆಗ ನಾವು ಮೊರೆಹೋಗುವುದು ಆಪ್ತೇಷ್ಟರಲ್ಲಿಗೆ. ಆಪ್ತರ ಸಲಹೆ ಉಪಕಾರಕ. "ಇವರು ನಮಗೆ ತುಂಬ ಆಪ್ತರು" ಎಂದು ಯಾರ ಬಗ್ಗೆಯಾದರೂ ಹೇಳಿದರೆ, ಅವರು ನಮಗೆ ಒಳ್ಳೆಯದಾಗುವುದನ್ನೇ ಹೇಳುವರು - ಎಂಬ ಎಣಿಕೆಯಿರುವುದಲ್ಲವೇ?

ನಮಗೆ ಹತ್ತಿರವಾದ ಬಂಧುಗಳನ್ನೋ ಮಿತ್ರರನ್ನೋ ಆಪ್ತರೆನ್ನುವುದುಂಟು. ವಾಸ್ತವವಾಗಿ ಆ ನಿಕಟತೆಯೆಂಬುದಷ್ಟೇ ಸಹ ಸಾಲದೆ ಹೋಗುವುದು. ಹಿತೈಷಿಗಳೆನಿಸಲು ಬೇರೊಂದಂಶವೂ ಬೇಕು. ಏನದು? ಅರಿವು: ಸಮಸ್ಯೆಯ ಹಾಗೂ ಪರಿಹಾರದ ಸ್ಪಷ್ಟ ಅರಿವು. ಅರಿವನ್ನೇ ಬೋಧವೆನ್ನುವರು; ಈ ಬೋಧದ ಜೊತೆಗೆ  ಜಾಗರೂಕತೆಯೂ ಇರುವ ಪ್ರೌಢತೆಯುಳ್ಳವರನ್ನೇ ಪ್ರಬುದ್ಧರೆನ್ನುವುದು. ವಿಬುದ್ಧರೆಂದರೂ ಅದೇ. ಆಪ್ತರು ವಿಬುದ್ಧರಾಗಿರಬೇಕು.

ಒಂದರ್ಥದಲ್ಲಿ ಇದೂ ಸಹ ಸಾಲದೇ! ಏಕೆ? ಅರಿತದ್ದನ್ನು ತಮ್ಮ ಜೀವನದಲ್ಲೇ ಅವರು ನಡೆದು ತೋರಿಸಿದ್ದಾರೋ? - ಎಂಬ ಪ್ರಶ್ನೆಯೂ ತಲೆದೋರುವುದೇ – ಯಾರಾದರೂ ಉದ್ದ ಉಪದೇಶ ಕೊಟ್ಟಾಗ. ಯಾರು ಒಂದು ಒಳ್ಳೆಯ ಶಿಸ್ತಿಗೆ ಒಳಪಟ್ಟಿರುವುದಿಲ್ಲವೋ ಅಂತಹವರು ದೊಡ್ಡ ಸಾಧನೆಯನ್ನೇನೂ ಮಾಡಿರ(ಲಾರ)ರು. ಶಿಸ್ತಿಗೇ  (ಅನು)ಶಾಸನವೆಂದೂ ಹೇಳುವುದುಂಟು. ಶಾಸನಕ್ಕೊಳಪಟ್ಟವರೇ ಶಿಷ್ಟರೆನಿಸಿಕೊಳ್ಳುವುದು. ಹೀಗಾಗಿ ಯುಕ್ತವಾದ ಅರಿವು, ತಕ್ಕುದಾದ ಶಿಸ್ತು - ಇವುಗಳ ಬಲವೂ ಉಳ್ಳವರಾದಲ್ಲಿ, ಅಂತಹ ಆಪ್ತರ ಮಾತಿಗೇ ಬೆಲೆ: "ಆಪ್ತರ ವಾಕ್ಯವು ಪ್ರಮಾಣ" – ಎಂದುಕೊಳ್ಳುವುದು ಹೀಗಾದಾಗಲೇ ಹೊಂದಿಕೊಳ್ಳುವುದು.

ಜೀವನದಲ್ಲಿ ಯಾರ ಮಾರ್ಗದರ್ಶನವು ಯುಕ್ತ? - ಎಂಬ ಪ್ರಶ್ನೆಗೆ ಆರ್ಯುರ್ವೇದವು ಕೊಡುವ ಸೂಚನೆಯೊಂದಿದೆ. "ಆಪ್ತರ ಮಾತಿನಂತೆ ನಡೆಯಿರಿ" - ಎಂದು. ಯಾರು ಆಪ್ತರು? - ಎಂಬುದಕ್ಕೆ ಚರಕಸಂಹಿತೆಯೇ ಹೇಳುವ ಲಕ್ಷಣವನ್ನು ಶ್ರೀರಂಗಮಹಾಗುರುಗಳು ಉದ್ಧರಿಸುತ್ತಿದ್ದರು - "ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ".  ಶಿಷ್ಟರೂ ವಿಬುದ್ಧರೂ ಆಗಿರುವವರು ಆಪ್ತರು. 

ಅಷ್ಟೇ ಅಲ್ಲ. 'ಆಪ್ತ'ರೆಂಬುದಕ್ಕೆ "ಪಡೆದಿರುವವರು" ಎಂಬುದೇ  ಮುಖ್ಯಾರ್ಥ. ಏನನ್ನು ಪಡೆದಿರುವವರು? "ತಪಸ್ಸಿನಿಂದ ಯಾರು ಅಮಲಜ್ಞಾನವನ್ನು ಪಡೆದಿರುವರೋ ಅವರೇ ಆಪ್ತರು" - ಎಂಬುದು ಶ್ರೀರಂಗಮಹಾಗುರುಗಳ ಸೂತ್ರ. ಅಂತಹ ಜ್ಞಾನವನ್ನು ಯಾರು ಪಡೆಯಲು ಸಾಧ್ಯ? ವಾಸ್ತವವಾಗಿ, ಯಾರು ರಜೋಗುಣ-ತಮೋಗುಣಗಳನ್ನು ಮೀರಿರುವರೋ ಅವರೇ; ಸತ್ಯವನ್ನು ಹೇಳಬಲ್ಲವರೂ ಅವರೇ – ಎಂಬ ಮಾತನ್ನೂ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. 

ಹೀಗಾಗಿ, ಆತ್ಮಜ್ಞಾನಿಗಳೇ ನಿಜವಾದ ಆಪ್ತರು. ಆತ್ಮಜ್ಞರ ಮಾರ್ಗದರ್ಶನವಿದ್ದಲ್ಲಿ ಯಾರ ಜೀವನ ಉನ್ನತಿ ಪಡೆಯದು?.

ಸೂಚನೆ: 27/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.