Monday, August 21, 2023

ವ್ಯಾಸ ವೀಕ್ಷಿತ - 51 ಕರ್ಣ-ಶಲ್ಯರನ್ನು ಮೆಟ್ಟಿದ ಭೀಮಾರ್ಜುನರು (Vyaasa Vikshita - 51 Karna-Shalyarannu Mettida Bhimarjunaru)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)"ಸಾಕ್ಷಾದ್ ಇಂದ್ರನನ್ನು ಬಿಟ್ಟು ಮತ್ತಾವ ಗಂಡಸೂ ಯುದ್ಧದಲ್ಲಿ ಕುಪಿತನಾದ ನನ್ನನ್ನು ಎದುರಿಸಲಾರ - ಪಾಂಡುಪುತ್ರನಾದ ಅರ್ಜುನನನ್ನು ಬಿಟ್ಟು!" –

ಹೀಗೆ ಹೇಳಿದ ಕರ್ಣನಿಗೆ ಅರ್ಜುನನು ಪ್ರತ್ಯುತ್ತರವಿತ್ತನು:

"ಕರ್ಣನೇ, ನಾನೇನೂ (ನೀನು ಅಂದುಕೊಂಡಂತೆ) ಧನುರ್ವೇದವೇ(ಮೈತಾಳಿದವ)ನಲ್ಲ; ಪ್ರತಾಪಶಾಲಿಯಾದ ಪರಶುರಾಮನೂ ಅಲ್ಲ; ಶಸ್ತ್ರಧಾರಿಗಳಲ್ಲಿ ಗಣ್ಯನಾದ ಯೋಧಶ್ರೇಷ್ಠನಾದ ಬ್ರಾಹ್ಮಣನು ನಾನು: ಗುರೂಪದೇಶಾನುಸಾರಿಯಾಗಿ ಬ್ರಹ್ಮಾಸ್ತ್ರ-ಇಂದ್ರಾಸ್ತ್ರಗಳಲ್ಲಿ ಪಳಗಿದವನು ; ನಿನ್ನನ್ನು ಸೋಲಿಸಲೆಂದು ಇಂದು ಯುದ್ಧಕ್ಕೆ ನಿಂತಿದ್ದೇನೆ, ನೀನೂ ಸ್ಥಿರನಾಗಿ ನಿಲ್ಲು!" - ಎಂದನು.

ಅರ್ಜುನನ ಈ ಮಾತನ್ನು ಕೇಳಿದ ಕರ್ಣನು, ಬ್ರಾಹ್ಮತೇಜಸ್ಸೆಂಬುದು ಜಯಿಸಲು ಶಕ್ಯವಲ್ಲದ್ದೆಂದು ಅರಿತು, ಯುದ್ಧದಿಂದ ಪರಾಙ್ಮುಖನಾದನು (ಎಂದರೆ ಯುದ್ಧ ತೊರೆದನು).

ಇನ್ನು ಮತ್ತೊಂದೆಡೆ, ಶಲ್ಯ-ಭೀಮರ ಕಾಳಗ: ಇಬ್ಬರೂ ವೀರರು, ಇಬ್ಬರೂ ಬಲಶಾಲಿಗಳು; ವಿದ್ಯೆ-ಬಲ-ಯುದ್ಧಕಲೆ - ಇವುಗಳಲ್ಲಿ ಇಬ್ಬರೂ ಪ್ರವೀಣರು; ಪರಸ್ಪರ ಯುದ್ಧಾಹ್ವಾನ ಮಾಡುತ್ತಿದ್ದ ಅವರು ಮದಿಸಿದ ಎರಡು ಗಜಗಳಂತೆ ಇದ್ದರು. ಮುಷ್ಟಿಗಳಿಂದಲೂ ಮಂಡಿಗಳಿಂದಲೂ ಒಬ್ಬರನ್ನೊಬ್ಬರು ಪ್ರಹರಿಸುತ್ತಿದ್ದರು. ಪರಸ್ಪರ ಪ್ರಕರ್ಷಣ-ಆಕರ್ಷಣ-ಅಭ್ಯಾಕರ್ಷಣ-ವಿಕರ್ಷಣಗಳಿಂದ (ಸೆಳೆದಾಟ-ಎಳೆದಾಟ-ಇಕ್ಕಾಟ-ತಿಕ್ಕಾಟಗಳಿಂದ) ಒಬ್ಬರನ್ನೊಬ್ಬರು ಬಡಿದಾಡಿದರು. ಕಲ್ಲುಗಳೆರಡು ಪರಸ್ಪರ ಇಕ್ಕಿದಾಗ ಬರುವಂತಹ ಘೋರವಾದ ಚಟಚಟಾಶಬ್ದವೂ ಬರುತ್ತಿತ್ತು, ಅವರು ಒಬ್ಬರಿಗೊಬ್ಬರು ಪ್ರಹಾರಮಾಡುತ್ತಿದ್ದಾಗ! ಹೀಗೇ ಎರಡು ಘಂಟೆಗಳ ಕಾಲ ಕಾದಾಡಿದರು. ಆಗೊಮ್ಮೆ ಭೀಮನು ತನ್ನ ತೋಳುಗಳಿಂದ ಶಲ್ಯನನ್ನು ಮೇಲಕ್ಕೆತ್ತಿ ಕುಕ್ಕಿದನು: ಅಲ್ಲಿದ್ದ ಬ್ರಾಹ್ಮಣರು ನಕ್ಕಿಬಿಟ್ಟರು. ಆಗಾದ ಆಶ್ಚರ್ಯದ ವಿಷಯವೆಂದರೆ, ನೆಲ ಕಚ್ಚಿದ್ದ ಬಲಶಾಲಿ ಶಲ್ಯನನ್ನು ಬಲಿಷ್ಠ ಭೀಮನು ಸಂಹರಿಸಲಿಲ್ಲವೆಂಬುದು!

ಅಂತೂ ಹೀಗೆ ಶಲ್ಯನನ್ನು ಭೀಮಸೇನನು ಉರುಳಿಸಿದ್ದು; ಅರ್ಜುನನ ವಿಷಯದಲ್ಲಿ ಕರ್ಣನೇ ಬೆದರಿದ್ದು: ಇದನ್ನು ಕಂಡ ಉಳಿದೆಲ್ಲ ರಾಜರು ಇನ್ನು ಮುಂದಕ್ಕೆ ಹೋರಾಡಲು ಹೆದರಿದರು. ಭೀಮಸೇನನನ್ನು ಸುತ್ತುವರಿದರು.

ಎಲ್ಲರೂ ಸೇರಿ ಹೇಳಿದರು: ಈ ಇಬ್ಬರು ಬ್ರಾಹ್ಮಣಶ್ರೇಷ್ಠರು ಧನ್ಯರು. ಇವರು ಯಾವ ವಂಶದವರು ಹಾಗೂ ಎಲ್ಲಿ ವಾಸಮಾಡುತ್ತಿರುವರು - ಎಂಬುದನ್ನು ತಿಳಿಯಬೇಕಲ್ಲ!

ರಾಧಾಪುತ್ರನಾದ ಕರ್ಣನನ್ನು ಯಾರು ತಾನೇ ಯುದ್ಧದಲ್ಲಿ ಎದುರಿಸಲು ಸರ್ಮರ್ಥರು? ದ್ರೋಣ-ಪರಶುರಾಮರು, ಪಾಂಡುಪುತ್ರನಾದ ಕಿರೀಟಿ(ಎಂದರೆ ಅರ್ಜುನ), ಹಾಗೂ ದೇವಕೀಪುತ್ರನಾದ ಕೃಷ್ಣ, ಹಾಗೂ ಶರದ್ವಂತನ ಮಗನಾದ ಕೃಪಾಚಾರ್ಯ - ಇವರನ್ನು ಬಿಟ್ಟರೆ ಕರ್ಣನೊಂದಿಗೆ ಸೆಣಸಲು ಇನ್ನಾರಿಗೆ ಸಾಧ್ಯ?

ಹಾಗೆಯೇ ಮದ್ರದೇಶದ ಅರಸಾದ ಬಲಶಾಲಿ ಶಲ್ಯನನ್ನೂ ಸಹ ಗೆಲ್ಲಲು ಯಾರು ತಾನೇ ಸಮರ್ಥರು? - ಬಲರಾಮ, ಪಾಂಡುಪುತ್ರನಾದ ವೃಕೋದರ(ಎಂದರೆ ಭೀಮ), ಹಾಗೂ ವೀರನಾದ ದುರ್ಯೋಧನ - ಇವರನ್ನು ಬಿಟ್ಟು?

ಆದ್ದರಿಂದ ಈ ಬ್ರಾಹ್ಮಣಸ್ತೋಮದಿಂದ ದೂರವಿರೋಣ. ಬ್ರಾಹ್ಮಣರಂತೂ ಸರ್ವದಾ ರಕ್ಷಿಸಲ್ಪಡಬೇಕಾದವರು - ತಪ್ಪು ಮಾಡಿದ್ದರೂ. ಆದ್ದರಿಂದ ಇವರಾರೆಂದು ಮೊದಲು ಅರಿತುಕೊಳ್ಳೋಣ; ಆಮೇಲೆ ಬೇಕೆನಿಸಿದರೆ ಸಂತೋಷವಾಗಿ ಯುದ್ಧಮಾಡೋಣವಂತೆ - ಎಂದರು.

ಹಾಗೆ ಹೇಳುತ್ತಿದ್ದ ರಾಜರನ್ನೂ ಇನ್ನಿತರ ಪುರುಷರನ್ನೂ ಕಂಡು ಭೀಮಾರ್ಜುನರು ಪ್ರಸನ್ನರಾದರು.

ಭೀಮಸೇನನ ಆ ಕೃತ್ಯವನ್ನು ಕಂಡ ಕೃಷ್ಣನು, ಅವರಿಬ್ಬರೂ ಕುಂತಿಯ ಮಕ್ಕಳೇ ಇರಬೇಕೆಂದು ಶಂಕಿಸಿದವನಾಗಿ, ಆ ರಾಜರು ಮತ್ತೂ ಯುದ್ಧಮಾಡುವುದನ್ನು ತಡೆದನು: ಧರ್ಮವಾಕ್ಯಗಳಿಂದ ಅವರನ್ನೆಲ್ಲಾ ಅನುನಯಗೊಳಿಸಿದನು.

ಸೂಚನೆ : 21/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.