Tuesday, August 15, 2023

ಅಷ್ಟಾಕ್ಷರೀ​ - 41 ವಿಶ್ವಂ ವಿಷ್ಣುರ್ವಷಟ್ಕಾರಃ (Astakshara Darshana 41 Vishvam Vishnurvashatkarah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದೇವನೊಬ್ಬ, ನಾಮ ಹಲವು - ಎಂಬ ಮಾತಿದೆಯಷ್ಟೆ?  ಆತನ ನಾನಾನಾಮಗಳಿಗೆ ಮತ್ತೂ ಒಂದು ಲೌಕಿಕಪ್ರಯೋಜನವಿದೆ. ಅದರ ಪರಿಯಿದು. ಬಿರಿಯುತ್ತಿರುವ ಬೆಂಗಳೂರಿನಲ್ಲಿ ಬನಶಂಕರಿಯೆಂಬ  ಬಹಳ ಭಾರಿಯಾದ  ಬಡಾವಣೆಯ ನಾಲ್ಕುಸಾವಿರ ಎಕರೆಗಳಲ್ಲಿ ಎಷ್ಟೆಷ್ಟು ಸ್ಟೇಜ್‍ಗಳು ಫೇಸ್‍ಗಳು ಬ್ಲಾಕ್‍ಗಳು! ಯಾರಿಗಾದರೂ ಭ್ರಾಂತಿಹುಟ್ಟಿಸುವಂತಹವೇ ಸರಿ! ಬೆಂಗಳೂರಲ್ಲಲ್ಲಲ್ಲಿ ರಾಜಕುಮಾರ್-ವೃತ್ತಗಳು! ಮೈಸೂರಿನಲ್ಲೂ ಜಯನಗರ ಜೆಪಿನಗರಗಳು! ಇವನ್ನೆಲ್ಲ ನೋಡಿದಾಗ ದೇವರೇ! - ಎನಿಸುತ್ತದೆ!

ಏಕೆ? ನಮ್ಮಲ್ಲಿ ೩೩ ಕೋಟಿ ದೇವತೆಗಳಿಲ್ಲವೇ?  ಅವುಗಳಲ್ಲಿ ಹತ್ತಾರು ಮಂದಿಗೆ (ಹಲವು) ಸಹಸ್ರನಾಮಗಳಿವೆ, ನೂರಾರು ಮಂದಿಗೆ ಅಷ್ಟೋತ್ತರಶತನಾಮಗಳಿವೆ. (ಅವುಗಳನ್ನು ಯಾರೂ ಕಾಪಿರೈಟು ಮಾಡಿಟ್ಟುಕೊಂಡಿಲ್ಲವಲ್ಲ!) ಬೆಂಗಳೂರಿನ ಬಡಾವಣೆಗಳಿಗೆ ಅವಲ್ಲಿ ಕೆಲವನ್ನಾದರೂ ಬಳಸಿಕೊಂಡರೂ, ಪ್ರಚಲಿತ ವಿಚಿತ್ರ'ನಾಮಕರಣ'ಗಳ ಬೇಸರದ ಬವಣೆಗೆ ಸುಲಭಪರಿಹಾರವೊಂದು ಸಿಕ್ಕಿದಂತಾಗಲಿಲ್ಲವೆ?

ಸಹಸ್ರನಾಮದ ಮಾತು ಬಂದಿತಲ್ಲವೆ? ಸಹಸ್ರನಾಮಗಳಲ್ಲಿ ಬಹಳ ಪ್ರಸಿದ್ಧವಾದುದೆಂದರೆ ವಿಷ್ಣುಸಹಸ್ರನಾಮವೇ ಸರಿ. "ಗೇಯಂ ಗೀತಾ-ನಾಮಸಹಸ್ರಂ" ಎನ್ನುತ್ತಾರೆ ಶಂಕರರು. ಗೀತೆಗಳೂ ಹಲವು (ಅಷ್ಟಾವಕ್ರಗೀತೆ, ಗಣೇಶಗೀತೆ, ಋಭುಗೀತೆ, ಹಂಸಗೀತೆ, ಮಂಕಿಗೀತೆ, ಉತ್ತರಗೀತೆ, ಅವಧೂತಗೀತೆ ಇತ್ಯಾದಿ); ಸಹಸ್ರನಾಮಗಳೂ ಹಲವು (ವಿಷ್ಣುಸಹಸ್ರನಾಮ, ಶಿವಸಹಸ್ರನಾಮ, ಲಲಿತಾಸಹಸ್ರನಾಮ ಮುಂತಾದವು). "ದಾಸರೆಂದರೆ ಪುರಂದರದಾಸರಯ್ಯ" ಎನ್ನುವಂತೆ, ಗೀತೆಯೆಂದರೆ ಭಗವದ್ಗೀತೆಯೇ; ಸಹಸ್ರನಾಮವೆಂದರೆ ವಿಷ್ಣುಸಹಸ್ರನಾಮವೇ. ಮಿಕ್ಕವು ಕಡಿಮೆಯೆಂದೇನಲ್ಲ; ಪ್ರಸಿದ್ಧಿಯ ಲೆಕ್ಕ. 

ವಿಷ್ಣುಸಹಸ್ರನಾಮದ ಆರಂಭವೇ ಪ್ರಕೃತಲೇಖನದ ಚಿಂತನವಸ್ತು. ಅದರ ಮೊದಲ ಅಷ್ಟಾಕ್ಷರಗಳೆಂದರೆ "ವಿಶ್ವಂ ವಿಷ್ಣುರ್ ವಷಟ್ಕಾರಃ" ಎಂಬುದು. ಇಲ್ಲಿಯ ಎಂಟಕ್ಷರಗಳಲ್ಲಿ ಪದತ್ರಯವಿದೆ. "ವಿಷ್ಣು"ವು ಎರಡನೆಯದಾಗಿದೆ. ಆದರೆ ಇಲ್ಲಿ ಒಂದಿಷ್ಟು ಜಿಜ್ಞಾಸ್ಯವಾದ ವಿಷಯವಿದೆ; ಜಿಜ್ಞಾಸ್ಯವೆಂದರೆ ಜಿಜ್ಞಾಸೆಗೆ ಒಳಪಡಬೇಕಾದದ್ದು; ಜಿಜ್ಞಾಸೆಯೆಂದರೆ ತಿಳಿದುಕೊಳ್ಳುವ ಬಯಕೆ: ಜ್ಞಾತುಮಿಚ್ಛಾ ಜಿಜ್ಞಾಸಾ.

ವಿಷ್ಣುಸಹಸ್ರನಾಮಕ್ಕೆ ನಾನಾಭಾಷ್ಯಗಳಿವೆ. ಇವೆಲ್ಲವುಗಳಲ್ಲಿ ಕೊಟ್ಟಿರುವ ಅರ್ಥಕ್ಕಿಂತ ಭಿನ್ನವಾದ, ಆದರೆ ಸಹಜಸರಲವಾದ, ಅರ್ಥವೊಂದನ್ನು ವಿಷ್ಣುಸಹಸ್ರನಾಮದ ಮೊದಲೆರಡು ಪದಗಳಿಗೆ ಶ್ರೀರಂಗಮಹಾಗುರುಗಳು ತಮ್ಮ ಅಂತಃಸ್ಫೂರ್ತಿಯಿಂದ ಕೊಟ್ಟಿದ್ದರು: "ವಿಶ್ವಂ ವಿಷ್ಣುಃ" - ಎಂದರೆ, "ವಿಶ್ವವೆಲ್ಲವೂ ವಿಷ್ಣುವೇ" ಎಂಬುದೇ ಈ ಅರ್ಥ. ನೇರವಾದ ಅರ್ಥವಾಗಿ ತೋರುವ ಮುಖ್ಯಾರ್ಥ.

ಹೀಗೆ ಹೇಳಿದಲ್ಲಿ ಏಳುವ ಪ್ರಶ್ನೆಯಿದು: ಭಗವಂತನು ಚೈತನ್ಯರೂಪಿ, ಆದರೆ ವಿಶ್ವವು ಜಡಪದಾರ್ಥಗಳಿಂದ ತುಂಬಿದೆ; ಈ ಪದಾರ್ಥಗಳ ಬಣ್ಣಗಳು ಬೇರೆ, ಆಕಾರಗಳು ಬೇರೆ, ಗುಣಗಳು ಬೇರೆ; ಹೀಗೆ ಏಕ-ಅನೇಕ, ಚೈತನ್ಯ-ಜಾಡ್ಯ ಮುಂತಾದ ವಿರುದ್ಧಗುಣಗಳುಳ್ಳವು ಒಂದೇ ಆಗಿರಲು ಸಾಧ್ಯವೇ? ಸಾಧ್ಯವೆಂಬುದನ್ನು ಶ್ರೀರಂಗಮಹಾಗುರುಗಳು ಸೋದಾಹರಣವಾಗಿ  ತಿಳಿಸಿಕೊಟ್ಟಿರುವರು: ವಜ್ರವೂ ಕಲ್ಲಿದ್ದಲೂ ಬೇರೆ ಬೇರೆ ಪದಾರ್ಥಗಳಷ್ಟೆ? ಅವುಗಳ ಗುಣ-ರೂಪ-ಪ್ರಯೋಜನಗಳು ಬೇರೆ ಬೇರೆ. (ಅವುಗಳ ಬೆಲೆಗಳೂ ಬಹಳ ಬೇರೆಯೆಂದು ಬೇರೆಯಾಗಿ ಹೇಳಬೇಕಿಲ್ಲವಷ್ಟೆ!) ಆದರೆ ವಿಜ್ಞಾನಿಯು ಅವು ಏಕಸ್ವರೂಪಕ ಎನ್ನುವನಲ್ಲವೆ? ಹಾಗೆಯೇ ಇದೂ - ಎಂಬುದು ಅವರಿತ್ತಿರುವ ವಿವರಣೆ.

ಏನಿದರ ಅರ್ಥ? ವಿಜ್ಞಾನಿಯ ಉದಾಹರಣೆಯನ್ನು ಅವರು ಕೊಟ್ಟಿರುವುದರಿಂದ, ವಿಜ್ಞಾನದ ಸ್ವರೂಪ-ಕ್ರಮಗಳನ್ನು ಕುರಿತಾಗಿಯೇ ಒಂದಿಷ್ಟು ತಿಳಿಯುವುದು ಉಚಿತ.

ವಿಜ್ಞಾನಿಗಳು ತಮ್ಮ ಸಂಶೋಧನೆಗಳಲ್ಲಿ ಹುಡುಕುವುದೇನನ್ನು?: ನಮಗಿನ್ನೂ ಅಜ್ಞಾತವಾದ ವಸ್ತುಗಳಾವುವು? ಅವಲ್ಲಿರುವ ಗುಣಗಳಾವುವು? ಅವುಗಳಿಗೆ ಅನ್ಯವಸ್ತುಗಳೊಂದಿಗೆ ಸೇರ್ಪಡೆ-ಬೇರ್ಪಡೆಗಳಿಂದಾಗುವ ಫಲಿತಗಳೇನು? ಅವನ್ನು ನಿಯಂತ್ರಿಸುವ ವೈಶ್ವಿಕ ನಿಯಮಗಳೇನು? ವಸ್ತುಗಳ ಒಳರಚನೆಯೆಂತು? ಮೂಲತತ್ತ್ವಗಳೇನು? ಇತ್ಯಾದಿಗಳನ್ನು. 

ಜಗತ್ತಿನೆಲ್ಲ ಪದಾರ್ಥಗಳೂ ೧೧೮ ಮೂಲಭೂತಪದಾರ್ಥ(elements)ಗಳಿಂದಾಗಿವೆಯೆಂಬುದು ಈಚಿನವರೆಗೆ (೨೦೨೧ರವರೆಗೆ) ಸಂಶೋಧಿತವಾಗಿದೆ. ಹೀಗಾಗಿ ರಸಾಯನಶಾಸ್ತ್ರಜ್ಞ(chemist)ರು ಹೇಳುವಂತೆ, ಜಗತ್ತೆಲ್ಲವೂ ಈ ಎಲಿಮೆಂಟ್‍ಗಳಿಂದಲೇ ಆಗಿರುವುದು. ಅವನ್ನೂ ಒಳಹೊಕ್ಕು ನೋಡುವ ಭೌತವಿಜ್ಞಾನಿಯು (physicist), ಅವಾದರೂ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್‍ಗಳಿಂದಲೇ ಆಗಿರುವುವೆನ್ನುವನು. ಅವನ್ನೇ ಮತ್ತೂ ಮೌಲಿಕವಾಗಿ ನೋಡಿದಲ್ಲಿ ಅವುಗಳೆಲ್ಲವೂ ಶಕ್ತಿ(energy)ಯಿಂದಾಗಿರತಕ್ಕವೇ ಸರಿ! ಹೀಗಾಗಿ ಸ್ಥೂಲದೃಷ್ಟಿಯ ಮೇಲ್ನೋಟಕ್ಕೆ ಬಹುವಾದ ಬಗೆಗಳಾದರೂ, ಸೂಕ್ಷ್ಮಸೂಕ್ಷ್ಮದೃಷ್ಟಿಗೆ ಅವಲ್ಲಿಯ ಆಳವಾದ ಏಕತೆಯು ವಿಜ್ಞಾನಿಗೆ ಗೋಚರಿಸುತ್ತದೆ.

ಶ್ರೀರಂಗಮಹಾಗುರುಗಳಿತ್ತ ಉದಾಹರಣೆಯಲ್ಲಿ ಮೊದಲು ಅಲಾಟ್ರಪಿ(allotropy)ಯ ವಿಷಯ ಬಂದಿದೆ ("ಸರ್ವಂ ಇಂಗಾಲಮಯಂ"); ಆಮೇಲೆ ಇನ್ನೂ ಆಳವಾಗಿ, "ಸರ್ವಂ ಎಲೆಕ್ಟ್ರಾನ್-ಪ್ರೋಟಾನ್-ಮಯಂ" ಆಗಿದೆ. 

ಮತ್ತೂ ಆಳವಾಗಿ, ಸೃಷ್ಟಿಕರ್ತನ ಸ್ಥಾನದಿಂದ ನೋಡುವಾಗ ಅಧ್ಯಾತ್ಮಜ್ಞನು ಉದ್ಗರಿಸುವುದು "ಸರ್ವಂ ವಿಷ್ಣುಮಯಂ!" - ಎಂದು. (ಇಷ್ಟಲ್ಲದೆ, ಜಗತ್ತೆಲ್ಲವೂ ಯಜ್ಞತತ್ತ್ವಮಯವೇ- ಎಂಬುದನ್ನು "ವಷಟ್ಕಾರ"ವೆಂಬುದು ಸೂಚ್ಯವಾಗಿ ಹೇಳುವುದು!)

ಹೀಗೆ ವಿಜ್ಞಾನವು ಮೇಲ್ನೋಟವನ್ನು ಮೀರಿ ಸೂಕ್ಷ್ಮದತ್ತ ಸಾಗುವಂತೆಯೇ, ಅಧ್ಯಾತ್ಮವೆಂಬುದು ಇಂದ್ರಿಯಗೋಚರವನ್ನು ಮೀರಿ ಪರತತ್ತ್ವದತ್ತ  ಸಾಗಿ ಕೃತಾರ್ಥವಾಗುವುದಲ್ಲವೇ? 

ಸೂಚನೆ: 13/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.