ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 50 ಮನುಷ್ಯನ ಜೀವನೋಪಾಯ ಯಾವುದು ?
ಉತ್ತರ - ಪರ್ಜನ್ಯ
ಮನುಷ್ಯನ ಅಧ್ಯಾತ್ಮಜೀವನ ಸುಂದರವಾಗಬೇಕಾದರೆ ಭೌತಿಕಜೀವನವೂ ಮಧುರವಾಗಿದ್ದಾಗ ಮಾತ್ರ ಸಾಧ್ಯ. ಈ ಬಾಹ್ಯಜೀವನವು ಅನಾಯಾಸವಾಗಿ ಸಂಪನ್ನವಾಗಿಸಬೇಕಾದ ಪ್ರಧಾನ ಸಾಧನ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ವೃಷ್ಟಿ ಎಂಬುದು ಉತ್ತರ. ಮಳೆಯು ಯಾವ ರೀತಿಯಾಗಿ ಮಾನುಷ್ಯನ ಹೊರ ಜೀವನವನ್ನು ಅಂದಗೊಳಿಸುತ್ತದೆ? ಎಂಬುದನ್ನು ನೋಡೋಣ.
ಇಂದು ಜೀವನ ಎಂದರೆ ಹುಟ್ಟು ಮತ್ತು ಸಾವುಗಳ ನಡುವಿನ ಕಾಲದ ಪರಿಮಾಣ ಎಂಬಷ್ಟನ್ನೇ ಪರಿಗಣಿಸುತ್ತಿದ್ದೇವೆ. ಶ್ರೀರಂಗ ಮಹಾಗುರುಗಳು ಜೀವನಕ್ಕೆ ಬಹಳ ಸುಂದರವಾದ ವ್ಯಾಖ್ಯಾನವನ್ನು ಮಾಡಿದ್ದಾರೆ. "ಜೀವನವನ್ನು ಕೇವಲ ಭೌತಿಕದೃಷ್ಟಿಯಿಂದ ನೋಡಿ 'ಖಾನಾ, ಪೀನಾ, ಸೋನಾ ಇಷ್ಟೇ ಜೀವನ'ವೆಂದು ಅಂದುಕೊಂಡಿದ್ದಾಗ ಆಗುವುದೇ ಇಷ್ಟು. ಆದರೆ ಮೂಲದಲ್ಲಿ ನೋಡಿದರೆ ಪೂರ್ಣಾತ್ಮ. ಜೀವನದ ದಡವನ್ನು ಮುಟ್ಟಿ ಅಂತಹ ಜೀವನ ಮಾಡಿದರೆ ತಾನೇ ಅದು ಒಂದು ಜೀವನ" ಎಂದು. ಭಗವಂತನಿಂದ ಬೇರ್ಪಟ್ಟ ಜೀವವು ಮತ್ತೆ ಭಗವಂತನಲ್ಲಿ ಒಂದಾಗುವವರೆಗಿನ ಯಾವ ಯಾನದ ಮಾನ ಉಂಟೋ ಅದನ್ನು ಮಹರ್ಷಿಗಳ ದೃಷ್ಟಿಯಿಂದ 'ಜೀವನ' ಎಂದು ಕರೆಯಬೇಕೆಂದು ಅವರು ಹೇಳುತ್ತಿದ್ದರು. ಮತ್ತು ಇಂದ್ರಿಯವನ್ನವಲಂಬಿಸಿ ಮಾಡುವ ಜೀವನ ಹೊರಜೀವನ, ಆತ್ಮವನ್ನವಲಂಬಿಸಿ ಮಾಡುವ ಜೀವನ ಒಳ ಜೀವನ. ಎರಡಕ್ಕೂ ಆತ್ಮಾ ಬೇಕೇ ಬೇಕು ಎಂಬುದನ್ನೂ ಹೇಳುತ್ತಿದ್ದರು. ಆದ್ದರಿಂದ ಇಂತಹ ಪೂರ್ಣಜೀವನವನ್ನು ಮಾಡಲು ಅತ್ಯವಶ್ಯವಾದ ವಿಷಯ ಯಾವುದು? ಎಂಬುದು ಪ್ರಶ್ನೆ.
ಮಳೆಯೆಂಬುದು ಕೇವಲ ಮನುಷ್ಯಮಾತ್ರನಿಗೆ ಅವಶ್ಯವಾದ ದ್ರವ್ಯವಲ್ಲ. ಮನುಷ್ಯನಂತೆ ಹಲವು ಪ್ರಾಣಿ, ಪಶು, ಪಕ್ಷಿ, ಮರ, ಗಿಡ ಹೀಗೆ ಸೃಷ್ಟಿಯ ಜೀವಸಂಕುಲವೇ ಮಳೆಯನ್ನು ಆಶ್ರಯಿಸಿಕೊಂಡಿದೆ. ಮಳೆಯಿಲ್ಲದಿದ್ದರೆ ಜೀವಸಂಕುಲಕ್ಕೆ ಆಧಾರವಿಲ್ಲ. ಮಳೆಯಿಂದ ಸಿಗುವುದು ನೀರು. ನೀರಿಲ್ಲದೇ ಯಾವ ಜೀವಜಂತು ಬದುಕೀತು!. ಸಂಸ್ಕೃತದ ಅಮರಕೋಶ ಎಂಬ ಶಬ್ದಕೋಶದಲ್ಲಿ 'ಪಯಃ ಕೀಲಾಲಮ್ ಅಮೃತಂ ಜೀವನಂ ಭುವನಂ ವನಂ' ಎಂಬುದಾಗಿ ನೀರಿಗೆ 'ಜೀವನ' ಎಂಬ ಪದವನ್ನು ಬಳಸುತ್ತಾರೆ. ಅಂದರೆ ಜೀವಿಕೆಗೆ ನೀರು ಎಷ್ಟು ಮುಖ್ಯ ಎಂಬುದನ್ನು ಈ ಪದವೇ ತಿಳಿಸುತ್ತದೆ. ನೀರೆಂಬ ಜೀವನವಿಲ್ಲದಿದ್ದರೆ ಜೀವವೇ 'ನ'- ಇಲ್ಲ ಎಂದಾಗುತ್ತದೆ. ಅಮೃತ ಎಂಬ ಪದವನ್ನು ಇದೇ ಅರ್ಥದಲ್ಲಿ ಬಳಸಲಾಗುತ್ತದೆ. ಬದುಕಿಗೆ ನೀರು ಅಷ್ಟು ಅವಶ್ಯ ಎಂಬುದು ತಾತ್ಪರ್ಯ. ಇಂತಹ ನೀರು ಬೇಕುಬೇಕಾದಲ್ಲಿ ದೊರೆಯುವುದು ಹೇಗೆ? ಎಲ್ಲಾ ಕಾಲದಲ್ಲೂ ಎಲ್ಲೆಡೆ ನೀರು ಸಿಗುವುದಿಲ್ಲ. ಸಾಗರದಲ್ಲಿ ನೀರು ಹೇರಳವಾಗಿ ಇದೆ. ಆದರೆ ಅದು ಬಳಕೆಗೆ ಯೋಗ್ಯವಲ್ಲ. ಅಲ್ಲಿ ಪ್ರಾಕೃತಿಕವಾದ ಯಾವುದೋ ಒಂದು ಕಂಡೀಶನ್ ಏರ್ಪಟ್ಟಾಗ ಆವಿಯಾಗಿ, ಮೋಡವಾಗಿ, ಮಳೆಸುರಿದು, ಭೂಮಿಯ ಎಲ್ಲೆಡೆ ಸಮಾನವಾಗಿ ಬೀಳುತ್ತದೆ. ಇದರಿಂದ ಎಲ್ಲೋ ಇರುವ ನೀರು ಜೀವಿಗೆ ಸಿಗುವಂತಾಗುತ್ತದೆ. ಸಾಗರದ ನೀರು ಆವಿಯಾಲು ಕಾರಣವೇನು? ಯಜ್ಞವೇ ಮೋಡವಾಗಲು ಸಹಾಯಮಾಡುತ್ತದೆ 'ಯಜ್ಞಾದ್ಭವತಿ ಪರ್ಜನ್ಯಃ' ಎಂದು ನಮ್ಮ ಋಷಿಗಳು ಹೇಳುತ್ತಾರೆ. ಜೀವಸಂಕುಲಕ್ಕೆ ಮಳೆಯು ಹೇಗೆ ಕಾರಣವಾಗಿದೆ ಎಂಬುದನ್ನು ಕಾರ್ಯಕಾರಣ ಚಕ್ರದ ಮುಖಾಂತರ ವಿವರಿಸಿದ್ದುಂಟು. ಮಳೆಯಿಲ್ಲದೆ ಕೃಷಿಯಿಲ್ಲ. ಕೃಷಿಯಿಲ್ಲದೆ ಬೆಳೆಯಿಲ್ಲ. ಬೆಳೆಯಿಲ್ಲದೆ ಜೀವನವಿಲ್ಲ. ಆದ್ದರಿಂದ ಪೂರ್ಣಜೀವನಕ್ಕೆ ಮಳೆಯೇ ಆಧಾರ.
ಸೂಚನೆ : 21/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.