Tuesday, August 1, 2023

ಅಷ್ಟಾಕ್ಷರೀ​ - 40 ವಿಪದಃ ಸಂತು ನಃ ಶಶ್ವತ್ (Astakshara Darshana 40 Vipadah Santu nah Shasvath)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದ ಯುದ್ಧವು ಮುಗಿದಿದೆ. ಅದರೊಂದಿಗೆ ಶ್ರೀಕೃಷ್ಣಕಥೆಯು ಆರಂಭವಾಗುತ್ತದೆ, ಶ್ರೀಮದ್ಭಾಗವತಮಹಾಪುರಾಣದಲ್ಲಿ.

ಆರಂಭದಲ್ಲೇ ಉತ್ತರೆಯ ನೋವಿನ ನುಡಿ: "ನಾನು ಸತ್ತರೂ ಪರವಾಗಿಲ್ಲ, ಪಾಂಡವರ ವಂಶದ ಕುಡಿ - ನನ್ನ ಗರ್ಭದಲ್ಲಿರುವಂತಹುದು - ಅದು ಉಳಿಯಬೇಕು" – ಎಂದು ಕೃಷ್ಣನಲ್ಲಿ ಆರ್ತಳಾಗಿ ಕೇಳಿಕೊಂಡಿದ್ದಾಳೆ: ಅಶ್ವತ್ಥಾಮನು ಪ್ರಯೋಗಿಸಿದ ಅಸ್ತ್ರವು ಆ ಗರ್ಭವನ್ನೂ ಧ್ವಂಸಮಾಡಹೊರಟಿತ್ತು! ಇತ್ತ ಪಾಂಡವರಿಗೂ ಆಪತ್ತು ಒದಗಿ ಬಂದಿತ್ತು.

ಅದೆಲ್ಲವನ್ನೂ ಮನಗಂಡ ಶ್ರೀಕೃಷ್ಣನು ತನ್ನ ಸುದರ್ಶನಚಕ್ರವನ್ನು ಪ್ರಯೋಗಿಸಿ ಪಾಂಡವರಿಗೂ ಉತ್ತರೆಯ ಗರ್ಭಕ್ಕೂ ತನ್ನ ಶ್ರೀರಕ್ಷೆಯನ್ನಿತ್ತನು. ಆತನ ಮಾಯೆಯು ಆಕೆಯ ಗರ್ಭವನ್ನು ಆವರಿಸಿ ರಕ್ಷಿಸಿತು. ಬ್ರಹ್ಮಶಿರಸ್ ಎಂಬ ಅಸ್ತ್ರವು ಅಮೋಘವಾದುದು (ಮೋಘವೆಂದರೆ ವ್ಯರ್ಥವಾಗುವಂತಹುದು. ಎಂದೂ ವ್ಯರ್ಥವಾಗದುದು ಯಾವುದೋ ಅದು ಅ-ಮೋಘ). ಆದರೆ ವೈಷ್ಣವತೇಜಸ್ಸೊಂದೇ ಅದನ್ನು ಶಮನಗೊಳಿಸಬಲ್ಲುದು; ಅದನ್ನೇ ಕೃಷ್ಣನು ಪ್ರಯೋಗಿಸಿದುದು.  

ಈ ರಕ್ಷಣಕಾರ್ಯಗಳಾದ ಮೇಲೆ ಶ್ರೀಕೃಷ್ಣನು ದ್ವಾರಕೆಗೆ ಹೊರಟಿರಲು, ಕುಂತಿಯು ಕೃಷ್ಣನ ಬಳಿ ವ್ಯಾಕುಲತೆಯಿಂದ ಕೆಲವು ಮಾತುಗಳನ್ನಾಡಿದಳು. ಹೆಜ್ಜೆಹೆಜ್ಜೆಗೂ ಪಾಂಡವರಿಗೆ ಮಾರ್ಗದರ್ಶನರೂಪವಾದ ಮಹೋಪಕಾರವನ್ನು ಮಾಡಿ, ಈಗಷ್ಟೆ ಬಹಳ ಹಿರಿದಾದ ರಕ್ಷಣೆಯಿತ್ತ ಕೃಷ್ಣನ ಬಗ್ಗೆ ಸ್ತುತಿಯ ಮಾತನ್ನಲ್ಲದೆ ಅವಳಿನ್ನೇನು ತಾನೆ ಮಾತನಾಡಿಯಾಳು?:

"ಆದ್ಯಪುರುಷನಿಗೆ ನಮಸ್ಕಾರ. ಪ್ರಕೃತಿಯನ್ನು ಮೀರಿದ ಈಶ್ವರನಿಗೆ ನಮಸ್ಕಾರ. ಮಾಯೆಯೆಂಬ ಪರದೆಯ ಹಿಂದಿರುವ ಪ್ರಭು ನೀನು. ಮೂಢರ ಕಣ್ಣುಗಳಿಗೆ ಕಾಣದವನು ನೀನು: ವೇಷಧಾರಿನಟನನ್ನು ಸಾಧಾರಣಪ್ರೇಕ್ಷಕರು ಅದೆಂತು ಗುರುತಿಸಿಯಾರು?

ನಿನ್ನ ತಾಯಿ ದೇವಕಿಯನ್ನು ಕಂಸನು ಬಂದೀಖಾನೆಯಲ್ಲಿ ಅದೆಷ್ಟು ದೀರ್ಘಕಾಲ ಬಂಧಿಸಿದ್ದ! ಅವಳನ್ನು ಬಿಡಿಸಿದವನು ನೀನು. ನಾನಾದರೂ ಏನು ಕಡಿಮೆ ಆಪತ್ತುಗಳಲ್ಲಿ ಸಿಲುಕಿದ್ದವಳೇ?: ನನ್ನ ಮಗ ಭೀಮಸೇನನಿಗೆ ವಿಷವಿಕ್ಕಿದರು! ನಮ್ಮೆಲ್ಲರನ್ನು ಬೆಂಕಿಯಲ್ಲಿ ಸುಡಲೆಳಸಿದರು! ವನವಾಸದಲ್ಲೇನು ಕಡಿಮೆ ಬವಣೆಯಾಯಿತೇ? ಒಂದೊಂದು ಯುದ್ಧದಲ್ಲೂ ಮಹಾರಥರ ಅಸ್ತ್ರಗಳ ದೆಸೆಯಿಂದ ಕಾಪಾಡಿದವನು ನೀನೇ. ಈಗಲೂ ಅಶ್ವತ್ಥಾಮನ ಅಸ್ತ್ರದಿಂದಾಗುವ ಅನಾಹುತದಿಂದ ಕಾಪಾಡಿದವನೂ ನೀನೇ.

ಜನಗಳಿಗೆ ಮದವೇರುವುದು ಕಷ್ಟವೇನಲ್ಲ: ಧನಮದ-ವಿದ್ಯಾಮದ-ಸ್ಥಾನಮದ-ಜನ್ಮಮದ ಯಾವುದಾದರೂ ಸಾಕು! ಮತ್ತರಾದವರು ನಿನ್ನ ನಾಮವನ್ನೂ ಉಚ್ಚರಿಸರು! ಆತ್ಮಾರಾಮನೂ ಶಾಂತನೂ ಆದ ನಿನಗೆ ನಮಸ್ಕಾರ. ಮನುಷ್ಯರಂತೆಯೇ ಆಡುವ ನಿನ್ನ ಸಂಕಲ್ಪವನ್ನು ಅರಿಯುವವರಾರು? ನಿನಗೆ ಪ್ರಿಯರೂ ಇಲ್ಲ ದ್ವೇಷ್ಯರೂ ಇಲ್ಲ. ಸರ್ವಗುರುವಾದ ಯೋಗೇಶ್ವರನೇ ನಿನಗೆ ನಮಸ್ಕಾರ."

ಅವಳ ವಿಸ್ತಾರವಾದ ಮಾತಿನಲ್ಲಿ ಅತ್ಯಂತಪ್ರಸಿದ್ಧವಾದ ನುಡಿಗಳಿವು: "ಓ ಜಗದ್ಗುರುವೇ, ಆಗಾಗ ನಮಗೆ ವಿಪತ್ತುಗಳು ಬರುತ್ತಿರಲಿ: ಆಗಲೇ ನಿನ್ನ ದರ್ಶನವಾಗುವುದು; ಮತ್ತು ಅದುವೇ ಪುನರ್ಜನ್ಮವನ್ನು ಪರಿಹರಿಸುವುದು!" ಎಂಬುದು.

ಕುಂತಿಯ ಈ ಮಾತುಗಳನ್ನು ಹಲವು ಹರಿಕಥೆಗಳಲ್ಲಿ ಕೇಳಿರುತ್ತೇವೆ. ಅವನ್ನು ಕೇಳಿದಾಗ, ನಾವೂ ಅವಳಂತೆಯೇ ಕೇಳಿಕೊಳ್ಳಬೇಕೆನಿಸುತ್ತದೆ. ಅವಳ ಮಾತಿನಲ್ಲೂ ಸತ್ಯಾಂಶವಿದೆಯಲ್ಲವೇ? ಎಷ್ಟಾದರೂ "ಸಂಕಟಬಂದಾಗ(ಲೇ) ವೆಂಕಟರಮಣ"ನಲ್ಲವೇ?

ಹಾಗಿದ್ದರೂ ಸಹ, ತನ್ನ ಶಿಷ್ಯರೊಬ್ಬರು ಇದೇ ಪರಿಯಲ್ಲಿ "ಭಗವಂತನು ನನಗೆ ತುಂಬ ಕಷ್ಟ ಕೊಡಬೇಕು" ಎಂದು ಕೇಳಿಕೊಂಡಾಗ, ಶ್ರೀರಂಗಮಹಾಗುರುಗಳು ಅದಕ್ಕೆ ಸ್ಪಂದಿಸಿದ ಬಗೆಯೇ ಬೇರೆ: "ಸಾಕಷ್ಟು ಕೊಟ್ಟಾಗಿದೆ, ಪುನಃ ಏಕೆ ಕೇಳಿಕೊಳ್ಳುತ್ತೀ?"

ಏನಿದರ ಅಭಿಪ್ರಾಯ? ವಿಪತ್ತುಗಳನ್ನು ನಾವಾಗಿಯೇ ಬಯಸುವುದು ತರವಲ್ಲ. ಜೀವನದಲ್ಲಿ ಯಾರ ಹಾದಿ ತಾನೆ ಸುಗಮವಾಗಿದೆ? ಯಾರಿಗೆ ಕಷ್ಟ ಬಂದಿಲ್ಲ? ಸುಖ-ದುಃಖಗಳು ಒಂದಾದಮೇಲೊಂದು ಅಪ್ಪಳಿಸುತ್ತಲೇ ಇರುತ್ತವೆ. ಅವೇನು ನಾವಾಗಿ ಬಯಸಿದ ಮಾತ್ರಕ್ಕೇ ಕೇಳಿದಂತೆ ಬಂದುಬಿಡತಕ್ಕಂತಹವೇ? ಕಷ್ಟಗಳಿಗಾಗಿ ಹಂಬಲಿಸಬೇಕೇಕೆ? 

ಕುಂತಿಯ ಮಾತನ್ನು ಹಿನ್ನೆಲೆಯೊಂದಿಗೆ ಗ್ರಹಿಸಬೇಕು. ನಾನಾರೀತಿಗಳಲ್ಲಿ ಉಪಕಾರ-ಅನುಗ್ರಹಗಳನ್ನು ಮಾಡಿದ್ದ ನೆಚ್ಚಿನ ಶ್ರೀಕೃಷ್ಣನು ದೂರದ ದ್ವಾರಕೆಗೆ ಹೊರಟುನಿಂತಿದ್ದಾಗ ಪ್ರೀತಿ-ಆದರ-ಕೃತಜ್ಞತೆಗಳು ಉಮ್ಮಳಿಸಿಬಂದ ಸಂನಿವೇಶದಲ್ಲಿ ಉಕ್ಕಿಬಂದ ಪರಮಭಕ್ತೆಯ ಮಾತುಗಳಿವು.

"ಕಷ್ಟಪಟ್ಟರೆ ಫಲವುಂಟು" ಎಂಬ ಮಾತೊಂದಿದೆ. ಹಾಗೆಂದು, ಹಸನಾದ ಹಾದಿಯಿದ್ದರೂ, ಅದರ ಬದಲಾಗಿ ಮುಳ್ಳಿನ ಮಾರ್ಗದಲ್ಲೇ ಹೋಗಬಯಸುವುದು ವಿವೇಕವೆನಿಸದು. ಅತ್ತ ಅತಿಶಯದ ಸುಖಗಳಿಗಾಗಿ ಹಪಹಪಿಸುತ್ತಿರುವುದು ತರವಲ್ಲ, ಸರಿಯೇ; ಇತ್ತ ಅತಿಕ್ಲೇಶಗಳಿಂದಾಗಿಯೂ ಶ್ರದ್ಧೋತ್ಸಾಹಗಳಿಗೂ ಘಾತವಾದೀತು.  

ಒಟ್ಟಿನಲ್ಲಿ, ಭಗವಂತನಲ್ಲಿ "ಇದು ಬೇಕು-ಇದು ಬೇಡ"ಗಳನ್ನು ಹೆಚ್ಚಿಸಿಕೊಳ್ಳುವುದಕ್ಕಿಂತಲೂ, ನಿಶ್ಚಲಭಕ್ತಿಯನ್ನೇ ಬಯಸುವುದೇ ತರವಲ್ಲವೇ?

  ಸೂಚನೆ: 31/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.