Saturday, August 5, 2023

ಮಹಾಪುರುಷರ ವಿನಯ ಸಂಪತ್ತು (Mahapurusara Vinaya Sampattu)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮಚಂದ್ರನು, ಸೀತಾ ಹಾಗೂ ಲಕ್ಷ್ಮಣ ಸಮೇತನಾಗಿ ವನವಾಸದಲ್ಲಿರುವಂತಹ ಸಂದರ್ಭದಲ್ಲಿ ಅಲ್ಲಿರುವ ಅನೇಕ ತಪೋವನಗಳಿಗೆ ಭೇಟಿ ನೀಡುತ್ತಾನೆ;  ತಪಸ್ವಿಗಳ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಾನೆ. ಒಮ್ಮೆ ಅತ್ರಿ- ಅನಸೂಯೆಯರ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಅತ್ರಿ ಮಹರ್ಷಿಗಳು ಮಹಾತಪಸ್ವಿಗಳು;  ಪತ್ನಿ ಅನಸೂಯೆಯು ತಪಸ್ವಿನಿಯೂ, ಪತಿವ್ರತಾ ಶಿರೋಮಣಿಯೂ ಆದ ಸಾಧ್ವಿ.  ಆಗ ಮಹರ್ಷಿಗಳು ಶ್ರೀರಾಮಾದಿಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ.  ಶ್ರೀರಾಮ ಅವರಿಗೆ ಅಭಿವಾದನಪೂರ್ವಕವಾಗಿ ನಮಸ್ಕಾರವನ್ನು ಸಲ್ಲಿಸುತ್ತಾನೆ. ಸೀತೆಯನ್ನು ಕುರಿತು ಶ್ರೀರಾಮನು ಹೀಗೆ ಆದೇಶ ಮಾಡುತ್ತಾನೆ,' ತನ್ನ ಕರ್ಮಗಳಿಂದಲೇ ಯಾವಳು ಲೋಕದಲ್ಲಿ ಅನಸೂಯಾ ಎಂಬ ಖ್ಯಾತಿಯನ್ನು ಪಡೆದಿರುವಳೋ ಮತ್ತು ಸಕಲರಿಂದಲೂ ಸಂದರ್ಶಿಸಲ್ಪಡಲು ಯೋಗ್ಯಳಾಗಿರುವಳೋ ಅಂತಹ ಮಹಾತಪಸ್ವಿನಿಯಾದ ಅನಸೂಯೆಯ ಬಳಿಗೆ ನೀನು ಈಗಲೇ ಹೋಗು ' ಎಂಬುದಾಗಿ. ಪತಿಯ ಮಾತಿಗೆ ಅನುಗುಣವಾಗಿ ಸೀತೆಯು ಅನಸೂಯಾದೇವಿಯ ಬಳಿಗೆ ಹೋಗಿ ವಿನಯ ಪೂರ್ವಕವಾಗಿ ನಮಸ್ಕರಿಸುತ್ತಾಳೆ. ಸೀತೆಯ ಆಗಮನದಿಂದ ಅತ್ಯಂತ ಸಂತುಷ್ಟಳಾದ ಅನಸೂಯೆಯು ಅವಳನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಬರಮಾಡಿಕೊಂಡು ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾಳೆ. ರಾಜಕುಮಾರಿಯಾಗಿ ಬೆಳೆದು ಮಹಾರಾಣಿಯಾಗಬೇಕಿದ್ದ ಸೀತೆಯು, ಪಿತೃವಾಕ್ಯಪರಿಪಾಲನೆಗಾಗಿ ಅರಣ್ಯವಾಸಕ್ಕೆ ಬಂದ ತನ್ನ ಪತಿಯನ್ನೇ ಅನುಸರಿಸಿ ಬಂದಿರುವುದನ್ನು ಮನಗಂಡು ಸೀತೆಯನ್ನು ಕುರಿತು ಅತ್ಯಂತ ಶ್ಲಾಘನೀಯವಾದ ನುಡಿಗಳನ್ನು ಹೇಳುತ್ತಾಳೆ. ಪತಿವ್ರತಾಧರ್ಮ ಪಾಲನೆಯಿಂದ ಉಂಟಾಗುವ ಮಹಾಲಾಭವನ್ನು ವಿವರಿಸುತ್ತಾಳೆ. ಜ್ಞಾನವೃದ್ಧೆಯೂ, ವಯೋವೃದ್ಧೆಯೂ ಆದಂತಹ ಅನಸೂಯೆಯ ಹಿತನುಡಿಗಳನ್ನು ಸೀತೆಯು ಅತ್ಯಂತ ವಿನಯದಿಂದ ಆಲಿಸಿ ಅನಸೂಯೆಯನ್ನು ಕುರಿತು "ನಿನ್ನ ಉಪದೇಶವು ನನಗೆ ವಿವಾಹ ಸಮಯದಲ್ಲಿ ನನ್ನ ತಾಯಿಯಿಂದ ಹಾಗೂ ವನವಾಸಕ್ಕೆ ಹೊರಡುವ ಸಂದರ್ಭದಲ್ಲಿ ಅತ್ತೆಯಾದ ಕೌಸಲ್ಯಾದೇವಿಯಿಂದ ಮಾಡಲ್ಪಟ್ಟ ಉಪದೇಶವನ್ನು ಮತ್ತೊಮ್ಮೆ ಸ್ಮರಣೆಗೆ ತಂದುಕೊಳ್ಳುವಂತೆ ಭಾಸವಾಯಿತು" ಎನ್ನುತ್ತಾಳೆ.


ಯಾರ ದರ್ಶನಮಾತ್ರದಿಂದಲೇ ಪತಿವ್ರತೆಯರು ಪರಮ ಪಾವಿತ್ರ್ಯವನ್ನು ಹೊಂದುತ್ತಾರೆಯೋ, ಯಾರ ಸ್ಮರಣೆಯಿಂದ ಸಮಸ್ತ ಸ್ತ್ರೀಕುಲಕ್ಕೇ ಮಂಗಳ ಉಂಟಾಗುವುದೋ ಅಂತಹ ಸೀತಾಮಾತೆಯು, ಅನಸೂಯಾದೇವಿಯಿಂದ ದೀರ್ಘವಾಗಿ ಉಪದೇಶಿಸಲ್ಪಟ್ಟ ಪತಿವ್ರತಾಧರ್ಮ ಎಂಬ ತಪಸ್ಸಿನ ಮಹಿಮೆಯನ್ನು ವಿನಯ ಹಾಗೂ ಗೌರವಪೂರ್ವಕವಾಗಿ ಆಲಿಸಿ ಆನಂದ ಪಡುತ್ತಾಳೆ. ಅನಸೂಯಾದೇವಿಯಿಂದ ಪ್ರೀತಿಯಿಂದ ಕೊಡಲ್ಪಟ್ಟ ಅಂಗರಾಗ ಹಾಗೂ ದಿವ್ಯವಾದ ಆಭರಣಗಳನ್ನು ಧರಿಸುತ್ತಾಳೆ. ಈ ಪ್ರಕರಣದಲ್ಲಿ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯರ ವಿನಯವೆಂಬ ಸಂಪತ್ತು ಎದ್ದು ತೋರುತ್ತದೆ ಹಾಗೂ ಸರ್ವರಿಗೂ ಆದರ್ಶಪ್ರಾಯವಾಗಿದೆ.

ಶ್ರೀರಾಮಚಂದ್ರ ಹಾಗೂ ಸೀತಾಮಾತೆಯರು ಜಗದಾದಿದಂಪತಿಗಳು.  ಅವರಿಗೆ ಯಾವ ಉಪದೇಶದ ಅಗತ್ಯವೂ ಇಲ್ಲ. ಆದರೆ ಮನುಕುಲಕ್ಕೆ ಒಂದು ಆದರ್ಶವಾದ ಜೀವನವನ್ನು ತೋರಿಸುವ ಸಲುವಾಗಿ ಭುವಿಗೆ ಇಳಿದು ಬಂದವರು. ಮಕ್ಕಳು, ಹಿರಿಯರು ಹೇಳಿದ್ದನ್ನು ಮಾಡುವುದಕ್ಕಿಂತ ಹೆಚ್ಚಾಗಿ, ಅವರು ಮಾಡಿದ್ದನ್ನು ಅನುಸರಿಸುವುದೇ ಜಾಸ್ತಿಯಷ್ಟೇ. ಹಾಗಾಗಿ ಜಗನ್ಮಾತಾಪಿತೃಗಳು ಕಾಲ ಕಾಲಕ್ಕೆ ಭುವಿಗೆ ಇಳಿದು ಬಂದು ಧರ್ಮದ ಹಾದಿಯಲ್ಲಿ ತಾವೇ ನಡೆದು ಪ್ರಕೃತಿಯಲ್ಲಿ ಸಿಲುಕಿರುವ ತಮ್ಮ ಮಕ್ಕಳಿಗೆ ಧರ್ಮದ ಹಾದಿಯನ್ನು ತೋರಿಸುವುದುಂಟು."ಭಗವಂತನು ಇಳಿದು ಬರುವುದು ಕೆಳಗೆ ಬಿದ್ದಿರುವವರನ್ನು ಮೇಲೆತ್ತಲು. ನೀರಿಗೆ ಬಿದ್ದವರನ್ನು ಮೇಲೆತ್ತಲು ಈಜುಗಾರನು ಬರುವಂತೆ, ಕರ್ಮಚಕ್ರದಲ್ಲಿ ಬಿದ್ದ ಜೀವಿಗಳ ಉದ್ಧಾರಕ್ಕಾಗಿ ಅಜನಾದರೂ (ಹುಟ್ಟಿಲ್ಲದವನು) ಅವನು ಜನಿಸುತ್ತಾನೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ ತಮ್ಮ ಕಲ್ಯಾಣಗುಣಗಳ ಮೂಲಕ ಭುವಿಯಲ್ಲಿದ್ದವರನ್ನು ದಿವಿಗೆ ಒಯ್ಯಲು ಅವತರಿಸಿದ ಶ್ರೀರಾಮಚಂದ್ರ-ಸೀತಾಮಾತೆಯರ ನಡೆ ಎಂದೆಂದಿಗೂ ಲೋಕಕ್ಕೆ ಆದರ್ಶಪ್ರಾಯ.


ವಿನಯ ಎನ್ನುವುದು ಎಲ್ಲರಲ್ಲಿಯೂ ಇರಲೇಬೇಕಾದಂತಹ ಅಲಂಕಾರಪ್ರಾಯವಾದ ಗುಣ. ವಿನಯ ಎನ್ನುವುದು, ವಿಶೇಷವಾಗಿ ನಮ್ಮನ್ನು ಭಗವಂತನೆಡೆಗೆ ನಯನಮಾಡುವಂತಹ (ಒಯ್ಯುವಂತಹ) ಕಲ್ಯಾಣಗುಣ. ಹಾಗಾಗಿಯೇ ಮಹಾತ್ಮರು ವಿನಯವನ್ನು ಸದಾ ತಮ್ಮಲ್ಲಿ ಕಾಪಾಡಿಕೊಂಡಿರುವುದು ನಮಗೆ ಆರ್ಷ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಪರಮಪೂಜ್ಯರಾದ ಶಂಕರಭಗವತ್ಪಾದರು ತಮ್ಮ ಸ್ತೋತ್ರ ಸಾಹಿತ್ಯದಲ್ಲಿ 'ಅವಿನಯಮ್ ಅಪನಯ ವಿಷ್ಣೋ' ಎಂಬುದಾಗಿ ಅವಿನಯವನ್ನು ದೂರಮಾಡು  ಎಂದು ನಮ್ಮೆಲ್ಲರ ಪರವಾಗಿ ಭಗವಂತನನ್ನು ಪ್ರಾರ್ಥಿಸುತ್ತಾರೆ.


ಅನೇಕ ಮಂದಿ ಸುಭಾಷಿತಕಾರರೂ ಸಹ ವಿನಯವೆಂಬ ಗುಣವನ್ನು ಅತಿಶಯವಾಗಿ ಕೊಂಡಾಡಿರುವುದನ್ನು ನಾವು ಸಂಸ್ಕೃತ ಸಾಹಿತ್ಯದಲ್ಲಿ ಕಾಣಬಹುದು. ವಯೋವೃದ್ಧರ ಬಳಿ, ಜ್ಞಾನವೃದ್ಧರ ಬಳಿ ಹೇಗೆ ವಿನಯದಿಂದ ನಡೆದುಕೊಳ್ಳಬೇಕು, ಅದು ನಮ್ಮ ಐಹಿಕ ಹಾಗೂ ಪಾರಮಾರ್ಥಿಕ ಏಳಿಗೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ರಾಮಾಯಣ ಮಹಾಭಾರತ ಮುಂತಾದ ಕಾವ್ಯಗಳು ಮನುಕುಲಕ್ಕೆ ಸಾರುತ್ತಿವೆ. ಅಂತಹ ಕಾವ್ಯಗಳ ಹಾಗೂ ಮಹಾಪುರುಷರ ಚರಿತ್ರೆಯ ಅನುಸಂಧಾನದಿಂದ ವಿನಯವೆಂಬ ಗುಣವನ್ನು ಮೈಗೂಡಿಸಿಕೊಂಡು ಕೃತಾರ್ಥರಾಗೋಣ.


ಸೂಚನೆ: 05/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.