Monday, August 7, 2023

ವ್ಯಾಸ ವೀಕ್ಷಿತ - 49 ಪಾಂಡವರನ್ನು ಗುರುತಿಸಿದ ಕೃಷ್ಣ! (Vyaasa Vikshita - 49Pandavarannu Gurutisida Krishna!)


ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಅಂತೂ ದ್ರೌಪದಿಯು ವಿಪ್ರನೊಬ್ಬನ ಪಾಲಾದದ್ದನ್ನು ಕಂಡು ಅಲ್ಲಿದ್ದ ಅರಸರು ಕೆರಳಿದರು.

ಯಾವಾಗ ಆ ರಾಜರು, ಭೀಮಾರ್ಜುನರ ಮೇಲೆ ತಮ್ಮ ಪರಾಕ್ರಮವನ್ನು ತೋರಲು ಬಂದರೋ, ಆಗ ಭೀಮನು ಕ್ರುದ್ಧನಾದನು: ಒಂದು ಮರವನ್ನೇ ಬುಡಸಮೇತ ಕಿತ್ತನು; ನೆಲಕ್ಕೊಮ್ಮೆ ಅದನ್ನು ಕುಕ್ಕಿದನು; ಅದರ ಎಲೆಗಳೆಲ್ಲ ಉದುರುವಂತೆ ಮಾಡಿದನು. ದಂಡವನ್ನು ಹಿಡಿದ ದಂಡಿಯಂತೆ - ಎಂದರೆ ದಂಡಧಾರಿಯಾದ ಯಮನಂತೆ - ಅಗ ಭೀಮನು ಕಾಣಿಸಿದನು!  ಅದನ್ನು ಕಂಡು ಅತಿಮಾನುಷವಾದ ಬುದ್ಧಿಯುಳ್ಳವನೂ ಅಸಾಧಾರಣವಾದ ಕಾರ್ಯಗಳನ್ನು ಮಾಡಿದವನೂ ಆದ ಅರ್ಜುನನು ಸಹ ವಿಸ್ಮಯಪಟ್ಟನು! (ಇನ್ನು ಮಿಕ್ಕವರು ಆಶ್ಚರ್ಯಪಡುವುದರಲ್ಲಿ ಆಶ್ಚರ್ಯವೇನು?) ಇಂದ್ರನಂತೆ ಮಹಾಪರಾಕ್ರಮಿಯಾದ ಆ ಜಿಷ್ಣುವೂ (ಜಿಷ್ಣು ಎಂಬುದೂ ಅರ್ಜುನನ ಇನ್ನೊಂದು ಹೆಸರು) ಬಿಲ್ಲು ಹಿಡಿದು ನಿಂತನು.

ಲೋಕೋತ್ತರವಾದ ಬುದ್ಧಿಯುಳ್ಳವನೂ, ಮಹಾಕಾರ್ಯಗಳನ್ನೆಸಗಿದವನೂ ಆದ ಶ್ರೀಕೃಷ್ಣನು ಉಗ್ರವೀರ್ಯನಾದ ಹಲಾಯುಧನನ್ನು ಕುರಿತು ಆಗ ಹೇಳಿದನು (ಬಲರಾಮನಿಗೆ ಹಲೀ, ಹಲಾಯುಧ ಎಂಬ ಹೆಸರುಗಳುಂಟು. ನೇಗಿಲು ಆತನ ಆಯುಧ. ಹಲವೆಂದರೆ ನೇಗಿಲು. ಬಲರಾಮನಿಗೆ ಸಂಕರ್ಷಣನೆಂಬ ಹೆಸರೂ ಉಂಟು).

"ಅಣ್ಣಾ ಸಂಕರ್ಷಣನೇ, ಸಿಂಹರಾಜನ ಹಾಗೆ ನಡೆಯುಳ್ಳವನೂ, ಮಹಾಧನುಸ್ಸನ್ನು ಧರಿಸಿರುವವನೂ ಆದ ಈತನು ಅರ್ಜುನನೇ ಸರಿ. ಇಲ್ಲಿ ಯೋಚಿಸಬೇಕಾದ ಅಂಶವೇ ಇಲ್ಲ. ನಾನು ವಾಸುದೇವನೇ ಆಗಿದ್ದಲ್ಲಿ ಇದು ಸತ್ಯ. (ಎಂದರೆ ತಾನು ವಾಸುದೇವನೆಂಬುದು ಎಷ್ಟು ಸತ್ಯವೋ, ಇದೂ ಅಷ್ಟೇ ಸತ್ಯವಾದದ್ದು). ವೇಗದಿಂದ ಮರವನ್ನೇ ಕಿತ್ತು ರಾಜರುಗಳನ್ನು ಬಗ್ಗುಬಡಿಯಲೆಂದು ಥಟ್ಟನೆ ಹೊರಟಿರುವ ಈತನಾದರೂ ಭೀಮನಲ್ಲದೆ ಮತ್ತಾರೂ ಅಲ್ಲ: ಈ ಬಗೆಯ ಕಾರ್ಯವನ್ನು ಭೂಮಿಯಲ್ಲಿ ಮತ್ತಾರೂ ಈಗ ಮಾಡಲಾರರು.

ಅಷ್ಟೇ ಅಲ್ಲ, ಈಗಷ್ಟೆ ಒಬ್ಬ ಹೊರಟುಹೋದನಲ್ಲವೇ?: ಕಮಲದ ಹಾಗೆ ಕಣ್ಣುಳ್ಳವನು, ವಿನಯಸಂಪನ್ನನಾದವನು, ಮಹಾಸಿಂಹದಂತೆ ನಡಿಗೆಯುಳ್ಳವನು, ಬೆಳ್ಳಗೆ ತೆಳ್ಳಗೆ ಇದ್ದವನು, ನೀಳವೂ ಉಜ್ಜ್ವಲವೂ ಆದ ಸುಂದರವಾದ ಮೂಗುಳ್ಳವನು - ಅತನೇ ಯುಧಿಷ್ಠಿರ! ಜೊತೆಗಿದ್ದ ಆ ಇಬ್ಬರು ಕುಮಾರರು - ಕಾರ್ತಿಕೇಯರಿಬ್ಬರಂತೆ ಇದ್ದವರು - ಅವರೇ ಆಶ್ವಿನೇಯರು (ಎಂದರೆ ಅಶ್ವಿನೀದೇವತೆಗಳ ಅನುಗ್ರಹದಿಂದ ಜನ್ಮಪಡೆದವರು: ನಕುಲ-ಸಹದೇವರು) - ಎಂಬುದಾಗಿ ನಾನು ತರ್ಕಿಸುತ್ತೇನೆ. ಜತು-ಗೃಹದಿಂದ (ಎಂದರೆ ಅರಗಿನ ಮನೆಯಿಂದ) ಕುಂತಿಯೂ ಪಾಂಡುಪುತ್ರರೂ ಪಾರಾದರೆಂದು ನಾನು ಕೇಳಿದ್ದೇನೆ." ಎಂದನು.

ಜಲರಹಿತವಾದ ಮೇಘದ ಹಾಗೆ ಬೆಳ್ಳಗಿದ್ದ ಬಲರಾಮನೂ ಶ್ರೀಕೃಷ್ಣನಿಗೆ ಹೇಳಿದನು: "ನನ್ನ ಸೋದರತ್ತೆ ಕುಂತಿ (ಬಲರಾಮನ ತಂದೆ ವಸುದೇವ; ಆತನ ಸೋದರಿ ಪೃಥೆ; ಕುಂತಿದೇಶದ ರಾಜನಾದ ಕುಂತಿಭೋಜನು ಅವಳನ್ನು ಮಗಳಾಗಿ ಸ್ವೀಕರಿಸಿದುದರಿಂದ ಅವಳಿಗೆ ಕುಂತಿಯೆಂಬ ಅಡ್ಡಹೆಸರು ಬಂದಿತು). ಅವಳೂ ಪಾಂಡವರೂ ಬಚಾವಾದರೆಂದು ಕೇಳಿ ಸಂತೋಷವಾಯಿತು! ಆಹಾ!" - ಎಂದನು.

ಭೀಮಾರ್ಜುನರು ರಾಜರೊಂದಿಗೆ ಸೆಣಸಲು ಹೀಗೆ ಸನ್ನದ್ಧರಾಗಿರಲು, ಅಲ್ಲಿ ನೆರೆದಿದ್ದ ವಿಪ್ರರೂ ಸುಮ್ಮನೇನಿರಲಿಲ್ಲ: ತಮ್ಮ ಬಳಿಯಿದ್ದು ಕೃಷ್ಣಾಜಿನಗಳನ್ನೂ ಕಮಂಡಲುಗಳನ್ನೂ ಅಲ್ಲಾಡಿಸುತ್ತಾ, ಅವರು ಭೀಮಾರ್ಜುನರಿಗೇ ಹೇಳಿದರು: "ನಾವೂ ಈ ಶತ್ರುಗಳೊಂದಿಗೆ ಸೆಣಸುತ್ತೇವೆ, ನೀವು ಹೆದರಬೇಕಿಲ್ಲ" ಎಂದು! (ಇವರು ಭೀಮಾರ್ಜುನರೆಂದು ಅವರಿಗೇನು ಗೊತ್ತು?)

ಸೂಚನೆ : 6/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.