Tuesday, August 1, 2023

ಯಕ್ಷ ಪ್ರಶ್ನೆ48 Yaksha prashne 48

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 47  ಸುಖಕ್ಕೆ ಕಾರಣವಾದುದು ಯಾವುದು ?

ಉತ್ತರ - ಶೀಲ. 

ಇಲ್ಲಿ ಯಕ್ಷನು ಕೇಳುವ ಪ್ರಶ್ನೆ "ಸುಖಕ್ಕೆ ಕಾರಣವಾದು ಯಾವುದು ?" ಎಂದು. 'ಶೀಲ' ಎಂಬುದು ಧರ್ಮರಾಜನ ಉತ್ತರ. ಇಲ್ಲಿ ನಾವು ಎರಡು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಸುಖ ಎಂದರೇನು? ಮತ್ತು ಶೀಲವೆಂದರೇನು? ಸುಖಕ್ಕೆ ಶೀಲವು ಯಾವರೀತಿಯಾಗಿ ಕಾರಣವಾಗುತ್ತದೆ ? ಎಂಬ ಮೂರು ಅಂಶಗಳನ್ನು ನಾವಿಲ್ಲಿ ಚಿಂತಿಸಬೇಕಾಗಿದೆ. 

ಸುಖ ಎಂದರೆ ಯಾವುದು ಎಂಬ ಬಗ್ಗೆ ನಮ್ಮ ಭಾರತೀಯ ಋಷಿಮುನಿಗಳು ಖಚಿತವಾದ ವಿವರಣೆಯನ್ನು ನೀಡಿದ್ದಾರೆ. ಅದನ್ನು ಪರಿಗಣನೆಗೆ ತಂದುಕೊಳ್ಳದೆ ನಮ್ಮದೇ ಆದ ಹುಡುಕಾಟದಲ್ಲಿ ಇರುವುದು ವಿಷಾದನೀಯವಾಗಿದೆ. ಅವರು ಕಠಿಣ ಪರಿಶ್ರಮದಿಂದ ಹೇಳಿದ ಸುಖದ ವ್ಯಾಖ್ಯಾನ ನಮ್ಮ ಬುದ್ಧಿಗೆ ನಿಲುಕಲೇ ಇಲ್ಲ. ಪದಾರ್ಥಗಳಲ್ಲೇ ಅಥವಾ ಪದಾರ್ಥಗಳಿಂದ ಸುಖವಿದೆ ಎಂದು ನಾವು ಭ್ರಮಿಸಿದ್ದೇವೆ. ಶ್ರೀರಂಗ ಮಹಾಗುರುಗಳು ತೈತ್ತರೀಯ ಉಪನಿಷತ್ತನ್ನು ವಿವರಿಸುತ್ತಾ ಸುಖದ ಅಥವಾ ಆನಂದದ ಸ್ತರಗಳನ್ನು ಹೀಗೆ ಹೇಳುತ್ತಿದ್ದರು. ಒಬ್ಬ ಸ್ವಸ್ಥನಾದ, ಸರ್ವಗುಣಸಂಪನ್ನನಾದ, ಸರ್ವವಿಧವಾದ ಐಶ್ವರ್ಯಗಳಿಂದ ಕೂಡಿದ ಒಬ್ಬ ಸಾಮಾನ್ಯ ಮನುಷ್ಯ ಯಾವ ಆನಂದವನ್ನು ಪಡೆಯಬಹುದೋ ಆ ಆನಂದವನ್ನು ಒಂದು ಸಂಖ್ಯೆ ಎಂದು ಭಾವಿಸಿ, ಅದರ ಮುಂದೆ ಅದಕ್ಕೆ ಹದಿನೆಂಟು ಸೊನ್ನೆಯನ್ನು ಹಾಕಿದರೆ ಯಾವ ಸಂಖ್ಯೆ ಬರುತ್ತದೆಯೋ ಅಂತಹ ಕೋಟಿಕೋಟಿ ಪಟ್ಟು ಆನಂದವೇ ನಿಜವಾದ ಸುಖ ಎಂದು. ಹಾಗಾದರೆ ಇಂತಹ ಸುಖವನ್ನು ಪಡೆಯುವುದು ಹೇಗೆ? ಎಂಬ ಬಗ್ಗೆ ಉಪನಿಷತ್ತೇ ತಿಳಿಸಿಕೊಡುವ ಉಪಾಯವೆಂದರೆ "ತ್ಯಾಗೇನೈಕೇ ಅಮೃತತ್ವಮಾನಶುಃ" ಎಂದು. ತ್ಯಾಗವೇ ಸುಖಕ್ಕೆ ಕಾರಣ. ಪದಾರ್ಥಗಳ ಸಂಗ್ರಹದಿಂದಲೇ ಸುಖವಿಲ್ಲ. ಆ ಎಲ್ಲಾ ಪದಾರ್ಥಗಳ ತ್ಯಾಗವೇ ಸುಖಕ್ಕೆ ಕಾರಣ ಕೂಡ. ಇಂತಹ ಸುಖವನ್ನು ಪಡೆಯಲು ಬೇಕು ಶೀಲ ಎಂಬ ಗುಣ. 

ಮನುಷ್ಯ ಸ್ವಭಾವ ಮತ್ತು ಶೀಲಗಳು ಎರಡು ಪ್ರಧಾನವಾದ ಗುಣಗಳಿಂದ ನಿರ್ಧಾರಿತವಾಗುತ್ತವೆ. ಮಾನಸಿಕವಾದ ಸತ್ತ್ವ ರಜಸ್ಸು ಮತ್ತು ತಮಸ್ಸು ಎಂಬ ಗುಣಗಳು, ವಾತ ಪಿತ್ತ ಕಫ ಎಂಬ ಶಾರೀರಿಕಗುಣಗಳು. ಇವುಗಳಿಂದ ಮನುಷ್ಯನ ಗುಣಗಳು ನಿರ್ಧಾರಿತವಾಗುತ್ತವೆ. ಯಾವುದು ಹುಟ್ಟಿನಿಂದ ಬರುತ್ತದೆಯೋ ಅದು ಸ್ವಭಾವ. ಅದನ್ನು ಯಾವುದೇ ಕಾರಣಕ್ಕೂ ಪರಿವರ್ತಿಸಲು ಸಾಧ್ಯವೇ ಇಲ್ಲ. ಯಾವುದನ್ನು ಪರಿವರ್ತಿಸಲು ಸಾಧ್ಯವೋ ಅಂತಹ ಗುಣವನ್ನು ಶೀಲವೆಂದು ಕರೆಯುತ್ತಾರೆ. ಮಾನಸಿಕ ಮತ್ತು ಶಾರೀರಿಕ ಗುಣಗಳಿಂದ ಮನಸ್ಸಿನಲ್ಲಿ ಅನೇಕ ಗುಣಗಳು ಅಂತೆಯೇ ದೋಷಗಳು ಕಾಣಿಸಿಕೊಳ್ಳುತ್ತವೆ. ಇವು ಮೂಲಗುಣಗಳ ಕಾರಣಗಳಿಂದ ಯಾವ ಗುಣದೋಷಗಳು ಕಾಣಲು ಸಾಧ್ಯವೋ ಅದಕ್ಕಿಂತ ವಿಭಿನ್ನವಾಗಿ ಇಂತಹ ಗುಣಾವಗುಣಗಳು ಕಂಡುಬರುತ್ತವೆ. ಇಂತಹ ಸದ್ಗುಣಗಳನ್ನೇ ಶೀಲವೆನ್ನಬಹುದು. ಇದರಿಂದಲೇ ಮನುಷ್ಯನು ಸುಖವನ್ನು ಪಡೆಯಬಲ್ಲ. ಶೀಲವು ಕೆಟ್ಟರೆ ಅವನಿಗೆ ಸುಖವು ಖಂಡಿತವಾಗಿಯೂ ಸಿಗುವುದಿಲ್ಲ. ಗಹನವಾದ ಧರ್ಮವನ್ನು ತಿಳಿಯುವ ಸಾಧನಗಳಲ್ಲಿ 'ಸ್ಮೃತಿಶೀಲೇ ಚ ತದ್ವಿದಾಮ್' ಎಂಬಂತೆ ಶೀಲವೂ ಒಂದು. ಶೀಲವೆಂದರೆ ಒಳ್ಳೆಯ ಜೀವನ ಶೈಲಿ. ರಾಗದ್ವೇಷ ರಹಿತವಾದುದು. 'ಶೀಲ- ಸಮಾಧೌ' ಎಂಬ ಧಾತುವಿನಿಂದ ಉತ್ಪನ್ನವಾದ 'ಶೀಲ' ಎಂಬ ಶಬ್ದಕ್ಕೆ 'ಸಮಾಧಿ' ಎಂಬ ಅರ್ಥವೂ ಉಟು. ಸಮಾಧಿಸ್ಥಿತಿಗೆ ಕಾರಣವಾದುದನ್ನೇ 'ಶೀಲ' ಎನ್ನಬಹುದು.

ಸೂಚನೆ : 30/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.