Monday, August 28, 2023

ವ್ಯಾಸ ವೀಕ್ಷಿತ - 52 ಕುಂತಿಯ ಚಿಂತೆ (Vyaasa Vikshita - 52 Kuntiya Chinte)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯುದ್ಧದಲ್ಲಿ ವೈಶಾರದ್ಯವನ್ನು (ಎಂದರೆ ಪ್ರಾವೀಣ್ಯವನ್ನು) ಹೊಂದಿದ್ದ ಆ ರಾಜರುಗಳು ಯುದ್ಧದಿಂದ ವಿನಿವೃತ್ತರಾದರು (ಎಂದರೆ ಹಿಂದಿರುಗಿದರು); ವಿಸ್ಮಯಗೊಂಡಿದ್ದ ಆ ರಾಜರು ಇನ್ನು ತಮ್ಮ ತಮ್ಮ ಡೇರೆಗಳತ್ತ ಹೊರಡಲು ಅನುವಾದರು.

"ಈ ರಂಗಮಂಚದಲ್ಲಿ ಬ್ರಾಹ್ಮಣರೇ ಶ್ರೇಷ್ಠರೆಂಬುದು ಸಾಬೀತಾಯಿತು! ಪಾಂಚಾಲಿಯು ಬ್ರಾಹ್ಮಣರನ್ನು ವರಿಸಿದಳು!" - ಹೀಗೆಂಬುದಾಗಿ ಹೇಳುತ್ತಾ, ಅಲ್ಲಿಗೆ ಬಂದಿದ್ದವರು ತಮ್ಮ ತಮ್ಮ ಮನೆಗಳತ್ತ ತೆರಳಿದರು. ರುರುಮೃಗದ ಅಜಿನದಿಂದ (ಅಜಿನ ಎಂದರೆ ಚರ್ಮ) ಆವೃತರಾಗಿದ್ದ ಆ ಬ್ರಾಹ್ಮಣರು ಭೀಮಾರ್ಜುನರನ್ನು ಸುತ್ತುಗಟ್ಟಿದರು.

ಜನಸಂಮರ್ದದಿಂದ (ಸಂಮರ್ದವೆಂದರೆ ಭಾರೀ ಗುಂಪು) ಆಚೆ ಬಂದರು, ಭೀಮಾರ್ಜುನರು; ಶತ್ರುಗಳೆಲ್ಲರೂ ಇವರನ್ನೇ ದಿಟ್ಟಿಸಿ ನೋಡುತ್ತಿದ್ದರು. ದ್ರೌಪದಿಯೂ ಅವರನ್ನೇ ಅನುಸರಿಸಿ ಬಂದಿದ್ದಳಾಗಿ ಆ ನರವೀರರಿಬ್ಬರು ಅತಿಶಯವಾಗಿ ವಿರಾಜಿಸಿದರು. ಹುಣ್ಣಿಮೆಯಂದು ಮೋಡಗಳಿಂದ ಬಿಡಿಸಿಕೊಂಡು ಬಂದಿರುವ ಚಂದ್ರ-ಸೂರ್ಯರ ಹಾಗೆ ಅವರು ಕಾಣಿಸುತ್ತಿದರು.

ಆದರೆ ಇತ್ತ, ತನ್ನ ಮಕ್ಕಳಿಗೆ ಅದೇನೋ ಆಪತ್ತು ಬಂದಿರಬೇಕೆಂದು ತಾಯಿ ಕುಂತಿಗೆ ಚಿಂತೆಯು ಮೂಡಿತು: "ಭಿಕ್ಷಾಕಾಲವು ಮೀರುತ್ತಿದೆ. ನನ್ನ ಮಕ್ಕಳು ಇನ್ನೂ ಬರಲಿಲ್ಲ. ಧೃತರಾಷ್ಟ್ರನ ಪುತ್ರರಿಂದ ಇವರುಗಳು ಹತರಾಗಿಲ್ಲವಷ್ಟೆ! ಅಥವಾ ಮಾಯಾಮಯರೂ ಸುಘೋರರೂ ದೃಢವೈರಿಗಳೂ ಆದ ರಾಕ್ಷಸರಿಂದ ಸಾವುಂಟಾಗಿಲ್ಲವಷ್ಟೆ? ಆಹಾ! ಮಹಾತ್ಮರಾದ ವ್ಯಾಸರ ಆಶಂಸೆಯೂ ವಿರುದ್ಧವಾಗಿಹೋಯಿತೇ?" ಎಂದು ವ್ಯಾಕುಲಳಾದಳು.

ಹೀಗೆ ಶಂಕೆಯು ಮನಸನ್ನಾವರಿಸಲು ಸುತಸ್ನೇಹದಿಂದ (ಎಂದರೆ ಮಕ್ಕಳ ಮೇಲಣ ಪ್ರೀತಿಯಿಂದ) ಚಿಂತೆಗೀಡಾದ ಕುಂತಿಯು ಹೀಗೆಲ್ಲಾ ಯೋಚಿಸಿದಳು.

ಮೋಡಗಳಿಂದ ಆಕಾಶವು ಕಿಕ್ಕಿರಿದಿದ್ದ ದುರ್ದಿನದ ಮಹತ್ತಾದ ಅಪರಾಹ್ಣದಲ್ಲಿ, ಜನಗಳು ಇದೇನು ನಿದ್ರಿಸಿರುವರೋ ಎಂಬಂತಿರುವುದಲ್ಲವೇ? ಮೋಡಗಳಿಂದ ಸುತ್ತುವರಿಯಲ್ಪಟ್ಟ ಸೂರ್ಯನು ಹೇಗೋ ಹಾಗೆ, ಬ್ರಾಹ್ಮಣರಿಂದ ಸುತ್ತುವರಿಯಲ್ಪಟ್ಟ ಜಿಷ್ಣುವು (ಅರ್ಜುನನು) ಆ ಕುಂಬಾರನ ಮನೆಗೆ ಅಪರಾಹ್ಣದಲ್ಲಿ ಪ್ರವೇಶಮಾಡಿದನು. ಅರ್ಜುನನೊಂದಿಗೆ ಭೀಮನೂ ಪ್ರವೇಶಿಸಿದನಷ್ಟೆ.

ಅತ್ಯಂತ ಸಂತೋಷದಿಂದ ಕೂಡಿದ್ದ ಅವರಿಬ್ಬರು ದ್ರೌಪದಿಯನ್ನು ಪಡೆದಿರುವುದನ್ನು (ಸೂಚಿಸಲು) "ಭಿಕ್ಷೆಯನ್ನು ತಂದಿದ್ದೇವೆ" - ಎಂಬುದಾಗಿ ತಿಳಿಸಿದರು. ಕುಂತಿಯಾದರೂ ಕುಟಿಯ ಒಳಗಿದ್ದಳು; ಆ ಮಕ್ಕಳಿಬ್ಬರನ್ನು ಗಮನಿಸಲಿಲ್ಲ. "ಎಲ್ಲರೂ ಸೇರಿ ಹಂಚಿಕೊಂಡು ತಿನ್ನಿರಿ, ಭಿಕ್ಷೆಯನ್ನು" (ಸಮೇತ್ಯ ಸರ್ವೇ ಭುಂಕ್ತ) ಎಂದಳು.

ಆಮೇಲೆ ಅಲ್ಲಿಗೇ ಬಂದ ಕುಂತಿಯು ಕೃಷ್ಣೆಯನ್ನು ಕಂಡಳು. "ನಾನದೆಂತಹ ಮಾತನ್ನಾಡಿಬಿಟ್ಟೆ!" ಎಂದುಕೊಂಡಳು. ಅದು ಹಾಗೇ ಘಟಿಸಿದರೆ ಅಧರ್ಮವಾದೀತೋ ಏನೋ ಎಂಬ ಭೀತಿಯು ಮನಸ್ಸಿನಲ್ಲಿ ಬಂದಿತು; ಆಕೆ ಚಿಂತಾಕುಲಳಾದಳು. ಆದರೆ ದ್ರೌಪದಿಯು ಅತ್ಯಂತ ಸಂತುಷ್ಟಳಾಗಿದ್ದಳು: ಎಷ್ಟಾದರೂ ತನಗಿಷ್ಟನಾದ ಪತಿಯೇ ದೊರೆತನಲ್ಲವೇ?

ದ್ರೌಪದಿಯ ಕೈಯನ್ನು ಹಿಡಿದುಕೊಂಡು ಕುಂತಿಯು ಯುಧಿಷ್ಠಿರನಲ್ಲಿಗೆ ಬಂದಳು. ಮತ್ತುಆತನಿಗೆ ಹೇಳಿದಳು: "ಈಕೆ ದ್ರುಪದರಾಜಕುಮಾರಿ. ನಿನ್ನ ತಮ್ಮಂದಿ(ರಿಬ್ಬ)ರು ಇವಳನ್ನು ನನಗೆ ಒಪ್ಪಿಸಿರುವರು. ಯಥೋಚಿತವಾಗಿ ನಾನು ಸಹ "ಎಲ್ಲರೂ ಸೇರಿ ಸೇವಿಸಿರಿ" ಎಂದು ಪ್ರಮಾದದಿಂದ (=ಸರಿಯದ ಅರಿವಿಲ್ಲದೆ) ಹೇಳಿಬಿಟ್ಟೆ! ನಾನು ಇಂದಾಡಿರುವ ಮಾತು ಸುಳ್ಳಾಗಕೂಡದು; ಆದರೆ ಅದು ಹೇಗೆ ಸಾಧ್ಯವಾದೀತೆಂಬುದನ್ನು ನೀನೇ ಹೇಳಬೇಕು, ಕುರುವಂಶದ ವೀರನೇ! ಪಾಂಚಾಲರಾಜಕುಮಾರಿಯಾದ ಇವಳಿಗೂ ಅಧರ್ಮವು ಸೋಂಕಬಾರದು. ಮತ್ತು ಪಾಪಫಲವಾಗಿ ಅವಳು ಮುಂದೆ (ನೀಚಜನ್ಮಗಳನ್ನು ಹೊಂದಿ) ಅಲೆಯುವಂತಾಗಬಾರದು" ಎಂದಳು.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.