Saturday, August 19, 2023

ಭಕ್ತಿ ಶರಣಾಗತಿಗಳ ಸೆಲೆ- ಮುಕುಂದಮಾಲೆ (Bhakti Saranagatigala Sele- Mukundamale)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮ ದೇಶದ ಸ್ತೋತ್ರಸಾಹಿತ್ಯದಲ್ಲಿ ಒಂದು ಅಪೂರ್ವವೂ ಜನಪ್ರಿಯವೂ ಆದ ಸಾಹಿತ್ಯ, ಕುಲಶೇಖರ ಆಳ್ವಾರ್ ವಿರಚಿತ "ಮುಕುಂದಮಾಲೆ".


ಆದರ್ಶವಾದ ಸ್ತೋತ್ರಸಾಹಿತ್ಯವು  ಜನಸಾಮಾನ್ಯರಿಗೆಲ್ಲ ಬೇಕೇ ಬೇಕು.  ಸ್ತೋತ್ರಸಾಹಿತ್ಯದ ಅವಶ್ಯಕತೆಯ ಬಗ್ಗೆ ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು-" ಭಗವದನುಭವದಲ್ಲೇ ಇದ್ದಾಗ ಅಲ್ಲಿ ಯಾವ ಸಾಹಿತ್ಯವೂ ಇಲ್ಲಪ್ಪ. ಭಗವಂತನಲ್ಲಿರಬೇಕು ಎಂದ ಮಾತ್ರಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಇರಲಾಗುವುದಿಲ್ಲ. ಭಗವಂತನನ್ನು ಅನುಭವಿಸುತ್ತಾ ಅದರ ರಸವನ್ನೇ ತುಂಬಿಕೊಂಡಿರುವ ಸಾಹಿತ್ಯವು ಬೇಕು. ಅದು ಜೀವನವನ್ನು ಭಗವಂತನ ಕಡೆಗೆ ತಿರುಗಿಸುತ್ತದೆ".


ಆಳ್ವಾರುಗಳು ಭಕ್ತಿರಸದಲ್ಲಿ ಆಳವಾಗಿ ಮುಳುಗಿದ್ದವರು; ಭಕ್ತಿಸಾಮ್ರಾಜ್ಯವನ್ನು ಆಳಿದವರು. ಇವರಲ್ಲಿ ಅಗ್ರಗಣ್ಯರು, ಮುಕುಂದಮಾಲೆಯನ್ನು ರಚಿಸಿದ ಕುಲಶೇಖರಾಳ್ವರರು.  ಇವರು ತಿರುವಾಂಕೂರಿನ ರಾಜರಾಗಿದ್ದರೆಂದು ಐತಿಹ್ಯವು ಹೇಳುತ್ತದೆ.


ಮುಕುಂದಮಾಲೆಯು  ನಲವತ್ತು ಶ್ಲೋಕಪುಷ್ಪಗಳಿಂದ ಪೋಣಿಸಲ್ಪಟ್ಟು ಭಗವದರ್ಪಿತವಾದ ಸುಂದರ ಹಾರ. ಈ ಸ್ತೋತ್ರದಲ್ಲಿ ಭಕ್ತಿಯಿದೆ; ಶರಣಾಗತಿಯಿದೆ; ಆದರ್ಶವಾದ ಪ್ರಾರ್ಥನೆಯಿದೆ; ಜೀವನಕ್ಕೆ ಬೇಕಾದ ಪಾಠವಿದೆ. ಇದು ಶ್ರೀವೈಷ್ಣವಸಂತರಿಂದ ರಚಿತವಾಗಿದ್ದರೂ ಎಲ್ಲರ ಗೌರವಾದರಗಳಿಗೆ ಹಿಂದಿನಿಂದಲೂ ಪಾತ್ರವಾಗಿದೆ. 


ಜನಗಳು ಭಗವಂತನಿಂದ ವಿಮುಖವಾಗಿರುವುದನ್ನು ಮನಗಂಡು, ಅವರನ್ನು ಭಗವಂತನತ್ತ ತಿರುಗಿಸಲು ಇಂದ್ರಿಯಸುಖಗಳನ್ನು ಜರೆದವರಿದ್ದಾರೆ. ಆದರೆ ಇಂದ್ರಿಯಜೀವನದಿಂದ ವಿಮುಖರಾಗುವುದು ಪ್ರಕೃತಿಸಹಜವಲ್ಲ. ಈ ಬಗ್ಗೆ  ಶ್ರೀರಂಗಮಹಾಗುರುಗಳ ಈ ಮಾತು ಸ್ಮರಣೀಯ. "ಜೀವವನ್ನು ಐಹಿಕಾಪೇಕ್ಷೆ ಬಿಡು ಎಂದರೆ ಒಪ್ಪುವುದಿಲ್ಲ. ಆದುದರಿಂದ ಅದನ್ನೂ ಕೊಟ್ಟುಕೊಂಡು ಅದರ ಜೊತೆಯಲ್ಲಿಯೇ ಭಗವಂತನ ಸಾನ್ನಿಧ್ಯದಲ್ಲಿರು, ಎಂದರೆ ಅಲ್ಲಿ ತೊಡಕಿಲ್ಲ. ಇಂದ್ರಿಯಗಳಿಗೆ ಬೇಕಾದ ಆಹಾರವನ್ನು ಕೊಟ್ಟುಬಿಟ್ಟರೆ, ಅವುಗಳಿಗೆ ಕಟ್ಟುವ ಕಂದಾಯ ಕಟ್ಟಿಬಿಟ್ಟರೆ, ಗಲಾಟೆಯಿಲ್ಲ. ಇಂದ್ರಿಯಗಳನ್ನು ಸೃಷ್ಟಿ ಮಾಡಿ , ಅವುಗಳಿಗೆ ವಿಷಯವೇ ಬೇಡ ಎಂದರೆ ಅವುಗಳ ಬೆಲೆಯಾದರೂ ಏನು? ಆದ್ದರಿಂದ  ಇಂದ್ರಿಯಗಳಿಗೆ ವಿಷಯವನ್ನು ಕೊಡಬೇಕು. ಹಾಗೆ ಕೊಟ್ಟರೂ, ಅವು ನಮ್ಮ ಜೀವನಕ್ಕೆ ಅಡ್ಡಿಯನ್ನು ತರದಂತೆ ಕೊಡಬೇಕು".


ಕುಲಶೇಖರಾಳ್ವರರು ತಮ್ಮ "ಜಿಹ್ವೇ ಕೀರ್ತಯ ಕೇಶವಂ……" ಎಂಬ ಶ್ಲೋಕದಲ್ಲಿ ನಾನಾ ಇಂದ್ರಿಯಗಳಿಗೆ ಭಗವದ್ವಿಷಯವನ್ನು ಕೊಟ್ಟಿದ್ದಾರೆ."ಎಲೈ ನಾಲಗೆಯೇ ಕೇಶವನನ್ನು ಕೀರ್ತಿಸು; ಮನಸ್ಸೇ ಮುರರಿಪುವನ್ನು ಭಜಿಸು; ಕೈಗಳಿರಾ, ಶ್ರೀಧರನನ್ನು ಅರ್ಚಿಸಿರಿ; ಕಣ್ಣುಗಳೇ, ಕೃಷ್ಣನನ್ನು ನೋಡಿರಿ; ಕಾಲುಗಳಿರಾ, ಹರಿಯ ಆಲಯಕ್ಕೆ ಹೋಗಿರಿ; ಎಲೈ ನಾಸಿಕವೇ, ಮುಕುಂದಪಾದತುಲಸಿಯನ್ನು ಆಘ್ರಾಣಿಸು; ತಲೆಯೇ, ಪರಮಾತ್ಮನಲ್ಲಿ ಬಾಗು" ಎನ್ನುತ್ತಾರೆ. ಹೀಗೆ ಜೀವನವನ್ನು ದೇವನ ಕಡೆಗೆ ತಿರುಗಿಸುವ ತಂತ್ರವಿದಾಗಿದೆ. "ನಾಹಂ ವಂದೇ……." ಎಂಬ ಶ್ಲೋಕದಲ್ಲಿ ಅವರ ನಿಃಸ್ವಾರ್ಥಭಾವವು ಎದ್ದು ತೋರುತ್ತದೆ. "ಭಗವಂತ, ನಿನ್ನನ್ನು ಯಾವುದೋ ಸುಖದ ಅಪೇಕ್ಷೆಯಿಂದಾಗಲಿ, ಕಷ್ಟನಿವಾರಣೆಗಾಗಿಯಾಗಲಿ, ನಾನು ನಮಸ್ಕರಿಸುವುದಿಲ್ಲ. ಹೃದಯಭವನದಲ್ಲಿ, ಎಲ್ಲ ಭಾವಗಳಲ್ಲಿಯೂ ನಿನ್ನನ್ನು ತಾನೇ ಭಾವಿಸಬೇಕು; ಅದಕ್ಕಾಗಿ, ನಿನ್ನನ್ನು ನಮಸ್ಕರಿಸುತ್ತೇನೆ" ಎನ್ನುತ್ತಾರೆ. ಪರಮಭಕ್ತನಾದವನು ತಾನು ಸ್ನಾನ ಮಾಡಿದರೂ, ಇದು ಭಗವಂತನಿಗೆ ಅಭಿಷೇಕವೆಂದೇ ಭಾವಿಸುತ್ತಾನೆ. ಮಾಡಿದ ಅಡಿಗೆಯನ್ನು ಭಗವಂತನಿಗೆ ನಿವೇದಿಸಿ, ಅವನ ಪ್ರಸಾದವನ್ನೇ ಸೇವಿಸುತ್ತಿರುವುದಾಗಿ ಭಾವಿಸುತ್ತಾನೆ. …ಹೀಗೆ ಎಲ್ಲ ಭಾವಗಳಲ್ಲಿಯೂ ಭಗವಂತನನ್ನು ಒಬ್ಬನು ಭಾವಿಸುತ್ತಿದ್ದರೆ ಅವನ ಜೀವನ ಸಾರ್ಥಕವಾಗುವುದರಲ್ಲಿ ಸಂದೇಹವೇನು!

ತಮ್ಮ "ನಾಸ್ಥಾ ಧರ್ಮೇ…….." ಎಂಬ ಶ್ಲೋಕದಲ್ಲಿ "ಪೂರ್ವಕರ್ಮಾನುರೂಪವಾಗಿ ಆಗಬೇಕಾದ್ದೆಲ್ಲ ಆಗಲಿ. ನಿನ್ನ ಚರಣಕಮಲಗಳಲ್ಲಿ ನಿಶ್ಚಲವಾದ ಭಕ್ತಿಯಿರಲಿ" ಎನ್ನುತ್ತಾರೆ. ಜೀವನದ ಕಷ್ಟಗಳಿಗೆ ಧೃತಿಗೆಡದೆ ದೇವರ ಸ್ಮರಣೆಯೊಡನೆ ಜೀವನವನ್ನು ಎದುರಿಸುವ ಪಾಠ ನಮಗಿಲ್ಲಿ ಆಗುತ್ತದೆ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎಂಬ ದಾಸವಾಣಿಯು ಇದನ್ನೇ ನೆನಪಿಗೆ ತರುತ್ತದೆ.  ಜೀವನದಲ್ಲಿ ವೃತ್ತಿಯಿಂದ ನಿವೃತ್ತರಾದ ಮೇಲೆ ಭಗವಂತನನ್ನು ಭಾವಿಸಿದರಾಯಿತು ಎನ್ನುವವರುಂಟು. ಆದರೆ "ಪ್ರಾಣಪ್ರಯಾಣ ಸಮಯದಲ್ಲಿ ಕಫ, ವಾತ, ಪಿತ್ತಗಳ ತೊಂದರೆಯಿಂದ ಗಂಟಲೇ ಕಟ್ಟಿಬಿಟ್ಟರೆ, ನಿನ್ನ ಸ್ಮರಣೆಯೇ ಆಗದಿರಬಹುದು. ಆದ್ದರಿಂದ ನನ್ನ ಮನಸ್ಸು ಈಗಲೇ ನಿನ್ನಲ್ಲಿ ಪ್ರವೇಶಿಸಲಿ" ಎನ್ನುತ್ತಾರೆ ಇವರು. ಇಂದ್ರಿಯಗಳು ಸುಸ್ಥಿತಿಯಲ್ಲಿರುವಾಗಲೇ ಭಗವಂತನನ್ನು ಸೇರಿಸಿಕೊಂಡು ಜೀವನ ಮಾಡಬೇಕೆಂಬ ಪಾಠವಿಲ್ಲಿದೆ.


ಸರಿಯಾದುದನ್ನು (positive) ಸಾಧಿಸಬೇಕೆಂದಿದ್ದರೆ, ತಪ್ಪಾದ(negative) ದಿಕ್ಕಿನಿಂದ ದೂರವಿರಬೇಕಾದುದು ಅನಿವಾರ್ಯವೇ. "ಮಾ ದ್ರಾಕ್ಷಂ….." ಎಂಬ ಶ್ಲೋಕದಲ್ಲಿ "ನಿನ್ನ ಪಾದಕಮಲದಲ್ಲಿ ಭಕ್ತಿಯಿಲ್ಲದೆ ಇರುವ ಕ್ಷೀಣಪುಣ್ಯರನ್ನು ನಾನು ನೋಡುವಂತಾಗುವುದು ಬೇಡ; ನಿನ್ನ ಶ್ರಾವ್ಯವಾದ ಕಥೆಗಳ ಹೊರತು ಮತ್ತಾವ ಕಥೆಗಳನ್ನೂ ನಾನು ಕೇಳುವಂತಾಗುವುದು ಬೇಡ; ನಿನ್ನ ಅಸ್ತಿತ್ವವನ್ನೇ ನಿರಾಕರಿಸುವವರನ್ನು ನಾನು ಮನಸ್ಸಿನಲ್ಲೂ ಸ್ಮರಿಸುವುದೂ ಬೇಡ; ಯಾವುದೇ ಜನ್ಮದಲ್ಲಾಗಲಿ, ನಿನ್ನ ಸೇವೆಯ ಸಂಬಂಧವನ್ನು ನಾನು ಬಿಟ್ಟಿರದಂತಾಗಲಿ" ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ. "ಭಗವಂತನ ನಾಮಗಳನ್ನು ಹೇಳಲು ಸಮರ್ಥರಾಗಿದ್ದರೂ ವ್ಯಸನಾಭಿಮುಖರಾದ ಜನರು ಹೇಳುತ್ತಿಲ್ಲವಲ್ಲ" ಎಂಬ ಕಳಕಳಿಯಿಂದ ಜನರನ್ನು ಎಚ್ಚರಿಸುತ್ತಾರೆ. ಭಗವಂತನ ಮಹಿಮೆಯ  ಮುಂದೆ ನಾವು ದೊಡ್ಡದೆಂದು ಭಾವಿಸುವುದೆಲ್ಲವೂ ಅತಿ ಸಣ್ಣದೆಂದು ತಿಳಿ ಹೇಳುತ್ತಾರೆ.


ತಾವು ಪರಂಜ್ಯೋತಿಯನ್ನು ದರ್ಶನ ಮಾಡಿದಾಗ ತಮ್ಮ ದೇಹ ಮನಸ್ಸುಗಳಲ್ಲಿ ಉಂಟಾದ ದಿವ್ಯಸ್ಥಿತಿಯನ್ನು ತಮ್ಮ "ಬದ್ಧೇನಾಂಜಲಿನಾ…." ಎಂಬ ಶ್ಲೋಕದಲ್ಲಿ ಸ್ಮರಿಸುತ್ತಾ "ಇಂತಹ ರೀತಿಯಲ್ಲಿ ತಮ್ಮ ಜೀವನವನ್ನು ಕಳೆಯುವಂತಾಗಲಿ" ಎಂದು ಭಗವದನುಭವದ ಒಂದು ನೋಟವನ್ನು ಜನರಿಗೆ ಮನಗಾಣಿಸಿದ್ದಾರೆ. ಭಗವಂತನನ್ನು ಭಕ್ತಪ್ರಿಯನಾದ (ಭಕ್ತರೆಂದರೆ ಅವನಿಗೆ ಪ್ರಿಯ; ಭಕ್ತರಿಗೆ ಅವನು ಪ್ರಿಯನೂ ಹೌದು) ಆಶ್ರಯಿಸಬೇಕೆಂಬ ಭಾವ ಜನರಲ್ಲಿ ಮೂಡಲೆಂದು, ಭಗವಂತನು ಭವರೋಗಕ್ಕೆ ಔಷಧ, ಭವದ ಮರುಭೂಮಿಗೆ ಜಲದ ಸ್ರೋತಸ್ಸು; ಭವಸಾಗರಕ್ಕೆ ನಾವೆ– ಎಂದು ವಿವಿಧವಾಗಿ ಬಣ್ಣಿಸಿ, "ಕೃಷ್ಣಮಂತ್ರ ಎಂಬ ಜನ್ಮಸಾಫಲ್ಯಮಂತ್ರವನ್ನು ಜಪಿಸಿ" ಎಂದು ಜನರಿಗೆ ತಿಳಿಸಿಕೊಡುತ್ತಾರೆ.


ಭಗವಂತನನ್ನು ಸಮಾಹಿತಮನಸ್ಕರಾಗಿ ಧ್ಯಾನಿಸುವವರಿಗೆ, ಭಗವಂತ ಅಭಯ ಕೊಟ್ಟೇ ಕೊಡುತ್ತಾನೆ ಎಂಬ ಫಲಶ್ರುತಿಯನ್ನು ಕೊನೆಗೆ ಹೇಳುತ್ತಾರೆ. "ಯೋಗಶಾಯಿಯಾಗಿ ಕ್ಷೀರಾಬ್ಧಿಯಲ್ಲಿ ಪವಡಿಸಿರುವ ನಾರಾಯಣನಲ್ಲಿ ನಮ್ಮ ಜೀವನವನ್ನು ತೆಗೆದುಕೊಂಡುಹೋಗಿ ನಿಲ್ಲಿಸುವಂತಿರಬೇಕು" ಎಂದು ಶ್ರೀರಂಗಮಹಾಗುರುಗಳು ಕರ್ಮಯೋಗದ ಸಾರವನ್ನು ತಿಳಿಸುತ್ತಿದ್ದರು. ಅಂತಹ ಕ್ಷೀರಸಾಗರಶಾಯಿಯ ಸುಂದರ ವರ್ಣನೆಯಲ್ಲಿ ನೆಲೆ ನಿಲ್ಲುತ್ತದೆ, ಮುಕುಂದಮಾಲೆ.


ಸೂಚನೆ:  19/8/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.