Monday, August 28, 2023

ಯಕ್ಷ ಪ್ರಶ್ನೆ 52 (Yaksha prashne 52)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)  



ಪ್ರಶ್ನೆ – 51 ಮನುಷ್ಯನ ಮುಖ್ಯ ಕರ್ತವ್ಯವೇನು  ?

ಉತ್ತರ - ದಾನ

ಮಾಡಲೇ ಬೇಕು. ಮಾಡದಿದ್ದರೆ ಆಗದು ಎಂಬುದಕ್ಕೆ ಕರ್ತವ್ಯ ಎಂದು ಕರೆಯುತ್ತಾರೆ. ಮನುಷ್ಯನು ಮಾಡಲೇಬೇಕು, ಮಾಡದಿದ್ದರೆ ಆಗುವುದಿಲ್ಲ ಎಂಬ ಅದಾವ ವಿಚಾರವುಂಟು? ಎಂದು ಯಕ್ಷನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ದಾನ' ಎಂಬ ಉತ್ತರವನ್ನು ಕೊಡುತ್ತಾನೆ. ಹಾಗಾದರೆ ದಾನ ಹೇಗೆ ಅಂತಹ ಕರ್ತವ್ಯದ ವಿಚಾರವಾಗಿದೆ. ಇದನ್ನು ಮಾಡದಿದ್ದರೆ ಮನುಷ್ಯನ ಜೀವನವು ನಡೆಯುವುದೇ ಇಲ್ಲವೇ?

ಕೊಟ್ಟು ಬದುಕೇ ಹೊರತು ಇಟ್ಟಲ್ಲ. "ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ" ಎಂಬ ದಾಸರ ವಾಣಿಯನ್ನು ನೋಡಬಹುದು. ಸೃಷ್ಟಿಯಲ್ಲಿ ಎಲ್ಲು ನೋಡಿದರು ಕೊಡುವುದು ಕಂಡುಬರುತ್ತದೆಯೇ ಹೊರತು ಇಟ್ಟಿಕೊಂಡಿದ್ದು ಕಂಡುಬರುವುದಿಲ್ಲ. ಕೊಟ್ಟಾಗ ಬರುತ್ತದೆ. ಇಟ್ಟಾಗ ಕೆಟ್ಟುಹೋಗುತ್ತದೆ. ಹರಿಯುವ ನೀರು ಶುದ್ಧವಾಗಿರುತ್ತದೆ. ಅಲ್ಲಿ ನದಿಯು ಪರೋಪಕ್ಕಾರಕ್ಕಾಗಿ ಹರಿಯುತ್ತದೆ. ಒಂದು ವೇಳೆ ಹರಿಯದಿದ್ದರೆ ನದಿಯ ನೀರು ಕಲ್ಮಷವಾಗಿ ಪಾಚಿಕಟ್ಟಿ ಯಾರಿಗೂ ಉಪಯೋಗವಿಲ್ಲದಂತಾಗುತ್ತದೆ. ಹಸು ಪ್ರತಿದಿನ ಹಾಲನ್ನು ಕೊಡುತ್ತದೆ. ಹಾಲನ್ನು ಕೊಡುವುದಿಲ್ಲವೆಂದು ಹಟಮಾಡಿದರೆ ಕೆಚ್ಚಲಬಾವು ಉಂಟಾಗಬಹುದು. ಕೊಡುವುದರಲ್ಲಿ ಇರುವ ಸುಖ, ಇಟ್ಟುಕೊಳ್ಳುವುದರಲ್ಲಿ ಇಲ್ಲ ಎಂಬುದನ್ನು ನಿಸರ್ಗ ನಮಗೆ ಪಾಠವನ್ನು ಮಾಡುತ್ತದೆ. ಮನುಷ್ಯನು ಮಾತ್ರ ಇದನ್ನು ಮರೆತಂತೆ ಕಾಣುತ್ತದೆ. ಅದನ್ನು ಎಚ್ಚರಿಸಲು ಯಕ್ಷನು ಈ ಪ್ರಶ್ನೆಯನ್ನು ಕೇಳುತ್ತಾನೆ. 

ಮನುಷ್ಯನು ದಾನವನ್ನು ಮಾಡಲೇಬೇಕು. ದಾನವನ್ನು ಮಾಡುವುದು ಅವನ ಕರ್ತವ್ಯ. ಅಂದರೆ ಮಾಡದಿದ್ದರೆ ಸಾಧ್ಯವೇ ಇಲ್ಲ ಎಂಬುದು ಇದರ ಅರ್ಥ. ಮಾಡಲೇಬೇಕಾದುದು ಕರ್ತವ್ಯವಾಗುತ್ತದಷ್ಟೆ. ವಿಕಲ್ಪವಾದದ್ದು ಕರ್ತವ್ಯಕ್ಕೆ ಸೇರುವುದಿಲ್ಲವಷ್ಟೇ. ಅಂದರೆ ಮಾನವನಿಗೆ ದಾನ ಮಾಡದಿದ್ದರೆ ಗತಿಯೇ ಇಲ್ಲ. ದಾನವು ಆತನನ್ನು ಶುದ್ಧಗೊಳಿಸುತ್ತದೆ. ಶುದ್ಧಿಯು ತಾನೆ ಸಹಜತೆ, ವಿಶುದ್ಧಿಯು ವಿಕಾರ. ಆದ್ದರಿಂದ ಶುದ್ಧಿಯನ್ನು ಉಂಟುಮಾಡುವ ಸಾಧನಗಳಲ್ಲಿ ಅತಿಮುಖ್ಯವಾದುದು ದಾನವಾಗಿದೆ. ದಾನವು ಹೇಗಿರಬೇಕು? ಯಾವ ದಾನ ಶ್ರೇಷ್ಠವಾದುದು?  ಎಂಬುದಕ್ಕೆ ಶ್ರೀರಂಗಮಹಾಗುರುಗಳು ಈ ಮಾತನ್ನು ಹೇಳುತ್ತಿದ್ದರು "ಭೂತದಯೆ ಪಶ್ಚಾತ್ತಾಪಗಳಿಂದ ಯಾರಿಗೆ ಬೇಕಾದರೂ ದಾನ ಮಾಡಬಹುದು. ಅದು ಸರಿ. ಆದರೆ ಬ್ರಹ್ಮಾರ್ಪಿತವಾಗಬೇಕಾದರೆ ಜ್ಞಾನಿಗೇ ಕೊಡಬೇಕು. ಮೊದಲನೆಯದಕ್ಕೆ ಒಂದು ರೂಪಾಯಿ ಕೊಡಬಹುದು. ಆದರೆ ಭಗವಂತನು ಅಪೇಕ್ಷಿಸುವುದು ಮನೋಧರ್ಮವನ್ನು" ಎಂದು. ಎಲ್ಲದಕ್ಕಿಂತ ಮನೋಧರ್ಮ ಬೇಳೆಯಬೇಕಾದುದು ಮುಖ್ಯ. ದಾನವು ಅದನ್ನು ಬೆಳೆಸುತ್ತದೆ. ಆದ್ದರಿಂದ ಉಳಿದ ಪ್ರಾಣಿಗಳಿಗಿಂತ ಮನುಷ್ಯನಿಗೆ ದಾನವನ್ನು ಕರ್ತವ್ಯ ಎಂಬುದಾಗಿ ಹೇಳಲಾಗಿದೆ.   

ಎಂತಹ ದಾನ ಇಂತಹ ಮನೋಧರ್ಮವನ್ನು ಬೆಳೆಸಲು ಸಾಧ್ಯ? ದಾನಗಳಲ್ಲಿ ಸಾತ್ತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನಗಳಿವೆ. ಇಲ್ಲಿ ಮೂರೂ ಬಗೆಯ ದಾನಗಳಲ್ಲೂ ಕೊಡುವುದುಂಟು. ಕೊಟ್ಟಿದ್ದೆಲ್ಲಾ ದಾನವಾಗುವುದಿಲ್ಲ. ದಾನದ ಹಿಂದಿರುವ ಉದ್ದೇಶ ಅತ್ಯಂತ ಪ್ರಧಾನ. ಉದ್ದೇಶ ಒಳ್ಳೆಯದಾಗಿದ್ದರೆ ಮಾತ್ರ ಆ ದಾನ ಸಾತ್ತ್ವಿಕದಾನವಾಗುತ್ತದೆ. ಫಲಾಪೇಕ್ಷೆಯಿಲ್ಲದೇ ಕೇವಲ ಕರ್ತವ್ಯಬುದ್ಧಿಯಿಂದ ದಾನವನ್ನು ಮಾಡಬೇಕು. ಕೀರ್ತಿಕಾಮನೆ ಅಥವಾ ಇನ್ನಾವುದೋ ಅಪೇಕ್ಷೆ ಆ ದಾನದ ಹಿಂದೆ ಇರಬಾರದು. ಅಂತಹ ದಾನವನ್ನು ನಿಸರ್ಗ ನಮಗೆ ಕಲಿಸಿದೆ. ಇಂತಹ ದಾನದಿಂದ ಮಾತ್ರವೇ ಸನ್ಮಮೋಧರ್ಮ ಬೆಳೆಯಲು ಸಾಧ್ಯ. ಇಂತಹ ದಾನ ಮಾತ್ರ ಭಗವದರ್ಪಿತವಾಗಲು ಸಾಧ್ಯ.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.