Tuesday, August 15, 2023

ವ್ಯಾಸ ವೀಕ್ಷಿತ - 50 ಕರ್ಣಾರ್ಜುನರ ನಡುವಿನ ಪೈಪೋಟಿ (Vyaasa Vikshita - 50 Karnarjunara Naduvina Paipoti)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಹೀಗೆ ಹೇಳುತ್ತಿದ್ದ ಆ ಬ್ರಾಹ್ಮಣರಿಗೆ, ನಸುನಗುತ್ತಾ ಅರ್ಜುನನು ಹೇಳಿದನು "ಸುಮ್ಮನೆ ಪ್ರೇಕ್ಷಕರಾಗಿದ್ದುಕೊಂಡು ನೀವು ಪಕ್ಕಕ್ಕೆ ನಿಲ್ಲಿರಿ. ಕೋಪಗೊಂಡ ಸರ್ಪಗಳನ್ನು ಮಂತ್ರಗಳಿಂದ ತಡೆಗಟ್ಟುವುದುಂಟಲ್ಲವೆ? ಹಾಗೆ ಈ ರಾಜರನ್ನು ನನ್ನ ನೂರಾರು ಬಾಣಗಳಿಂದ ತಡೆಗಟ್ಟುವೆ."

ಹೀಗೆ ಹೇಳಿದವನೇ, ಪಣಕ್ಕಾಗಿ ಅಲ್ಲಿಟ್ಟಿದ್ದ ಬಿಲ್ಲನ್ನೇ ಬಗ್ಗಿಸಿ (ಹೆದೆಯೇರಿಸಿ) ನಿಶ್ಚಲವಾದ ಪರ್ವತದಂತೆ ಭೀಮಸೇನನೊಂದಿಗೆ ನಿಂತನು, ಮಹಾಬಲಶಾಲಿಯಾದ ಅರ್ಜುನ. ಕರ್ಣನೇ ಮೊದಲಾದ ಕ್ಷತ್ರಿಯರು ರಣಮದವನ್ನು ಹೊಂದಿದ್ದವರು; ಅವರನ್ನೆದುರಿಸಿದರು ಈ ಭೀಮಾರ್ಜುನರು.

ಯುದ್ಧಮಾಡಲೆದ್ದಿದ್ದ ಆ ರಾಜರು (ಆ ಬ್ರಾಹ್ಮಣರನ್ನು ಕುರಿತು) ಪರುಷವಾದ ಮಾತುಗಳನ್ನಾಡಿದರು(ಪರುಷ ಎಂದರೆ ಕಠೋರ): "ಯುದ್ಧ ಮಾಡಲಿಚ್ಛಿಸುವ ಬ್ರಾಹ್ಮಣನನ್ನು ಸಹ ಯುದ್ಧದಲ್ಲಿ ಕೊಲ್ಲಬಹುದೆಂಬುದನ್ನು ಶಾಸ್ತ್ರಗಳಲ್ಲಿ ಹೇಳಿದೆ". ಹೀಗೆಂಬುದಾಗಿ ಹೇಳಿದವರೇ ಆ ಬ್ರಾಹ್ಮಣರತ್ತ ಒಡನೆಯೇ ಧಾವಿಸಿದರು. ಆಗ ಮಹಾತೇಜಸ್ವಿಯಾದ ಕರ್ಣನು ಅರ್ಜುನನತ್ತ ಸೆಣಸಲು ಇತ್ತ ಬಂದನು. ಅತ್ತ, ಮಹಾಬಲಶಾಲಿಯಾದ ಹಾಗೂ ಮದ್ರದೇಶಪ್ರಭುವಾದ ಶಲ್ಯನು ಭೀಮಸೇನನತ್ತ ಸಾಗಿದನು - ಹೆಣ್ಣಾನೆಯೊಂದಕ್ಕೋಸ್ಕರ ಒಂದು ಗಂಡಾನೆಯು ಮತ್ತೊಂದು ಗಂಡಾನೆಯ ಮೇಲೆ ಸೆಣಸಲು ಸಾಗುವ ಹಾಗಿತ್ತು ಆ ದೃಶ್ಯ. ದುರ್ಯೋಧನಪ್ರಭೃತಿಗಳೆಲ್ಲರೂ ಬ್ರಾಹ್ಮಣರೊಂದಿಗೆ ಪ್ರತಿಯುದ್ಧಮಾಡಿದರು: ಕಷ್ಟವನ್ನೇ ಪಡದೆ, ಮೃದುವಾಗಿಯೇ ಅವರೊಂದಿಗೆ ಯುದ್ಧಮಾಡಿದರು.

ಆದರೆ  ಮತ್ತೊಂದೆಡೆ,  ಬಲಶಾಲಿಯಾದ ಧನುಸ್ಸನ್ನು ಹೆದೆಯೇರಿಸಿ ತನ್ನ ಮೇಲೇರಿ ಬರುತ್ತಿದ್ದ ಸೂರ್ಯಪುತ್ರ ಕರ್ಣನನ್ನು ತನ್ನ ಶಿತವಾದ (ಎಂದರೆ ಚೂಪಾದ) ಬಾಣಗಳಿಂದ ಘಾಸಿಗೊಳಿಸಿದನು, ಅರ್ಜುನ. ವೇಗದಿಂದ ಬರುತ್ತಿದ್ದ ಹಾಗೂ ತೀಕ್ಷ್ಣತೇಜಸ್ಸುಳ್ಳ ಆ ಬಾಣಗಳ ವೇಗದಿಂದಾಗಿ ಕರ್ಣನು ಮೂರ್ಛೆಗೊಳ್ಳುವುದರಲ್ಲಿದ್ದನು.

ಆದರೂ ಅರ್ಜುನನತ್ತ ಮಹಾಕಷ್ಟದಿಂದಲೇ ಸಾಗಿದನು. ಇಬ್ಬರೂ ಜಯಶಾಲಿಗಳೇ. ಇಬ್ಬರ ಹಸ್ತಲಾಘವವೂ (ಎಂದರೆ ಕೈಚಳಕವೂ) ಸಮಾನವೇ. ಪರಸ್ಪರ ಸೋಲಿಸುವ ಬಯಕೆ ಇಬ್ಬರಲ್ಲೂ ಇದ್ದದ್ದೇ. ಅಂತೂ ಮಹಾಕ್ರೋಧದಿಂದಲೇ ಇಬ್ಬರೂ ಸೆಣಸಿದರು. ಇಬ್ಬರೂ ಒಬ್ಬರನ್ನೊಬ್ಬರು ಮೂದಲಿಸುತ್ತಿದ್ದರು : "ನಿನ್ನ ಅಸ್ತ್ರಕ್ಕೆ ನನ್ನ ಪ್ರತ್ಯಸ್ತ್ರ ಹೇಗಿದೆ, ನೋಡು! ಅದಿರಲಿ, ನನ್ನ ತೋಳ್ಬಲ ನೋಡು!" ಎಂದು ಮುಂತಾಗಿ ಶೌರ್ಯಸೂಚಕವಾದ ಮಾತುಗಳು ಅವರಿಂದ ಹೊಮ್ಮುತ್ತಿದ್ದ್ದವು. ಬರಬರುತ್ತಾ ಕರ್ಣನಿಗೆ ಗೊತ್ತಾಯಿತು, ಅರ್ಜುನನ ಭುಜಗಳ ವೀರ್ಯವು ಭೂಲೋಕದಲ್ಲೇ ಅದೆಷ್ಟು ಅಪ್ರತಿಮವಾಗಿದೆ! - ಎಂಬುದು (ಯಾವುದಕ್ಕೆ ಪ್ರತಿಮೆ, ಅರ್ಥಾತ್ ಸರಿಸಾಟಿ, ಇಲ್ಲವೋ ಅದು ಅಪ್ರತಿಮ; ಅನುಪಮ). ಕರ್ಣನು ಇದನ್ನರಿತು ಕ್ರೋಧಪೂರ್ವಕವಾಗಿ ಅವನೊಡನೆ ಯುದ್ಧಗೈದನು. ಅರ್ಜುನನಿಂದ ಬರುತ್ತಿದ್ದ ವೇಗಶಾಲಿ ಬಾಣಗಳನ್ನು ಪ್ರತಿಹನನ ಮಾಡಿ, ಉಚ್ಚವಾಗಿ (ಎಂದರೆ ಗಟ್ಟಿಯಾಗಿ) ಗರ್ಜಿಸಿದನು. ಸೈನಿಕರು ಇದನ್ನು ಮೆಚ್ಚಿಕೊಂಡರು.

ಆಗ ಕರ್ಣನು ಹೇಳಿದನು: ಅಯ್ಯಾ, ಬ್ರಾಹ್ಮಣರಲ್ಲಿ ಮುಖ್ಯನಾದವನೇ! ಯುದ್ಧದಲ್ಲಿಯ ನಿನ್ನ ಭುಜವೀರ್ಯಕ್ಕೆ ನನಗೆ ಸಂತೋಷವಾಗಿದೆ! ನೀನು ಉತ್ಸಾಹಗುಂದದೆ ಹೋರಾಡಿರುವೆ; ನಿನ್ನ ಶಸ್ತ್ರಗಳ ಹಾಗೂ ಅಸ್ತ್ರಗಳ ಪ್ರಯೋಗವನ್ನು ಕಂಡೂ ತುಷ್ಟನಾಗಿದ್ದೇನೆ. ನೀನೇನು ಸಾಕ್ಷಾದ್ ಧನುರ್ವೇದವೇ ಆಗಿರುವೆಯಾ? ಅಥವಾ ಸಾಕ್ಷಾತ್ ಪರಶುರಾಮನೇಯೇಯೋ? ಅಥವಾ ಇಂದ್ರನೋ, ಅಥವಾ ಸಾಕ್ಷಾದ್ ವಿಷ್ಣುವೇ ಆಗಿರುವೆಯೋ? ನನಗೆ ಹೀಗೆ ತೋರುತ್ತಿದೆ: ನಿನ್ನ ವಾಸ್ತವರೂಪವನ್ನು ಬಚ್ಚಿಡಲೆಂದು ಬ್ರಾಹ್ಮಣವೇಷವನ್ನು ಧರಿಸಿ ನನ್ನ ಮೇಲೆ ಯುದ್ಧ ಮಾಡುತ್ತಿರುವೆ!

ಸೂಚನೆ : 13/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.