Monday, August 7, 2023

ಅರಿಷಡ್ವರ್ಗಗಳನ್ನು ಹರಿ ಷಡ್ವರ್ಗಗಳನ್ನಾಗಿ ಮಾಡಿಕೊಳ್ಳುವುದು ಹೇಗೆ? (Arisadvargagalannu Hari Sadvargagalannagi Madikolluvudu Hege?)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)



ಅರಿಷಡ್ವರ್ಗಗಳು ಎಂಬುದಾಗಿ ಆರನ್ನು ಹೇಳಿ ಅವು ನಮ್ಮ ಪತನಕ್ಕೆ ಕಾರಣವಾಗುತ್ತವೆ, ಅವುಗಳ ವಿಷಯದಲ್ಲಿ ನಾವು ಹುಷಾರಾಗಿರಬೇಕು ಎಂದು ಅನೇಕ ಮಹಾತ್ಮರು ಹಾಗೂ ನಮ್ಮ ಅನೇಕ ವೈದಿಕ ಸಾಹಿತ್ಯ ಕೃತಿಗಳಲ್ಲಿ ಅರಿಷಡ್ವರ್ಗಗಳ ಅಪಾಯದ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತವೆ. ಆದರೆ ಇನ್ನೊಂದೆಡೆ ನೋಡಿದರೆ, ಸಾಂಖ್ಯದ 96 ತತ್ವಗಳಲ್ಲಿ ಈ ಅರಿಷಡ್ವರ್ಗಗಳು ಅಂದರೆ ಕಾಮ, ಕ್ರೋಧ, ಲೋಭ, ಮೋಹ,ಮದ ಮತ್ತು ಮಾತ್ಸರ್ಯ ಇವುಗಳೂ ಸಹ ಸೇರಿಕೊಂಡಿವೆ.

 ಈ 96 ತತ್ವಗಳು ಭಗವಂತನೇ ಸೃಷ್ಟಿಯಲ್ಲಿ ಸಹಜವಾಗಿಯೇ ಇಟ್ಟಿರುವಂತಹ ವಿಷಯಗಳಾಗಿವೆ. ಹೀಗೆ ಭಗವಂತ ಸೃಷ್ಟಿಯಲ್ಲಿ ಸಹಜವಾಗಿ ಇಟ್ಟಿರುವ ವಿಷಯಗಳು ನಮಗೆ ಅರಿ ಅಂದರೆ ಶತ್ರುಗಳು ಹೇಗಾದವು? ಅರಿ ಎಂದರೆ ಶತ್ರು, ಷಡ್ವರ್ಗ ಎಂದರೆ ಈ ಆರರ ಗುಂಪು. ಹೇಗೆ ಅವು ಶತ್ರುಗಳಾದವು ಎಂಬುದಾಗಿ ವಿಚಾರ ಮಾಡಿದರೆ ಅದರಲ್ಲಿ ಒಂದು ಸೂಕ್ಷ್ಮತೆ ಇದೆ, ಶ್ರೀರಂಗ ಮಹಾಗುರುಗಳು ಅದರ ರಹಸ್ಯವನ್ನು ಬಿಡಿಸಿ ಕೊಟ್ಟಿದ್ದಾರೆ. ಅದೇನೆಂದು ಹೇಳಿದರೆ ಈ ಆರು ಕೂಡ ಯಾವುದೋ ಒಂದು ಪ್ರಮಾಣದಲ್ಲಿ, ಒಂದು ಕಂಡೀಷನ್ ನಲ್ಲಿ ಇದ್ದಾಗ ಅದು ನಮ್ಮ ಜೀವನಕ್ಕೆ ಪೋಷಕವಾಗಿರುತ್ತದೆ. ಆದರೆ ಒಂದು ಪ್ರಮಾಣವನ್ನು ಅದು ಮೀರಿದಾಗ, ಅಥವಾ ಅದರ ಕಂಡೀಷನ್ ಕೆಟ್ಟಾಗ ಅದು ನಮ್ಮ ಪತನಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಗ ಅದು ಅರಿಷಡ್ವರ್ಗಗಳಾಗುತ್ತವೆ ಎನ್ನುವುದು ಗುರುಗಳು ಬಿಡಿಸಿ ಕೊಟ್ಟಿರುವ ಮರ್ಮ. ಯಾವ ಕಂಡಿಷನ್ ನಲ್ಲಿ ಇದ್ದಾಗ ಅವುಗಳು ನಮಗೆ ಪೋಷಕವಾಗಿರುತ್ತವೆ ಅಥವಾ ಅರಿಯಲ್ಲದೇ ಹರಿಷಡ್ವರ್ಗಗಳಾಗುತ್ತವೆ ಎಂಬುದನ್ನು ಒಂದೊಂದಾಗಿ ಗಮನಿಸೋಣ.

ಮೊದಲನೆಯದಾಗಿ ಕಾಮ - ಕಾಮ ಅನ್ನುವುದು ಧರ್ಮಕ್ಕೆ ಅವಿರೋಧವಾಗಿ ಇದ್ದಾಗ ಭಗವತ್ ಕಾಮವಾಗಿದ್ದಾಗ ಅದು ನಮಗೆ ಪೋಷಕವಾಗಿರುತ್ತದೆ. ಭಗವದ್ಗೀತೆಯಲ್ಲಿಯೇ ಕೃಷ್ಣಪರಮಾತ್ಮ'ಧರ್ಮಾವಿರುಧ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ' ಎಂಬುದಾಗಿ ಧರ್ಮಕ್ಕೆ ಅವಿರೋಧವಾದ ಕಾಮ ನಾನೇ ಆಗಿದ್ದೇನೆ ಎಂಬುದಾಗಿ ಹೇಳುತ್ತಾನೆ. ಕಾಮ ಆ ಕಂಡಿಷನ್ ನಲ್ಲಿ ಇದ್ದಾಗ  ಅದು ಪೋಷಕವಾಗಿರುತ್ತದೆ ಅಥವಾ ಹರಿಷಡ್ವರ್ಗಗಳಲ್ಲಿ ಒಂದಾಗಿರುತ್ತದೆ.

 ಹಾಗೆಯೇ ಕ್ರೋಧ - ಕ್ರೋಧ ನಮ್ಮ ಹತೋಟಿಯಲ್ಲಿದ್ದು ಎಲ್ಲಿ ಧರ್ಮಕ್ಕೆ ಚ್ಯುತಿ ಬರುತ್ತಿರುತ್ತದೆಯೋ ಅಲ್ಲಿ, ಅಧರ್ಮದ ವಿರುದ್ಧವಾಗಿ ಅದು ಪ್ರಯೋಗವಾದಾಗ ಆ ಕ್ರೋಧ ಅನ್ನುವುದು ಎಲ್ಲರ ಏಳಿಗೆಗೆ ಕಾರಣವಾಗುತ್ತದೆ. ಉದಾಹರಣೆಗೆ ಪ್ರಭು ಶ್ರೀರಾಮಚಂದ್ರ ರಾವಣನನ್ನು ಸಂಹಾರ ಮಾಡಬೇಕಾದಾಗ ಅಗಾಧವಾದ ಕ್ರೋಧವನ್ನು ತಂದುಕೊಂಡ ಎಂಬುದಾಗಿ ಹೇಳುತ್ತಾರೆ. ಕ್ರೋಧವನ್ನು ತಂದುಕೊಂಡು ಆ ಕ್ರೋಧವನ್ನು ರಾವಣನಮೇಲೆ ಪ್ರಯೋಗ ಮಾಡಿದಾಗ ರಾವಣನ ಸಂಹಾರವಾಗಿ ಅಧರ್ಮ ನಾಶವಾಗುತ್ತದೆ. ಅಲ್ಲಿ ಅಂತಹ ಕ್ರೋಧ ಪೂಜ್ಯ. ಆದರೆ ಯಾವ ಕ್ರೋಧ ನಮ್ಮನ್ನು ಹತೋಟಿಗೆ ತಂದುಕೊಂಡು ನಮ್ಮನ್ನು ಕೆಳಗಡೆ ಇಳಿಸುತ್ತದೆಯೋ, ಬೀಳಿಸುತ್ತದೆಯೋ ಅಂತಹ ಕ್ರೋಧ ತ್ಯಾಜ್ಯ.

ಹೀಗೆ ಲೋಭ - ಲೋಭವೂ ಸಹ ವಸ್ತುಗಳ ಮೇಲಿರುವ ಲೋಭಕ್ಕಿಂತ ತಪಸ್ಸಿನ ಮೇಲೆ ಲೋಭ ಇದ್ದರೆ ಆಗ ನಾವು ಅದನ್ನು ಹೆಚ್ಚು  ಹೆಚ್ಚು ಗಳಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಮಾಡುತ್ತೇವೆ. ಋಷಿಗಳು ತಪೋ ಲೋಭಿಗಳಾಗಿರುತ್ತಾರೆ ಎಂಬುದಾಗಿ ನಮ್ಮ ಸಾಹಿತ್ಯಗಳಲ್ಲಿ ಕಂಡು ಬರುತ್ತದೆ.

ಹಾಗೆಯೇ ಮೋಹ - ಯಾವ ವಿಷಯದಮೇಲೆ ನಮಗೆ ಮೋಹ ಇರುತ್ತದೆಯೋ ಆ ವಿಷಯವನ್ನು ನಾವು ಸಂರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಧರ್ಮಸಮ್ಮತವಾದ ವಿಷಯಗಳು ಉದಾಹರಣೆಗೆ, ಒಬ್ಬ ತಾಯಿಗೆ ತನ್ನ ಮಕ್ಕಳ ಮೇಲೆ ಮೋಹ ಇದ್ದರೆ ಮಾತ್ರವೇ ಆಕೆ ಆ ಸಂತಾನವನ್ನು ರಕ್ಷಣೆ ಮಾಡಿಕೊಂಡು ಪಾಲನೆ, ಪೋಷಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಆದರೆ ಅತಿಯಾದ ವ್ಯಾಮೋಹವಿದ್ದರೆ ಆ ಬೆಳವಣಿಗೆ ವಿರೂಪವಾಗುತ್ತದೆ ಎಂಬುದೂ ಇದೆ. ಅದನ್ನೇ ನಾವು ಸ್ವಲ್ಪ ಇಂಗ್ಲೀಷನಲ್ಲಿ ಹೇಳುವುದಾದರೆ  Love and nurture ಗೂ pampering ಗೂ ಒಂದು ವ್ಯತ್ಯಾಸ ಇರುತ್ತದೆ. ಮೋಹ ಅನ್ನುವುದು ಮಿತಿಮೀರಿದಾಗ ಅದು  pampering ಆಗುತ್ತದೆ. ಇಲ್ಲದೇ ಇದ್ದಾಗ ಅದು  Love and nurture ಅನ್ನುವ ರೀತಿಯಲ್ಲಿದ್ದು ಮಕ್ಕಳ ಬೆಳವಣಿಗೆಗೆ ಪೋಷಕವಾಗಿರುತ್ತದೆ.

ಹೀಗೆಯೇ ಮದ ಅನ್ನುವುದನ್ನು ಇಂದು ಅನೇಕ ರೀತಿಯಲ್ಲಿ ನೋಡುತ್ತೇವೆ, ಅಧಿಕಾರ ಮದ, ಧನ ಮದ  ಇತ್ಯಾದಿಯಾಗಿ. ಇದೂ ಸಹ ಒಬ್ಬ ವ್ಯಕ್ತಿಯನ್ನು ಕೆಳಗಡೆ ಬೀಳುವ ಹಾಗೆ ಮಾಡುತ್ತದೆ.

ಯಾವುದ್ಯಾವುದೋ ಲೌಕಿಕ ವಿಷಯದಲ್ಲಿ ಮದ ಬಿಟ್ಟು ಭಗವಂತನ ವಿಷಯದಲ್ಲಿ ಅದನ್ನು ಇಟ್ಟುಕೊಂಡಾಗ ಅದು ನಮ್ಮನ್ನು ಬೀಳದೆ ಇರುವ ರೀತಿಯಲ್ಲಿ ಕಾಪಾಡುತ್ತದೆ, ಉದ್ಧಾರ ಮಾಡುತ್ತದೆ. ಜ್ಞಾನಿಗಳು ತಾವು ಇಂದ್ರಿಯವಶರಾಗದೇ ಅವುಗಳ ಮೇಲಿದ್ದು ತಮ್ಮ ಇಂದ್ರಿಯ ಸಂಯಮದ ಬಗ್ಗೆ ಒಂದು ಗತ್ತನ್ನು ಹೊಂದಿರುತ್ತಾರೆ. ಯಾರಾದರೂ ಇಂದ್ರಿಯದಾಸರು ತಮ್ಮ ಒಂದು ಅಧಿಕಾರ ಮದವನ್ನೋ ಧನ ಮದವನ್ನೋ ಪ್ರದರ್ಶನ ಮಾಡುತ್ತಿರಬೇಕಾದರೆ ಇವರು ಅದಕ್ಕೆ ಸೋತು ಸುಣ್ಣರಾಗಿ ಹೌದಪ್ಪ  ನೀವು ಬಹಳ ಹಣವಂತರು ಅಥವಾ ನೀವು ಅಧಿಕಾರ ಇರುವವರು ಹಾಗಾಗಿ ನೀವೇ ದೊಡ್ಡವರು ಎಂಬುದಾಗಿ ಹೇಳುವುದಿಲ್ಲ. ನೀವು ಅಧಿಕಾರಿಗಳಾಗಿರಬಹುದು, ಹಣವಂತರಾಗಿರಬಹುದು. ನೀವು ಇಂದ್ರಿಯಗಳಿಗೆ ದಾಸರಾಗಿದ್ದೀರ, ನಾವು ಭಗವಂತನಿಗೆ ದಾಸರಾಗಿದ್ದೇವೆ, ಆದ್ದರಿಂದ ನೀವು ನೀವೇ, ನಾವು ನಾವೇ - ಯೂಯಂ ಯೂಯಮ್, ವಯಂ ವಯಮ್ ಅನ್ನುವ ಒಂದು ಸಾಧುವಾದ ಮದದಿಂದ ಇಂದ್ರಿಯ ಮದವನ್ನು ಗೆಲ್ಲುತ್ತಾರೆ. ಅವರು ಈ ರೀತಿಯ ಮದವನ್ನು ಇಟ್ಟುಕೊಂಡಾಗ, ಆ ಮದವು ಅವರು ಭಗವಂತನಲ್ಲಿ ಹೊಂದಿರುವ ತಾದಾತ್ಮ್ಯವನ್ನು ಕಾಪಾಡುತ್ತದೆ ಹಾಗೂ ಉದ್ದಾರ ಮಾಡುತ್ತದೆ. ಆಗ ಮದ ಅನ್ನುವುದು ಕೂಡ ಹರಿಷಡ್ವರ್ಗ ಆಗುತ್ತದೆ, ಅರಿ(ಶತ್ರು ) ಆಗಿ ಇರುವುದಿಲ್ಲ. 

ಇನ್ನು ಇದೇ ರೀತಿ ನೋಡುವುದಾದರೆ ಮಾತ್ಸರ್ಯ ಆರನೆಯದು. ನಮಗಿಂತ ಒಬ್ಬನು ಚೆನ್ನಾಗಿ ಆಗುತ್ತಿದ್ದಾನೆ ಎಂಬುದಾಗಿ ಅನ್ನಿಸಿದಾಗ ಬರುವಂತಹ ಈರ್ಷ್ಯೆಯೇ ಮಾತ್ಸರ್ಯ. ಮಾತ್ಸರ್ಯ ಅನ್ನುವುದು ಯಾವಾಗ ಕೆಟ್ಟದಾಗಿ ಆಗುತ್ತದೆ ಎಂದರೆ ಅದರ ಮುಂದಿನ ಹೆಜ್ಜೆಯಾಗಿ ಚೆನ್ನಾಗಿರುವನನ್ನು ಕೆಳಗೆಳೆಯಬೇಕು ಎನ್ನಿಸಿದಾಗ. ಮತ್ತು ಎಳೆಯಬೇಕಾದರೆ ಏನು ಮಾಡಬೇಕು ಎಂದು ಯೋಚಿಸಿ ಅದನ್ನು ಮಾಡಿದಾಗ ಅದು ಪಾಪವನ್ನುಂಟು ಮಾಡುತ್ತದೆ. ಆಗ ಅದು ಅರಿಷಡ್ವರ್ಗ, ತಪ್ಪು, ಬೇರೆಯವರಿಗೂ ಹಾನಿಕಾರಕ ಮತ್ತು ನಮಗೂ ಹಾನಿಕಾರಕವಾಗುತ್ತದೆ. ಆದರೆ ಇನ್ನೊಬ್ಬನು ಚೆನ್ನಾಗಿ ಆಗುತ್ತಿದ್ದಾನೆ ಎಂದು ಕಂಡು ಬಂದಾಗ ನಾವೂ ಅವನಂತೆಯೇ ಚೆನ್ನಾಗಿ ಆಗಬೇಕು ಅನ್ನಿಸಿ ಚೆನ್ನಾಗುವ ಕಡೆ ನಮ್ಮ ಒಂದು ಪ್ರಯತ್ನದ ತೀವ್ರತೆ ಹೆಚ್ಚಾದರೆ ಅಂತಹ ಮಾತ್ಸರ್ಯ ಕ್ಷೇಮಕರವಾಗಿದ್ದು ನಮ್ಮ ಏಳಿಗೆಗೆ ಕಾರಣವಾಗುತ್ತದೆ. ಒಬ್ಬನಲ್ಲಿ ಕಲಾವಂತಿಕೆ ಹೆಚ್ಚಿಗೆ ಇರಬಹುದು ಇನ್ನೊಬ್ಬನಲ್ಲಿ ವಿದ್ಯೆ ಹೆಚ್ಚಿರಬಹುದು ಅದನ್ನು ನೋಡಿ ನಮಗೆ ಒಂದು ಮಾತ್ಸರ್ಯ ಉಂಟಾಗಿ ನಾವು ಹೆಚ್ಚಿನ ಪ್ರಯತ್ನಪಟ್ಟು ನಮ್ಮ ವಿದ್ಯೆಗಳನ್ನು ಕಲೆಗಳನ್ನು ಇನ್ನೂ ಶೋಭೆಗೊಳಿಸಿಕೊಳ್ಳಲು ಪ್ರಯತ್ನಿಸಿದರೆ ಆಗ ಅದು ನಮ್ಮ ಏಳಿಗೆಗೆ ಕಾರಣವಾಗುತ್ತದೆ. ಈ ರೀತಿಯಾಗಿ ನೋಡಿದಾಗ ಆಗ ಮಾತ್ಸರ್ಯವೂ ಸಹ ಅರಿಷಡ್ವರ್ಗದಿಂದ ಹರಿಷಡ್ವರ್ಗವಾಗಿ ಮಾರ್ಪಾಡಾಗುತ್ತದೆ. ಹೀಗೆ ಈ ಆರನ್ನೂ ಕೂಡ, ಒಂದು ಚೌಕಟ್ಟಿನಲ್ಲಿ, ಒಂದು ಪ್ರಮಾಣದಲ್ಲಿ ಇಟ್ಟುಕೊಂಡಾಗ ನಮ್ಮ ಜೀವನಕ್ಕೆ ಪೋಷಕವಾಗಿರುತ್ತದೆ. 

ಹೀಗೆ ಅರಿಷಡ್ವರ್ಗಗಳನ್ನು ಹರಿಷಡ್ವರ್ಗಗಳನ್ನಾಗಿ ಮಾಡಿಕೊಂಡು ಸುಂದರ ಜೀವನ ನಡೆಸೋಣ.

ಸೂಚನೆ : 5/8/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.