Monday, July 31, 2023

ಸತ್ಸಹವಾಸದ ಪರಮಫಲ (Satsahavasada Paramaphala)

 ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಭಕ್ತರಲ್ಲಿ ಅಗ್ರಗಣ್ಯನಾದಂತಹ ಪ್ರಹ್ಲಾದ  ಬಾಲ್ಯದಿಂದಲೇ ಸದಾ ವಿಷ್ಣುವನ್ನು ಹೃದಯದಲ್ಲಿ ಧರಿಸಿ ಹರಿನಾಮ ಸ್ಮರಣೆಯಲ್ಲಿಯೇ ಪ್ರತಿ ಕ್ಷಣವನ್ನೂ ಕಳೆಯುತ್ತಿದ್ದಂತಹವನು. ಅವನ ತಂದೆ ಹಿರಣ್ಯಕಶಿಪು ಹರಿದ್ವೇಷಿ. ಅವನು ತನ್ನನ್ನೇ ಸರ್ವೋತ್ತಮ ಎಂದು ಭಾವಿಸಿ, ಇಂದ್ರ, ವರುಣ ಮುಂತಾದ ದೇವತೆಗಳನ್ನು ತಪಸ್ಸಿನ ಬಲದಿಂದ ತನ್ನ ಅಧೀನದಲ್ಲಿರಿಸಿಕೊಂಡು, ರಾಜ್ಯದಲ್ಲಿ ಎಲ್ಲೆಡೆಯಲ್ಲಿಯೂ ತನ್ನ ನಾಮ ಸ್ಮರಣೆಯೇ ಮೊಳಗಬೇಕು, ತನಗೆ ಮಾತ್ರ ಪೂಜೆ ಸಲ್ಲಬೇಕು ಎಂಬ ಕಟ್ಟಪ್ಪಣೆಯನ್ನು ಜಾರಿಗೆ ತರುತ್ತಾನೆ. ಪರಿಣಾಮ, ಎಲ್ಲಾ ದೇಗುಲಗಳಲ್ಲಿ, ಗುರುಕುಲಗಳಲ್ಲಿ ಅವನದೇ ಪೂಜೆ ಅವನದೇ ನಾಮ ಜಪ ನಡೆಯುತ್ತಿರುತ್ತದೆ. ಪುತ್ರನಾದ ಪ್ರಹ್ಲಾದ ಹುಟ್ಟುವಾಗಲೇ ಹರಿಭಕ್ತ.  ಅದರಿಂದ ಚಿಂತಾಕ್ರಾಂತನಾದ ಹಿರಣ್ಯಕಶಿಪು, ಮಗನನ್ನು ಶುಕ್ರಚಾರ್ಯರ ಗುರುಕುಲಕ್ಕೆ ಸೇರಿಸಿ ಇವನು ಸದಾ ನನ್ನ ಗುಣಗಾನವನ್ನೇ ಕೇಳುವಂತೆ  ಹಾಗೂ ಹೇಳುವಂತೆ ಇವನನ್ನು ತಯಾರುಮಾಡಬೇಕು ಎಂದು ಆದೇಶಿಸುತ್ತಾನೆ. ಆ ಕೆಲಸ ಶಂಡ ಹಾಗೂ ಅಮರ್ಕ ಎಂಬ ಅಧ್ಯಾಪಕರ ಪಾಲಿಗೆ ಬರುತ್ತದೆ. ಅವರು ಹಿರಣ್ಯಕಶಿಪುವಿನ ಭಯದಿಂದ ತಮ್ಮ ಶಕ್ತಿ ಮೀರಿ ಪ್ರಯತ್ನವನ್ನು ಮಾಡಿದರೂ ಪ್ರಹ್ಲಾದನ ಬಾಯಿಯಿಂದ ಹರಿನಾಮ ಸ್ಮರಣೆ ಹಾಗೂ ಹರಿಯ ಗುಣಗಾನವನ್ನು ಬಿಟ್ಟು ಬೇರೆಯ ವಿಷಯವನ್ನು ಹೊರತರಲು ಸಾಧ್ಯವೇ ಆಗುವುದಿಲ್ಲ.

ಅಷ್ಟೇ ಅಲ್ಲದೇ ಆ ಗುರುಕುಲದಲ್ಲಿ ಬೆಳೆಯುತ್ತಿರುವ, ಅತ್ಯಂತ ದುಷ್ಟತನವನ್ನು ತುಂಬಿ ಕೊಂಡಿರುವ, ಸದಾ ಪರಸ್ಪರ ಹಿಂಸೆ, ಕಲಹಗಳಲ್ಲೇ ನಿರತರಾದ ಇತರ ರಾಕ್ಷಸ ಪುತ್ರರೂ ಪ್ರಹ್ಲಾದನ ಸಹವಾಸದಿಂದ ದಿನೇ ದಿನೇ ಬದಲಾಗುತ್ತಿರುತ್ತಾರೆ. ಪ್ರಹ್ಲಾದನ ಸಹವಾಸದಿಂದ ಹಾಗೂ ಅವನ ಮುಖಾರವಿಂದದಿಂದ ಹೊರಹೊಮ್ಮುತ್ತಿದ್ದ ಶ್ರೀಹರಿಯ ಕೀರ್ತನೆಯ ಶ್ರವಣದ ಪರಿಣಾಮ, ಅವರಲ್ಲಿದ್ದ ದುರ್ಗುಣಗಳೆಲ್ಲವೂ ಮರೆಯಾಗಿ ಅವರೂ ಕೂಡ ಪ್ರಹ್ಲಾದನಂತೆಯೇ ಶ್ರೀಹರಿಯನ್ನೇ ಧ್ಯಾನಿಸಲು ಪ್ರಾರಂಭಿಸುತ್ತಾರೆ. ಭಗವಂತನ ಸಂಕೀರ್ತನೆಯಲ್ಲಿಯೇ ಕಾಲವನ್ನು ಕಳೆಯುತ್ತಿರುತ್ತಾರೆ. ಹೀಗೆ, ಪ್ರಹ್ಲಾದನ ಸಹವಾಸದ ಪರಿಣಾಮ, ಅವರ ಜೀವನವೂ ಭಗವನ್ಮಯವೇ ಆಗುತ್ತದೆ.


 ಪ್ರತಿಯೊಬ್ಬರ ಜೀವನದಲ್ಲಿಯೂ ಸಹವಾಸ ಅನ್ನುವುದು ಅವರ ಜೀವನದ ಉನ್ನತಿಗೂ ಅಥವಾ ಅಧೋಗತಿಗೂ ಪ್ರಮುಖ ಕಾರಣವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸತ್ಸಹವಾಸವು ಸನ್ಮಾರ್ಗದಲ್ಲಿ ಪ್ರವೃತ್ತಿ ಹೊಂದಲು ಅನುಕೂಲ ಮಾಡಿದರೆ ದುಷ್ಟ ಸಹವಾಸವು ದುರ್ಮಾರ್ಗದಲ್ಲಿ ಪ್ರವೃತ್ತಿ ಹೊಂದಲು ಪ್ರೆರೇಪಿಸುತ್ತದೆ ಎಂಬುದಕ್ಕೆ ನಮ್ಮ ಸುತ್ತ ಮುತ್ತ ಅನೇಕ ಉದಾಹರಣೆಗಳು ಸಿಗುತ್ತವೆ.


ಮಹಾಭಾರತದ ವಿದುರ ನೀತಿಯಲ್ಲಿ ಒಂದು ನುಡಿ ಇದೆ; ದಾರಕ್ಕೆ ಯಾವ ಬಣ್ಣ ಹಾಕಲಾಗುವುದೋ, ಬಟ್ಟೆಯೂ ಅದೇ ಬಣ್ಣದ್ದಾಗಿರುತ್ತದೆ. ಅದರಂತೆಯೇ ಸತ್ಪುರುಷ ದುರ್ಜನ, ತಪಸ್ವಿ, ಕಳ್ಳ ಇವರನ್ನು ಯಾರು ಸೇವಿಸುತ್ತಾರೋ ಅವರು ಸೇವಿಸಲ್ಪಟ್ಟವರಂತೆಯೇ ಆಗುತ್ತಾರೆ, ಅಂದರೆ ಅವರ ಪ್ರಭಾವಕ್ಕೆ ಒಳಗಾಗುತ್ತಾರೆ. ನಾವು ಯಾರ ಸೇವೆಯನ್ನು ಮಾಡುತ್ತೇವೆಯೋ, ಯಾರ ಸಹವಾಸದಲ್ಲಿರುತ್ತೇವೆಯೋ ಅವರ ಗುಣಗಳೆಲ್ಲವೂ  ನೋಡ ನೋಡುತ್ತಿದ್ದಂತೆಯೇ  ನಮ್ಮಲ್ಲೂ ನೆಲೆಗೊಳ್ಳುತ್ತವೆ.


"ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂಬ ಪ್ರಸಿದ್ಧ ನಾಣ್ಣುಡಿ ಇದೆ. ಸಜ್ಜನರು ಎಂದರೆ ತುಂಬಾ ಒಳ್ಳೆಯವರು, ಯಾರ ತಂಟೆಗೂ ಹೋಗದೇ ತಮ್ಮಷ್ಟಕ್ಕೇ ತಾವು ಇರುವವರು ಎಂಬ ಅರ್ಥದಲ್ಲಿ ಈ ಪದವನ್ನು ಬಳಸುತ್ತಾರೆ. ವಾಸ್ತವವಾಗಿ ಸತ್ ರೂಪಿಯಾದ ಪರಮಾತ್ಮವಸ್ತುವನ್ನು ಸದಾ ಹೃದಯದಲ್ಲಿ ಧರಿಸಿ ಧನ್ಯತೆ ಹೊಂದಿರುವವರೇ ಸಜ್ಜನರು. ಅಂತಹವರಿಗೆ ಭಗವಂತನ ಕಲ್ಯಾಣ ಗುಣಗಳೆಲ್ಲವೂ ದಯಪಾಲಿಸಲ್ಪಡುತ್ತದೆ, ಅದೇ ದೈವೀ ಸಂಪತ್ತು. ಪ್ರಹ್ಲಾದ ನಿಜವಾದ ಅರ್ಥದಲ್ಲಿ ಸಜ್ಜನ, ಸದ್ವಸ್ತುವನ್ನು  ತನ್ನ ಹೃದಯದಲ್ಲಿ ಧರಿಸಿ ಸದಾ ಅದರ ಜೊತೆಯಲ್ಲಿಯೇ ರಮಿಸುತ್ತಾ ವಾಸವನ್ನು ಮಾಡುತ್ತಿದ್ದoತಹವನು, ಅವನ ಸಹವಾಸದ ಪರಿಣಾಮ ಜೊತೆಗಾರರಿಗೂ ಉದ್ಧಾರದ ಮಾರ್ಗ ತೆರೆಯಿತು." ಸತ್ಪ್ರವೃತ್ತಿ - ದುಷ್ಟವೃತ್ತಿಗಳೆರಡೂ ಲೋಕದಲ್ಲಿ ನಡೆಯುತ್ತಾ ಬೆಳೆಯುತ್ತಲೇ ಇರುವುದರಿಂದ ಸದ್ರೂಪವಾದ ಆತ್ಮವಸ್ತುವಿಗೆ ಜಾಗಕೊಟ್ಟರೆ ಅದೂ ತನ್ನ ಸ್ವಭಾವದಂತೆ ಬೆಳೆಯುತ್ತಲೇ ಹೋಗುತ್ತದೆ. ಜಾಗವು ಸಿಗದ ಕಾರಣ ಅದು ಹಿಂದೇಟು ಹಾಕುತ್ತದೆ. ಅದಕ್ಕೂ ಜಾಗಕೊಟ್ಟು ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ."ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಹಾಗಾಗಿ ಸತ್ ಪ್ರವೃತ್ತಿಯನ್ನು ನಮ್ಮಲ್ಲಿ ಉಂಟುಮಾಡಿ ಐಹಿಕ ಹಾಗೂ ಪಾರಮಾರ್ಥಿಕ ಜೀವನದ ಉನ್ನತಿಗೆ ಕಾರಣವಾಗುವಂತಹ ಸತ್ಸಹವಾಸವನ್ನೇ ಬಯಸೋಣ; ಸಜ್ಜನರನರಿಂದ 'ಸತ್ಸಹವಾಸದ ಪರಮಫಲ' ಪಡೆಯೋಣ.


ಸೂಚನೆ: 20/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.