Monday, July 24, 2023

ವ್ಯಾಸ ವೀಕ್ಷಿತ - 47 ಅರ್ಜುನನಿಗೆ ಸಂದ ಜಯಮಾಲೆ (Vyaasa Vikshita - 47 Arjunanige Sanda Jayamale)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಬ್ರಾಹ್ಮಣರ ವಾದ ಮುಂದುವರೆಯಿತು: ದುರ್ಬಲರೆನಿಸಿದರೂ ತಮ್ಮ ತೇಜಸ್ಸಿನಿಂದಾಗಿ ವಿಪ್ರರು ಬಲಶಾಲಿಗಳಾಗರೇ? ಹೀಗಿರುವಾಗ ಅವರನ್ನು ಸುಮ್ಮನೆ ಅವಮಾನಿಸುವುದಲ್ಲ. ಪರಶುರಾಮನು ಕ್ಷತ್ರಿಯರನ್ನು ಸೋಲಿಸಿದ ನಿದರ್ಶನವಿಲ್ಲವೇ? ಆದ್ದರಿಂದ, "ಈ ಮಹಾವಟುವು ಬೇಗನೆ ಧನುರಾರೋಪಣ ಮಾಡಲಿ" (ಎಂದರೆ, ಹೆದೆಯೇರಿಸಲಿ) - ಎಂಬುದಾಗಿ ಎಲ್ಲರೂ (ಆಶೀರ್ವಾದೋಕ್ತಿಯನ್ನು) ಹೇಳಿರಿ – ಎಂದರು, ಕೆಲವರು. ಎಲ್ಲರೂ "ತಥಾಸ್ತು" ಎಂದರು.

ಇವರೆಲ್ಲರೂ ಹೀಗೆ ಮಾತನಾಡಿಕೊಳ್ಳುತ್ತಿರಲು, ಅರ್ಜುನನು ಬಿಲ್ಲಿನತ್ತ ಸಾರಿದನು. ದಿಟ್ಟನಾಗಿ ಬೆಟ್ಟದಂತೆ ನಿಂತನು. ಧನುಸ್ಸಿಗೆ ಪ್ರದಕ್ಷಿಣೆ ಮಾಡಿದನು. ವರಪ್ರದನಾದ ಈಶ್ವರನಿಗೆ ಶಿರಸಾ (ಎಂದರೆ ತಲೆಯಿಂದ, ತಲೆಬಾಗಿ) ವಂದಿಸಿದನು. ಕೃಷ್ಣನನ್ನು ಮನಸಾ ನಮಸ್ಕರಿಸಿದನು. ಬಿಲ್ಲನ್ನು ಹಿಡಿದನು.

ಕರ್ಣ, ದುರ್ಯೋಧನ, ಶಲ್ಯ, ಶಾಲ್ವ ಮುಂತಾದ ಧನುರ್ವೇದ-ಪಾರಂಗತರೇ ಕಷ್ಟಪಟ್ಟೂ ಅದನ್ನು ಹೆದೆಯೇರಿಸಲಾಗಿರಲಿಲ್ಲ. ಆದರೆ ಅರ್ಜುನನು ವೀರ್ಯಸಂಪನ್ನರಲ್ಲಿ ಅಗ್ರಗಣ್ಯನೆನಿಸುವ ಇಂದ್ರಪುತ್ರ:  ಕ್ಷಣಮಾತ್ರದಲ್ಲದನ್ನು ಹೆದೆಕಟ್ಟಿದನು, ಪಂಚಬಾಣಗಳನ್ನು ಹೂಡಿದನು. ಇಂದ್ರನಿಗೆ ತಮ್ಮನಾಗಿ ಜನಿಸಿ ಉಪೇಂದ್ರ ಎನಿಸಿಕೊಂಡಿದ್ದನಲ್ಲವೇ ವಿಷ್ಣು? ಆ ವಿಷ್ಣುವಿನ ಶಕ್ತಿಯೆಂತೋ ಅಂತಹುದೇ ಶಕ್ತಿ ಅರ್ಜುನನದೂ, ಆಹಾ!

ಅಂತೂ ಅರ್ಜುನನು ಲಕ್ಷ್ಯವನ್ನು ಭೇದಿಸಿಯೇ ಬಿಟ್ಟನು; ಆ ಲಕ್ಷ್ಯವಾದರೂ ಅತಿವಿದ್ಧವಾಗಿ (ಎಂದರೆ ಛೇದ-ಭೇದಗಳಿಗೊಳಪಟ್ಟು) ನೆಲದ ಮೇಲೆ ಬಿದ್ದಿತು. ಅಂತರಿಕ್ಷದಲ್ಲಿ ಆಗ ನಾದವುಂಟಾಯಿತು; ಅಲ್ಲಿ ನೆರೆದಿದ್ದ ಸಮಾಜದಲ್ಲಿ ದೊಡ್ಡ ಸದ್ದೇ ಆಯಿತು ಕೂಡ!

ದೇವತೆಗಳು ಹೂಮಳೆಯನ್ನು ಕರೆದರು. ಸಾವಿರಾರು ಬ್ರಾಹ್ಮಣರು ತಮ್ಮ ಉತ್ತರೀಯಗಳನ್ನು (ಅದು ತಮ್ಮ ವಿಜಯಧ್ವಜವೆಂಬಂತೆ) ಶತ್ರುಹಂತಕನಾದ ಅರ್ಜುನನ ತಲೆಯ ಮೇಲೆ ಹಾರಾಡಿಸಿದರು!

ಇತ್ತ ಸೋತು ಲಜ್ಜೆಗೊಂಡಿದ್ದ ರಾಜಕುಮಾರರು ಹಾಹಾಕಾರ ಮಾಡಿದರು. ಅತ್ತ ಪುಷ್ಪವೃಷ್ಟಿಯಾಗುತ್ತಿದ್ದರೆ ಇತ್ತ ವಾದಕರು ನಾನಾವಾದ್ಯಗಳನ್ನು ಮೊಳಗಿಸಿದರು. ಸೂತ-ಮಾಗಧಗಣಗಳು (ಎಂದರೆ ಹೊಗಳುಭಟರು) ಸುಸ್ವರದಲ್ಲಿ ಅರ್ಜುನನ್ನು ಸ್ತುತಿಸಿದರು.

ಆತನನ್ನು ಕಂಡ ದ್ರುಪದನು ಸುಪ್ರೀತನಾದನು. ಅಲ್ಲಿಯ ಕೋಲಾಹಲವು ತೀವ್ರವಾಗುತ್ತಿರಲು, ಅರ್ಜುನನಿಗೆ ಸೈನ್ಯದ ಜೊತೆಗಾರಿಕೆ ಬೇಕಾದೀತೆಂದು ಭಾವಿಸಿದನು.

ಸಭೆಯಲ್ಲಿ ಶಬ್ದವು ತೀವ್ರವಾಯಿತು. ಧರ್ಮಿಷ್ಠರಲ್ಲಿ ಶ್ರೇಷ್ಠನೆನಿಸಿದ ಯುಧಿಷ್ಠಿರನು ನಕುಲ-ಸಹದೇವರೊಂದಿಗೆ ತನ್ನ ಡೇರೆಗೇ ಹಿಂದಿರುಗಿಬಿಟ್ಟನು.

ಲಕ್ಷ್ಯಭೇದನವಾಯಿತಷ್ಟೆ. ಅದನ್ನೂ, ಇಂದ್ರನಂತಿದ್ದ ಅರ್ಜುನನನ್ನೂ, ಕೃಷ್ಣೆಯೊಮ್ಮೆ ನೋಡಿದಳು. ಬಿಳಿಯ ಹೂಗಳಿಂದಾದ ವರಮಾಲೆಯನ್ನು ಹಿಡಿದು ಮುಗುಳ್ನಗೆಯೊಂದಿಗೆ ಅರ್ಜುನನತ್ತ ಸಾಗಿದಳು.

ಆಗವಳು ಹೇಗೆ ಕಂಡಳು ? : ಎಷ್ಟೋ ಬಾರಿ ಕಂಡಿದ್ದವರಿಗೂ ಹೊಸಬಳಂತೆ; ನಗುತ್ತಲೇನಿಲ್ಲದಿದ್ದರೂ ನಗುತ್ತಿರುವವಳಂತೆ; ಮದಿಸಿಲ್ಲದಿದ್ದರೂ ತನ್ನೊಳಗಣ ಭಾವಗಳಿಂದಾಗಿ ಹೆಜೆತಪ್ಪುತ್ತಿದ್ದವಳಂತೆ; ಮಾತಾಡುತ್ತಿಲ್ಲದಿದ್ದರೂ ತನ್ನ ಕಣ್ಗಳಿಂದಲೇ ಮಾತನಾಡುತ್ತಿದ್ದವಳಂತೆ! ಹೀಗಿದ್ದವಳು ಅರ್ಜುನನಲ್ಲಿಗೆ ಬಂದಳು. ರಾಜರೆಲ್ಲರೂ ನೋಡುತ್ತಿದಂತೆಯೇ ಅರ್ಜುನನ ಕೊರಳಿಗೆ ಮಾಲೆಯನ್ನು ಹಾಕಿದಳು.

ಅದು ಹೇಗಿತ್ತು?: ಶಚಿಯು ಇಂದ್ರನಿಗೆ ಮಾಲೆಯನ್ನು ಹಾಕಿದಂತೆ; ಸ್ವಾಹಾದೇವಿಯು ಅಗ್ನಿದೇವನಿಗೆ; ಲಕ್ಷ್ಮಿಯು ಮುಕುಂದನಿಗೆ; ಉಷೆಯು ಸೂರ್ಯನಿಗೆ; ರತಿಯು ಮದನನಿಗೆ; ಪಾರ್ವತಿಯು ಮಹೇಶ್ವರನಿಗೆ; ಹಾಗೂ ಭೈಮಿಯು (ಎಂದರೆ ದಮಯಂತಿಯು) ನಳನಿಗೆ ಜಯಮಾಲೆಯನ್ನು ಹಾಕಿದಂತೆ!

ಹೀಗೆ ಗೆದ್ದ ಅರ್ಜುನನನ್ನು ಅಲ್ಲಿಯೇ ವಿಪ್ರರೆಲ್ಲ ಆದರಿಸಿದರು. ಅದ್ಭುತಕರ್ಮನಾದ ಅರ್ಜುನನು ಆ ರಂಗದಿಂದ ಹೊರಹೊರಟನು. ಪತ್ನಿಯಾದ ಕೃಷ್ಣೆಯೂ ಆತನನ್ನು ಹಿಂಬಾಲಿಸಿದಳು.


ಸೂಚನೆ : 23
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.