ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸ್ವಯಂವರವನ್ನು ವೀಕ್ಷಿಸುವ ಸಲುವಾಗಿ ರಾಜರುಗಳು ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು. ಪುರಜನರ ಸದ್ದಂತೂ ಸಾಗರದ ಭೋರ್ಗರೆತದಂತೆಯೇ ಇತ್ತು. ಶಿಶುಮಾರದ ಹಾಗೆ (ಎಂದರೆ ಕಡಲಬೆಕ್ಕಿನ ಆಕಾರದಲ್ಲಿ) ಆಸನಗಳು ಸಜ್ಜಾಗಿದ್ದವು. ಅದರ ಶಿರಃಸ್ಥಾನದಲ್ಲಿ ರಾಜರು ಕುಳಿತರು. ಸಮತಟ್ಟಾದ ಭೂಭಾಗದಲ್ಲಿ ಜನಸ್ತೋಮವು ಕಂಗೊಳಿಸುತ್ತಿತ್ತು.
ಸುತ್ತಲೂ ಸೌಧಗಳಿದ್ದವು: ಅಲ್ಲಿಯ ಪ್ರಾಕಾರಗಳೇನು, ದ್ವಾರತೋರಣಗಳೇನು, ವಿಚಿತ್ರವಾದ ವಿತಾನ(ಬಣ್ಣಬಣ್ಣದ ಬಟ್ಟೆಗಳ ಪಟ್ಟಿ)ಗಳೇನು, ಮಂಗಳವಾದ್ಯಗಳೇನು, ಬಹಳ ಬೆಲೆಬಾಳುವ ಅಗುರುಧೂಪಗಳೇನು, ಚಂದನಜಲದ ತೋಯ್ಕೆಯೇನು, ಪುಷ್ಪಹಾರಾಲಂಕಾರಗಳೇನು! - ಎಲ್ಲವೂ ಸುಶೋಭಿತವಾಗಿದ್ದವು. ಅಲ್ಲಿಯ ಪ್ರಾಸಾದಗಳು ಕೈಲಾಸಶಿಖರದಂತಿದ್ದವು; ಆಕಾಶವನ್ನೇ ಕೆರೆಯುವಂತಿದ್ದವು – ಅಷ್ಟೆತ್ತರ!
ಅಲ್ಲಿಯ ಕಿಟಕಿಗಳಿಗೆ ಚಿನ್ನದ ಜಾಲರಿಗಳಿದ್ದವು. ಜಗಲಿಗಳು ಮಣಿಖಚಿತವಾಗಿದ್ದವು. ಹತ್ತಲು ಸುಲಭವೆನಿಸುವ ಮೆಟ್ಟಿಲುಗಳಿದ್ದವು. ಕುಳಿತುಕೊಳ್ಳಲು ಇದ್ದ ಆಸನಗಳಿಗೆ ಒಳ್ಳೊಳ್ಳೆಯ ಹೊದಿಕೆಗಳಿದ್ದವು. ಎಲ್ಲೆಲ್ಲೂ ಹೂವಿನ ಹಾರಗಳು, ಉತ್ತಮವಾದ ಅಗುರುವಿನ ಸುಗಂಧಗಳು! ದೂರದೂರಕ್ಕಿದ್ದ ನೂರು ಬಾಗಿಲುಗಳು, ಒಳ್ಳೊಳ್ಳೆಯ ಶಯ್ಯೆಗಳು, ಒಳ್ಳೊಳ್ಳೆಯ ಆಸನಗಳು! ಪರಸ್ಪರ-ಸ್ಪರ್ಧಿಗಳಾಗಿದ್ದ ರಾಜರುಗಳು ಚೆನ್ನಾಗಿ ಅಲಂಕೃತರಾಗಿದ್ದು ತಮ್ಮ ತಮ್ಮ ಸಿಂಹಾಸನಗಳಲ್ಲಿ ಮಂಡಿಸಿದ್ದರು.
ಮಹಾಸತ್ತ್ವರೂ (ಎಂದರೆ ಮಹಾಬಲಶಾಲಿಗಳೂ) ಮಹಾಪರಾಕ್ರಮರೂ ಆದ ಆ ರಾಜಶ್ರೇಷ್ಠರನ್ನು ಪೌರರೂ ಜಾನಪದರೂ ಕಂಡರು. ಕೃಷ್ಣೆಯನ್ನು (ಎಂದರೆ ದ್ರೌಪದಿಯನ್ನು) ಕಾಣುವ ಹೆಬ್ಬಯಕೆಯಿಂದ ಅವರೆಲ್ಲರೂ ಕಾದು ಕುಳಿತಿದ್ದರು. ಆ ಪಾಂಚಾಲರಾಜನ ಮಹಾಸಮೃದ್ಧಿಯನ್ನು ಕಾಣುತ್ತಾ ಪಾಂಡವರಾದರೂ ಬ್ರಾಹ್ಮಣರೊಂದಿಗೆ ಉಪವಿಷ್ಟರಾದರು. ಇತ್ತ ರತ್ನಾದಿಗಳ ದಾನ, ಅತ್ತ ನಟನರ್ತಕರ ಕಲಾಪ್ರದರ್ಶನ - ಇವುಗಳಿಂದಾಗಿ ಜನಸಂದಣಿ ದಿನದಿನಕ್ಕೆ ಹೆಚ್ಚುತ್ತಿತ್ತು.
ಹದಿನಾರನೆಯ ದಿನ ದ್ರೌಪದಿಯ ಆಗಮನವಾಯಿತು. ಮಂಗಳಸ್ನಾನಾನಂತರ, ಸುಂದರವಸ್ತ್ರದಿಂದಲೂ ಸರ್ವಾಭರಣಗಳಿಂದಲೂ ಭೂಷಿತಳಾಗಿದ್ದ ದ್ರುಪದಜೆಯು, ಸ್ವರ್ಣಮಯವಾದ ಮಾಲೆಯನ್ನು ಹಿಡಿದವಳಾಗಿ, ರಂಗಪ್ರವೇಶವನ್ನು ಮಾಡಿದಳು. ಅಲ್ಲಿ ಉಪಸ್ಥಿತನಿದ್ದ ಶ್ರೇಷ್ಠವಿಪ್ರನಾದ ಸೋಮವಂಶ-ಪುರೋಹಿತನು ಅಗ್ನಿದೇವನಿಗೆ ಆಜ್ಯವನ್ನು ವಿಧಿವತ್ತಾಗಿ ಸಮರ್ಪಿಸಿದನು; ಸ್ವಸ್ತಿವಾಚನವನ್ನು ನಡೆಸಿದನು. ಅದಾಗುತ್ತಿದ್ದಂತೆಯೇ ಎಲ್ಲೆಡೆ ವಾದ್ಯಗಳನ್ನು ನಿಲ್ಲಿಸುವುದಾಯಿತು; ಸಭೆಯು ನಿಃಶಬ್ದವಾಯಿತು. ಆ ಸಭೆಗೆ ಕೃಷ್ಣೆಯನ್ನು ಕರೆದುಕೊಂಡು ಧೃಷ್ಟದ್ಯುಮ್ನನು ಬಂದನು; ಮೇಘವೋ ದುಂದುಭಿಯೋ ಎನ್ನುವಂತಿತ್ತು, ಆತನ ಕಂಠಧ್ವನಿ! ಗಂಭೀರವಾದ ಹಾಗೂ ಅರ್ಥವತ್ತಾದ ಈ ಮಾತುಗಳನ್ನು ಆತನು ಸಭೆಯನ್ನುದ್ದೇಶಿಸಿ ಹೇಳಿದನು:
"ಇದೋ ಈ ಧನುಸ್ಸು. ಇಲ್ಲಿವೆ ಬಾಣಗಳು. ಇಲ್ಲಿ ನೆರೆದಿರುವ ರಾಜರುಗಳೇ, ಕೇಳಿರಿ! ಈ ಯಂತ್ರದಲ್ಲೊಂದು ಛಿದ್ರವಿದೆ; ಅದರ ಮೂಲಕ ಈ ಐದು ಚೂಪಾದ ಬಾಣಗಳನ್ನು ಬಳಸಿ ಆಕಾಶದಲ್ಲಿ ಯಂತ್ರಸ್ಥವಾಗಿ ಚಲಿಸುತ್ತಿರುವ ಲಕ್ಷ್ಯವನ್ನು ಭೇದಿಸಬೇಕು. ಕುಲ-ರೂಪ-ಬಲಗಳಿಂದ ಕೂಡಿದ ಯಾವಾತನು ಈ ಮಹಾಕಾರ್ಯವನ್ನು ಮಾಡುವನೋ, ಆತನು ಇಂದೇ ನನ್ನೀ ಸಹೋದರಿಯಾದ ಕೃಷ್ಣೆಯನ್ನು ಭಾರ್ಯೆಯಾಗಿ ಹೊಂದುವನು. ಇದು ಸುಳ್ಳಲ್ಲ" ಎಂದು.
ಇತ್ತ ದ್ರೌಪದಿಗೂ ಅಲ್ಲಿದ್ದ ರಾಜರ ನಾಮ-ಗೋತ್ರ-ಕರ್ಮಗಳನ್ನು ತಿಳಿಸಿದನು; ಸ್ವಯಂವರದ ಸಮಾಪ್ತಿಕ್ರಮವನ್ನು ಕುರಿತಾಗಿಯೂ ಎಲ್ಲರ ಸಮಕ್ಷಮದಲ್ಲಿಯೇ ಹೇಳಿದನು: ಇವರುಗಳೆಲ್ಲಾ ನಿನಗೋಸ್ಕರವಾಗಿಯೇ ಬಂದಿರುವರು; ಲಕ್ಷ್ಯವನ್ನು ಭೇದಿಸಬಲ್ಲವರು ಇವರಲ್ಲಿರುತ್ತಾರೆ; ಯಾವನು ಇದನ್ನು ಭೇದಿಸುವನೋ ಅವನನ್ನು ನೀನು ವರಿಸು – ಎಂದನು.
ಸೂಚನೆ : 02/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.