ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಇದೋ ಬಲಶಾಲಿಗಳಾದ ಧೃತರಾಷ್ಟ್ರನ ಮಕ್ಕಳು ಬಂದಿರುವರು: ದುರ್ಯೋಧನ, ದುರ್ವಿಷಯ, ದುರ್ಮುಖ, ದುಷ್ಪ್ರಧರ್ಷಣ, ದುಃಶಾಸನ, ವಿವಿಂಶತಿ, ವಿಕರ್ಣ, ವಿರೋಚನ, ವಿಕಟ, ತುಹುಂಡ ಮೊದಲಾದವರು. ಇವರೊಂದಿಗೆ ಕರ್ಣನೂ ಇದ್ದಾನೆ. ಅಲ್ಲದೆ ಇದೋ ಇತ್ತ ಶಕುನಿ, ಬೃಹದ್ಬಲ ಮೊದಲಾದ ಗಾಂಧಾರದೇಶದ ರಾಜಕುಮಾರರಿದ್ದಾರೆ. ಇಲ್ಲಿ ಅಶ್ವತ್ಥಾಮ, ವಿರಾಟಪುತ್ರನಾದ ಉತ್ತರ, ಚೇಕಿತಾನ, ಪೌಂಡ್ರಕವಾಸುದೇವ, ಭಗದತ್ತ, ಮದ್ರದೇಶದ ಶಲ್ಯ ಮತ್ತು ಆತನ ಇಬ್ಬರು ಮಕ್ಕಳು, ಅಲ್ಲದೆ ಸೋಮದತ್ತ, ಭೂರಿಶ್ರವ, ಜೊತೆಗೆ ಕೃಷ್ಣ-ಬಲರಾಮರು, ಅಕ್ರೂರ, ಸಾತ್ಯಕಿ, ಉದ್ಧವರಿರುವರು. ವೃಷ್ಣಿವಂಶದ ಕೃತವರ್ಮ, ಉಶೀನರ, ಝಿಲ್ಲೀಪಿಂಡಾರಕ – ಇವರುಗಳೂ, ಅತ್ತ ಸೈಂಧವ ಜಯದ್ರಥ, ಚಿತ್ರಾಂಗದ, ಶಿಶುಪಾಲ ಹಾಗೂ ಜರಾಸಂಧ - ಮುಂತಾದ ಅನೇಕ ರಾಜಕುಮಾರರೂ ಬಂದಿರುವರು.
ಇವರುಗಳು ಮಾತ್ರವಲ್ಲದೆ, ಮತ್ತೂ ಹಲವು ಜನಪದಪ್ರಭುಗಳು ನಿನಗಾಗಿ ನೆರೆದಿರುವರು, ಭದ್ರೆ! (ಭದ್ರೆ ಎಂದರೆ ಮಂಗಳವನ್ನುಂಟುಮಾಡುವವಳು). ಇವರಲ್ಲಿ ಲಕ್ಷ್ಯವನ್ನು ಯಾವನು ಭೇದಿಸುವನೋ ಆತನನ್ನು ನೀನು ವರಿಸತಕ್ಕದ್ದು - ಎಂದನು.
ಅಲ್ಲಿ ಸೇರಿದ್ದ ಅರಸರು ಹೇಗಿದ್ದರು! ಯುವಕರು, ಅಲಂಕರಿಸಿಕೊಂಡಿದ್ದವರು, ಪರಸ್ಪರಸ್ಪರ್ಧಿಗಳು; ಅಸ್ತ್ರವಾಗಲಿ, ಬಲವಾಗಲಿ ತಮ್ಮಲ್ಲೇ ಹೆಚ್ಚೆಂದು ಭಾವಿಸಿದ್ದವರು; ರೂಪ-ವೀರ್ಯ-ಕುಲ-ಶೀಲ-ಧನ-ಯೌವನಗಳಿಂದಾಗಿ ಉತ್ಕಟವಾದ ದರ್ಪವನ್ನು ಹೊಂದಿದ್ದವರು. ಎಂದೇ ಹಿಮಾಲಯದಲ್ಲಿ ಕಾಣಸಿಗುವ ಮದಗಜಗಳಂತೆ ತೋರುತ್ತಿದ್ದವರು! ಮದಮಾತ್ರವಲ್ಲದೆ ಕಾಮೋನ್ಮಾದವೂ ಅವರಲ್ಲಿ ತುಂಬಿತ್ತು: ಕೃಷ್ಣೆಯು ನನ್ನವ(ಳಾಗತಕ್ಕವ)ಳೇ ಎಂಬ ಅವಳನ್ನು ಕುರಿತಾದ ಅಭಿಮಾನವು ಅವರಲ್ಲೊಬ್ಬೊಬ್ಬರಲ್ಲೂ ತುಂಬಿಹರಿಯುತ್ತಿತ್ತು. ಆ ಭಾವದೊಂದಿಗೆ ರಂಗಮಂಡಪಕ್ಕೆ ಬಂದ ಅವರಿಂದಾಗಿ, ಉಮೆಯನ್ನು ವಿವಾಹವಾಗಲೆಂದು ಬಂದ ದೇವಸ್ತೋಮವೇ ನೆರೆದಂತಿತ್ತು.
ಪರಸ್ಪರಸ್ನೇಹಭಾವವಿದ್ದ ರಾಜರೂ ಈಗ ಪರಸ್ಪರದ್ವೇಷಿಗಳಾದರು! ಸ್ವಯಂವರವನ್ನು ವೀಕ್ಷಿಸಲು ವಿಮಾನಗಳಲ್ಲಿ ದೇವಗಣಗಳೇ ಬಂದವು. ಅಲ್ಲಿ ಆಗಮಿಸಿದ್ದ ವೃಷ್ಣಿ ಹಾಗೂ ಅಂಧಕವಂಶಗಳ ಪ್ರಮುಖವ್ಯಕ್ತಿಗಳು ಶ್ರೀಕೃಷ್ಣನ ಅಭಿಪ್ರಾಯವನ್ನು ಅರ್ಥಮಾಡಿಕೊಂಡು ಕೇವಲ ಪ್ರೇಕ್ಷಕರಾಗಿ ಸುಮ್ಮನೆ ಕುಳಿತಿದ್ದರು.
ಶ್ರೀಕೃಷ್ಣನು ಪಂಚಪಾಂಡವರನ್ನು ಗುರುತಿಸಿದನು; ಲಕ್ಷ್ಮಿಗೆ ಎದುರಾಗಿರುವ ಮತ್ತಗಜಗಳೆಂಬಂತೆಯೂ, ಬೂದಿಮುಚ್ಚಿದ ಕೆಂಡಗಳಂತೆಯೂ ಅವರಿದ್ದರು; ಬಲರಾಮನಿಗೆ ಅವರನ್ನು ತೋರಿಸಿದನು; ಬಲರಾಮನೂ ಸಂತೋಷದಿಂದ ಅವರತ್ತ ಕಣ್ಣು ಹಾಯಿಸಿದನು. ಆದರೆ ಇನ್ನಿತರ ರಾಜರು ಕೃಷ್ಣೆಯಲ್ಲಿಯೇ ನೆಟ್ಟಮನಸ್ಸುಳ್ಳವರೂ ಪರಸ್ಪರ ಸ್ಪರ್ಧಾಳುಗಳೂ ಆಗಿದ್ದ ಕಾರಣ ಈ ಪಾಂಡವರನ್ನು ಗುರುತಿಸಲೇ ಇಲ್ಲ. ಪಂಚಪಾಂಡವರಿಗಂತೂ ದ್ರೌಪದಿಯ ವಿಷಯದಲ್ಲಿ ತೀವ್ರಾಪೇಕ್ಷೆಯೇ ಉಂಟಾಯಿತು.
ಅಲ್ಲಿದ್ದ ರಾಜರಲ್ಲಿ ಬಹುಮಂದಿಗೆ ಆ ಧನುಸ್ಸನ್ನು ಮನಸ್ಸಿನಿಂದಲೂ ಹೆದೆಯೇರಿಸಲು ಸಾಧ್ಯವಾಗಲಿಲ್ಲ. ಇನ್ನು ಅದನ್ನೆತ್ತಲು ಹೋದವರು, ಪ್ರಯತ್ನಿಸಿ, ಸಮರ್ಥರಾಗದೆ, ನೆಲದ ಮೇಲೆ ಬಿದ್ದು ಹೊರಳಾಡಿ, ಕಾಂತಿಹೀನರಾಗಿ, ಹಾರಕಿರೀಟಗಳನ್ನು ಬೀಳಿಸಿಕೊಂಡು ನಿಟ್ಟುಸಿರುಬಿಡುತ್ತಾ ತಣ್ಣಗಾದವರೇ. ಅಂತಗಹವರು ಆರ್ತರಾಗಿ ಹಾಹಾಕಾರ ಮಾಡಿದರು. ದ್ರೌಪದಿಯನ್ನು ಕುರಿತಾದ ಅವರಾಸೆಯು ಕಮರಿತು. ಹೀಗಾಗಿ ಆ ರಾಜಮಂಡಲವು ಖಿನ್ನವಾಯಿತು.
ಧನುರ್ಧಾರಿಗಳಲ್ಲಿ ಶ್ರೇಷ್ಠನಾದ ಕರ್ಣನು ಆ ರಾಜರನ್ನೆಲ್ಲಾ ನೋಡುತ್ತಾ ತಾನು ಮುಂದೆ ಹೋದನು. ಶೀಘ್ರವಾಗಿ ಧನುಸ್ಸನ್ನೆತ್ತಿದನು, ಹೆದೆಯೇರಿಸಿದನು, ಮತ್ತು ಬಾಣ ಹೂಡಿದನು. (ಕರ್ಣನು ಧನುಸ್ಸನ್ನೆತ್ತುವ ಪ್ರಸಂಗವು ಮಹಾಭಾರತದ ದಾಕ್ಷಿಣಾತ್ಯ ಪಾಠದಲ್ಲಿ ಕಂಡುಬರುವುದಿಲ್ಲ. ಧನುರ್ಬಾಣಗಳನ್ನು ಕರ್ಣನಿಗೆ ಹೊಂದಿಸಲಾಗಲಿಲ್ಲವೆಂಬುದಾಗಿ ಸಹ ಮುಂದೆ ಉಲ್ಲೇಖವಿದೆ. ಇದನ್ನು ಗಮನಿಸಬೇಕು).
ಸೂಚನೆ : 9/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.