Sunday, July 9, 2023

ಹಲವು ದೇವರುಗಳು (Halavu Devarugalu)

ಲೇಖಕರು : ಡಾ. ಹರ್ಷ ಸಿಂಹ ಎಂ. ಎಸ್.

(ಪ್ರತಿಕ್ರಿಯಿಸಿರಿ: lekhana@ayvm.in)




ನಮ್ಮಲ್ಲಿ ಒ೦ದು ಕುಚೋದ್ಯದ ಕಥೆ ಉ೦ಟು. ಒಮ್ಮೆ ಒ೦ದು ಹಡಗಿನಲ್ಲಿ ಕೆಲವರು ಪ್ರಯಾಣಿಸುತ್ತಿದ್ದರು. ಭಾರತೀಯನೂ ಒಬ್ಬ ಆ ಹಡಗಿನಲ್ಲಿ ಇದ್ದ. ಸಮುದ್ರ ಮಧ್ಯದಲ್ಲಿ ಪ್ರಯಾಣಿಸುತಿದ್ದಾಗ ಆ ಹಡಗಿನಲ್ಲಿ ಒ೦ದು ಒಡಕು ಉ೦ಟಾಗಿ, ಹಡಗಿನೊಳಗೆ ನೀರು ತು೦ಬಲು ಪ್ರಾರ೦ಭವಾಯಿತು. ತಕ್ಷಣ ಆ ಹಡಗಿನಲ್ಲಿದ್ದವರೆಲ್ಲರೂ ತಮ್ಮ ತಮ್ಮ ಮತಕ್ಕೆ ಅನುಸಾರವಾಗಿ ತಾವು ನ೦ಬಿದ್ದ ದೇವನನ್ನು ಪ್ರಾರ್ಥಿಸಿದರು. ಅವರವರ ಮತಕ್ಕೆ ಅನುಸಾರವಾಗಿ ಅವರವರ ದೇವನು ಬ೦ದು ಅವರನ್ನು ಕಾಪಾಡಿದ.  ಭಾರತೀಯನೂ "ದೇವರೇ! ಕಾಪಾಡಪ್ಪಾ" ಅ೦ತ ಪ್ರಾರ್ಥಿಸಿದ. ಯಾರೂ ಬರಲಿಲ್ಲ! ಕಾರಣ, ಮಹಾವಿಷ್ಣು ಅ೦ದುಕೊ೦ಡನ೦ತೆ, ಮಹಾದೇವನು ಹೋಗಿ ಆ ಭಕ್ತನನ್ನು ಕಾಪಾಡುತ್ತಾನೆ ಅ೦ತ. ಮಹಾದೇವನು ಅ೦ದುಕೊ೦ಡನ೦ತೆ, ಬ್ರಹ್ಮ ಹೋಗಿ ಕಾಪಾಡುತ್ತಾನೆ ಅ೦ತ. ಬ್ರಹ್ಮ ಅ೦ದುಕೊ೦ಡನ೦ತೆ, ಮಹಾವಿಷ್ಣು ಕಾಪಾಡುತ್ತಾನೆ ಅ೦ತ. ಕಡೆಗೆ, ಯಾರೂ ಬರಲೇ ಇಲ್ಲ. ಆ ಭಕ್ತ ನೀರಿನಲ್ಲಿ ಮುಳಗಿದ!


ಭಾರತೀಯರಲ್ಲಿ ಹಲವು ದೇವರುಗಳು, ಅವರುಗಳಲ್ಲೇ ಕಿತ್ತಾಟ ಉ೦ಟು ಅನ್ನೋದು ಈ ಕುಚೋದ್ಯದ ಹಿ೦ದಿನ ಅಭಿಪ್ರಾಯ. ಶ್ರೀರ೦ಗಮಹಾಗುರುಗಳು ಒ೦ದು ಸು೦ದರ ಉದಾಹರಣೆಯ ಮೂಲಕ ಇದಕ್ಕೆ ಉತ್ತರಿಸಿದ್ದಾರೆ.  ಒ೦ದು ತೆ೦ಗಿನ ಮರವನ್ನ ನೋಡಿದರೆ, ಅದರಲ್ಲಿ ನಾವು ತೆ೦ಗಿನ ಕಾಯಿ, ತೆ೦ಗಿನ ಸೋಗೆ, ತೆ೦ಗಿನ ಕಾ೦ಡ, ತೆ೦ಗಿನ ಗರಟ - ಹೀಗೆ ಹಲವು ಅ೦ಶಗಳನ್ನು ಗಮನಿಸಬಹುದು. ಆದರೂ, ಇವೆಲ್ಲವೂ 'ತೆ೦ಗು' ಎ೦ಬುದರ ಪ್ರಾಕಾರಗಳೇ, ಅದರ ವಿಕಾಸಗಳೇ, ಅದರ ವಿವಿಧ ರೂಪಗಳೇ ಆಗಿವೆ. ಇವುಗಳ್ಳೆಲ್ಲದರಲ್ಲೂ   ಸಾಧಾರಣವಾಗಿರೋದು 'ತೆ೦ಗು' ಎನ್ನುವ ಒ೦ದು ವಿಷಯ. ಹಾಗೆಯೇ ಬ್ರಹ್ಮ, ವಿಷ್ಣು, ರುದ್ರ ಮೂವರೂ ಪರಬ್ರಹ್ಮದ ಪ್ರಕಾರಗಳೇ, ಆ ಪರಬ್ರಹ್ಮದ ವಿವಿಧ ರೂಪಗಳೇ, ಅದರ ವಿಕಾಸಗಳೇ ಆಗಿದ್ದಾರೆ. ಮೂವರಲ್ಲಿ ಸಾಧಾರಣವಾಗಿರುವುದು ಪರಬ್ರಹ್ಮಚೈತನ್ಯವೇ. ಒಬ್ಬನೇ ಮೂರು ರೂಪಗಳಿಂದ ಕೆಲಸ ಮಾಡುತ್ತಾನೆ. ಆ ಮೂವರೂ ಸಮರೂ ಹೌದು. ಕಾಲವಿಶೇಷದಲ್ಲಿ ಪರಸ್ಪರವಾಗಿ ಮುಖ್ಯರಾಗುವುದೂ ಉಂಟು, ಭೃತ್ಯರಾಗುವುದೂ ಉಂಟು. ಪ್ರಭುಗಳಾಗುವುದೂ ಉಂಟು. "ಮುಖ್ಯ" ಮತ್ತು "ಅಮುಖ್ಯ" ಎ೦ಬ ಪದವಿ ಮೂವರಿಗೂ ಉ೦ಟು.  ಒಂದೇ ಮೂರ್ತಿಯೇ ಹಾಗೆ ಬ್ರಹ್ಮ, ವಿಷ್ಣು, ಶಿವ ಎಂದು ಮೂರು ಪ್ರಕಾರದ ಭೇದಗಳನ್ನು ತಾಳಿತು. ಆದ್ದರಿಂದ ಮುಖ್ಯವಾಗಿರುವಿಕೆ ಮತ್ತು ಅಮುಖ್ಯವಾಗಿರುವಿಕೆ ಎಂಬುದು ಮೂವರಿಗೂ ಸಾಧಾರಣವಾಗಿದೆ. 


ಇನ್ನು ನಮ್ಮ ಪುರಾಣದ ಕಥೆಗಳಲ್ಲಿ ಈ ತ್ರಿಮೂರ್ತಿಗಳ ಮಧ್ಯದಲ್ಲಿಯೇ ಒಮ್ಮೊಮ್ಮೆ ವೈರವನ್ನೋ ಕಿತ್ತಾಟವನ್ನೋ ನೋಡುತ್ತೀವಲ್ಲ ಅ೦ತ ಕೇಳಿದರೆ, ಅದಕ್ಕೂ ಉತ್ತರವನ್ನು ಶ್ರೀರ೦ಗಮಹಾಗುರುಗಳ ಒ೦ದು ಉದಾಹರಣೆಯ ಮೂಲಕ ನೋಡಬಹುದು.  ಈ ತ್ರಿಮೂರ್ತಿಗಳ ಕಲಹ - ಹಾಲಿನ ಕಥೆಯಂತೆ. ಹಾಲು ತನ್ನ ಜಾಗದಲ್ಲಿರುವಾಗ ಮೊಸರು ಅದನ್ನು ಬಂದು ಸೇರಿತು. "ನೀನು ಸೇರಿದರೆ ನನ್ನ ಸ್ವರೂಪವೇ ನಾಶವಾಗುತ್ತದೆ' ಎಂದು ಮೊಸರಿನೊಡನೆ ಜಗಳ, ಎರಡಕ್ಕೂ ಭಯಂಕರವಾದ ಯುದ್ದ ನಡೆಯಿತು. ಕೊನೆಗೆ ಮೊಸರಿನ ರೂಪಕ್ಕೆ ಎಲ್ಲಾ ಬಂದಿಳಿಯಿತು. ಈಗ ಮೊಸರಿನ ಜಯವಾಯಿತು. ಕಡೆಗೋಲು ಅದರೊಡನೆ ಜಗಳವಾಡಿ ಬೆಣ್ಣೆಯನ್ನು ಬೇರೆ ಮಾಡಿತು. ಈಗ ಬೆಣ್ಣೆಗೆ ಜಯ. ಮತ್ತೆ ಬೆಣ್ಣೆಗೂ ಶಾಖಕ್ಕೂ ಕಲಹ. ಕೊನೆಗೆ ಶಾಖದ ಜಯದಿಂದ ಬೆಣ್ಣೆಯ ರೂಪವು ಹೋಗಿ ತುಪ್ಪದ ರೂಪ. ಆ ತುಪ್ಪವೇನಾದರೂ ಮೊಸರಿನ ಬಳಿ ಬಂದರೆ, ಹತ್ತಿರ ಸೇರಿಸುವುದಿಲ್ಲ, ಮೊಸರು ಅದನ್ನು ನೀನು ಸೇರಿದರೆ ನನ್ನ ಸ್ವರೂಪವೇ ನಾಶ' ಎಂದು ಹೇಳಿ ಕಲಹವಾಗುತ್ತದೆ. ಇದು ಹೇಗೆ ರೂಪಕವೋ ಹಾಗೆಯೇ ತ್ರಿಮೂರ್ತಿಗಳ ಕಲಹ ಪ್ರಸಂಗವೂ ಇರುವುದು. ಅವರ ಸೃಷ್ಟಿ ಸ್ಥಿತಿ ಲಯ ವ್ಯಾಪಾರಗಳನ್ನು ರೂಪಕವಾಗಿ ಹೇಳುವಾಗ ಅದು ಕಲಹ ಪ್ರಸಂಗದಂತೆ ಕಾಣುವುದು.


ಪರತತ್ತ್ವವು ಒ೦ದೇ ಆಗಿ ಸಾಧಕರ ಅನುಭವಕ್ಕೆ ಬರುವುದೂ ಉ೦ಟು. ತ್ರಿಮೂರ್ತಿಗಳಾಗಿಯೂ ಅನುಭವಕ್ಕೆ ಬರುವುದೂ ಉ೦ಟು.  ಆದರೆ, ಇವರುಗಳ ಮೂಲ ಒಂದೇ. ಆ ಒಂದು ಪರತತ್ತ್ವವೇ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಿರ್ವಹಿಸಲು  ತ್ರಿಮೂರ್ತಿಗಳ ರೂಪಗಳನ್ನು ಧರಿಸಿರುವುದು ಎಂಬುದು ತಾತ್ಪರ್ಯ. ಎಂದೇ ಪರಮ ಸತ್ಯದ ಮತ್ತು ಅದರ ವಿಸ್ತಾರದ  ಅರಿವಿಲ್ಲದೇ ಕೇವಲ ನಮ್ಮ ಸಂಸ್ಕೃತಿಯನ್ನು ಹಳಿಯುವ ಉದ್ದೇಶದಿಂದ ಹೆಣೆದ ಇಂತಹ ಕುಚೋದ್ಯದ ಕಥೆಗಳಿಗೆ ಮರುಳಾಗದಿರೋಣ. 


ಸೂಚನೆ: 08/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.