Thursday, July 20, 2023

ವೈರಾಗ್ಯದಂತಹ ಸಂಪತ್ತನ್ನು ಬೆಳೆಸಿಕೊಳ್ಳುವುದು ಹೇಗೆ? (Vairagyadantaha Sampattannu Belesikolluvudu Hege?)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)



 ಪ್ರಭು ಶ್ರೀರಾಮಚಂದ್ರನ ಪೂರ್ವಜರಲ್ಲಿ ನಡೆದಂತಹ ಒಂದು ಕಥೆ, ಶ್ರೀರಂಗ ಮಹಾಗುರುಗಳು ಭಾರತೀಯ ಸಂಸ್ಕೃತಿಯಲ್ಲಿ ಇರುವಂತಹ ವೈರಾಗ್ಯ ಮತ್ತು ನಿ:ಸ್ಪೃಹತೆಯ ವಿಷಯದಲ್ಲಿ ಈ ಪ್ರಸಂಗವನ್ನು ಎತ್ತಿ ಹೇಳುತ್ತಿದ್ದರು.

 ಹಿಂದೊಮ್ಮೆ ವರತಂತು ಎನ್ನುವಂತಹ ಆಚಾರ್ಯರ ಗುರುಕುಲದಲ್ಲಿ ಕೌತ್ಸ ಎನ್ನುವ ಶಿಷ್ಯ ತನ್ನ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಆಚಾರ್ಯರ ಪರಮ ಪ್ರೀತಿಗೆ ಕಾರಣನಾಗಿರುತ್ತಾನೆ. ಗುರುಗಳ ಬಳಿ ನನ್ನ ವಿದ್ಯಾಭ್ಯಾಸವೆಲ್ಲಾ ಮುಗಿಯಿತು ನಾನು ತಮಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತಿದ್ದೇನೆ ಏನನ್ನು ಕೊಡಲಿ ಎಂದು ಕೇಳುತ್ತಾನೆ. ಆಗ ಅವನ ಬಗ್ಗೆ ಅತ್ಯಂತ ಸಂಪ್ರೀತರಾಗಿದ್ದಂತಹ ಗುರುಗಳು ಏನೂ ಬೇಡಪ್ಪ ಇದುವರೆಗೂ ನೀನು ನನ್ನ ಸೇವೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀಯ, ವಿದ್ಯೆಯನ್ನು ತುಂಬಾ ಚೆನ್ನಾಗಿ ಗ್ರಹಣ ಮಾಡಿದ್ದೀಯ ಹಾಗಾಗಿ ನನಗೆ ನಿನ್ನ ಬಗ್ಗೆ ಸಂತೋಷ ಉಂಟಾಗಿದೆ ಇನ್ನೇನೂ ಬೇಡ ಎಂದು ಹೇಳುತ್ತಾರೆ. ಅವರು ಹಾಗೆ ಹೇಳಿದ ಮೇಲೆಯೂ ಕೂಡ ಕೌತ್ಸ ಪದೇ ಪದೇ ಅವರನ್ನು ಪೀಡಿಸುತ್ತಾನೆ, ಇಲ್ಲ ಗುರುಗಳೇ ನಾನು ಏನಾದರೂ ಒಂದು ಗುರುದಕ್ಷಿಣೆ ಕೊಡಲೇಬೇಕು ನಿಮಗೆ ಏನನ್ನು ಕೊಡಲಿ ಹೇಳಿ ಹೇಳಿ ಎಂದು. ಆಗ ವರತಂತುಗಳಿಗೆ ನಾನು ಇಷ್ಟು ಬೇಡ ಎಂದರೂ ಇವನು ಪೀಡಿಸುತ್ತಿದ್ದಾನಲ್ಲ ಎಂದು ಒಂದು ಸಾತ್ವಿಕವಾದ ಕೋಪ ಉಂಟಾಗುತ್ತದೆ. ಆಗ ಅವನನ್ನು ಕುರಿತು ನೋಡು ನೀನು 14 ವಿದ್ಯೆಗಳನ್ನು ನನ್ನಿಂದ ಕಲಿತಿದ್ದೀಯಾ ಹಾಗಾಗಿ 14 ಮಣ ಚಿನ್ನವನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ಕೌತ್ಸ ಒಬ್ಬ ಬಡ ಬ್ರಾಹ್ಮ; ಬಡವರ ಮನೆಯಿಂದ ಬಂದಂತಹ ವಿದ್ಯಾರ್ಥಿ,ಅವನು 14 ಮಣ ಚಿನ್ನವನ್ನು ಎಲ್ಲಿಂದ ತರುವುದು? ಆದರೆ ಅವನು ವಿದ್ಯಾವಂತನೂ ಆದುದರಿಂದ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಆಗ ಶ್ರೀರಾಮಚಂದ್ರನ ಪೂರ್ವಜನಾದ ರಘು ಮಹಾರಾಜ ಭೂಮಿಯನ್ನು ಆಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ಚಿನ್ನವನ್ನು ಕೇಳೋಣ ಎಂದು ಕೌತ್ಸನು ಯೋಚಿಸಿ ಅವನ ಬಳಿಗೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ರಘುವಿನ ಆಸ್ಥಾನದಲ್ಲಿ ರಘು ಆಗತಾನೆ ಒಂದು ದೊಡ್ಡ ಯಾಗವನ್ನು ಮಾಡಿ ಅನೇಕ ವಿಧವಾದ ದಾನದಕ್ಷಿಣೆಗಳನ್ನೆಲ್ಲಾ ಕೊಟ್ಟು ಬರಿಗೈಯಲ್ಲಿ ಇರುತ್ತಾನೆ. ಕೌತ್ಸ ಹೋದಾಗ ಅವನಿಗೆ ಚಿನ್ನದ ಪಾತ್ರೆಯಲ್ಲಿ ಸತ್ಕಾರ ಮಾಡುವ ಬದಲು ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂದು ಅದರಲ್ಲಿ ಕೌತ್ಸನಿಗೆ ಕಾಲು ತೊಳೆದು ಉಪಚಾರವನ್ನು ಮಾಡಿ,ಏನು ಬಂದಿದ್ದೀರಿ ?ಎಂದು ಕೇಳುತ್ತಾನೆ. ಆಗ ಕೌತ್ಸ ಇವನ ಹತ್ತಿರವೇ ಮಣ್ಣಿನ ಪಾತ್ರೆ ಇದೆ ಇನ್ನು ನನಗೆ ಚಿನ್ನ ಎಲ್ಲಿಂದ ಕೊಡುತ್ತಾನೆ ಎಂದು ಯೋಚಿಸಿ ಏನಿಲ್ಲ ಸುಮ್ಮನೆ ನಿನ್ನನ್ನು ನೋಡೋಣ ಎಂದು ಬಂದೆ ಎಂದು ಹೇಳಿ ಹೋಗಿ ಬರುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ಧವಾಗುತ್ತಾನೆ. ಆದರೆ ರಘು ಮಹಾರಾಜ ಇಂಗಿತಜ್ಞ, ಕೌತ್ಸನ ಮುಖವನ್ನು ನೋಡಿದಾಗಲೇ ಇವನು ಸುಮ್ಮನೆ ಬಂದಿಲ್ಲ ನಿರ್ನಿಮಿತ್ತವಾಗಿ ಬಂದಿಲ್ಲ ಏನೋ ಒಂದು ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದಾನೆ ಎಂದು ಅವನಿಗೆ ಗೊತ್ತಾಗುತ್ತದೆ. ಹೀಗಾಗಿ ರಘು ಮಹಾರಾಜ  ಅವನನ್ನು ಒತ್ತಾಯ ಮಾಡಿ ಕೇಳುತ್ತಾನೆ ಏತಕ್ಕಾಗಿ ಬಂದಿದ್ದೀಯಾ  ಹೇಳು ಎಂದು. ಆಗ ಕೌತ್ಸ ನಡೆದ ಪ್ರಸಂಗವನ್ನು ವಿವರಿಸಿ ಗುರುಗಳು ಕೋಪಿಸಿಕೊಂಡು 64 ಮಣ ಚಿನ್ನವನ್ನು ಕೊಡು  ಎಂದರು ಅದಕ್ಕಾಗಿ ನಿನ್ನ ಬಳಿ ಬಂದೆ ಎಂದಾಗ  ಮಹಾರಾಜ, ಅಷ್ಟೇ ತಾನೇ ನಾನು ಅದಕ್ಕೆ ವ್ಯವಸ್ಥೆ ಮಾಡುತ್ತೇನೆ ನೀನು ಇಲ್ಲಿಯೇ ಉಳಿದುಕೋ ಎಂದು ಹೇಳುತ್ತಾನೆ.

 ಅಂದು ರಾತ್ರಿ ರಘು ಮಹಾರಾಜ ಮನಸ್ಸಿನಲ್ಲಿ ನಾಳೆ ಬೆಳಿಗ್ಗೆ ಕುಬೇರನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಚಿನ್ನವನ್ನು ತೆಗೆದುಕೊಂಡು ಬಂದು ಕೌತ್ಸನಿಗೆ ಕೊಡಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ.

ಕುಬೇರ ಯಕ್ಷರ ರಾಜ, ಅವನು ಕೂಡ ಇಂಗಿತಜ್ಞ; ರಘುವಿನ ಮನಸ್ಸಿನಲ್ಲಿ ಈ ರೀತಿಯ ಒಂದು ಆಲೋಚನೆ ಬಂದ ತಕ್ಷಣವೇ ಅವನಿಗೆ ಗೊತ್ತಾಗುತ್ತದೆ. ಹಾಗೆಯೇ ರಘು ಮಹಾರಾಜನನ್ನು ತಡೆಯುವ ಸಾಮರ್ಥ್ಯವೂ ಅವನಿಗೆ ಇರುವುದಿಲ್ಲ; ಜೊತೆಗೆ ರಘುವಿನ ಯೋಚನೆ ಸಾಧುವಾಗಿಯೇ ಇದೆ, ಒಬ್ಬ ಗುರುವಿಗೆ ಗುರುದಕ್ಷಿಣೆಯನ್ನು ಕೊಡುವುದಕ್ಕಾಗಿ ಬಂದಂತಹವನ ಸಹಾಯಕ್ಕಾಗಿ, ತಾನು ಧನ ಸಂಪಾದನೆ ಮಾಡಲು  ದಂಡೆತ್ತಿ ಬರುತ್ತಿದ್ದಾನೆ, ಅವನ ಯೋಚನೆ ಸಾಧುವಾಗಿಯೇ ಇದೆ ಹಾಗಾಗಿ ಅವನಿಗೆ ಅನುಗ್ರಹವನ್ನು ಮಾಡುವುದೇ ಸರಿ ಎಂದು ಕುಬೇರನು ಯೋಚಿಸಿ ಅಂದು ರಾತ್ರಿಯೇ ರಘುವಿನ ಖಜಾನೆಯನ್ನು ಪೂರ್ತಿಯಾಗಿ ಚಿನ್ನದಿಂದ ತುಂಬಿಸಿಬಿಡುತ್ತಾನೆ. ರಘು ಮಹಾರಾಜ ಮಾರನೆಯ ದಿನ ಬೆಳಿಗ್ಗೆ ಎದ್ದು ನೋಡುತ್ತಾನೆ  ಅವನ ಖಜಾನೆ ಪೂರ್ತಿಯಾಗಿ ತುಂಬಿರುತ್ತದೆ. ಆಗ ಕೌತ್ಸನಿಗೆ ಬೇಕಾದಂತಹ 14 ಗಾಡಿಗಳಲ್ಲಿ ಚಿನ್ನವನ್ನು ತುಂಬಿಸಿ ನೀನು ಇದನ್ನು ನಿನ್ನ ಗುರುವಿಗೆ ತೆಗೆದುಕೊಂಡು ಹೋಗಿ ಕೊಡಬಹುದು ಎಂದು ಹೇಳುತ್ತಾನೆ, ಖಜಾನೆಯಲ್ಲಿ ಇನ್ನಷ್ಟು ಚಿನ್ನ ಹಾಗೆಯೇ ಉಳಿದಿರುತ್ತದೆ, ಇದನ್ನೂ ಗಾಡಿಗೆ ಹಾಕಿಸುತ್ತೇನೆ ಇದನ್ನು ಕೂಡ ನೀನೆ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಆಗ ಕೌತ್ಸ ಇಲ್ಲ ಹಾಗೆ ಮಾಡಲು ಸಾಧ್ಯವಿಲ್ಲ ನಾನು ಗುರುದಕ್ಷಿಣೆ ಕೊಡುವ ಸಲುವಾಗಿ ನಿನ್ನನ್ನು ಕೇಳಿದ್ದು, ಅದನ್ನು ಹೊರತು ಪಡಿಸಿ ಒಂದೇ ಒಂದು ಬಿಡಿಗಾಸನ್ನೂ ಕೂಡ ಹೆಚ್ಚಿಗೆ ನಾನು ತೆಗೆದುಕೊಂಡು ಹೋಗುವುದಿಲ್ಲ ಎನ್ನುತ್ತಾನೆ. ಆಗ ರಘು ಮಹಾರಾಜ, ನೋಡು ಕುಬೇರ ಇಲ್ಲಿ ಧನವನ್ನು ವರ್ಷಿಸಿರುವುದು ನಿನಗೋಸ್ಕರ, ನಿನಗೋಸ್ಕರ ನಾನು ದಂಡೆತ್ತಿ ಹೋಗಬೇಕು ಎಂದಿದ್ದೆ, ನಿನಗೋಸ್ಕರ ಅವನು ಕೊಟ್ಟಿದ್ದಾನೆ, ಆದ್ದರಿಂದ ಇದರಲ್ಲಿ ಒಂದೇ ಒಂದು ಬಿಡಿಗಾಸನ್ನೂ ನಾನು ಇಟ್ಟುಕೊಳ್ಳುವುದಕ್ಕೆ ತಯಾರಾಗಿಲ್ಲ, ಅದು ನನಗೆ ಸೇರಿದ್ದಲ್ಲ ನಿನಗೇ ಸೇರಿದ್ದು ನೀನೇ ತೆಗೆದುಕೊಂಡು ಹೋಗಬೇಕು ಎಂದು ವಾದ ಮಾಡುತ್ತಾನೆ. ಹೀಗೆ ಒಬ್ಬರಿಗೊಬ್ಬರಿಗೆ ಎಷ್ಟು ತೀವ್ರವಾಗಿ ವಾದ ಆಗುತ್ತದೆ ಎಂದರೆ ಇದು ನನಗೆ ಸೇರಿದ್ದಲ್ಲ ಇದು ನನಗೆ ಸೇರಿದ್ದಲ್ಲ ಎಂದು ಇನ್ನೊಬ್ಬರ ವಸ್ತುವನ್ನು ತಮ್ಮದಾಗಿ ಮಾಡಿಕೊಳ್ಳದೇ ಇರುವುದರ ಬಗ್ಗೆ ಅವರು ವಾದ ಮಾಡುತ್ತಿರುತ್ತಾರೆ. ಅಂದರೆ ಅವರಿಗೆ ಇದ್ದಂತಹ ಉತ್ತಮ ಮಟ್ಟದ ವೈರಾಗ್ಯ ಮತ್ತು ನಿ:ಸ್ಪೃಹತೆಯಲ್ಲಿ ಎದ್ದು ಕಾಣುತ್ತದೆ. ನಿ:ಸ್ಪೃಹತೆಯ ಎಂದರೆ, ನಮ್ಮದಲ್ಲದ ವಸ್ತುವಿನ ಜೊತೆ ಮನಸ್ಸು ಸ್ವಲ್ಪವೂ ಅಂಟಿಕೊಳ್ಳದಿರುವಿಕೆ. ವೈರಾಗ್ಯ ಹಾಗೂ  ನಿ:ಸ್ಪೃಹತೆಯಗಳು ಒಂದಕ್ಕೊಂದು ಸಂಬಂಧ ಪಟ್ಟದ್ದು ಹಾಗೂ ವೈರಾಗ್ಯ ಅನ್ನುವುದು ಒಂದು ದೊಡ್ಡ ಸಂಪತ್ತು ಅನ್ನುವ ಕಾರಣದಿಂದ ನಾವು ಆಹಾರ ಸೇವನೆ ಮಾಡಬೇಕಾದರೆ 'ಜ್ಞಾನ ವೈರಾಗ್ಯ ಸಿ ದ್ಧ್ಯರ್ಥಮ್ ಭಿಕ್ಷಾಂ ದೇಹಿ ಚ ಪಾರ್ವತಿ' ಎಂದು ಅನ್ನಪೂರ್ಣಾ ದೇವಿಯನ್ನು ಸ್ತುತಿ ಮಾಡುತ್ತೇವೆ. ಹೀಗಾಗಿ ವೈರಾಗ್ಯದಂತಹ ಸಂಪತ್ತನ್ನು ನಾವು ಬೆಳೆಸಿಕೊಳ್ಳೋಣ, ಜೀವನದಲ್ಲಿ ಉದ್ಧಾರವಾಗೋಣ.  


ಸೂಚನೆ: 20/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.