Sunday, July 16, 2023

ವ್ಯಾಸ ವೀಕ್ಷಿತ - 46 ವಿಪ್ರರ ಮಧ್ಯದಿಂದೆದ್ದ ಅರ್ಜುನ (Vyaasa Vikshita - 46 Viprara Madhyadindedda Arjuna)

ಲೇಖಕರು : ಡಾ|| ಕೆ. ಎಸ್. ಕಣ್ಣನ್
 (ಪ್ರತಿಕ್ರಿಯಿಸಿರಿ lekhana@ayvm.in)ದ್ರೌಪದೀ-ಸ್ವಯಂವರಕ್ಕೆ ನಾನಾದೇಶಾಧಿಪತಿಗಳು ನೆರೆದಿದ್ದರಷ್ಟೆ. ಅವರಲ್ಲಿ, ದ್ರೌಪದಿಯ ವಿಷಯದಲ್ಲಿ ರಾಗವುಳ್ಳವನಾಗಿ ಕರ್ಣನು ಪ್ರತಿಜ್ಞೆಮಾಡುತ್ತಾ ಎದ್ದನು; ಆತನು ಏಳುತ್ತಿರುವಂತೆಯೇ ಪಾಂಡವರು ಆತನೇ ಲಕ್ಷ್ಯವನ್ನು ಭೇದಿಸಿಬಿಡುವನೆಂದು ಭಾವಿಸಿದರು.

ಆದರೆ ಆತನನ್ನು ಕಾಣುತ್ತಲೇ ದ್ರೌಪದಿಯು ಉಚ್ಚಸ್ವರದಲ್ಲಿ ಹೇಳಿದಳು - ನಾನು ಸೂತನನ್ನು ವರಿಸೆ - ಎಂದು. ಇದನ್ನು ಕೇಳಿ, ರೋಷದ ನಗೆಯನ್ನು ನಕ್ಕು, ಬೆಳಗುತ್ತಿದ್ದ ಆ ಧನುಸ್ಸನ್ನು ನೆಲದ ಮೇಲೆಸೆದುಹೋದನು.

ಹೀಗಾಗಿ, ಸುತ್ತ ನೆರೆದಿದ್ದ ಕ್ಷತ್ರಿಯರು ಪರಾಙ್ಮುಖರಾದರು (ಎಂದರೆ, ಹಿಂದಕ್ಕೆ ಸರಿದರು). ಆದರೆ ಯಮನಿಗೆ ಸಮನಾಗಿ ಬಲಶಾಲಿಯಾಗಿದ್ದ ಶಿಶುಪಾಲನ ನಡೆ ಬೇರೆಯದಾಗಿತ್ತು. ಆತನೋ ಚೇದಿದೇಶದ ರಾಜ; ದಮಘೋಷನ ಪುತ್ರ; ಧೀರ ಹಾಗೂ ಮಹಾಮತಿ: ಆದರೂ ಧನುಸ್ಸನ್ನೆತ್ತುತ್ತಲೇ ಮಂಡಿಯೂರಿ ಧರೆಗುರುಳಿದನು!

ಆಮೇಲೆ ಬಂದವನು ಜರಾಸಂಧ. ಆತನೂ ಅಷ್ಟೆ. ಮಹಾಬಲ, ಮಹಾವೀರ್ಯ; ಬಿಲ್ಲಿನ ಬಳಿ ಬಂದು ಅಚಲವಾದ ಗಿರಿಯಂತೆ ನಿಂತ. ಆದರೆ ಧನುಸ್ಸಿನ ಆಘಾತಕ್ಕೆ ತತ್ತರಿಸಿ ಭೂಮಿಗೆ ಮಂಡಿಯಿಟ್ಟು ಬಿದ್ದ. ಬಿದ್ದವನೇ ಎದ್ದು ಸಾಗಿ ತನ್ನ ರಾಜ್ಯವನ್ನೇ ಸೇರಿಕೊಂಡ.

ಆಮೇಲೆ ಬಲಶಾಲಿಯಾದ ಮದ್ರರಾಜನಾದ ಶಲ್ಯನ ಸರದಿ. ಹೆದೆಯೇರಿಸಲಾರದೇ ಮಂಡಿಯಿಕ್ಕಿ ನೆಲಕಚ್ಚಿದ. (ದುರ್ಯೋಧನನೂ ಬಿಲ್ಲನೆತ್ತಲು ಹೋಗಿ ಅಂಗಾತನಾಗಿ ಬಿದ್ದನೆಂದು ಕೆಲವು ಪಾಠಗಳಲ್ಲಿದೆ).

ಧನುಸ್ಸನ್ನು ಹೆದೆಯೇರಿಸುವಲ್ಲಿ ವಿಫಲರಾಗಿ ಯಾವಾಗ ಹಿಂದಿರುಗಿದರೋ, ಆಗ ವಿಪ್ರರ ಮಧ್ಯದಿಂದ ಉದಾರಮತಿಯಾದ ಜಿಷ್ಣುವು (ಜಿಷ್ಣುವೆಂಬುದು ಅರ್ಜುನನ ಮತ್ತೊಂದು ಹೆಸರು) ಎದ್ದುನಿಂತನು. ಇಂದ್ರಧ್ವಜದಂತೆ ಕಂಗೊಳಿಸುತಿದ್ದ ಅರ್ಜುನನು ಹೊರಟುನಿಂತಿದ್ದನ್ನು ಕಂಡ ಕೆಲ ವಿಪ್ರಮುಖ್ಯರು ಆಕ್ರೋಶಗೊಂಡರು, ಅಸಮಾಧಾನಸೂಚಕವಾಗಿ ತಮ್ಮ ಅಜಿನಗಳನ್ನೇ ಇತ್ತಿಂದತ್ತ ಅತ್ತಿಂದಿತ್ತ ಬೀಸಿದರು. ಹೀಗೆ ಕೆಲವರಿಗೆ ಅರ್ಜುನನು ಮಾಡಿದುದು ಸರಿದೋರಲಿಲ್ಲ.

ಆದರೆ ಕೆಲವರಿಗಂತೂ ಸಂತೋಷವೇ ಆಯಿತು. ಅವರಲ್ಲಿ ಬುದ್ಧಿಜೀವಿಗಳಾದ ಕೆಲವರು ಪರಸ್ಪರ ಮಾತನಾಡಿಕೊಂಡರು; ಕರ್ಣ-ಶಲ್ಯ ಮೊದಲದವರು ಕ್ಷತ್ರಿಯರು, ಲೋಕವಿಶ್ರುತರು; ಧನುರ್ವೇದಪರಾಯಣರು; ಬಲಸಂಪನ್ನರು; ಅಂತಹವರಿಗೇ ಬಗ್ಗಿಸಲಾಗದುದನ್ನು ಈ ಬ್ರಾಹ್ಮಣವಟು ಸಾಧಿಸಿಬಿಡುವನೋ?! ಈತನು ಕೃತಾಸ್ತ್ರನೇನಲ್ಲ, ಜೊತೆಗೆ ಕಡಿಮೆ ಪ್ರಾಣಬಲವುಳ್ಳವ ಕೂಡ: ಈತನೆಂತು ಹೆದೆಯೇರಿಸಿಯಾನು? ಬ್ರಾಹ್ಮಣಸಹಜವಾದ ಚಪಲತೆಯಷ್ಟರಿಂದಲೇ ಈತನು ಹೊರಟಿದ್ದು, ಈ ಕಾರ್ಯದಲ್ಲೇನಾದರೂ ಸಫಲನಾಗದೆ ಹೋದಲ್ಲಿ ರಾಜರುಗಳ ಮಧ್ಯದಲ್ಲಿ ನಾವು ಬ್ರಾಹ್ಮಣರು ಅಪಹಾಸ್ಯಕ್ಕೆ ಈಡಾಗುತ್ತೇವೆ, ಅಷ್ಟೆ. ಈತನನ್ನು ತಡೆಯಬೇಕು - ಎಂದುಕೊಂಡರು.

ಮತ್ತೆ ಕೆಲವರು ಹೀಗೆಂದರು: ನಾವು ಕ್ಷತ್ರಿಯರ ಅಪಹಾಸ್ಯಕ್ಕೆ ಈಡಾಗೆವು, ಅವರ ದ್ವೇಷಕ್ಕೂ ತುತ್ತಾಗೆವು. ಇನ್ನು ಕೆಲವರು ಹೀಗೆಂದರು: ಈತನು ಯುವಕ. ಆತನ ತೋಳುಗಳು ಸಲಗದ ಸೊಂಡಿಲಿನ ಹಾಗಿವೆ. ಅವನ ಹೆಗಲು ತೊಡೆ-ತೋಳುಗಳು ತುಂಬಿಕೊಂಡಿವೆ. ಧೈರ್ಯದಲ್ಲಿ ಹಿಮಾಲಯದಂತಿದ್ದಾನೆ. ನಡೆಯಲ್ಲಿ ಸಿಂಹದಂತೆ, ಪರಾಕ್ರಮದಲ್ಲಿ ಮದಗಜದಂತಿರುವವ. ಈತನು ಇದನ್ನು ಸಾಧಿಸುವನೆಂಬುದನ್ನು ಈತನ ಉತ್ಸಾಹದಿಂದಲೇ ಊಹಿಸಬಹುದು. ಅಶಕ್ತನೇ ಆಗಿದ್ದಲ್ಲಿ ಸ್ವತಃ ಹೋಗಿಬಿಡುವನೇ?

ಇದಲ್ಲದೆ, ಬ್ರಾಹ್ಮಣರಿಗೆ ಅಸಾಧ್ಯವೆಂಬುದು ಏನಿದ್ದೀತು? ಅವರು ಎಷ್ಟು ದೃಢವ್ರತರೆಂದರೆ ಅವರಲ್ಲೆ ಅಬ್ಭಕ್ಷರು, ವಾಯುಭಕ್ಷರು, ಫಲಾಹಾರರೂ ಉಂಟು (ಹಾಗೆಂದರೆ ಕೇವಲ ನೀರನ್ನೇ, ಕೇವಲ ವಾಯುವನ್ನೇ, ಕೇವಲ ಫಲಗಳನ್ನೇ ಸೇವಿಸಿಕೊಂಡು ಇರತಕ್ಕವರು; ಅಪ್ ಎಂದರೆ ನೀರು).

ಸೂಚನೆ : 17
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.