Sunday, July 2, 2023

ಯಕ್ಷ ಪ್ರಶ್ನೆ 44 Yaksha prashne 44

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಶ್ನೆ – 43 ಬೀಜವನ್ನು ಬಿತ್ತಲು ಕ್ಷೇತ್ರವು ಯಾವುದು ?

ಉತ್ತರ - ಭೂಮಿ

ಯಕ್ಷನದು ಎಂತಹ ಪೇಲವ ಪ್ರಶ್ನೆ - ಬೀಜವನ್ನು ಬಿತ್ತನೆ ಮಾಡಲು ಆಧಾರವಾದುದು ಯಾವುದು? ಎಂದು. ಈ ಪ್ರಶ್ನೆಯಲ್ಲಿ ಉತ್ತರ ಕೊಡಲು ಏನಿದೆ? ಸಾಮಾನ್ಯನಲ್ಲಿ ಸಾಮಾನ್ಯನಿಗೂ ಬರುವ ಉತ್ತರ ಭೂಮಿ ಎಂದಲ್ಲವೇ? ಉತ್ತರವನ್ನು ಕೊಡಲು ಧರ್ಮರಾಜನಂತಹ ವೇದವೇದಾಂಗ ಪಾರಗ ಬೇಕೆ? ಧರ್ಮರಾಜನೇನು ಅಂತಹ ಊಹಾತೀತವಾದ ಉತ್ತರವನ್ನೇನೂ ನೀಡಲಿಲ್ಲ. ಅದೇ ಭೂಮಿ ಎಂಬ ಉತ್ತರವೇ ಅವನಿಂದಲೂ ಬಂದಿದ್ದು. ಬೀಜವು ಕ್ಷೇತ್ರವಿಲ್ಲದೇ ತನ್ನ ಸಂತತಿಯನ್ನು ಮುಂದುವರಿಸಲು ಸಾಧ್ಯವೇ ಇಲ್ಲ. ಯಾವುದು ಇದ್ದರೆ ಮಾತ್ರವೇ ಬೀಜವು ತನ್ನೊಳಗೆ ಇರುವ  ವೃಕ್ಷವನ್ನು ಹೊರಹಾಕಬಲ್ಲದೋ ಅದನ್ನು ತಾನೇ 'ಕ್ಷೇತ್ರ' ಎಂದು ಕರೆಯುವುದು. ಅಂತಹ ಕ್ಷೇತ್ರ ಇಲ್ಲಿ ಯಾವುದು? ಅದು ಕೇವಲ ಈ ನಮ್ಮ ಭೂಮಿಯೇ? ಮತ್ತು ಅಲ್ಲಿ ಬಿತ್ತನೆ ಮಾಡುವುದು ನಾವು ಅಂದುಕೊಂಡ ಮೊಳಕೆ ಒಡೆಯುವ ಬೀಜ ಮಾತ್ರವೋ? ಎಂದರೆ ಎರಡೂ ಹೌದು. ಆದರೆ ಒಂದೇ ಅಲ್ಲ. ಇಲ್ಲಿ ಎರಡರ ವಿಶ್ಲೇಷಣೆ ಅಗತ್ಯ. 

ಭಗವದ್ಗೀತೆಯಲ್ಲಿ ಯಾವುದು ಕ್ಷೇತ್ರ? ಎಂಬ ಬಗ್ಗೆ ಈ ರೀತಿಯಾಗಿ ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ " ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ" ಎಂದು. ಯಾವ ಮಾನವನ ಶರೀರ ಉಂಟೋ ಅದನ್ನೇ ಕ್ಷೇತ್ರ ಎಂದು ಪ್ರಧಾನವಾಗಿ ಕರೆಯಲಾಗಿದೆ. ಇದನ್ನು ಯಾರು ತಿಳಿಯುತ್ತಾರೋ ಅವರನ್ನು 'ಕ್ಷೇತ್ರಜ್ಞ' ಎಂದು ಕರೆಯಲಾಗುತ್ತದೆ. ಮತ್ತು ಕ್ಷೇತ್ರ ಎಂಬ ಶಬ್ದಕ್ಕೆ 'ಭೂಮಿ' ಮತ್ತು 'ಭಾರ್ಯಾ' ಎಂಬ ಅರ್ಥವನ್ನೂ ಕೊಡಲಾಗಿದೆ. ತನ್ನೊಳಗೆ ಬಂದಿರುವ ಯಾವುದೇ ಬೆಳೆಯುವಂತಹ ಬೀಜವನ್ನು ರಕ್ಷಿಸಿ ಅದನ್ನು ಪೋಷಿಸುವುದರಿಂದ ಅದಕ್ಕೆ 'ಕ್ಷೇತ್ರ' ಎಂಬ ಅಭಿಧೇಯವಿದೆ. ನಾವು ಯಾವುದೇ ಬೀಜವನ್ನು ಬಿತ್ತಿದರೂ  ಆ ಆ ಬೀಜದ ಸ್ವಭಾವಕ್ಕೆ ಅನುಗುಣವಾಗಿ ಅದು ಬೆಳೆದುಕೊಳ್ಳುತ್ತದೆ. ಅದಕ್ಕೆ ಬೇಕಾದ ಪೋಷಕ ಸಾಮಗ್ರಿಯನ್ನು ಭೂಮಿಯು ಒದಗಿಸಿಕೊಡುತ್ತದೆ. ಅಂತೆಯೇ ಒಬ್ಬ ಸ್ತ್ರೀಯು ತಾನು ಕ್ಷೇತ್ರ ಎನಿಸಿಕೊಂಡು ಪುರುಷನ ಬೀಜರೂಪವಾದ ವೀರ್ಯವನ್ನು ಧರಿಸಿ ಅದನ್ನು ಬೆಳೆಸುತ್ತಾಳೆ. ಅದನ್ನು ತನ್ನೊಳಗಿಟ್ಟು ಜೋಪಾನವಾಗಿ ಪೋಷಿಸುತ್ತಾಳೆ. ಆದ್ದರಿಂದಲೇ ಅವಳಿಗೆ 'ಭಾರ್ಯಾ - ಧರಿಸುವವಳು' ಎಂಬ ಹೆಸರು ಬಂದಿದೆ. ಭೂಮಿಗೂ ಇದೇ ಅರ್ಥವನ್ನು ಕೊಡುವ 'ಧರಿಣಿ' ಎಂಬ ಪದದ ಬಳಕೆ ಇದೆ. ಈ ಸೃಷ್ಟಿಯು ಆಗಬೇಕಾದರೆ ಪರಮಪುರುಷನು ಎರಡಾಗಿ ವಿಭಾಗ ಆದ ಎಂದು ವೇದ ಸಾರುತ್ತದೆ. ಆ ಎರಡರಲ್ಲಿ ಒಂದು ಸ್ತ್ರೀ, ಇನ್ನೊಂದು ಪುರುಷ. ಇವರಿಬ್ಬರ ಸಮಾಯೋಗದಿಂದಲೇ ಮುಂದಿನ ಸಂತತಿಯು ವಿಸ್ತಾರವಾಗುತ್ತದೆ. ಈ ವಿಸ್ತಾರದ ವಿಷಯದಲ್ಲಿ ಸ್ತ್ರೀಯ ಪಾತ್ರ ಬಹುಮುಖ್ಯವಾದುದು. ಪ್ರಕೃತಿಮಾತೆಯು ಯಾವ ರೀತಿ ತನ್ನೊಳಗೆ ಎಲ್ಲಾ ಬಗೆಯ ಪ್ರಾಣಿಗಳಿಗೂ ಆಶ್ರಯವನ್ನು ನೀಡಿದೆಯೋ, ಅದರ ಪ್ರತಿರೂಪವಾದ ಸ್ತ್ರೀಯೂ ಕೂಡಾ ತನ್ನೊಳಗೆ ಪರಮಪುರುಷನ ಹೋಲುವಂತಹ ಪುರುಷನನ್ನು ಧಾರಣೆ ಮಾಡಿ ಲೋಕಕ್ಕೆ ನೀಡುತ್ತಾಳೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಯಕ್ಷನು ಬೀಜಾವಾಪಕ್ಕೆ ಕ್ಷೇತ್ರ ಯಾವುದು ಎಂದು ಕೇಳಿದ್ದು.

ಸೂಚನೆ : 02/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.