Sunday, July 16, 2023

ಅಷ್ಟಾಕ್ಷರೀ​ - 39 ರುಕ್ಮಾಭಂ ಸ್ವಪ್ನಧೀಗಮ್ಯಮ್ (Astakshara Darshana 39 Rukmabham Svapnadhigamyam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯೋಗವಿದ್ಯೆಯೆಂಬುದು "ಉತ್ತಮವಾದ ರಹಸ್ಯ"; ಅದರ ಉಪದೇಶವನ್ನು ತಾನು ಮಾಡಿದುದು ವಿವಸ್ವಂತನಿಗೇ ಮೊದಲು - ಎಂಬುದಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿವಸ್ವಾನ್ ಎಂದರೆ ಸೂರ್ಯ. ಆ ವಿವಸ್ವಂತನು ಆ ವಿದ್ಯೆಯನ್ನು ಮನುವಿಗೆ ಉಪದೇಶಿಸಿದನೆಂದೂ, ಮನುವು ಇಕ್ಷ್ವಾಕುವಿಗೆ ಹೇಳಿದನೆಂದೂ ಶ್ರೀಕೃಷ್ಣನು ತಿಳಿಸುತ್ತಾನೆ.

ಹೀಗೆ ಅಷ್ಟು ಪ್ರಾಚೀನಕಾಲದಿಂದ ನಡೆದುಬಂದಿರುವುದು, ಯೋಗಪರಂಪರೆ. ಅದು ಸೂಕ್ಷ್ಮವೂ ರಹಸ್ಯವೂ ಆದ ಕಾರಣದಿಂದಲೇ ಅದು ಆಗಾಗ್ಗೆ ಶಿಥಿಲವಾಗುವುದು, ಮರೆಯಾಗುವುದು; ಈಗ ಹಾಗಾಗಿರುವುದರಿಂದಲೇ ಅದನ್ನೇ  ಮತ್ತೆ ಹೇಳುತ್ತಿರುವುದಾಗಿ ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಾನೆ.

ವಿವಸ್ವಂತ-ಮನು-ಇಕ್ಷ್ವಾಕು - ಇವರುಗಳಿಂದಾಗಿಯೇ ಈ ವಂಶಕ್ಕೆ ವೈವಸ್ವತವಂಶ-ಮನುವಂಶ-ಇಕ್ಷ್ವಾಕುವಂಶ ಎಂದೆಲ್ಲಾ ಹೆಸರುಗಳು ಬಂದಿರುವುದು. ಈ ಸೂರ್ಯವಂಶದಲ್ಲೇ ಮುಂದೆ ಬಂದ ರಘುಮಹಾರಾಜನಿಂದಾಗಿ ಇದುವೇ ರಘುವಂಶವೆಂದೆನಿಸಿದುದೂ.

ಅರಸರಲ್ಲಿ ಮೊದಲನೆಯವನೇ ವೈವಸ್ವತಮನು - ಎನ್ನುತ್ತಾನೆ ಕಾಳಿದಾಸ. ನಾವೆಲ್ಲ ಮನು-ಜರು, ಮನು-ಷ್ಯರು ಎನ್ನುವಾಗ ಮನುವೇ ನಮ್ಮ ಮೂಲಪುರುಷ ಎಂಬ ಭಾವವಿರುವುದನ್ನು ಆ ಪದಗಳೇ ಸ್ಪಷ್ಟಪಡಿಸುತ್ತವೆ.

ಅದಿತಿಯ ಪುತ್ರನು ಆದಿತ್ಯನೆನಿಸಿಕೊಳ್ಳುತ್ತಾನೆಂದಾದರೂ, ಆದಿ-ತ್ಯನೆಂದರೆ ಆದಿಯಲ್ಲಿದ್ದವನೇ ಸರಿ. ಆ ಆದಿಮನಾದ ಒಬ್ಬನೇ ಆದಿತ್ಯ ಹನ್ನೆರಡಾಗಿ ತೋರುತ್ತಾನೆ. ಅದನ್ನೇ ದ್ವಾದಶಾದಿತ್ಯರು ಎಂಬ ಪರಿಯಲ್ಲಿ ಹೇಳುವುದು. ದ್ವಾದಶ ಎಂದರೆ ಹನ್ನೆರಡು. ಸೂರ್ಯನ "ಸಂಚಾರ"ದ ಲೆಕ್ಕದ ಮೇಲೆ ಮಾಡುವ ಕಾಲಮಾನವೇ ಸೌರಮಾನ; ಆ ಲೆಕ್ಕದಲ್ಲಿ ದ್ವಾದಶರಾಶಿಗಳಲ್ಲಿ ಆತನ ನಡೆಯನ್ನು ಅನುಸರಿಸಿ ಒಂದು ಸಂವತ್ಸರದಲ್ಲಿ ದ್ವಾದಶ-ಸೌರಮಾನ-ಮಾಸಗಳಾಗುತ್ತವೆ. ಯೋಗಾಭ್ಯಾಸದಲ್ಲಿ ಸೂರ್ಯನಮಸ್ಕಾರಮಾಡುವಾಗಲೂ ದ್ವಾದಶಮಂತ್ರಗಳ ದ್ವಾದಶ ಆವರ್ತನಗಳನ್ನು ಮಾಡುವೆವಲ್ಲವೇ?

ಮನುಸ್ಮೃತಿಯಲ್ಲೂ ದ್ವಾದಶ ಅಧ್ಯಾಯಗಳಿವೆ. ಗೀತೆಯಲ್ಲಿ ಕೊನೆಯ ಅಧ್ಯಾಯದಲ್ಲಿ ಹೇಗೋ ಹಾಗೆ, ಇಲ್ಲೂ ಕೊನೆಯ ಅಧ್ಯಾಯದಲ್ಲಿ ತ್ರಿಗುಣಗಳ ವಿಚಾರವನ್ನು ನಿರೂಪಿಸಲಾಗಿದೆ. (ಗೀತೆಯಲ್ಲಿ ಅದರ ಹಿಂದಿನ ಕೆಲವು ಅಧ್ಯಾಯಗಳಲ್ಲೂ ತ್ರಿಗುಣಗಳ ವಿಷಯವಿದೆ.) ಸೃಷ್ಟಿಯೆಲ್ಲಾ ತ್ರಿಗುಣಮಯವೇ. ತ್ರಿಗುಣಗಳನ್ನು ಮೀರಿದುದು ಪರಬ್ರಹ್ಮ. ಜೀವನದಲ್ಲಿ ನಾವು ಪಡುವ ಸುಖ-ದುಃಖಗಳೆಲ್ಲಾ ತ್ರಿಗುಣಮಯವಾದುವೇ. ಅವನ್ನೆಲ್ಲಾ ಅನುಭವಿಸುವುದು ಇದ್ದೇ ಇದೆ; ಆದರೆ, ಜೊತೆಗೆ ತ್ರಿಗುಣಗಳನ್ನು ಮೀರಿದುದನ್ನು ಅನುಭವಿಸಬೇಕಾದುದೇ ಜೀವನದ ಪರಮಲಕ್ಷ್ಯ. ಆ ಅನುಭವವೇ ಬ್ರಹ್ಮಭಾವ, "ಬ್ರಹ್ಮಭೂಯ". ಅದನ್ನು ನಮ್ಮಲ್ಲಿ ಉಂಟುಮಾಡಿಕೊಳ್ಳುವುದು ವಿಶುದ್ಧವಾದ ಬುದ್ಧಿಯ ಮೂಲಕವೆಂಬ ವಿಷಯವನ್ನು ಗೀತೆಯು ಕೊನೆಯ ಅಧ್ಯಾಯದಲ್ಲಿ ಹೇಳಿದೆ. ಮನುಸ್ಮೃತಿಯೂ ಸಹ ನಾನಾಧರ್ಮಾಧರ್ಮಗಳ ಆಚರಣಗಳ ಫಲಾಫಲಗಳನ್ನು ಮೊದಲ ಅಧ್ಯಾಯಗಳಲ್ಲಿ ಹೇಳಿ, ಅದೇ ಪರಬ್ರಹ್ಮಪದಪ್ರಾಪ್ತಿಯನ್ನೇ ಕೊನೆಯ ಅಧ್ಯಾಯದಲ್ಲಿ ಹೇಳುತ್ತದೆ.

ಪರಮಪುರುಷನೆನಿಸಿಕೊಳ್ಳುವ ಭಗವಂತನು ಎಲ್ಲವ(ರ)ನ್ನೂ ಆಳುವವನು: ಸಮಸ್ತಜಡ-ಚೇತನಗಳ ಭಾವ-ಕರ್ಮಗಳನ್ನೂ ಪ್ರಶಾಸನ ಮಾಡುವವನು ಆ ಒಬ್ಬನೇ, ಆ ಪರಪುರುಷನೇ. ಸೃಷ್ಟಿಯನ್ನೆಲ್ಲ ನಡೆಸುವ ಆತನು ಅಣುವಿಗಿಂತಲೂ ಅಣು: 'ಅಣೋರಣೀಯಾನ್'. ಜೊತೆಗೇ 'ಮಹತೋ ಮಹೀಯಾನ್': ಎಲ್ಲಕ್ಕಿಂತಲೂ ಬೃಹತ್ತಾದವನು. ಅಣುತಮನಾಗಿದ್ದೂ ಬೃಹತ್ತಮನೇ ಆಗಬಲ್ಲದ್ದೇ ಬ್ರಹ್ಮ. ಬ್ರಹ್ಮವೆಂದರೆ ದೊಡ್ಡದಾಗುವ ಶಕ್ತಿಯೇ.

ಆತನು ಹೇಗೆ ತೋರುತ್ತಾನೆ, ಹಾಗೂ ಆತನನ್ನು ಅರಿಯುವುದು ಹೇಗೆ? - ಎಂಬ ಎರಡು ಪ್ರಶ್ನೆಗಳಿಗೆ ಉತ್ತರಕೊಡುವುದೇ "ರುಕ್ಮಾಭಂ ಸ್ವಪ್ನಧೀಗಮ್ಯಂ" ಎಂಬ ಮನುಸ್ಮೃತಿಯ ಕೊನೆಯ ಶ್ಲೋಕಗಳಲ್ಲಿ ಕಾಣಿಸುವ ಒಂದು ಮಾತು. ರುಕ್ಮವೆಂದರೆ ಚಿನ್ನ; "ಆಭಾ" ಎಂದರೆ ದೀಪ್ತಿ, ಸೊಬಗು. ಆತನು ಶುದ್ಧಸುವರ್ಣದ ಹೊಳಪನ್ನು ಹೊಂದಿರುವವನು. ಆದಿತ್ಯನಲ್ಲಿರುವ ಹಿರಣ್ಮಯಪುರುಷನನ್ನು ಛಾಂದೋಗ್ಯೋಪನಿಷತ್ತು ಹೇಳುತ್ತದಲ್ಲವೇ? ಆತನು ಹಿರಣ್ಯಕೇಶ ಹಿರಣ್ಯಶ್ಮಶ್ರು (ಶ್ಮಶ್ರುವೆಂದರೆ ಗಡ್ಡಮೀಸೆಗಳು). ಉಗುರಿನ ತುತ್ತತುದಿಯವರೆಗೂ ಸ್ವರ್ಣಮಯನೇ. ಆ ಜ್ಯೋತಿರ್ಮಯಪುರುಷನಲ್ಲಿ ತಮ್ಮ ತಾದಾತ್ಮ್ಯವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು.

ಇದಲ್ಲದೆ ಆತನು ಸ್ವಪ್ನಧೀ-ಗಮ್ಯನೆಂದಿದೆ. ಆತನನ್ನು ಹೊರಗಣ್ಣಿನಿಂದ ಗ್ರಹಿಸಲಾಗದು, ಉಳಿದ ಇಂದ್ರಿಯಗಳಿಂದಲೂ ಗ್ರಹಿಸಲಾಗದು. ಆದರೆ ಸ್ವಪ್ನಬುದ್ಧಿಸದೃಶವಾದ ಬುದ್ಧಿಯಿಂದ (ಮಾತ್ರ) ಗ್ರಹಿಸಲಾಗುವುದು ಎಂದಿದೆ. ಸ್ವಪ್ನದಲ್ಲಿ ಬಾಹ್ಯೇಂದ್ರಿಯಗಳು ಕೆಲಸ ಮಾಡವು. ಎಂದೇ ಇದಕ್ಕೆ ಹೋಲಿಕೆಯಾಗಬಲ್ಲುದೆಂದರೆ ಕೇವಲ ಧ್ಯಾನಸ್ಥಿತಿಯೊಂದೇ.

ಧ್ಯಾನದಲ್ಲಿ ನೆಲೆಗೊಂಡಾಗ ಮನಸ್ಸು ಪ್ರಸನ್ನವಾಗುತ್ತದೆ, ಬುದ್ಧಿಯು ಸೂಕ್ಷ್ಮವಾಗುತ್ತದೆ, ನೋಟವು ತಿಳಿಯಾಗುತ್ತದೆ. ಆಗಿನ ಬುದ್ಧಿಯೇ ಅಗ್ರ್ಯಾಬುದ್ಧಿ. ಆಗ ಉಂಟಾಗುವ ಜ್ಞಾನಚಕ್ಷುಸ್, ತಪಶ್ಚಕ್ಷುಸ್ಸುಗಳಿಂದಲೇ ಆ ವಿಭುವಿನ ದರ್ಶನವು ಶಕ್ಯವೆನ್ನುವ ಸುಶ್ರುತಸಂಹಿತಾವಾಕ್ಯವನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು. ಶಿಷ್ಯರಲ್ಲಿ ಆ ಸ್ಥಿತಿಯನ್ನು ಅವರು ಉಂಟುಮಾಡಿಸಿರುವ ಪ್ರಸಂಗಗಳೂ ಉಂಟು.

ಸೂಚನೆ: 17/07/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.