Sunday, September 10, 2023

ಅಷ್ಟಾಕ್ಷರೀ​ - 43 ಓಂಕಾರಾರ್ಥಮುದೀರಯನ್ (Astakshara Darshana 43 Omkararthamudirayan)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) ಎಷ್ಟೋ ಮಂದಿಗೆ ಗೊತ್ತಿಲ್ಲದಿರಬಹುದು. ಏನೆಂದರೆ, ಈಚೆಗೆ ಹುಟ್ಟಿದ ಮತವೊಂದರಲ್ಲಿ ಸಂಗೀತಕ್ಕೇ ನಿಷೇಧವುಂಟು! ಏಕೆಂದರೆ, ಗಾನವೂ ಕಾಡುಹರಟೆಯೂ ಒಂದೇ ತೂಕವಂತೆ! ಅಷ್ಟೇ ಅಲ್ಲ; ಮದ್ಯ-ವ್ಯಭಿಚಾರಗಳೂ ರೇಷ್ಮೆವಸ್ತ್ರ-ಸಂಗೀತವಾದ್ಯಗಳೂ ಏಕರೂಪವಾಗಿ ನಿಷಿದ್ಧವಂತೆ! ಅದೆಂತಹ  'ನುಡಿಮುತ್ತು'ಗಳು!

ಅದು ಹೇಗೇ ಇರಲಿ, ಹಿಂದೂ-ಸಂಸ್ಕೃತಿಯಲ್ಲಿ ಮಾತ್ರ ಸಂಗೀತವೆಂಬುದು ಜೀವನದ ಅವಿಭಾಜ್ಯವಾದ ಅಂಗ. ಭಾರತದ ಅತ್ಯಂತಪ್ರಾಚೀನಸಾಹಿತ್ಯವೆಂದರೆ ವೇದ. (ಜಗತ್ತಿನ ಅತ್ಯಂತ ಪ್ರಾಚೀನಸಾಹಿತ್ಯವೂ ಅದುವೇ). ವೇದಗಳಲ್ಲೇ ಗೇಯತಾ-ಗುಣವಿದೆ. ಗಾನಕ್ಕಾಗಿಯೇ ಇರುವ ಒಂದು ವೇದವೇ ಉಂಟು : ಸಾಮವೇದ. ಭಗವಂತನು 'ಹಾಡಿದ್ದೇ' ಭಗವದ್-"ಗೀತೆ"ಯೆನಿಸುತ್ತದೆ; "ವೇದಗಳಲ್ಲಿ ನಾನು ಸಾಮವೇದ"- ಎಂದು ಶ್ರೀಕೃಷ್ಣನೇ ಅಲ್ಲಿ ಹೇಳಿಕೊಂಡಿದ್ದಾನೆ. ವಾಲ್ಮೀಕಿ-ಕೃತಿಯೂ ಗಾನಕ್ಕೆ ವಿಷಯವಾದದ್ದೇ. ಲವ-ಕುಶರು ರಾಮಾಯಣವನ್ನು "ಮಾರ್ಗ-ವಿಧಾನದಿಂದ" ಹಾಡಿದುದನ್ನು ರಾಮನೇ ಮನಸಾರೆ ಮೆಚ್ಚಿಕೊಂಡನಷ್ಟೆ.

ರಾಮ-ಕೃಷ್ಣರು ಮಾತ್ರವಲ್ಲ, ಶಿವ-ಶಿವೆಯರೂ ಸಂಗೀತಪ್ರಿಯರೇ.   ಪಾರ್ವತಿಯ ನರ್ತನವು ಲಾಸ್ಯವೆನಿಸಿದರೆ, ಶಿವನ ನರ್ತನವು ತಾಂಡವವೆನಿಸುವುದು. ನಮ್ಮ ದೇವತೆಗಳೇ ಹಾಗೆ: "ಜಯ ಸಂಗೀತ-ರಸಿಕೇ" ಎಂಬುದಾಗಿಯೇ ಶ್ಯಾಮಲಾ-ದಂಡಕದಲ್ಲಿ ದೇವಿಯನ್ನು ಸಂಬೋಧಿಸಿದೆ; ಸರಸ್ವತಿಯ ಹಸ್ತವನ್ನು ವೀಣೆಯು ಅಲಂಕರಿಸಿದೆ;  ನಂದಿಯು ಮೃದಂಗಧಾರಿ; ತುಂಬುರುವು ಗಾನಪ್ರವೀಣ. (ಪಟ್ಟಿ ಇನ್ನೂ ದೊಡ್ಡದಿದೆ!) ವಾಸ್ತವವಾಗಿ, ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿಯೇ ಸಂ-ಗೀತ.

ಭಾರತದ ಆರ್ಷ-ಚಿಂತನೆಯಂತೆ, ಲೋಕದಲ್ಲಿ ಕಾಣುವ ಜೀವಿಗಳು ನಾವೆಲ್ಲರೂ ಮೂಲತಃ ಭಗವಂತನ ಮಡಿಲಲ್ಲಿ ಆಡಿರುವ ಶಿಶುಗಳೇ. ನಮ್ಮಲ್ಲಿ ಜನಿಸಿದ ಪ್ರಾಕೃತಿಕ-ಕಾಮನೆಗಳಿಂದಾಗಿ ಇಲ್ಲಿಗೆ ಚ್ಯುತರಾದವರೇ. (ಚ್ಯುತರೆಂದರೆ ಬಿದ್ದವರು). ಬೀಳದೇ ಇರುವವನೊಬ್ಬನೇ : ಅ-ಚ್ಯುತ. ಬಿದ್ದಿರುವ ಜೀವಿಗಳನ್ನು ಉದ್ಧರಿಸಲೆಂದೇ ಭಗವಂತನು ಕೆಳಗಿಳಿದುಬರುವುದೇ ಅವ-ತರಣ ಅಥವಾ ಅವತಾರ.

ಹಾಗೆ ಇಳಿದು ಬರುವ ಭಗವಂತ, ಯಾರನ್ನು ಉದ್ಧರಿಸಬೇಕೆಂದಿದ್ದಾನೋ, ಅವರ ಸ್ಥಿತಿ-ಗತಿಗಳನ್ನು ಗಮನಿಸಿಕೊಂಡೇ, ರುಚಿ-ಸಾಮರ್ಥ್ಯಗಳನ್ನು ಲೆಕ್ಕಿಸಿಯೇ, ತಾನು ಅವಕ್ಕನುಗುಣವಾದ ಮೈ-ಮನಸ್ಸುಗಳನ್ನೋ ವೇಷ-ಭೂಷಗಳನ್ನೋ ವ್ಯವಹಾರ-ಪ್ರಕಾರಗಳನ್ನೋ ತಾಳುವುದೂ ತಳೆಯುವುದೂ. ತನ್ನ ದೈವತ್ವವನ್ನು ಬಹುತೇಕ ಮುಚ್ಚಿಕೊಂಡೇ ಇದ್ದು, ಆಗೊಮ್ಮೆ ಈಗೊಮ್ಮೆಯಷ್ಟೆ ಅದನ್ನು ತೋರಿಕೊಳ್ಳಬಹುದು - ಶ್ರೀರಾಮನ ಅವತಾರದಲ್ಲಿ ಹೇಗೋ ಹಾಗೆ; ಅಥವಾ, ಎಳಸಿನಲ್ಲಿಯೇ ಅದರ ಸೂಚನೆಯನ್ನು ಆಗಾಗ್ಗೆ ಕೊಡುತ್ತಲೂ ಹೋಗಬಹುದು - ಶ್ರೀಕೃಷ್ಣನ ಅವತಾರದಲ್ಲಿ ಹೇಗೋ ಹಾಗೆ. ಚಿಕ್ಕಂದಿನ ಚೇಷ್ಟೆಗಳನ್ನು ಮಾಡುತ್ತಲೇ ತನ್ನ ಔನ್ನತ್ಯವನ್ನು ತೋರಿಸಿಕೊಡುವುದೂ ಇಲ್ಲದಿಲ್ಲ.

ಧನ್ಯಜೀವಿಗಳನ್ನು ತನ್ನತ್ತ ಸೆಳೆಯುವಂತಹ ಆಟಗಳನ್ನು ಬಾಲ್ಯದಲ್ಲಿಯೇ ಆಡಿ ಅವರಿಗೆ ಮೋದಾತಿಶಯವನ್ನು ಅನುಗ್ರಹಿಸಿದವನೆಂದರೆ ನಮ್ಮ ಕಡುಮುದ್ದುಕೃಷ್ಣನೇ ಸರಿ. ಆತನು ಆಡಿದ ಆಟವೇನು? ಆಟದೊಳಗಿನ ಮಾಟವೇನು? ಒಳಹೊಕ್ಕರೆ ದಕ್ಕುವ ನೋಟವೇನು? – ಎಂಬುದನ್ನಿಲ್ಲೊಂದಿಷ್ಟು ಗಮನಿಸಲಾಗಿದೆ.

ಲೋಕದಲ್ಲಿ ಎಷ್ಟು ಮಂದಿ ಗಾನವನ್ನು ಮಾಡಿಲ್ಲ, ವಾದ್ಯಗಳನ್ನು ನುಡಿಸಿಲ್ಲ? ಆದರೆ ಬಾಲಕೃಷ್ಣನು ನುಡಿಸಿದಂತೆ ವೇಣುವನ್ನು ನುಡಿಸಿದವರುಂಟೆ?: "ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ!".

ಮಂಗಳವಾಯಿತೆಂದರೆ ಹೇಗಾಯಿತು? ಹತ್ತು ಬಗೆಗಳಲ್ಲಾದುದನ್ನು ಚಿತ್ರಿಸುತ್ತಾನೆ, ಲೀಲಾಶುಕ. ಶ್ರೀರಂಗಮಹಾಗುರುಗಳ ದೃಷ್ಟಿಗೆ ಬಿದ್ದು ಅವರ ಮಾರ್ಮಿಕ-ವಿವರಣೆಗೆ ಪಾತ್ರವಾಗಿ ಧನ್ಯವಾಯಿತು, ಆತನ ಆ ಚಿತ್ರಣ. ವೇಣುಗಾನ-ಪ್ರಭಾವದ ಆ ಬಗೆಗಳೇನು?: ಲೋಕಗಳನ್ನು ಅದು ಉನ್ಮಾದಗೊಳಿಸಿದೆ. ಏನು ಹಾಗೆಂದರೆ? ಏನೋ ಭಾವವುಕ್ಕಿತೆಂದಷ್ಟು ಮಾತ್ರವಲ್ಲ; ಯೋಗಗಾನವಾದ ಅದು, ಯೋಗಶಾಸ್ತ್ರವು ಹೇಳುವ ಉನ್ಮನೀಭಾವವನ್ನು ಸೂಚಿಸುತ್ತದೆ. ಮನಸ್ಸು ಮೇಲ್ಮುಖವಾಗಿ ಹರಿಯುವುದನ್ನು ಉನ್ಮನೀ-ಮನೋನ್ಮನೀ ಎಂಬ ಪದಗಳಿಂದ ಯೋಗವಿದ್ಯೆಯು ಹೇಳುವುದಷ್ಟೆ? ಅವಾಗುವುದು ಧ್ಯಾನದಲ್ಲಿಯ ಅಂತರ್ನಾದ-ಶ್ರವಣದಿಂದ. ಅವೇ ಫಲ-ಪರಿಣಾಮಗಳು ಇಲ್ಲಿ ಶ್ರೀಕೃಷ್ಣನು ನುಡಿಸಿದ ವೇಣುವಿನ ಬಾಹ್ಯನಾದದ ಶ್ರವಣದಿಂದಲೇ ಆಗುತ್ತಿದೆ! ಓ, ಇಂತಹ ಗಾನವಿನ್ನೆಲ್ಲಿ ದೊರಕೀತು?

ಮನುಷ್ಯರ ಮೇಲೆ ಮಾತ್ರವಲ್ಲದೆ, ಗಿಡ-ಮರಗಳ ಮೇಲೂ ಪಶು-ಪ್ರಾಣಿಗಳ ಮೇಲೂ ಆ ವೇಣುನಾದದ ಪ್ರಭಾವವುಂಟು. ವೃಕ್ಷಗಳಲ್ಲಿ ಹರ್ಷವೂ, ಗೋವೃಂದಗಳಲ್ಲಿ ಒಂದು ಆನಂದವೂ, ಮೃಗಗಳಲ್ಲಿ ವಿಲಕ್ಷಣ-ವಿವಶತೆಯೂ ಉಂಟಾಗಿವೆ. ಮುಗ್ಧಗೋವಳರಲ್ಲೂ ಅನಿರ್ವಾಚ್ಯವಾದ ಸಂಭ್ರಮವು ಮೂಡಿದೆ. ಹೀಗೆ ಜೀವರಾಶಿಗಳ ಮೇಲೆಲ್ಲ ವಿಕಾಸಾಭಿಮುಖವಾದ ಪರಿಣಾಮವನ್ನದು ಬೀರಿದೆ. ಈ ವಿಶಿಷ್ಟಗಾನದಿಂದಾಗಿ ಇತ್ತ ಗಟ್ಟಿಬೆಟ್ಟಗಳೂ ಕರಗುವಂತಿವೆ. ಸಪ್ತಸ್ವರಗಳೂ ಸುಯೋಜಿತವಾಗಿ ಹೊಮ್ಮುತ್ತಿದ್ದು, ಅತ್ತ ವೇದರಾಶಿಗೇ ಮೂಲವೆನಿಸುವ ನಾದವು ಆವಿರ್ಭವಿಸಿದೆ. ವೇದಬೀಜವಾದ ಓಂಕಾರವೇ ಅಲ್ಲಿ ತೋರಿಬಂದಿದೆ: "ಪ್ರಣವಾರ್ಥವಾದ ಪರಬ್ರಹ್ಮವನ್ನೇ ಬಿತ್ತರಿಸುವ ನಾದವದಾಗಿದೆ" – ಎಂಬ ಶ್ರೀರಂಗಮಹಾಗುರುಗಳ ಭವ್ಯೋದ್ಗಾರಕ್ಕದು ಭಾಜನವಾಗಿದೆ!  ಮುನಿಗಳನ್ನು ಮತ್ತೂ ಅಂತರ್ಮುಖರನ್ನಾಗಿಸುವ ಆ ಮಾದಕ-ನಾದಕ್ಕೆ ನಮ್ಮ ನಮ್ರ ನಮನಗಳು!

ಸೂಚನೆ: 10/9/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.