Sunday, September 10, 2023

ಯಕ್ಷ ಪ್ರಶ್ನೆ 54 (Yaksha prashne 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

 

ಪ್ರಶ್ನೆ – 53 ಉತ್ತಮ ಧನ ಯಾವುದು  ?

ಉತ್ತರ - ಶ್ರುತ- ವಿದ್ಯೆ

ಭಾರತದೇಶವು ವಿದ್ಯೆಗೆ ಮಹತ್ತ್ವವನ್ನು ಕೊಟ್ಟಿದೆ. ವಿದ್ಯಾವಂತನಿಗೆ ಎಲ್ಲರಿಗಿಂತಲೂ ಉನ್ನತಸ್ಥಾನ ಮತ್ತು ಮಾನವನ್ನು ಕೊಟ್ಟಿದ್ದೂ ಉಂಟು. ಏಕೆ ಇಂತಹ ಸ್ಥಾನ? ಧನ, ಕನಕ, ವಸ್ತು, ವಾಹನ ಇತ್ಯಾದಿ ಯಾವುದನ್ನು ನಾವು ಸಂಪತ್ತು ಎಂದು ಹೇಳುತ್ತೇವೋ ಅವೆಲ್ಲವೂ ಭೌತಿಕವಾಗಿ ಗೋಚರಿಸುತ್ತವೆ. ಆದರೆ ವಿದ್ಯೆ ಎಂಬ ಸಂಪತ್ತು ಅಗೋಚರವಾದುದು. ಹೊರಗಿನ ಸಂಪತ್ತನ್ನು ಚೋರರು ಅಪಹರಿಸಬಹುದು, ರಾಜರು ಪಡೆಯಬಹುದು, ಅಣ್ಣತಮ್ಮಂದಿರು ವಿಭಾಗಿಸಬಹುದು, ತಲೆಯಮೇಲೆ ಹೊತ್ತುಕೊಂಡರೆ ಭಾರವೆಂದೆನಿಸುವುದು, ವ್ಯಯಿಸಿದಷ್ಟೂ ಉಳಿಯುವುದಿಲ್ಲ, ಕಳೆದುಹೋಗುತ್ತದೆ. ಆದರೆ ವಿದ್ಯೆ ಎಂಬ ಧನವು ಇವೆಲ್ಲಕ್ಕೂ ವಿರುದ್ಧವಾದದ್ದು. ವಿದ್ಯೆಯನ್ನು ತಲೆಯಲ್ಲಿ ತುಂಬಿಗೊಂದರೆ ಭಾರವೆನಿಸದು. ಏಕೆಂದರೆ ವಿದ್ಯೆ ಅಮೂರ್ತವಾದ ವಿಷಯ. ಅದಕ್ಕೆ ತೂಕವಿಲ್ಲ. ಆದ್ದರಿಂದ ವಿದ್ಯೆಯು ಎಲ್ಲಾ ಧನಕ್ಕಿಂತಲೂ ಶ್ರೇಷ್ಠ ಎಂದು ಒಂದು ಸುಭಾಷಿತವೂ ಹೇಳುತ್ತದೆ. ಯಕ್ಷನು ಕೇಳಿದ ಪ್ರಶ್ನೆಗೆ ವಿದ್ಯೆಯ ಪರ್ಯಾಯಪದವಾದ 'ಶ್ರುತ' ಎಂಬ ಪದವನ್ನು ಧರ್ಮರಾಜನು ಹೇಳಿದ್ದು, ವಿದ್ಯೆಯ ವಿಶೇಷತೆಯನ್ನು ಪ್ರಚುರಪಡಿಸುವುದಕ್ಕಾಗಿ. 

ಉಪನಿಷತ್ತು ಹೇಳುವಂತೆ ವಿದ್ಯೆಯನ್ನು ಸಂಪಾದನೆ ಮಾಡುವುದಕ್ಕೆ ಆಚಾರ್ಯನು ಪೂರ್ವರೂಪ. ವಿದ್ಯಾರ್ಥಿಯು ಉತ್ತರರೂಪ. ಅವರಿಬ್ಬರ ಮಧ್ಯೆ ಪ್ರವಚನ ಅಥವಾ ಪಾಠವು ಸಂಧಾನವಾಗುತ್ತದೆ. ಇದರಿಂದ ವಿದ್ಯೆ ಎಂಬುದು ವಿದ್ಯಾರ್ಥಿಯಲ್ಲಿ ಆವಿರ್ಭಾವವಾಗುತ್ತದೆ. ಉಪಾಧ್ಯಾಯರು ಹೇಳುವ ಪಾಠವನ್ನು ಮಾಣವಕನು ಸರಿಯಾಗಿ ಗ್ರಹಣ ಮಾಡಬೇಕಾಗುತ್ತದೆ. ಗ್ರಹಣದ ಆಧಾರದ ಮೇಲೆಯೇ ಅವನ ಮುಂದಿನ ವಿದ್ಯೆಯ ಆಳ ಅಗಲಗಳು ನಿರ್ಣಯವಾಗುವುವು. ಆದ್ದರಿಂದ ವಿದ್ಯಾಗ್ರಹನಕ್ಕೆ ಶ್ರವಣ ಮೊದಲ ಸಾಧನ. ಸಾಧನವು ನೂರಕ್ಕೆ ನೂರು ಪ್ರಮಾಣದಲ್ಲಿರಬೇಕು. ಯಾವುದೇ ವಿಷಯವು ನಮ್ಮ ಆತ್ಮಸಾತ್ ಆಗಬೇಕಾದರೆ ಯಾವೆಲ್ಲಾ ಸಾಧನಗಳು ಬೇಕು ಎಂದು ಹೇಳುವಾಗ 'ಶ್ರವಣ ಮನನ ನಿದಿಧ್ಯಾಸನ' ಇವನ್ನು ಹೇಳುತ್ತಾರೆ. ಶ್ರವಣದ ಭಾಗ ಸಂಪನ್ನವಾದರೆ ಮನನವು ಸಂಪೂರ್ಣವಾಗುವುದು. ಮನನವು ಪರಿಪೂರ್ಣವಾದರೆ ಮುಂದಿನ ನಿದಿಧ್ಯಾಸನ ಅರ್ಥಪೂರ್ಣವಾಗುವುದು. ಆದ್ದರಿಂದ ಶ್ರವಣಕ್ಕೆ ಪ್ರಾಶಸ್ತ್ಯವಿದೆ. ಇಂತಹ ಶ್ರವಣದಿಂದ ಪಡೆದದ್ದನ್ನೆ 'ಶ್ರುತ' ಎಂದು ಕರೆಯಲಾಗಿದೆ. ಇದೇ ನಿಜವಾದ ವಿದ್ಯೆ. 'ಬಹುಧಾ ಶ್ರೋತವ್ಯಂ ಬಹುಭ್ಯಃ ಶ್ರೋತವ್ಯಂ' ಎಂಬ ಮಾತಿದೆ. ಅಂದರೆ ಒಂದೇ ವಿಷಯವನ್ನು ಅನೇಕಬಾರಿ ಅನೇಕರಿಂದ ಕೇಳಬೇಕು. ಇಲ್ಲೂ ಕೇಳುವುದನ್ನು ಒತ್ತಿ ಒತ್ತಿ ಹೇಳಲಾಗಿದೆ. ಕೊಟ್ಟಾಗ ಮಾತ್ರ ಸಿಗುವುದು ಉಳಿದ ಸಂಪತ್ತುಗಳು. ಕೊಡದೇ ಸಿಗದಿರುವುದು ಉಳಿದ ಸಂಪತ್ತುಗಳು. ಈ ವಿದ್ದಯೆ ಎಂಬ ಧನವನ್ನು ಕೊಡದೆಯೂ ಆಚಾರ್ಯರ ಶ್ರದ್ಧೆಯ ಆರಾಧನೆಯಿಂದ ಸಿಗಬಹುದು. ಅದಕ್ಕೆ ನಾವು ಮಹಾಭಾರತದ ಏಕಲವ್ಯನ ಕಥೆಯನ್ನು ನೋಡಬಹುದು. ನೇರವಾಗಿ ದ್ರೋಣರು ವಿದ್ಯೆಯನ್ನು ಕೊಡಲಿಲ್ಲ. ಆದರೂ ಏಕಲವ್ಯ ವಿದ್ಯೆಯನ್ನು ಪಡೆದನಲ್ಲ. ಕೊಟ್ಟಿದ್ದೂ ಉಳಿಯದ ಧವೆಂದರೆ ಇದೇ ವಿದ್ಯೆ. ಇದಕ್ಕೂ ಮಹಾಭಾರತದ ಕರ್ಣನ ವೃತ್ತಾಂತವನ್ನು ನೋಡಬಹುದು. ಪರಶುರಾಮನಿಂದ ವಿಧಿವತ್ತಾಗಿ ಪಡೆದಿದ್ದರೂ ಬೇಕಾದಾಗ ಬಳಸಿಕೊಳ್ಳಲಾಗಲಿಲ್ಲ ಕರ್ಣನಿಗೆ. ಆಚಾರ್ಯಾತ್ ಪಾದಮ್ ಆದತ್ತೇ ಪಾದಂ ಶಿಷ್ಯಂ ಸ್ವಮೇಧಯಾ, ಪಾದಂ ಬ್ರಹ್ಮಚಾರಿಭ್ಯಃ ಪಾದಂ ಕಾಲೇನ ಪಚ್ಯತೇ" - ಆಚಾರ್ಯರಿಂದ ಪಡೆಯುವುದು ಕೇವಲ ಪಾದ ಭಾಗ, ಶಿಷ್ಯನ ಸ್ವಮೇಧೆಯಿಂದ ಸಿದ್ಧವಾಗುವುದು ಕಾಲು ಭಾಗ, ಇನ್ನು ಕಾಲು ಭಾಗ ತನ್ನ ಸಹಪಾಠಿಗಳ ಜೊತೆ ಮಾಡುವು ವಿಚಾರಮಂಥನದಿಂದ ಇನ್ನು ಉಳಿದ ಕಾಲು ಭಾಗವು ಹಿಂದಿನವುಗಳ ಆಧಾರದ ಮೇಲೆ ಬರುವ ಅನುಭವದಿಂದ ಪ್ರಾಪ್ತವಾಗುವುದು.  ಕೊಟ್ಟಿದ್ದರೂ ಬರದೆ ಇರುವಂತಹ, ಕೊಡದಿದ್ದರೂ ಬರುವಂತಹ ಧನವೇನಾದರೂ ಇದ್ದರೆ ಅದು ವಿದ್ಯೆ. ಆದ್ದರಿಂದಲೇ ವಿದ್ಯೆಯು ಎಲ್ಲಕ್ಕಿಂತಲೂ ಉತ್ತಮ.  

ಸೂಚನೆ : 10/9/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.