Monday, September 4, 2023

ಸಾಧನೆಗೆ ಈ ಯಂತ್ರವು ಬಹಳ ಸುಲಭ ! (Sadhanege E Yantravu Bahala Sulabha!)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಊರಿನಲ್ಲಿ ಜನರು ವ್ಯವಸಾಯವನ್ನು ಮಾಡಿಕೊಂಡು ಅಲ್ಲಿ ಬರುವ ಬೆಳೆಗಳನ್ನು ಮತ್ತು ತರಕಾರಿಗಳನ್ನೆಲ್ಲ ತೆಗೆದುಕೊಂಡುಹೋಗಿ ಪಕ್ಕದ ಊರಿನಲ್ಲಿ ಮತ್ತು ಸಂತೆಗಳಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ತಮ್ಮ ಜೀವನವನ್ನು ನಡೆಸುತ್ತಾ ಇದ್ದರು. ಇದೇ ಊರಿನಲ್ಲಿ ಒಬ್ಬನ ಹತ್ತಿರ ಅವನು ಬೆಳೆದದ್ದನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ . ಆದುದರಿಂದ ಅವನು ಪ್ರತಿ ಸಲವೂ ಬೇರೆಯವರ ಎತ್ತಿನ ಗಾಡಿಯಲ್ಲಿ ತನಗೂ ಸ್ವಲ್ಪ ಜಾಗವನ್ನು ಕೇಳಿ ಅವರ ಜೊತೆಯಲ್ಲಿಯೇ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾ ಇದ್ದನು. ಈ ವ್ಯಕ್ತಿಗೆ ಬೇರೆ ಜನರಗಿಂತ ಬುದ್ಧಿಮಟ್ಟ ಮತ್ತು ಚಾಕಚಕ್ಯತೆ ಸ್ವಲ್ಪ ಕಡಿಮೆ ಇತ್ತು. ಆದರೆ ಇವನಲ್ಲಿ ಎರಡು ಬಹಳ ದೊಡ್ಡ ಗುಣಗಳಿತ್ತು - ಒಂದು ಶ್ರದ್ಧೆ ಮತ್ತು ಇನ್ನೊಂದು ಭಕ್ತಿ. ಒಮ್ಮೆಈ ಊರಿಗೆ ಒಬ್ಬ ಋಷಿಗಳು ಆಗಮಿಸುತ್ತಾರೆ . ಅವರು ಬಂದಿರುವುದು ಇವನಿಗೆ ತಿಳಿದ ಕೂಡಲೇ ಅವರ ಬಳಿ ಓಡಿ ಹೋಗಿ ಅತ್ಯಂತ ವಿನಯದಿಂದ ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಅವರಲ್ಲಿ ಬೇಡಿಕೊಳ್ಳುತ್ತಾನೆ. ಇವನ ಭಕ್ತಿಯನ್ನು ನೋಡಿ ಅವರು ಇವನ ಮನೆಗೆ ಬಂದು ಇವನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅವರು ಎಷ್ಟು ಕಾಲ ಆ ಹಳ್ಳಿಯಲ್ಲಿದ್ದರೋ ಅಷ್ಟೂ ದಿನಗಳು ಇವನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅವರಿಗೆ ಸೇವೆ, ಶುಶ್ರೂಷೆಗಳನ್ನು ಮಾಡಿ ಅವರ ಮನಸ್ಸನ್ನು ಪ್ರಸನ್ನಗೊಳಿಸುತ್ತಾನೆ. ಆದುದರಿಂದ ಅವರು ಹೊರಟು ಬರುವ ಮುನ್ನ ಇವನಿಗೆ ಏನು ವರ ಬೇಕಾದರೂ ಕೇಳಲೆಂದು ಹೇಳುತ್ತಾರೆ. ಅದಕ್ಕೆ ಅವನು ತನ್ನ ಬಳಿ ಯಾವ ವಾಹನವೂ ಇಲ್ಲದೆ ಇರುವುದನ್ನು ಜ್ಞಾಪಿಸಿಕೊಂಡು ಅವರಲ್ಲಿ ಒಂದು ವಾಹನವನ್ನು ದಯಪಾಲಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ಅವರು ಮಹಾ ತಪಸ್ವಿಗಳು, ಏನನ್ನು ಬೇಕಾದರೂ ಕೊಡಬಲ್ಲವರು, ಇವನು ಇಷ್ಟು ಸಣ್ಣ ಪದಾರ್ಥವನ್ನು ಅಪೇಕ್ಷಿಸುತ್ತಾನಲ್ಲಾ ಎಂದುಕೊಂಡರೂ, ಅತ್ಯಂತ  ಕರುಣೆಯಿಂದ ಇವನಿಗೆ ಒಂದು ಅಪೂರ್ವ ಯಂತ್ರವನ್ನೇ ದಯಪಾಲಿಸುತ್ತಾರೆ. ಆ ಯಂತ್ರವು ಭೂಮಿಯಲ್ಲಿ ಅತಿವೇಗದಿಂದ ಚಲಿಸಬಲ್ಲದು, ಬಹಳಷ್ಟು ಸಾಮಾನನ್ನು ಹೊರಬಲ್ಲದು, ಅಷ್ಟೇ ಅಲ್ಲಾ, ಅದರಲ್ಲಿ ಆಕಾಶ ಮಾರ್ಗವಾಗಿಯೂ ಚಲಿಸಬಲ್ಲದಾದಂತಹ ಅದ್ಭುತ ಯಂತ್ರವದು. ಆ ಯಂತ್ರವನ್ನು ಇವನಿಗೆ ಕೊಟ್ಟು, ಅದನ್ನು ಹೇಗೆ ಉಪಯೋಗಿಸುವುದೆಂಬುದನ್ನೂ ತಿಳಿಸಿಕೊಟ್ಟು ಅಲ್ಲಿಂದ ಹೊರಟುಬರುತ್ತಾರೆ. ಆದರೆ ದುರಾದೃಷ್ಟದಿಂದ ಋಷಿಗಳು ಹೊರಟ ಸ್ವಲ್ಪ ಕಾಲಕ್ಕೆ ಅವನು ಆ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗುತ್ತಾನೆ. ಋಷಿಗಳು ಸಂಚಾರಿಗಳಾಗಿದ್ದುದರಿಂದ ಅವರನ್ನು ಮತ್ತೆ ಸಂಪರ್ಕಿಸಲು ಆಗುವುದಿಲ್ಲ. ಆದ್ದರಿಂದ ಇವನು ಬೇರೆಯವರ ಎತ್ತಿನ ಗಾಡಿಯನ್ನು  ನೋಡಿ ಅವರಂತೆಯೇ ತನ್ನ ಯಂತ್ರಕ್ಕೂ ಎತ್ತುಗಳನ್ನು ಕಟ್ಟಿ ಅದನ್ನು ಎತ್ತಿನ ಗಾಡಿಯಾಗಿ ಉಪಯೋಗಿಸಲು ಪ್ರಾರಂಭಿಸುತ್ತಾನೆ. ಇವನು ಅಷ್ಟು ದೊಡ್ಡ ಯಂತ್ರವನ್ನು ಎತ್ತಿನ ಗಾಡಿಯಂತೆ ಉಪಯೋಗಿಸುತ್ತಿರುವ ವಿಷಯ ಆ ಋಷಿಗಳಿಗೆ ಕರ್ಣಾಕರ್ಣಿಕೆಯಾಗಿ ತಿಳಿದಾಗ ಅವರಿಗೆ ತುಂಬಾ ಬೇಜಾರಾಗಿ ಅಷ್ಟು ದೊಡ್ಡ ವಸ್ತುವನ್ನು ಇವನು ಇಷ್ಟು ಚಿಕ್ಕದಾಗಿ ಎತ್ತಿನ ಗಾಡಿಯಂತೆ ಉಪಯೋಗಿಸಿಕೊಂಡುಬಿಟ್ಟನಲ್ಲ ಅಂತ ಎಂದು ಬೇಸರಿಸಿಕೊಂಡು ಇವನ ಪ್ರಾಪ್ತಿಯೇ ಇಷ್ಟು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. 


ಈ ಕಥೆಯನ್ನು ಕೇಳಿದರೆ ಇದು ಬಹಳ ಸಾಮಾನ್ಯವಾದದ್ದು, ಇದರಲ್ಲಿ ಏನು ವೈಶಿಷ್ಟ್ಯ ಇದೆ? ಎಂದು ಎನ್ನಿಸಬಹುದು. ಯಾರಾದರೂ ಹೀಗೆ ಅಷ್ಟು ದೊಡ್ಡ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಆದರೂ ಪರಿಶೀಲಿಸಿ ನೋಡಿದರೆ ನಾವೇ ಅಂತಹ ವ್ಯಕ್ತಿಗಳಾಗಿದ್ದೇವೆ. ಈ ಕಥೆಯಲ್ಲಿರುವ ಆ ಸಾಮಾನ್ಯ ಮನುಷ್ಯ ನಾವೇ ಆಗಿದ್ದೇವೆ ಮತ್ತು ನಮ್ಮ ಮಾನವ ದೇಹವೇ ಆ ಅದ್ಭುತ ಯಂತ್ರವಾಗಿದೆ. ಯೋಗ ಸಾಧನೆಯಿಂದ, ಮನಸ್ಸನು ಒಳಮುಖವಾಗಿಸಿದಲ್ಲಿ, ಅದ್ಭುತ ವೇಗದಲ್ಲಿ ನಮ್ಮ ಮನಸ್ಸು ಬುದ್ಧಿಗಳು ಕೆಲಸ ಮಾಡುವಂತೆ ಮಾಡಿಕೊಳ್ಳಬಹುದು. ನಮ್ಮ ದೇಹದೊಳಗೇ ಇರುವ ಊರ್ಧ್ವಲೋಕಗಳಿಗೂ ಸಂಚರಿಸಿ ಅತ್ಯಂತ ಮೇಲಿರುವ ಪರಮಪದದಲ್ಲಿ ಭಗವಂತನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು.


ಈ ಮಾತನ್ನು ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯೊಂದಿಗೆ ನಮಗೆ ಹೇಳಿದ್ದಾರೆ. ನಾವು ಸರ್ಕಸ್ಸುಗಳಲ್ಲಿ(circus) ಇರುವ ಸೈಕಲ್ಲನ್ನು (cycle) ನೋಡಿದರೆ ಅದು ಮುಂದೆ pedal ಮಾಡಿದಾಗ ಮುಂದೆ ಹೋಗತ್ತೆ ಹಿಂದೆ pedal ಮಾಡಿದಾಗ ಹಿಂದೆ ಹೋಗುತ್ತದೆ. ಅಂದರೆ ಅದಕ್ಕೆ ಮುಂದೆ ಮತ್ತು ಹಿಂದೆ ಎರಡು ಕಡೆ ಹೋಗುವ ಸಾಮರ್ಥ್ಯವಿದೆ(ಬೇರೆ ಸೈಕಲ್ ಗಳಿಗೆ ಹಿಂದೆ ಹೋಗುವ ಸಾಮರ್ಥ್ಯವಿರುವುದಿಲ್ಲ). ಅದೇ ರೀತಿ ನಮ್ಮ ದೇಹಕ್ಕೂ ಅಷ್ಟೇ ಒಳಜೀವನ ಮತ್ತು ಹೊರಜೀವನ ಎರಡಲ್ಲೂ ಇರುವ ಸಾಮರ್ಥ್ಯ ಇದೆ. ಒಂದು ಯಂತ್ರ ಆಕಾಶಕ್ಕೆ ಹೋದಾಗ ವಿಮಾನವಾಗಿ, ಭೂಮಿಗೆ ಬಂದಾಗ ಬಸ್ ಮತ್ತು ರೈಲ್ ಆಗಬೇಕು. ನೀರಿನ ಮೇಲೆ ಬಂದಾಗ ಹಡಗಾಗಬೇಕು ಮತ್ತು ಮುಳುಗಿದಾಗ ಸಬ್ಮೆರಿನ್ (submarine) ಆಗಬೇಕು. ಒಂದೇ ಯಂತ್ರದಲ್ಲಿ ಇಷ್ಟು ಸೌಲಭ್ಯಗಳಿದ್ದರೆ ಹೇಗೆ ಇರುತ್ತದೆ? ಆ ಯಂತ್ರ ಬೇರೆಯಾವುದೂ ಅಲ್ಲ ನಮ್ಮ ಮಾನವ ದೇಹವೇ ಎಂದು ಶ್ರೀರಂಗ ಮಹಾಗುರುಗಳು ತಿಳಿಸಿಕೊಟ್ಟಿದ್ದಾರೆ. ಅಂತಹ ಯಂತ್ರವನ್ನು ಪಡೆದಿರುವ ನಾವು ಅದನ್ನು ಹೇಗೆ ಉಪಯೋಗಿಸಬೇಕೆಂದು ಮರೆತುಹೋಗಿದ್ದೇವೆ. ನಮಗೆ ಒಬ್ಬ ಸದ್ಗುರುವು ಆಶೀರ್ವಾದ ಮಾಡಿ ಆ ಉಪಯೋಗವನ್ನು ತಿಳಿಸಿಕೊಟ್ಟರೆ ಅವನ ಅನುಗ್ರಹದಿಂದ ಈ ಯಂತ್ರದ ಮೌಲ್ಯವೇನೆಂದು ಈ ಯಂತ್ರವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದುಕೊಂಡರೆ ಆಗ ಇದರ ಸಂಪೂರ್ಣ ಉಪಯೋಗವನ್ನು ಪಡೆದು ಸಾರ್ಥಕವಾಗಿರುವ ಜೀವನವನ್ನು ನಾವು ಮಾಡಬಹುದು. ನಮ್ಮೆಲ್ಲರ ಜೀವನವು ಅದೇ ರೀತಿಯಲ್ಲಿ ಸಾರ್ಥಕವಾಗಲೆಂದು ನಾವು ಪ್ರಾರ್ಥಿಸುತ್ತೇವೆ. 


ಸೂಚನೆ: 02/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.