ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಗ್ನಿಯು ಗೂಢವಾಗಿದ್ದರೂ ಗೊತ್ತಾಗಿಯೇ ಬಿಡುತ್ತದೆ, ಅಲ್ಲವೆ? ಅಂತಹ ಪರಾಕ್ರಮವೆಂಬುದು ಈ ಪಾಂಡವರನ್ನು ಬಿಟ್ಟು ಮತ್ತಾವ ಮನುಷ್ಯರಲ್ಲಿ ಇರುವುದು? ಸೌಭಾಗ್ಯವಶಾತ್ ನೀವುಗಳೆಲ್ಲರೂ (ಜತುಗೃಹದ) ಘೋರವಾದ ಅಗ್ನಿಯಿಂದ ಪಾರಾದಿರಿ. ನಿಮ್ಮ ಅದೃಷ್ಟದಿಂದಲೇ ಮಂತ್ರಿಸಹಿತನಾದ ದುರ್ಯೋಧನನ ಆಸೆಗಳು ಫಲಿಸಲಿಲ್ಲ. ನಮ್ಮ ಅಂತರಂಗದಲ್ಲಿರುವ ಎಲ್ಲ ಶುಭಾಶಂಸನೆಗಳೂ ನಿಮಗೆ ಲಭ್ಯವಾಗಲಿ. ಜ್ವಲಿಸುವ ಅಗ್ನಿಯಂತೆ ವರ್ಧಿಸಿರಿ. ನಿಮ್ಮ ಬಗ್ಗೆ ಬೇರೆಯ ರಾಜರಿಗೆ ಏನೂ ಈಗಲೇ ತಿಳಿಯುವುದು ಬೇಡ. ನಾವಿನ್ನು ಸ್ವಶಿಬಿರಕ್ಕೆ ಹೊರಡುತ್ತೇವೆ" ಎಂದನು.
ಹೀಗೆ ನುಡಿದು, ಅಕ್ಷಯವಾದ ಕಾಂತಿಯನ್ನು ಹೊಂದಿದ್ದ ಶ್ರೀಕೃಷ್ಣನು ಬಲರಾಮನೊಂದಿಗೆ ಅಲ್ಲಿಂದ ಹೊರಟುಬಂದನು. ಇತ್ತ ಪಾಂಚಾಲ್ಯನಾದ (ಎಂದರೆ ಪಾಂಚಾಲದೇಶದವನಾದ) ಧೃಷ್ಟದ್ಯುಮ್ನನು ಭೀಮಾರ್ಜುನರನ್ನು ಯಾರಿಗೂ ತಿಳಿಯದಂತೆ ಹಿಂಬಾಲಿಸುತ್ತಿದ್ದು, ಕುಂಬಾರನ ಮನೆಗೆ ಯಾರಿಗೂ ತಿಳಿಯದಂತೆ ಬಂದನು; ಎಲ್ಲ ಕಡೆಗೂ ಗಮನವಿಟ್ಟುಕೊಂಡು ಗುಟ್ಟಾಗಿ ಆತನು ಕುಂಬಾರನ ಮನೆಯಲ್ಲಿ ಅಡಗಿ ನಿಂತನು.
ಸಂಜೆಯ ಹೊತ್ತಿಗೆ ಭೀಮಾರ್ಜುನರೂ ನಕುಲಸಹದೇವರೂ ಭಿಕ್ಷಾಟನೆ ಮಾಡಿ ಲಬ್ಧವಾದ ಭಿಕ್ಷೆಯನ್ನು ಯುಧಿಷ್ಠಿರನಿಗೊಪ್ಪಿಸಿದರು. ಉದಾರಳಾದ ಕುಂತಿಯು ಆ ಸಮಯಕ್ಕೆ ದ್ರೌಪದಿಯನ್ನು ಕುರಿತು ಹೀಗೆ ಹೇಳಿದಳು:
"ಮಂಗಳಕರಳೇ, ಅನ್ನವನ್ನು ತೆಗೆದುಕೋ, ಅದರ ಒಂದು ಭಾಗವನ್ನು ದೇವತೆಗಳಿಗೆ ಬಲಿಯಾಗಿ ಕೊಡು, ಹಾಗೂ ವಿಪ್ರನೊಬ್ಬನಿಗೆ ಭಿಕ್ಷೆಯಾಗಿ ಕೊಡು. ಸುತ್ತಲಿರುವ ಮತ್ತಾರಾದರೂ ಅನ್ನವನ್ನು ಬಯಸುವವರಾಗಿದ್ದರೆ (ಎಂದರೆ ಅತಿಥಿಗಳಿದ್ದರೆ) ಅವರಿಗೂ ಕೊಡು. ಉಳಿದದ್ದನ್ನು ಎರಡಾಗಿ ವಿಭಾಗ ಮಾಡು - ಅರ್ಧಭಾಗವಾಗಿ ಒಂದು, ಹಾಗೂ ನಾಲ್ಕಾಗಿ ಮತ್ತು ನಿನಗಾಗಿ ಮತ್ತೊಂದು. ಗಜರಾಜನಂತಿರುವ ಹಾಗೂ ಒಳ್ಳೆಯ ಮೈಕಟ್ಟುಳ್ಳ ಗೌರವರ್ಣದ ಭೀಮನಿಗೆ ಆ ಅರ್ಧವನ್ನು ಕೊಡು. ಆತನು ಯಾವಾಗಲೂ ಬಹುಭೋಜಿ (ಹೆಚ್ಚಾಗಿ ತಿನ್ನತಕ್ಕವನು)" - ಎಂದಳು.
ಹರ್ಷದಿಂದ ಕೂಡಿದ ರಾಜಕುಮಾರಿ(ದ್ರೌಪದಿ)ಯು, ಕುಂತಿಯ ಮಾತನ್ನು ಚೆನ್ನಾಗಿ ಆಲಿಸಿಕೊಂಡಳು. ಅವಳು ಹೇಳಿದಂತೆಯೇ ಮಾಡಿದಳು ಕೂಡ. ಹೀಗೆ ಎಲ್ಲರ ಊಟವಾಯಿತು.
ಚುರುಕಾಗಿದ್ದ ಸಹದೇವನು ದರ್ಭೆಗಳಿಂದಾದ ಶಯ್ಯೆಯನ್ನು ನೆಲದ ಮೇಲೆ ಎಲ್ಲರಿಗೂ ಹಾಸಿದನು. ಅದರ ಮೇಲೆ ತಮ್ಮ ತಮ್ಮ ಅಜಿನಗಳನ್ನು (ಕೃಷ್ಣಾಜಿನಗಳನ್ನು) ಹಾಸಿಕೊಂಡು ಎಲ್ಲರೂ ಮಲಗಿದರು. ಅವರೆಲ್ಲರೂ ಅಗಸ್ತ್ಯದಿಕ್ಕಿನತ್ತ, ಎಂದರೆ ದಕ್ಷಿಣಕ್ಕೆ, ತಲೆಮಾಡಿ ಮಲಗಿದರು. ಅವರೆಲ್ಲರ ಶಿರಸ್ಸಿನತ್ತ ಕುಂತಿಯು ಮಲಗಿದ್ದಳು. ದ್ರೌಪದಿಯು ಅವರ ಪಾದಗಳತ್ತ ಮಲಗಿದಳು. ಪಾಂಡವರ ಕಾಲುಗಳ ಬಳಿ ನೆಲದ ಮೇಲೆ ದರ್ಭದ ಹಾಸಿಗೆಯಲ್ಲಿ ಮಲಗಿದರೂ ಸಹ, (ರಾಜಕುಮಾರಿ)ದ್ರೌಪದಿಗೆ ಮನಸ್ಸಿನಲ್ಲಿ ಕಿಂಚಿತ್ತೂ ದುಃಖವಾಗಲಿಲ್ಲ. ಅಷ್ಟೇ ಅಲ್ಲ, ಕುರುಪುಂಗವರಾದ ಪಾಂಡವರ ಬಗೆಗೆ ಒಂದಿಷ್ಟು ತಾತ್ಸಾರಭಾವವೂ ಮೂಡಲಿಲ್ಲ.
ಶಯಿಸಿದ ಪಾಂಡವರು ಆಗ ಮಾತನಾಡಿಕೊಳ್ಳುತ್ತಿದ್ದ ಬಗೆಬಗೆಯ ವಿಷಯಗಳಾದರೂ ಏನು?: ಸೈನ್ಯಗಳು (ಅವನ್ನು ಕಟ್ಟುವುದು ಇತ್ಯಾದಿ), ದಿವ್ಯಾಸ್ತ್ರಗಳು (ಅವುಗಳ ಪ್ರಯೋಗ-ಉಪಸಂಹಾರಗಳು), ರಥಗಳು, ಗಜಗಳು, ಖಡ್ಗ-ಗದೆ-ಗಂಡುಗೊಡಲಿಗಳು - ಇವೇ.
ಇವೆಲ್ಲವನ್ನೂ, ಅಂದಿನ ರಾತ್ರಿಯೂ ಅವರುಗಳೆಲ್ಲರ ನಡೆ-ನುಡಿಗಳನ್ನೂ ಗಮನಿಸಿಕೊಂಡ ಧೃಷ್ಟದ್ಯುಮ್ನನು ಎಲ್ಲವನ್ನೂ ದ್ರುಪದನಿಗರುಹಲೆಂದು (ಬೆಳಗಾಗುತ್ತಲೇ) ಅಲ್ಲಿಂದ ತ್ವರಿತವಾಗಿ ಸಾಗಿದನು.