ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ತಾನು ಚೆನ್ನಾಗಬೇಕು - ಎಂಬ ಆಸೆ ಯಾರಿಗಿಲ್ಲ? ಏನೋ ದುಃಖಾತಿರೇಕವಾದಾಗ ಬದುಕೇ ಬೇಡವೆನಿಸಿ, ಸಾಯುವ ಆಸೆ ಹುಟ್ಟಿಕೊಳ್ಳಬಹುದು. ಅದರೆ ಆ ಆಸೆ ಬಹುಮಂದಿಗೆ ಬಹುಕಾಲ ನಿಲ್ಲುವುದಿಲ್ಲ, ನಿಲ್ಲುವುದಲ್ಲ. ತೀರಾ ಬುದ್ಧಿಗೆಟ್ಟವರು, ಎಷ್ಟೋ ಕೋಟಿಗೊಬ್ಬರು, ಆ ದೃಢಸಂಕಲ್ಪವನ್ನು ದೀರ್ಘಕಾಲ ಏಕರೂಪವಾಗಿ ಉಳಿಸಿಕೊಂಡಾರು. ಅಂತಹವರನ್ನು ಬಿಟ್ಟರೆ, ಸಾಯಬೇಕೆಂದುಕೊಂಡವರಿಗೆ ಸರಿಯಾಗಿ ಸಾಂತ್ವನ ಹೇಳುವವವರು ಸಮಯಕ್ಕೆ ಸರಿಯಾಗಿ ಸಿಕ್ಕರೆ, ಸಾಯುವ ಸಂಕಲ್ಪವು ಸಡಿಲವಾಗುವುದು. ಆದರೆ ಬುದ್ಧಿ ಹಾಳಾದವರಿಗೆ ಮಾತ್ರ ಹಿತೈಷಿಗಳ ಮಾತೂ ಪಥ್ಯವಲ್ಲ: ರಾವಣನಿಗೆ ವಿಭೀಷಣನ ನುಡಿ ಹಿಡಿಸಲಿಲ್ಲ; ವಾಲಿಗೆ ತಾರೆಯ ಮಾತು ರುಚಿಸಲಿಲ್ಲ.
ಬುದ್ಧಿ ಕೆಡುವುದು ಎಂದರೇನು? ಅದು ಹಾಗೆ ಆಗುವುದು ಯಾವಾಗ, ಏತಕ್ಕೆ? - ಎಂಬ ಪ್ರಶ್ನೆಗಳು ಬರುವಂತಹವೇ. "ನನ್ನ ರೂಪವು ಕೆಡಲಿ" "ನನ್ನ ಆರೋಗ್ಯವು ಹೋಗಲಿ" ಎಂದು ಯಾರಿಗಾದರೂ ಬಯಕೆ ಬಂದೀತೇ? ಅವೆರಡಕ್ಕಿಂತಲೂ ಮನಸ್ಸಿನ ಆರೋಗ್ಯ ಬಹುಮುಖ್ಯವೇ ಸರಿ: ದೈಹಿಕರೋಗಗಳಿಗೆ ಪರಿಹಾರಗಳು ಸಿಕ್ಕಾವು; ಆದರೆ ಮನಸ್ಸಿಗೋ ಬುದ್ಧಿಗೋ ರೋಗ ಹತ್ತಿತೆಂದರೆ ಅದಕ್ಕೆ ಪರಿಹಾರವನ್ನು ಕೊಡುವುದು ಯಾರಿಗೂ ಸುಲಭವಲ್ಲ.
ಸ್ವಾಸ್ಥ್ಯವೆಂದರೆ ಆರೋಗ್ಯವೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೂ ಆ ಪದಗಳ ಮೂಲಕ್ಕೇ ಹೋಗಿ ನೋಡಿದರೆ ಭೇದವು ಗೋಚರವಾಗುತ್ತದೆ. ಯಾವನಿಗೆ ಏನೂ ರೋಗವಿಲ್ಲವೋ ಅಂತಹವನು "ಅರೋಗ". ಅರೋಗನ ಸ್ಥಿತಿಯೇ (ಅಥವಾ ಭಾವವೇ) ಅರೋಗತೆ. ಅರೋಗತೆಯೇ "ಆರೋಗ್ಯ": ಆರೋಗ್ಯವೆಂದರೆ ರೋಗಗಳಿಲ್ಲದಿರುವಿಕೆ.
ಸ್ವಾಸ್ಥ್ಯವು ಅಷ್ಟುಮಾತ್ರವಲ್ಲ. ಸ್ವಸ್ಥನ ಸ್ಥಿತಿಯು (ಅಥವಾ ಭಾವವು) ಸ್ವಾಸ್ಥ್ಯ. ಸ್ವಸ್ಥನಾರು? - ಎಂಬ ಪ್ರಶ್ನೆಗೆ ಸುಶ್ರುತನಿತ್ತ ಉತ್ತರವನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಜ್ಞಾಪಿಸುತ್ತಿದ್ದರು. ಶರೀರದಲ್ಲಿ (ವಾತ-ಪಿತ್ತ-ಕಫಗಳೆಂಬ ಮೂರು) 'ದೋಷ'ಗಳಿರುತ್ತವೆ; ಅವು 'ಸಮ'ನಾಗಿರಬೇಕು. ಹಾಗೆಯೇ ಶರೀರದಲ್ಲಿಯ ಅಗ್ನಿ-ಧಾತುಕ್ರಿಯೆ-ಮಲಕ್ರಿಯೆಗಳೂ ಸಮನಾಗಿರಬೇಕು. ಮತ್ತು ಇವೆಲ್ಲಕ್ಕೂ ಆಧಾರಭೂತವಾಗಿ, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರಬೇಕು - ಎಂದು ಆ ಲಕ್ಷಣವು ಹೇಳುತ್ತದೆ. (ಇಲ್ಲಿಯ ಪಾರಿಭಾಷಿಕವಿಷಯಕ್ಕೆ ಬಹುವಿಸ್ತೃತವಾದ ವಿವರಣೆಯೇ ಬೇಕಲ್ಲವೇ?) ಇಷ್ಟೆಲ್ಲ ಲೆಕ್ಕಾಚಾರಗಳಿರುವುದರಿಂದಲೇ, "ಆಸ್ಪತ್ರೆಗೆ ಸೇರಿಲ್ಲದವರೆಲ್ಲ ಸ್ವಸ್ಥರೆಂದೇನಲ್ಲ" ಎಂಬುದಾಗಿ ಶ್ರೀರಂಗಮಹಾಗುರುಗಳು ವಿನೋದವಾಗಿ ಪ್ರತಿಪಾದಿಸುತ್ತಿದ್ದರು.
ಇಲ್ಲಿ ನಮಗೆ ಕೊನೆಯ ಅಂಶ ಪ್ರಸ್ತುತ. ಆತ್ಮನ ಅಥವಾ ಮನಸ್ಸಿನ ಪ್ರಸನ್ನತೆಯೆಂದರೇನು? ಹಾಗೆಯೇ, ಬುದ್ಧಿಯು ನಾಶವಾಗುವುದೆಂತು? - ಎಂಬ ಎರಡೂ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವನ್ನು ಕಾಣಬಹುದು. ಜೀವನವು ಅತ್ಯಂತಸಂಕೀರ್ಣವೆಂಬುದು ನಿರ್ವಿವಾದ. ಆದರೆ ಕಾರ್ಯ-ಕಾರಣ-ಭಾವವು ಮಾತ್ರ ಎಲ್ಲೆಡೆಯೂ ಇರುವುದೇ: ಪ್ರತಿಯೊಂದು ಕಾರ್ಯದ ಹಿಂದೆಯೂ ಕಾರಣವೊಂದು ಇದ್ದೇ ಇರುವುದು. ಪ್ರತಿಯೊಂದು ಕಾರಣದಿಂದಲೂ ಏನೋ ಪರಿಣಾಮವೊಂದು ಆಗಿಯೇ ತೀರುವುದು. ಒಂದೆಂದರೆ ಒಂದೇ ಅಲ್ಲ. ಒಂದು ಕಾರ್ಯದ ಹಿಂದೆ ಹಲವು ಕಾರಣಗಳಿದ್ದಾವು; ಒಂದು ಕಾರಣದಿಂದ ಹಲವು ಕಾರ್ಯಗಳು ಜನಿಸಿಯಾವು. ಆದರೆ ಕಾರ್ಯ-ಕಾರಣ-ಭಾವದ ಸರಪಣಿಯು ಮಾತ್ರ ಸರ್ವವ್ಯಾಪಿ. ಒಂದರ್ಥದಲ್ಲಿ ಇಡೀ ವಿಜ್ಞಾನದ ಸಾರಾಂಶವೇ ಇದು.
ಬುದ್ಧಿನಾಶದ ಹಿಂದೆಯಿರುವ ಕಾರ್ಯಕಾರಣಭಾವ-ಶೃಂಖಲೆಯನ್ನು ಗೀತೆಯು ಸುಭಗವಾಗಿ ತೋರಿಗೊಟ್ಟಿದೆ: "[ಇಂದ್ರಿಯ]ವಿಷಯಗಳ ಧ್ಯಾನದಿಂದಾಗಿ ಅವುಗಳ ಬಗ್ಗೆ ಒಂದು ಸಂಗವು (ಎಂದರೆ ಆಸಕ್ತಿಯು) ಉಂಟಾಗುತ್ತದೆ. ಉತ್ಕಟವಾದ ಸಂಗದಿಂದ ಕಾಮವು (ಎಂದರೆ ಬಯಕೆಯು) ಜನಿಸುತ್ತದೆ (ಎಂದರೆ, ಬಯಸಿದ್ದು ಬೇಕೇಬೇಕೆನಿಸುತ್ತದೆ); [ಬಯಕೆಯೀಡೇರದಿದ್ದಾಗ] ಅದು ಕ್ರೋಧಕ್ಕೆ ಎಡೆಮಾಡಿಕೊಡುತ್ತದೆ; ಕ್ರೋಧದಿಂದ ಸಂಮೋಹವು (ಎಂದರೆ ಸರಿ-ತಪ್ಪುಗಳು ಗೊತ್ತಾಗದಿರುವುದು) ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯಾಗುತ್ತದೆ (ಎಂದರೆ ಶಾಸ್ತ್ರದಿಂದಲೋ ಹಿರಿಯರಿಂದಲೋ ಪಡೆದ ಸದುಪದೇಶವು ಜಾರುತ್ತದೆ: ಗೊತ್ತಿದ್ದ ಸರಿದಾರಿಯೂ ಮರೆಯುತ್ತದೆ); ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ (ಎಂದರೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆಯು ಹಾಳಾಗುತ್ತದೆ); ಹಾಗೂ ಕೊನೆಯದಾಗಿ, ಬುದ್ಧಿನಾಶವಾದವನು ಪೂರ್ಣವಾಗಿ ಹಾಳಾಗುತ್ತಾನೆ. ಹೀಗೆ ಇಲ್ಲಿ ಎಂಟು ಘಟ್ಟಗಳನ್ನೂ, ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಜನಿಸುವುದನ್ನೂ, ಕಾರ್ಯ-ಕಾರಣಗಳ ಕೊಂಡಿಗಳಾಗಿ ಕಾಣಿಸಿದೆ.
ಇಷ್ಟು ಮಾತ್ರವಲ್ಲದೆ, ಮತ್ತು ಇದಕ್ಕೆ ಪ್ರತಿಯಾಗಿ, ಸಂಕ್ಷೇಪವಾಗಿ ಪ್ರಸನ್ನತೆಯನ್ನು ಪಡೆಯುವ ಬಗೆಯನ್ನೂ ಅಲ್ಲೇ ತಿಳಿಸಿದೆ. ಇಂದ್ರಿಯವಿಷಯಗಳನ್ನೇ ರಾಗದ್ವೇಷಗಳಿಲ್ಲದ, ಹಾಗೂ ತನ್ನ ವಶದಲ್ಲೇ ಇರುವ, ಇಂದ್ರಿಯ-ಮನಸ್ಸುಗಳಿಂದ ಅನುಭವಿಸುತ್ತಿರುವವನು ಪ್ರಸಾದವನ್ನು ಹೊಂದುವನು - ಎಂದೂ ತಿಳಿಸಿದೆ. (ಪ್ರಸಾದವೆಂದರೆ ಪ್ರಸನ್ನತೆಯೇ).
ಅಂತೂ ಇವಿಷ್ಟರ ಒಟ್ಟಾರೆ ನೋಟವನ್ನು ಹೀಗೆ ಹೇಳಬಹುದು. ಇಂದ್ರಿಯಗಳಿಂದ ನಾನಾಸುಖಗಳನ್ನು ಪಡೆಯುವುದೇ ದೋಷವೆಂದಲ್ಲ. ಸಂಗವೇ ತಪ್ಪಲ್ಲ. ಇಂದ್ರಿಯಗಳ ಮೇಲೆ ಹಿಡಿತವಿದ್ದಲ್ಲಿ ತೊಂದರೆಯಿಲ್ಲ. ಬದಲಾಗಿ, ಹಾಗಿಲ್ಲದಾದಾಗ, ಪರಿಣಾಮಪರಂಪರೆಯಿಂದ ಬುದ್ಧಿನಾಶವೂ, ಅದರಿಂದಾಗಿ ಅಧೋಗತಿಯೂ, ಸಿದ್ಧವೇ.
ಬುದ್ಧಿಯನ್ನು ಚೆನ್ನಾಗಿಟ್ಟುಕೊಳ್ಳೋಣ, ಸ್ವಸ್ಥರಾಗೋಣ!