Wednesday, May 18, 2022

ಪ್ರಧಾನ ಧ್ಯೇಯವನ್ನು ಮರೆಯದಿರೋಣ (Pradhana Dhyeyavannu Mareyadirona)

ಲೇಖಕರು: ವಾದಿರಾಜ. ಪ್ರಸನ್ನ 

(ಪ್ರತಿಕ್ರಿಯಿಸಿರಿ lekhana@ayvm.in)




ತಪಸ್ವಿಯಾದ ಋಷಭನಿಗೆ ಭರತನೆಂಬ ಮಗನಿದ್ದನು. ಅವನು ಭಗವಂತನ ಆರಾಧನೆ, ಜಪ, ಧ್ಯಾನಗಳಲ್ಲೇ ಕಾಲಕಳೆಯುತ್ತಿದ್ದನು. ಒಮ್ಮೆ ಭರತನು ಚಕ್ರಾನದಿಯಲ್ಲಿ ಸ್ನಾನವನ್ನು ಮುಗಿಸಿ ಜಪನಿರತನಾಗಿದ್ದನು. ಅನತಿದೂರದಲ್ಲಿ ತುಂಬುಗರ್ಭಿಣಿಯಾಗಿದ್ದ ಜಿಂಕೆಯು ನೀರನ್ನು ಕುಡಿಯಲು ನದಿಗಿಳಿಯಿತು. ಈ ಸಂದರ್ಭದಲ್ಲಿ ಭಯಂಕರವಾದ ಸಿಂಹಘರ್ಜನೆಯಾಯಿತು. ಆ ಭೀಕರಶಬ್ದಕ್ಕೆ, ಜಿಂಕೆಯು ನದಿಯನ್ನು ದಾಟಲು, ಭಯದಿಂದ ಮೇಲೆ ಹಾರಿದಾಗ ಹಠಾತ್ ಪ್ರಸವವಾಗಿ ಎಳೆಮರಿಯು ನೀರಿಗೆ ಬಿತ್ತು. ತನ್ನ ಮರಿಯ ಮೇಲೆ ಪ್ರೀತಿಯಿದ್ದರೂ, ಪ್ರಾಣಭೀತಿಯಿಂದ ಓಡುತ್ತಾ ಹೋಗಿ ಆಯಾಸ, ಯಾತನೆ ಮತ್ತು ಭಯದಿಂದಾಗಿ ತಾಯಿ ಜಿಂಕೆಯು ಪ್ರಾಣಬಿಟ್ಟಿತು. 


ಇತ್ತ ಜಿಂಕೆಮರಿಯು ನದಿ ನೀರಿನಿಂದ ಮೇಲೆ ಬರಲು ಪ್ರಯತ್ನಿಸುತ್ತಿದ್ದರೂ, ನೀರಿನ ರಭಸ ಅದನ್ನು ಬರಗೊಡಲಿಲ್ಲ. ಇದನ್ನು ಗಮನಿಸಿದ ಭರತನು ಜಿಂಕೆಮರಿಯನ್ನು ರಕ್ಷಿಸಿದನು. ಜಿಂಕೆಮರಿಯನ್ನು ಈ ಅರಣ್ಯದಲ್ಲಿ ಹಾಗೆಯೇ ಬಿಟ್ಟರೆ ಬದುಕಲಾರದೆಂದು ತನ್ನ ಆಶ್ರಮಕ್ಕೆ ತಂದನು. ಅತ್ಯಂತ ಪ್ರೀತಿಯಿಂದ ಜಿಂಕೆಮರಿಯ ಲಾಲನೆ-ಪಾಲನೆಯಲ್ಲೇ ಕಾಲಕಳೆಯುತ್ತಿದ್ದು, ಜಪ-ತಪ-ಧ್ಯಾನಾದಿಗಳೆಲ್ಲವನ್ನೂ ಮರೆತುಬಿಟ್ಟನು. ಹೀಗೆ ಕೆಲವರ್ಷಗಳು ಉರುಳಿದವು. ಒಂದು ದಿನ ಅವನ ಪ್ರೀತಿಯ ಜಿಂಕೆಯು ಕಣ್ಮರೆಯಾಗಿತ್ತು. ಭರತನು ಅದನ್ನು ಅರಣ್ಯದಲ್ಲೆಲ್ಲಾ ಹುಡುಕಿದರೂ ಸಿಗಲಿಲ್ಲ. ದುಃಖದಿಂದ ಜಿಂಕೆಯನ್ನೇ ಸ್ಮರಿಸುತ್ತಾ ಹುಚ್ಚನಂತೆ ಆಡುತ್ತಿದ್ದನು. ಆ ಪ್ರಿಯಜಿಂಕೆಯನ್ನೇ ಸ್ಮರಿಸುತ್ತಾ ಭರತನು ಪ್ರಾಣತ್ಯಾಗ ಮಾಡಿದನು. ಈ ಕಾರಣದಿಂದಲೇ ಭರತನು ಮುಂದಿನ ಜನ್ಮದಲ್ಲಿ  ಜಿಂಕೆಯಾಗಿ ಹುಟ್ಟಿದನು. ಆ ಜಿಂಕೆಗೆ ಹಿಂದಿನ ಜನ್ಮದ ಸಂಸ್ಕಾರದ ಫಲದಿಂದಾಗಿ ಜಿಂಕೆಯ ಹಿಂಡಿನಲ್ಲಿದ್ದರೂ ತಾನು ನೆಲೆಸಿದ್ದ ಸಾಲಿಗ್ರಾಮ ಕ್ಷೇತ್ರದ ಚಕ್ರಾನದಿಯಲ್ಲಿ ಪ್ರತಿದಿನವೂ ಬಂದು ಮುಳುಗುತ್ತಿತ್ತು. ಕಾಲಕ್ರಮೇಣ, ಜಿಂಕೆಯಾಗಿದ್ದ ಭರತನು ಮುಂದಿನ ಜನ್ಮದಲ್ಲಿ ಮತ್ತೆ ಮನುಷ್ಯನಾಗಿ, ಉತ್ತಮ ಕುಲದಲ್ಲಿ ಹುಟ್ಟಿದನು. ಧ್ಯಾನತತ್ಪರನಾಗಿದ್ದರಿಂದ ಅವನ ಹಿಂದಿನ ಜನ್ಮಗಳ ನೆನಪುಗಳು ಬಂದು ವ್ರತನಿಷ್ಠನಾಗಿ ಮೋಕ್ಷವನ್ನೇ ಪಡೆಯುತ್ತಾನೆ. ಅವನೇ ಜಡಭರತ ಎಂದು ಶ್ರೀಮದ್ಭಾಗವತವು ತಿಳಿಸುತ್ತದೆ.


ಭರತನು ಜಿಂಕೆಮರಿಯನ್ನು ನೀರಿನಿಂದ ಕಾಪಾಡಿದುದು ಸರಿಯಾದ ವಿಷಯವೇ. ಆದರೆ ಆ ಜಿಂಕೆಮರಿಯ ಮೋಹಕ್ಕೆ ಒಳಗಾಗಿ ತನ್ನ ಪ್ರಧಾನ ಧ್ಯೇಯವನ್ನೇ ಮರೆತುದುದು ಸರಿಯಲ್ಲ. ಪ್ರಧಾನ ಧ್ಯೇಯಕ್ಕೆ ವಿಮುಖನಾಗಿದ್ದರಿಂದ ಭಗವತ್ಪ್ರಾಪ್ತಿಯೆಂಬ ಗುರಿ ಸಾಧಿಸಲು ಅನೇಕ ಜನ್ಮಗಳೇ ಕಾಯಬೇಕಾಯಿತು. ತಿರುಪತಿಯ ಬೆಟ್ಟವನ್ನು ಹತ್ತುವಾಗ ದಣಿವಾಗುತ್ತದೆ; ಅದನ್ನು ನೀಗಿಸಲು ಅರವಟ್ಟಿಗೆಗಳಲ್ಲಿ ತಂಪು ಪಾನೀಯಗಳನ್ನು, ತಿಂಡಿತಿನಿಸುಗಳನ್ನು ಮಾರುತ್ತಿರುತ್ತಾರೆ. ಚೆನ್ನಾಗಿದೆಯೆಂದು ಅಲ್ಲೇ ತಿಂದುಂಡು  ಶ್ರೀನಿವಾಸನ ದರ್ಶನದ ಧ್ಯೇಯವನ್ನು ಮರೆತು ಹಿಂತಿರುಗಬಾರದಲ್ಲವೇ? "ಮಹಾಧ್ಯೇಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. 


ಭರತನ ವಿಷಯದಲ್ಲಿ ಗಮನಿಸಬೇಕಾದ ಧನಾತ್ಮಕ ಅಂಶವೇನೆಂದರೆ 'ಸಾಧಕನ ಸಾಧನೆಯು ಜನ್ಮ ಜನ್ಮಕ್ಕೂ ಮುಂದುವರಿಯುವುದು'. ಮಾನವ ಜನ್ಮದಲ್ಲಿ ಮಾತ್ರವೇ ಮೋಕ್ಷ ಸಾಧನೆಗೆ ಅವಕಾಶವಿರುವುದು. ನಾವು ಎಷ್ಟೋ ಜನ್ಮಗಳೆತ್ತಿ ಈಗ ಮನುಷ್ಯರಾಗಿ ಹುಟ್ಟಿದ್ದೇವೆ. ನಮ್ಮ ಜೀವನದಲ್ಲೂ ಪ್ರಧಾನ ಧ್ಯೇಯಕ್ಕೆ ಅಡ್ಡಿ ಬರಬಹುದು! ವಿಚಲಿತರಾಗದೆ ಮಹಾಧ್ಯೇಯದ  ಕಡೆ ಲಕ್ಷ್ಯ ಇರಬೇಕು. ಈ ಮಾನವ ಜನ್ಮ ಸಾರ್ಥಕವಾಗುವಂತೆ ಸಾಧನೆಗೈದು ಗುರಿ ಮುಟ್ಟುವಂತೆ ನಮ್ಮನ್ನೆಲ್ಲ ಅನುಗ್ರಹಿಸು ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸೋಣ.

ಸೂಚನೆ: 18/05/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.