ಒಮ್ಮೆ ಕೆಲವು ಕುರುಡರು ಆನೆ ಹೇಗಿರುತ್ತದೆಂದು ತಿಳಿಯಲು ಸಾಕಿದ ಆನೆಯೊಂದನ್ನು ಮುಟ್ಟಿದರು. ಒಬ್ಬ ಸೊಂಡಿಲನ್ನು ಮುಟ್ಟಿ, ಆನೆ ಬಾಳೆಕಂಬದಂತಿದೆ ಎಂದ; ಇನ್ನೊಬ್ಬ ಆನೆಯ ಹೊಟ್ಟೆಯನ್ನು ಮುಟ್ಟಿ ಗೋಡೆಯಂತಿದೆಯೆಂದ; ಕೊನೆಗೆ ಆನೆ ಹೇಗಿರುತ್ತದೆ ಎಂಬ ಬಗ್ಗೆ ಅವರವರಲ್ಲಿಯೇ ಜಗಳ ಆರಂಭವಾಯಿತು. ಹೀಗೆ ಒಂದು ವಿಷಯವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಇದ್ದಾಗ ಈ ರೀತಿಯ ಪರಿಸ್ಥಿತಿ ಉಂಟಾಗುವುದನ್ನು "ಅಂಧಗಜ ನ್ಯಾಯ" ವೆಂದು ಕರೆಯುತ್ತಾರೆ.
ಇಂತಹ ಅನೇಕ ಪ್ರಸಂಗಗಳನ್ನು ದೈನಂದಿನ ಜೀವನದಲ್ಲಿ ಕಾಣುತ್ತೇವೆ. ಒಂದು ವಿಷಯದ ಬಗ್ಗೆ ಪೂರ್ಣ ಪರಿಚಯವಿಲ್ಲದೇ ನಮ್ಮ ಬುದ್ಧಿಮಟ್ಟಕ್ಕೆ ನಿರ್ಧರಿಸಿ, ವಸ್ತುಸ್ಥಿತಿ ತಿಳಿದಾಗ ಪಶ್ಚಾತ್ತಾಪ ಪಡುವುದು ಸಾಮಾನ್ಯವಾಗಿದೆ. ಅಂತೆಯೇ ಅಂತರ್ಬಾಹ್ಯ ದೃಷ್ಟಿಯನ್ನು ಹೊಂದಿದ್ದ ಭಾರತೀಯ ಮಹರ್ಷಿಗಳಿಂದ ಬಂದಂತಹ ಆಚಾರ ವಿಚಾರಗಳನ್ನು ಅಂತರ್ದೃಷ್ಟಿಯಲ್ಲಿ ಅಂಧರಾದಂತಹವರು, ಇವೆಲ್ಲ ಅನಗತ್ಯ ಕಟ್ಟುಪಾಡುಗಳು ಅಥವಾ ಮೂಢನಂಬಿಕೆಗಳು ಎಂದು ನಿರ್ಧರಿಸಿ, ಆಚರಿಸುವವರ ಮೇಲೆ ಮರುಕಪಡುವುದನ್ನೋ ಹೀಯಾಳಿಸುವುದನ್ನೋ ನೋಡುತ್ತೇವೆ.
ಭಾರತೀಯ ಮಹರ್ಷಿಗಳು ಧರ್ಮ ಅರ್ಥ ಕಾಮ ಹಾಗೂ ಮೋಕ್ಷಗಳೆoಬ ಚತುರ್ವಿಧ ಪುರುಷಾರ್ಥಗಳನ್ನೊಳಗೊಂಡ ಪರಿಪೂರ್ಣ ಜೀವನವನ್ನು ಅನುಭವಿಸಿ, ಇಡೀ ಮನುಕುಲವೆಲ್ಲಾ ಅಂತಹ ಜೀವನವನ್ನು ನಡೆಸಿ ಸಂತೃಪ್ತರಾಗಬೇಕೆಂಬ ಸದುದ್ದೇಶದಿಂದ, ದಿವಿ ಭುವಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ಆಚಾರ ವಿಚಾರ, ಸಂಪ್ರದಾಯ ಸಂಸ್ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ; ವಿಧಿ ನಿಷೇಧಗಳನ್ನು ರೂಪಿಸಿದ್ದಾರೆ.
'ಪುರುಷ' ಎಂದರೆ ಈ ಶರೀರವೆಂಬ ಪುರದಲ್ಲಿ ವಾಸಿಸುವ ಜೀವ (ಆತ್ಮ). ಅವನು ಬಯಸುವ ಪ್ರಯೋಜನಗಳೇ ಪುರುಷಾರ್ಥಗಳು. ಧರ್ಮವೆಂದರೆ ಒಂದು ಸಹಜ ಸ್ಥಿತಿ. ಉದಾಹರಣೆಗೆ ಕಣ್ಣಿನ ಧರ್ಮವೆಂದರೆ ನೋಡುವಿಕೆ ಎಂಬ ಕಣ್ಣಿನ ಸಹಜ ಸ್ಥಿತಿ. ಅಂತೆಯೇ ಈ ಮಾನವ ಶರೀರದ ಸಹಜವಾದ ಸ್ಥಿತಿ ಜಾಗ್ರತ್, ಸ್ವಪ್ನ, ಸುಷುಪ್ತಿ ಹಾಗೂ ತುರೀಯಗಳೆಂಬ ನಾಲಕ್ಕೂ ಅವಸ್ಥೆಗಳನ್ನೂ ಅನುಭವಿಸುವುದು. ಅರ್ಥವೆಂದರೆ ಧರ್ಮಮಯವಾದ ಜೀವನವನ್ನು ನಡೆಸಲು ಬೇಕಾದ ಸಂಪತ್ತು. ಕಾಮವೆಂದರೆ ಧರ್ಮಕ್ಕೆ ವಿರೋಧವಲ್ಲದ ವಿಷಯಸುಖಗಳನ್ನು ಅನುಭವಿಸುವಿಕೆ ಹಾಗೂ ಮೋಕ್ಷವೆಂದರೆ ಭವಸಾಗರದಿಂದ ಬಿಡುಗಡೆಹೊಂದಿ ಪರಮಾತ್ಮನಲ್ಲಿ ಒಂದಾಗುವಿಕೆ- ಇವೇ ಪುರುಷನು ಬಯಸುವ ಪರಮ ಪ್ರಯೋಜನಗಳು. ಇಂತಹ ಪುರುಷಾರ್ಥಮಯವಾದ ಜೀವನವನ್ನು ನಡೆಸಲು ಯಾವುದು ಹಿತವೋ ಅದೇ ವಿಧಿ; ಯಾವುದು ಅಹಿತವೋ ಅದೇ ನಿಷೇಧವಾಗಿದೆ. ಹೇಗೆ ನೆಗಡಿಯಾದಾಗ ಆರೋಗ್ಯದ ದೃಷ್ಟಿಯಿಂದ ಬೆಚ್ಚಗಿನ ಬಟ್ಟೆ ತೊಡುವುದು ವಿಧಿ, ತಣ್ಣಗಿನ ವಾತಾವರಣಕ್ಕೆ ಹೋಗುವುದು ನಿಷೇಧವೋ ಅಂತೆಯೇ. "ಮೃದಂಗ ವಾದ್ಯಕ್ಕೆ ಏಕಪ್ಪ ಇಷ್ಟೆಲ್ಲಾ ಕಟ್ಟುಗಳು ಅಂದರೆ ಅದರಿಂದ ಉತ್ತಮವಾದ ನಾದವನ್ನು ಹೊರ ತರುವುದಕ್ಕಾಗಿ. ಹಾಗೆಯೇ ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುವುದಕ್ಕಾಗಿಯೇ ಈ ಎಲ್ಲಾ ಆಚಾರ ವಿಚಾರಗಳು, ವಿಧಿ ನಿಷೇಧಗಳು." "ನಾವು ಮಾಡುವ ಕೆಲಸವೆಲ್ಲವೂ ಇಂದ್ರಿಯಗಳಿಗೆ ಸಂಬಂಧಿಸಿದುದು. ಆದರೆ ಮಹರ್ಷಿಗಳ ಜೀವನ ಆತ್ಮಾವಲಂಬೀ ಜೀವನ. ನಾವು ಇಂದ್ರಿಯಗಳಿಂದ ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಹೇಗೆ ಗ್ರಹಿಸುತ್ತೇವೆಯೋ ಹಾಗೇ ಅವರು ಆತ್ಮನ ಮೂಲಕ ಜೀವನಕ್ಕೆ ಬೇಕಾದ ಎಲ್ಲ ವಿಷಯಗಳನ್ನು ಅರಿಯುತ್ತಾರೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿಗಳನ್ನು ಸ್ಮರಿಸಿ ಪುರುಷಾರ್ಥಮಯವಾದ ಜೀವನವನ್ನು ಹೊಂದಲು ಯತ್ನಿಸೋಣ.
ಸೂಚನೆ: 16/05/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.