Sunday, May 8, 2022

ಶ್ರೀ ರಾಮನ ಗುಣಗಳು - 54 ಆರಾಮ-ಶ್ರೀರಾಮ (Sriramana Gunagalu -54 Arama - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಸಂಸ್ಕೃತಭಾಷೆಯಲ್ಲಿ ಪ್ರತಿಯೊಂದು ಪದಕ್ಕೂ ಯಾವುದೋ ಒಂದು ಮೂಲವಿದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಅದನ್ನೇ 'ಧಾತು' ಎನ್ನುತ್ತಾರೆ. ಹಾಗೆಯೇ ರಾಮ, ಆರಾಮ, ರಮಣೀಯ, ರಮ್ಯ, ರಮಾ, ರಾಮಾ ಮುಂತಾದ ಎಲ್ಲಾ ಪದಗಳ ಮೂಲ 'ರಮ್' ಎಂಬ ಧಾತು. ಇದರ ಅರ್ಥ 'ಕ್ರೀಡಾ' ಎಂಬುದಾಗಿ. ಕ್ರೀಡೆಯ ಫಲಿತವಾದ ವಿಷಯ ಸಂತೋಷ-ಆನಂದವೇ ತಾನೆ. ಯಾವುದರಿಂದ ಸಂತೋಷ, ನೆಮ್ಮದಿ, ಶಾಂತಿ ದೊರಕುವುದೋ ಅದಕ್ಕೆ 'ರಾಮ' 'ಆರಾಮ' ಎಂಬ ಪದದ ಬಳಕೆ ಬಂದಿದೆ. ಈ ಹಿನ್ನೆಲೆಯಲ್ಲಿ 'ಆರಾಮ' ಎಂಬ ಸಂಸ್ಕೃತಪದಕ್ಕೆ 'ಉದ್ಯಾನವನ' ಎಂಬ ಅರ್ಥವಿದೆ. ಉದ್ಯಾನಕ್ಕೆ ಹೋದರೆ ಮಕ್ಕಳಿಂದ ಹಿಡಿದು ವೃದ್ಧರ ತನಕ ನೆಮ್ಮದಿ ಸಿಗುವುದು. ಆರಾಮವು ನೆಮ್ಮದಿಯ ತಾಣ. ಅಲ್ಲಿ ನಮ್ಮ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ದಿನದಿಂದ ದಿನಕ್ಕೆ ನೆಮ್ಮದಿಯನ್ನು ವೃದ್ಧಿಸಿಕೊಳ್ಳಬಹುದು. ಈ ನೆಮ್ಮದಿಯಲ್ಲೂ ಅಂತಹ ಸ್ತರಗಳುಂಟೇ? ಎಂದರೆ, ಹೌದು. ತೈತ್ತಿರೀಯೋಪನಿಷತ್ತಿನಲ್ಲಿ ಆನಂದದ ಸ್ತರಗಳನ್ನು ಹೇಳಲಾಗಿದೆ. ಒಬ್ಬ ದಷ್ಟ, ಪುಷ್ಟ, ದೃಢಕಾಯ, ಮಹಾರಾಜನಾದವನು ಅನುಭವಿಸುವ ಆನಂದವನ್ನು ಒಂದು 'ಮಾನುಷ-ಆನಂದ' ಎಂದು ಭಾವಿಸುವುದಾದರೆ; ಅದಕ್ಕೆ ಕೋಟಿ ಕೋಟಿ ಪಟ್ಟು ಇರುವ ಆನಂದವನ್ನು 'ಬ್ರಹ್ಮಾನಂದ' ಎನ್ನುತ್ತಾರೆ. ಇದೇ ಪ್ರತಿಯೊಬ್ಬ ಮಾನವನ ಪರಮಧ್ಯೇಯ. ಇದನ್ನು ಸಾಧಿಸುವುದರಲ್ಲೇ   ಮಾನವಜನ್ಮದ ಹಿರಿಮೆ ಇರುವುದು.ಇದಕ್ಕಾಗಿ ಅನೇಕ ಆದರ್ಶಗಳನ್ನು ಆಯ್ಕೆ ಮಾಡುತ್ತೇವೆ. ಅವುಗಳಲ್ಲಿ ಮೊದಲು ಸಿಗುವುದೇ ಶ್ರೀರಾಮನ ಈ 'ಆರಾಮತ್ವ' ಗುಣ.  


 ಮೇಲೆ ಹೇಳಿದ ಸರ್ವವಿಧವಾದ ಅನಂದದ ಗಣಿ ಶ್ರೀರಾಮ. ಅವನೆಂದರೆ ಆನಂದ. ಅವನೇ ಆನಂದದ ರೂಪ. ಅವನಿಂದಲೇ ಆನಂದ. ಆನಂದವನ್ನು ಮೂರು ಸ್ತರಗಳಲ್ಲಿ ಅನುಭವಿಸಲು ಸಾಧ್ಯ. ಇಂದ್ರಿಯಗಳಿಂದ, ಮನಸ್ಸಿನಿಂದ ಮತ್ತು ಆತ್ಮನಿಂದ. ಹೀಗೆ ಮೂರರಿಂದಲೂ ಆನಂದಕ್ಕೆ ಶ್ರೀರಾಮನಲ್ಲಿ ವಿಷಯವಿದೆ. ಶ್ರೀರಾಮನು ನಯನಮನೋಹರನಾಗಿದ್ದ. ನೋಡಿದಷ್ಟೂ ಇನ್ನೂ ನೋಡಬೇಕು-ಮತ್ತೂ ನೋಡಬೇಕು ಎಂಬಷ್ಟು ಆಸೆ. ಅವನ ಗುಣಗಳನ್ನು ಎಷ್ಟು ಹೇಳಿದರೂ ತೃಪ್ತಿ ಸಿಗದಷ್ಟು ವಾಚಾಮಗೋಚರ. 'ರಸೌ ವೈ ಸಃ' ಎಲ್ಲಾ ರಸಗಳಿಗೂ ರಸನಾಗಿ ಸವಿದಷ್ಟೂ ಇನ್ನೂ ಸವಿಯಬೇಕೆಂಬ ರಸರೂಪೀ. ಅವನ ಭೌತಿಕ ಸಾಮೀಪ್ಯ-ಸಾನ್ನಿಧ್ಯ ಇನ್ನಷ್ಟು ಇನ್ನಷ್ಟು ಇರಲಿ ಎಂದು  ಬಯಸುವ ಮೈ-ಮನಸ್ಸುಗಳು. ಶ್ರೀರಂಗ ಮಹಾಗುರುಗಳು ಹೇಳುವಂತೆ "ಶ್ರೀರಾಮನು ಸ್ಥೂಲದೃಷ್ಟಿಗೆ ಮನುಷ್ಯ, ಸೂಕ್ಷ್ಮದೃಷ್ಟಿಗೆ ದೇವತೆ, ಪರಾದೃಷ್ಟಿಗೆ ಪರಂಜ್ಯೋತಿ" ಎನ್ನುವಂತೆ ಎಲ್ಲಾ ದೃಷ್ಟಿಗೂ ವಿಷಯನಾಗಿದ್ದಾನೆ. ಮನುಷ್ಯನ ಸೌಂದರ್ಯ ಬಾಹ್ಯದೃಷ್ಟಿಗೆ ನಿಲುಕುವಂತಹದ್ದು. ಆ ಹಿನ್ನೆಲೆಯಲ್ಲಿ ಆತ ಸರ್ವಾಂಗ ಸುಂದರ. ವಾಲ್ಮೀಕಿಗಳೇ ಹೇಳುವಂತೆ ಅವನು  "ಸಮಭವಿಕ್ತ ಸುಂದರಾಂಗ"  ಮತ್ತು ಹಸ್ತಸಾಮುದ್ರಿಕಶಾಸ್ತ್ರವು ಹೇಳುವ ಎಲ್ಲಾ ಗುಣಲಕ್ಷಣಗಳಿಂದ ಕೂಡಿದ್ದ. ಇದು ಅವನ ಸ್ಥೂಲದೃಷ್ಟಿಗೆ ಬೇಕಾದ ಸೌಂದರ್ಯವಾಗಿತ್ತು. ಅವನನ್ನು ದೇವತಾತ್ಮಕನಾಗಿ ಕಾಣುವುದು ಮನಸ್ಸಿನಿಂದ. ನೋಡಲು ಮನಸ್ಸೇ ಯಾರಿಗೆ ಸಾಧನವಾಗಿದೆಯೋ ಅಂತಹ ಮುನಿಗಳಿಗೆ ಆತ ದೇವತಾರೂಪನಾಗಿ ಗೋಚರಿಸುತ್ತಿದ್ದ. ಅವರ ಹೃದಯ-ಆರಾಮದಲ್ಲಿ ಸದಾ ರಮಿಸುತ್ತಿದ್ದ. ಈ ಕಾರಣದಿಂದಲೂ ಆತನಿಗೆ 'ರಮಂತೇ ಯೋಗಿನೋ ಯಸ್ಮಿನ್' ಎಂಬುದಾಗಿ 'ರಾಮ' ನಾಮಧೇಯ ಬಂದಿದೆ ಎಂದೂ ಹೇಳುತ್ತಾರೆ. ಅಂತಹ ಯೋಗಿಗಳ ಹೃದಯವೇ ಆರಾಮ-ಉದ್ಯಾನ. ಅಲ್ಲಿ ಸದಾ ರಮಿಸುವವನಾದ್ದರಿಂದ ಅವನನ್ನು 'ಆರಾಮ' ಶ್ರೀರಾಮನೆಂದರೆ ಸಾರ್ಥಕವಾಗುತ್ತದಯಲ್ಲವೇ. ಎಲ್ಲದಕ್ಕೂ ಮಿಗಿಲಾಗಿ ಆತ 'ಪರಂಜ್ಯೋತಿ-ಬ್ರಹ್ಮಾನಂದರೂಪೀ ಎಂಬುದನ್ನು ಮರೆಯಬಾರದು.


ಸೂಚನೆ :8/5/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.