Saturday, May 14, 2022

ಕಾಳಿದಾಸನ ಜೀವನದರ್ಶನ – 10 ವಿದ್ಯೆಗೆ ಬೇಕಾದ ಪಾತ್ರವಿಶೇಷ ( Kalidasana Jivanadarshana - 10 Vidyege Bekada Patravishesha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಎಷ್ಟೋ ಸಂದರ್ಭಗಳಲ್ಲಿ ಗುರುವಿನ ಆಶಯವನ್ನು ಶಿಷ್ಯನು ಗ್ರಹಿಸುವುದಿಲ್ಲ; ಅಥವಾ ಗ್ರಹಿಸಿದ್ದನ್ನು ಸರಿಯಾಗಿ ಉಳಿಸಿಕೊಳ್ಳುವುದಿಲ್ಲ. "ಕಿಲುಬು ಹಿಡಿದ ಪಾತ್ರೆಯಲ್ಲಿ ಹಾಲು ಹಾಕಿಸಿಕೊಂಡರೆ ಹಾಲು ಹಾಲಾಗಿ ಉಳಿಯುವುದೇ? ಹಾಲು ಹಾಳಾಗುವುದು, ಅಷ್ಟೆ" ಎಂಬ ಉದಾಹರಣೆಯ ಮೂಲಕ ಶಿಷ್ಯನ ಜವಾಬ್ದಾರಿಯು ಎಂತಹುದೆಂಬುದನ್ನು ಶ್ರೀರಂಗಮಹಾಗುರುಗಳು ಎಚ್ಚರಿಸುತ್ತಿದ್ದರು.

ಇಂತಹ ಪಾತ್ರೆಯಲ್ಲಿ ಇಟ್ಟದ್ದು ಸ್ವಲ್ಪವೇ ಕಾಲದಲ್ಲಿ ಕೆಟ್ಟಿದ್ದೇ ದಿಟ. ಆದರೆ ಇದನ್ನೊಪ್ಪಿಕೊಳ್ಳುವ ಬದಲಾಗಿ, "ತನಗೆ ಕೊಟ್ಟದ್ದೇ ಕೆಟ್ಟದ್ದು" ಎಂದು ಗುರುವನ್ನೇ ದೂಷಿಸುವ ಶಿಷ್ಯಭೂಪರೂ ಇಲ್ಲದಿಲ್ಲ. ಕಿಲುಬಿನ ಪಾತ್ರೆ ಹಾಲನ್ನು ಗ್ರಹಿಸಿತು, ಧರಿಸಲಿಲ್ಲ;ಅಲ್ಲವೇ? ಎಂದೇ, ಶಿಷ್ಯನು ಗ್ರಹಿಸಲೂ ಧರಿಸಲೂ ಸಮರ್ಥನಾಗಿರಬೇಕೆಂದು ಹೇಳಿದುದು.

ಹಾಕಿಸಿಕೊಂಡಾಗ ಹಾಲು ಚೆಲ್ಲಿಹೋಗಲಿಲ್ಲವಾದರೂ, ಅಲ್ಲಿಗೇ ಅಷ್ಟಕ್ಕೇ ತನ್ನ ಪಾತ್ರತ್ವ ಪೂರ್ಣವಾಗಲಿಲ್ಲ. ಏಕೆ? ಹಾಲಿನ ಧರ್ಮವೇ ಮುಂದಕ್ಕೆ ಉಳಿಯಲಾಗಲಿಲ್ಲವೆಂದಾದರೆ, ಅಂತಹ ಹಾಲಿನಿಂದ ತಾನೆ ಏನು ಪ್ರಯೋಜನ? ಹಾಗೆ ಕುಲಗೆಟ್ಟ ಹಾಲು ಕೊನೆಗೆ ಕಾಫಿಗೂ ಬಾರದು. ಅಂತಿಮವಾಗಿ ಅದನ್ನು ನಾವೇ ಕೈಯಾರೆ ಚೆಲ್ಲುವುದಾಗುತ್ತದೆಯಷ್ಟೆ! ಪೋಷಣೆಗಾಗಿ ಬಂದದ್ದು ದೂಷಣೆಗೆ ವಿಷಯವಾಯಿತು! ಕಲ್ಮಷವಿರುವ ಪಾತ್ರೆಯಲ್ಲಿಟ್ಟ ಪೇಯಪೀಯೂಷವೂ ದೂಷ್ಯವಿಷವಾದೀತು! ಕಲ್ಮಷಚಿತ್ತನಾದ ದುಷ್ಟಶಿಷ್ಯನಿಗಿತ್ತ ಉತ್ಕೃಷ್ಟವಿದ್ಯೆಯೂ ಭ್ರಷ್ಟವಾಗುವಂತಹುದೇ!

ವಿದ್ಯೆಯನ್ನು ಸ್ವೀಕರಿಸಲು ಬೇಕಾದ ಎಲ್ಲ ಗುಣ-ಸಾಮರ್ಥ್ಯಗಳನ್ನೂ ಹೊಂದಿರುವ ಶಿಷ್ಯನು ಬರೀ ಪಾತ್ರನಲ್ಲ; ಆತನನ್ನು ಪಾತ್ರವಿಶೇಷವೆಂದೇ ಕಾಳಿದಾಸನು ಕರೆಯುವುದು. ಅಂತಹವನಲ್ಲಿ ಇಟ್ಟ ವಿದ್ಯೆಯು ಸಾರ್ಥಕ್ಯವನ್ನು ಪಡೆಯುತ್ತದೆ. ಏನು ವಿದ್ಯೆಯ ಸಾರ್ಥಕ್ಯವೆಂದರೆ? ಗುರುವಿತ್ತ ವಿದ್ಯೆಯಲ್ಲಿ ಏನು ಗುಣವಿತ್ತೋ ಅದಕ್ಕಿಂತಲೂ ಬೇರೆಯಾದ ಗುಣವನ್ನೇ ಆ ವಿದ್ಯೆಯು ಹೊಂದುವುದು (ಗುಣಾಂತರಂ ವ್ರಜತಿ). ಹಾಗೆಂದರೆ ಏನೋ ವ್ಯತ್ಯಾಸವಾಗಿಬಿಡುವುದೆಂದಲ್ಲ. ಇಲ್ಲಿ "ಗುಣಾಂತರ"ವೆಂಬುವುದು "ದೇಶಾಂತರ"ವೆಂಬಂತಲ್ಲ.  'ದೇಶಾಂತರ'ವೆಂದರೆ 'ಬೇರೆ ದೇಶ' ಎಂದರ್ಥ. ಆದರೆ "ಗುಣಾಂತರವನ್ನು ಹೊಂದುವುದು" ಎಂದರೆ ಬೇರಿನ್ನಾವುದೋ ಗುಣವನ್ನು -  ಎಂದರೆ ಬೇಡದ ಗುಣವನ್ನು, ಹೊಂದಿಬಿಡುವುದೆಂದಲ್ಲ. ಬದಲಾಗಿ, ವ್ಯಾಖ್ಯಾನಕಾರರೂ ಸ್ಫುಟಪಡಿಸುವಂತೆ, "ಶ್ರೇಷ್ಠಗುಣಂ, ಅಧಿಕಗುಣಂ ವಾ": ಶ್ರೇಷ್ಠವಾದ ಗುಣವನ್ನು ಹೊಂದುವುದು, ಹೆಚ್ಚಾದ ಗುಣವನ್ನು ಹೊಂದುವುದು.

ಅಲ್ಲಿಯೇ ಕೊಡಲಾಗಿರುವ ಉಪಮೆಯು ಇದನ್ನು ಸುಸ್ಪಷ್ಟಪಡಿಸುವುದು. ಮೋಡದ ನೀರು ಸಮುದ್ರದ ಚಿಪ್ಪಿನೊಳಗೆ ಬಿದ್ದದ್ದು ಮುತ್ತಾಗುವುದು. ಬಿದ್ದದ್ದು ಕೇವಲ ಮಳೆಯ ಹನಿ; ಆದರೆ ಆದದ್ದು ಮಾತ್ರ ಹೊಳೆವ ಮುತ್ತು. ಮಳೆಯ ಹನಿಯೆಂದರೆ ಎಷ್ಟಾದರೂ ಬರೀ ನೀರು, ಅಷ್ಟೆ. ಅದನ್ನು ಸುಮ್ಮನೊಂದು ಪಾತ್ರೆಯಲ್ಲಿಟ್ಟಿದ್ದರೆ, ಅದು ನೀರಾಗಿಯೇ ಉಳಿದಿರುವಂತಹುದೇ. ಆದರೆ ವಿಶೇಷವಾದ ಪಾತ್ರೆಯಲ್ಲಿ, ಎಂದರೆ ಇಲ್ಲಿ ಸಮುದ್ರದ ಶುಕ್ತಿಯೊಳಗೆ (ಎಂದರೆ ಚಿಪ್ಪಿನೊಳಗೆ), ಬಿದ್ದ ಬರೀ ವಾರಿಯು ಮಿನುಗುವ ಮುಕ್ತಾಫಲವೇ ಆಗಿಹೋಯಿತು!

ಗುರುವಿಟ್ಟ ಉಪದೇಶವೂ ಹಾಗೆಯೇ. ಅದನ್ನು ಬರೀ ನೀರಿನಂತೆ ಎನ್ನಿ. ಸಮುದ್ರದ ಚಿಪ್ಪೆಂಬುದು ಸತ್ಪಾತ್ರನಂತೆ ಎನ್ನಿ. ಚಿಪ್ಪಿನಲ್ಲಿ ಬಿದ್ದುದರ ಫಲವಾಗಿ ಈಗಾದದ್ದು ಮುಕ್ತಾಫಲವಾಗಿ!: ಜಗತ್ತಿನಲ್ಲಿ ಜಲದ ಬೆಲೆಯೇನು, ಮುತ್ತಿನ ಮೌಲ್ಯವೇನು?! ನಮ್ಮ ಉಪಮೇಯಕ್ಕಿಲ್ಲಿ ಅನ್ವಯಿಸಿ ಹೇಳುವುದಾದರೆ, ಸುಶಿಷ್ಯನೇ ಸತ್ಪಾತ್ರ. ಆತನಲ್ಲಿ ಗುರುವು ವಿದ್ಯೆಯನ್ನಿಡುವನು. ಆ ವಿದ್ಯೆಯು ಗುರುವಿಟ್ಟಂತೆಯೇ ಅವನಲ್ಲಿ ಉಳಿದಿರುವುದಿಲ್ಲ. ಅದು ಮಾರ್ಪಾಡನ್ನು ಹೊಂದುತ್ತದೆ. ಮತ್ತು ಆ ಮಾರ್ಪಾಡಾದರೂ ಕಡಿಮೆಯ ಮಟ್ಟದ್ದಲ್ಲ. ಅದು ವಿಶಿಷ್ಟವಾದ ಮಾರ್ಪಾಡೇ ಸರಿ. ಬರೀ ಇಮ್ಮಡಿ ಮುಮ್ಮಡಿಯೆಂದೂ ಅಲ್ಲ. ನೂರ್ಮಡಿಯೂ ಆದೀತು! ಅಂತೂ ಬೆಲೆಕಟ್ಟಲಾಗದಂತಹ ಬೆಳವಣಿಗೆಯೇ ಆಗಬಹುದು. ಹೀಗಾಗಿ, ಕಿರಿದಾಗಿ ಕೊಟ್ಟದ್ದನ್ನೂ ಹಿರಿದಾಗಿ ಹೆಚ್ಚಿಸುವವನು ಸತ್ಪಾತ್ರನೆನಿಸುವ ಛಾತ್ರ.

ಈ ಉತ್ತಮವಾದ ಉದಾಹರಣೆಯು ಬಂದಿರುವುದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ. ಹೇಳಿದವನು ಗಣದಾಸನೆಂಬ ಗುರು. ಹೇಳಿದುದು ಮಾಳವಿಕೆಯೆಂಬ ಶಿಷ್ಯೆಯ ಬಗ್ಗೆ. ಮಾಳವಿಕೆಯ ಸತ್ಪಾತ್ರತೆಯ ಬಗ್ಗೆ ಚರ್ಚೆಯ ಪ್ರಸಂಗದಲ್ಲಿ ಬಂದಿರುವ ಮಾತಿದು. ಆದರೆ ಅವಳ ವಿಷಯದಲ್ಲಿ ಗುರುವಾದ ಗಣದಾಸನಿಗೆ ಅನಲ್ಪವಾದ ವಿಶ್ವಾಸವಿದೆ. ಅವಳಿಗೆ ನಾಟ್ಯವಿದ್ಯೆಯಲ್ಲಿ ಏನನ್ನು ಬೋಧಿಸಿದರೂ ಅದನ್ನವಳು ಕಲಿಯುವಳು. ಏನನ್ನು ಹೇಳಿಕೊಡಲಾಗಿದೆಯೋ ಅದನ್ನು ಅಭಿನಯಿಸಿ ತೋರಿಸುವಳು: ಅವಳ ಅಭಿನಯವಾದರೂ ಸಾಧಾರಣವಲ್ಲ; ಚಾಚೂ ತಪ್ಪದ ಅಭಿನಯವದು!  ಅದೂ ಯಾವುದರಲ್ಲಿ? ಭಾವಿಕದಲ್ಲಿ!

ಭಾವಿಕ

ಏನು ಭಾವಿಕವೆಂದರೆ? ಭಾವದಿಂದ ನೆರವೇರಿದುದು ಭಾವಿಕ (ಭಾವೇನ ನಿರ್ವೃತ್ತಂ ಭಾವಿಕಂ). ಅಭಿನಯದಲ್ಲಿ ನಾಲ್ಕು ಅಂಗಗಳುಂಟು - ಆಹಾರ್ಯ, ಆಂಗಿಕ, ವಾಚಿಕ, ಮತ್ತು ಸಾತ್ತ್ವಿಕ - ಎಂಬುದಾಗಿ. ವೇಷಭೂಷಣಗಳಿಂದಾಗುವುದು ಆಹಾರ್ಯ. ಅಂಗಗಳ ಚಲನೆಯಿಂದಾಗುವುದು ಆಂಗಿಕ. ಮಾತಿನಲ್ಲಿ ಹೇಳುವುದು ವಾಚಿಕ. ಸತ್ತ್ವವೆಂದರೆ ಮನಸ್ಸು; ಆದ್ದರಿಂದ ಸಾತ್ತ್ವಿಕವೆಂದರೆ ಮನಸ್ಸಂಬಂಧಿಯಾದದ್ದು. ಆಹಾರ್ಯ-ವಾಚಿಕಗಳು ಅಷ್ಟು ಕ್ಲಿಷ್ಟವಲ್ಲ. ಆಂಗಿಕವೇನೋ ಉತ್ಕೃಷ್ಟವಾದ ಅಭ್ಯಾಸದಿಂದ ಲಭ್ಯವಾಗುತ್ತದೆ.

ಆದರೆ ಅತ್ಯಂತ ಕಠಿನವಾದುದೆಂದರೆ ಸಾತ್ತ್ವಿಕವೇ ಸರಿ. ಕ್ಷಣಾರ್ಧಕಾಲ ಮನಸ್ಸು ವಿಚಲಿತವಾದರೂ ಸಾತ್ತ್ವಿಕಾಭಿನಯವು ಕಳೆ ಕಟ್ಟದು. ಮನಸ್ಸು ಅಭಿನೇಯದಲ್ಲೇ ಮುಳುಗಿರಬೇಕು. (ಅಭಿನೇಯವೆಂದರೆ ಯಾವ ವಸ್ತುವನ್ನು, ಎಂದರೆ ವಿಷಯವನ್ನು, ಅಭಿನಯಿಸಲು ಹೊರಟಿದೆಯೋ ಅದು). ಆಂಗಿಕವನ್ನು ಅಂಶಾಂಶವಾಗಿ ಅಭ್ಯಾಸಮಾಡಬಹುದು. ಆದರೆ ಸಾತ್ತ್ವಿಕವೆಂಬುದನ್ನು ಉಂಟುಮಾಡಿಕೊಳ್ಳುವುದೂ ಕಷ್ಟ. ಉಳಿಸಿಕೊಳ್ಳುವುದೂ ಕಷ್ಟ. ಏಕೆಂದರೆ ತನ್ನತನವನ್ನೇ ಮರೆತು ಮಾಡಬೇಕಾದದ್ದು ಸಾತ್ತ್ವಿಕ.

ಸಭೆಯಲ್ಲಿಯ ತೀರ ಸಾಧಾರಣರಿರಬಹುದು; ನಾಟ್ಯವಿದ್ಯೆಯನ್ನು ಬಲ್ಲ ಸಹೃದಯರಿರಬಹುದು; ಕಥಾಭಾಗವನ್ನು ಚೆನ್ನಾಗಿ ಅರಿತಿರುವವರಿರಬಹುದು; ವಿದ್ವಾಂಸರಾಗಿದ್ದೂ ದೋಷಗಳತ್ತಲೇ ಕಣ್ಣಿಟ್ಟವರಿರಬಹುದು - ಇವರೆಲ್ಲರಿಗೂ ಅಭಿನಯವು ಸರಸವಾಗಿ-ಸ್ವರಸವಾಗಿ ಮೂಡಿಬಂದಿತೆಂದು ತೋರಿ ತೃಪ್ತಿಯುಂಟಾಗಬೇಕೆಂದರೆ ಸಾತ್ತ್ವಿಕವು ಅತ್ಯುತ್ಕೃಷ್ಟವಾಗಿರಬೇಕಾದದ್ದೇ. ಭಾವಿಕವು ಆ ಬಗೆಯದು.

ಭಾವಿಕವನ್ನು ಖಂಡಖಂಡವಾಗಿ ಬೋಧಿಸುವುದು ಸುಲಭವಲ್ಲ; ಕಲಿತದ್ದೂ ಒಮ್ಮೆ ಬರುವಂತೆ ಮತ್ತೊಮ್ಮೆ ಬರುವುದೆಂದು ಧೈರ್ಯವಾಗಿ ಹೇಳಲೂ ಶಕ್ಯವಿಲ್ಲ. ತಾನು ಅಭಿನಯಿಸುವ ಪಾತ್ರದಲ್ಲಿ, ಅದರ ಭಾವದಲ್ಲಿ, ಒಟ್ಟಿನ ರಸದಲ್ಲಿ, ಪೂರ್ಣವಾಗಿ ಮುಳುಗಿದಾಗ ಬರತಕ್ಕದ್ದೇ ಭಾವಿಕ.

ಹಾಗಿರುವಲ್ಲಿ ಮಾಳವಿಕೆಯು ನಾಟ್ಯಾಚಾರ್ಯನು ಹೇಳಿಕೊಟ್ಟದ್ದನ್ನು - ಅದನ್ನೇ ಹಾಗೆಯೇ ಅಭಿನಯಿಸುತ್ತಾಳೆ. "ತತ್ತದ್-ವಿಶೇಷ-ಕರಣ"ವನ್ನು ಮಾಡುತ್ತಾಳೆ. ಹಾಗೆಂದರೆ, ಯಾವ ನಿರ್ದಿಷ್ಟವಾದ ನರ್ತನವನ್ನು ಹೇಳಿಕೊಡಲಾಯಿತೋ ಅದನ್ನೇ ಅಭಿನಯಿಸುವುದು. "ಹೇಳಿಕೊಟ್ಟದ್ದೊಂದು, ಅಭಿನಯಿಸುವುದು ಮತ್ತೊಂದು" – ಎಂದಾಗಬಾರದಲ್ಲವೇ? ಏನೇನನ್ನು ಹೇಳಿಕೊಡಲಾಗುತ್ತದೋ ಅದದನ್ನೇ (ತತ್-ತದ್) ಅಭಿನಯಿಸಿಬಿಡುತ್ತಾಳೆ, ಅವಳು. ಹೇಳಿಕೊಡುತ್ತಿದ್ದಂತೆಯೇ ಹಾಗೆಯೇ ಅಭಿನಯಿಸಿ ತೋರಿಸಿಬಿಡುತ್ತಿದ್ದಾಳೆ ಕೂಡ!

ಸೂಚನೆ : 14/05/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.