Sunday, May 22, 2022

ಕಾಳಿದಾಸನ ಜೀವನದರ್ಶನ – 12 ಶಾಸ್ತ್ರ-ಪ್ರಯೋಗ-ವಿಮರ್ಶೆ (Kalidasana Jivanadarshana - 12 Shastra-Prayoga-Vimarshe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಗೀತ, ನಾಟ್ಯ ಮುಂತಾದುವಲ್ಲಿ, ಅನೇಕ ಮಂದಿ ಪ್ರಯೋಗದ ವಿಷಯದಲ್ಲಿ ಪ್ರಗತರಾಗಿದ್ದರೂ ಶಾಸ್ತ್ರಭಾಗದಲ್ಲಿ ಅವರ ಅರಿವು ತೀರ ಸಾಧಾರಣವಾಗಿರುವುದು; ಹಾಗೆಯೇ, ಮತ್ತೆ ಕೆಲವರಿಗೆ ಶಾಸ್ತ್ರಭಾಗದಲ್ಲಿ ಮತಿಯು ಚುರುಕಾಗಿ ಓಡುವುದಾದರೂ ಪ್ರಯೋಗದ ವಿಷಯದಲ್ಲಿ ಅದು ಕುಂಠಿತವಾಗಿರುವುದುಂಟು.. ಇಂದಂತೂ ಬಹುಮಂದಿ ಸಂಗೀತಗಾರರಿಗೂ ನಾಟ್ಯಪಟುಗಳಿಗೂ ಕಲಾನೈಪುಣ್ಯವೆಂಬುದೊಂದಷ್ಟಿದ್ದರೂ ಶಾಸ್ತ್ರಭಾಗದ ಜ್ಞಾನವು ಅತ್ಯಲ್ಪವಾಗಿರುವುದು. ಶಾಸ್ತ್ರವೇನು, ತಾವು ಪ್ರದರ್ಶಿಸುವ ಕಲೆಯಲ್ಲಿ ಬಳಸಲಾಗಿರುವ ಸಾಹಿತ್ಯಭಾಗವು ಸಹ ಶುದ್ಧವಾಗಿರುವುದಿಲ್ಲ, ಅರ್ಥಜ್ಞಾನವಂತೂ ದೂರವೇ ಉಳಿಯಿತು. ಇದು ಬಹಳ ಶೋಚನೀಯವೇ ಸರಿ.

ಎಂದೇ ಕಲಾನಿರೂಪಣದಲ್ಲಿಅನೇಕದೋಷಗಳು ಕಂಡುಬರುತ್ತಿವೆ. ಅಂತಹ ಮಂದಿಯೇ ಬಹಳ ಹೆಚ್ಚಾಗಿರಲು ಕಾರಣವೆಂದರೆ, ಸಂಗೀತಶಾಸ್ತ್ರಚತುರ, ನಾಟ್ಯಪ್ರವೀಣ - ಎಂದು ಮುಂತಾಗಿ ಕರೆಸಿಕೊಳ್ಳುವ (ವಯೋವೃದ್ಧರೂ ಆಗಿರುವ) ಆಚಾರ್ಯರ ದೊಡ್ಡ ಸ್ತೋಮವೇ, ವಾಸ್ತವವಾಗಿ ತಲೆಮಾರುಗಳೇ, ಆಗಿದ್ದುಬಿಟ್ಟು, ಅಂತಹವರು ತಮ್ಮ ಶಿಷ್ಯರಿಗೇ ಮೌಲಿಕವಾದದ್ದೆಷ್ಟನ್ನೋ  ಹೇಳಿಕೊಡಲಾಗದವರಾಗಿದ್ದಾರೆ.

ಇಷ್ಟು ಸಾಲದೆಂಬಂತೆ, ಶಾಸ್ತ್ರ-ಸಾಹಿತ್ಯಗಳ ಜ್ಞಾನದ ಆವಶ್ಯಕತೆಗಳನ್ನು ಸಹ ಅಲ್ಲಗಳೆಯುವುದೋ ಪರಿಹಾಸಮಾಡುವುದೋ ಕೂಡ ಸಾಮಾನ್ಯವಾಗಿಬಿಟ್ಟಿದೆ. ಸಂಸ್ಕೃತಭಾಷಾಜ್ಞಾನವು ಸ್ವಲ್ಪವೂ ಇಲ್ಲದಂತಾಗಿ, ಮೂಲಗ್ರಂಥಗಳ ಪರಿಚಯವೇ ಇಲ್ಲವಾಗಿ, ವಿದ್ಯೆಯ ಸ್ವರೂಪ-ಉದ್ದೇಶಗಳಿಗೇ ಕುಠಾರ-ಘಾತ(ಎಂದರೆ ಕೊಡಲಿ ಏಟು)ವಾಗುವಂತಾಗಿದೆ.

ಆದರೆ ಕಾಳಿದಾಸನ ನಾಟಕದಲ್ಲಿ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ನಾಟ್ಯಗುರುಗಳು  ಶಾಸ್ತ್ರದಲ್ಲೂ ಪ್ರಯೋಗದಲ್ಲೂ - ಎರಡರಲ್ಲೂ - ತಮ್ಮನ್ನು ವಿಮರ್ಶಿಸಬಹುದೆಂದು ಹೇಳುವ ಮಾತಿದೆ: "ಶಾಸ್ತ್ರೇ ಪ್ರಯೋಗೇ ಚ ವಿಮೃಶತು". ಹೀಗೆ ಎದೆತಟ್ಟಿ ಧೈರ್ಯವಾಗಿ ಹೇಳಿಕೊಳ್ಳಬಲ್ಲ ಗೀತಾಚಾರ್ಯ-ನಾಟ್ಯಾಚಾರ್ಯರು ಇಂದು ಇಡೀ ದೇಶದಲ್ಲೇ ಬೆರಳೆಣಿಸುವಷ್ಟು ಮಂದಿ ಇದ್ದಾರೆಂಬ ಮಾತುಗಳನ್ನು ಕೇಳುತ್ತೇವೆ. ಈ ದಿಶೆಯಲ್ಲಿ ಕಾಳಿದಾಸನ ಮಾಲವಿಕಾಗ್ನಿಮಿತ್ರದ ಈ ಮಾತು ಇಂದಿನ ಕಲಾಗುರುವೃಂದಕ್ಕೇ ಮಾರ್ಗದರ್ಶಕವಾಗಿದೆಯೆನ್ನಬಹುದು. ಈ ಸಂದರ್ಭದಲ್ಲಿ, ಬಹಳ ಗಹನವೆನಿಸುವ ಅನೇಕ ಧರ್ಮಶಾಸ್ತ್ರವಿಷಯಗಳನ್ನೂ ಅಧ್ಯಾತ್ಮಪ್ರಮೇಯಗಳನ್ನೂ ಪ್ರಯೋಗಬದ್ಧವಾಗಿಯೇ ಪ್ರತಿಪಾದಿಸುತ್ತಿದ್ದ ಶ್ರೀರಂಗಮಹಾಗುರುಗಳ ತತ್ತ್ವಸ್ಪರ್ಶಿಯಾದ ಉಪಕ್ರಮವು ಆದರಣೀಯವೆಂಬುದರಲ್ಲಿ ಸಂಶಯವಿಲ್ಲ.

 

ವಿದ್ಯಾವಿಮರ್ಶಕನ ಅರ್ಹತೆ

ಶಾಸ್ತ್ರ ಹಾಗೂ ಪ್ರಯೋಗಗಳಲ್ಲಿ ಒಬ್ಬನ ಬಲಾಬಲಗಳನ್ನು ವಿಮರ್ಶೆಮಾಡಬೇಕಾದ ಸಂನಿವೇಶವು ಬರುವುದುಂಟು. ಆದರೆ ಹಾಗೆ ವಿಮರ್ಶೆಮಾಡಲೂ ಒಂದು ಸಾಮರ್ಥ್ಯವು ಇರಬೇಕಷ್ಟೆ. ಹೀಗೆ ಪರೀಕ್ಷಕನೆನಿಸುವವನಿಗೆ ಇರಬೇಕಾದ ಲಕ್ಷಣಗಳೇನು? - ಎಂಬ ಪ್ರಶ್ನೆಯೂ ಜೊತೆಗೇ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿ ತಜ್ಞನಾದವನೇ ಬೇಕಾಗುತ್ತದೆ - ಎಂಬುದನ್ನು ನಾವು ಮನಗಾಣಬಹುದು.

ವಸ್ತುತಃ "ತಜ್ಞ" ಎಂದು ಹೇಳುವುದು ಯಾರನ್ನು? ಪ್ರಥಮತಃ (ಎಂದರೆ ಮೊಟ್ಟಮೊದಲು) "ತಜ್ಞ" ಎಂಬ ಪದಕ್ಕೇ ಏನರ್ಥ? – ಎಂಬುದನ್ನರಿಯುವುದು ತರವಲ್ಲವೇ? ವಾಸ್ತವವಾಗಿ "ತಜ್ಞ" ಎಂಬ ಪದವೇ ಸರಿಯಲ್ಲ. ಸಂಸ್ಕೃತದಿಂದ ಈ ಪದವನ್ನು ಎರವಲು ಪಡೆದಿರುವಂತೆ ಕಂಡರೂ, ಸಂಸ್ಕೃತಕೋಶಗಳಲ್ಲಿ ಈ ಪದವು ಸಿಗುವುದಿಲ್ಲ. ಸಂಸ್ಕೃತದ ಎರಡು ಪದಗಳನ್ನು ಜೋಡಿಸಿಕೊಂಡು ಮಾಡಿರುವ ಪದವಿದು. ತದ್+ಜ್ಞ - ಎಂದರೆ 'ಅದನ್ನು ಬಲ್ಲವನು". ಈ ಪದಗಳೇ ಸೇರಿದಾಗ "ತಜ್‍ಜ್ಞ" ಎಂದು ರೂಪವಾಗುತ್ತದೆ. ಇದು ಸಂಸ್ಕೃತಪದ. ಸಂಸ್ಕೃತದಲ್ಲಿ ಇದಕ್ಕೆ "(ಒಂದು ವಿಷಯವನ್ನು ಕುರಿತು) ಅದನ್ನು (ಚೆನ್ನಾಗಿ) ಬಲ್ಲವನು" ಎಂಬ ಅರ್ಥವಿದೆ. ಈ ಭಾವಕ್ಕೆ ಇನ್ನೂ ಚೆನ್ನಾಗಿ ಸಲ್ಲತಕ್ಕ ಪದವೆಂದರೆ "ವಿಶೇಷಜ್ಞ" ಎನ್ನುವುದೇ. ಜ್ಞಾನಸಂಪಾದನೆಯಲ್ಲಿ ಏನೂ ಅರಿಯದವ ಒಂದು ಕೊನೆಯಾದರೆ, ತುಂಬ ಹೆಚ್ಚಾಗಿ ತಿಳಿದಿರುವವನು ಇನ್ನೊಂದು ಕೊನೆ. ಹೀಗಾಗಿ ಅಜ್ಞನೊಂದು ಕೋಟಿ; ವಿಶೇಷಜ್ಞನು ಮತ್ತೊಂದು ಕೋಟಿ (ಕೋಟಿಯೆಂದರೆ ತುದಿ).

ಎಂದೇ ನಾಟ್ಯವಿದ್ಯಾವಿಮರ್ಶನಕ್ಕೆ "ವಿಶೇಷಜ್ಞ-ಪ್ರಾಶ್ನಿಕ"ನು ಇರಬೇಕೆಂದು ಹರದತ್ತನು ಹೇಳುತ್ತಾನೆ. ಪ್ರಾಶ್ನಿಕನೆಂದರೆ ಪ್ರಶ್ನೆಗಳನ್ನು ಕೇಳತಕ್ಕವನು. ಆತನೇ ಅಲ್ಪಜ್ಞನಾಗಿದ್ದರೆ, ನಿರ್ಣಯವನ್ನು ಅದೆಂತು ಕೊಟ್ಟಾನು? ಕೊಟ್ಟರೂ ಅಂತಹ ನಿರ್ಣಯಕ್ಕೆ ಬೆಲೆಯಾದರೂ ಏನು? ಅಷ್ಟೇ ಅಲ್ಲದೆ, "ಆತನ ಜ್ಞಾನವು ಸ್ವಲ್ಪ ಹೆಚ್ಚಿನ ಸ್ತರದ್ದು" - ಎಂದಷ್ಟೇ ಅದರೂ ಸಹ ಸಾಲದು. ಆತನು ವಿಶೇಷಜ್ಞನೇ ಆಗಿರತಕ್ಕದ್ದು.

ಅಂದಿನ ಕಾಲಕ್ಕೆ ರಾಜ-ಮಹಾರಾಜರುಗಳು ಸಹ ವಿದ್ಯೆಗಳಲ್ಲಿ ಎಷ್ಟು ಆಳವಾದ ಜ್ಞಾನವನ್ನು ಸಂಪಾದಿಸಿದ್ದರೆಂದರೆ "ಪ್ರಭುಗಳೇ ವಿಶೇಷಜ್ಞರಾದ ಪ್ರಾಶ್ನಿಕರು" ಎಂಬುದಾಗಿ ನಾಟ್ಯಾಚಾರ್ಯನು ಮಹಾರಾಜನಾದ ಅಗ್ನಿಮಿತ್ರನಲ್ಲಿ ಬಿನ್ನವಿಸಿಕೊಳ್ಳುವಂತಾಗುತ್ತದೆ. ನಮ್ಮ ದೇಶವು ಅನೇಕಾನೇಕ ವಿದ್ಯೆ-ಕಲೆಗಳ ಬೀಡಾಗಲು ಇದುವೇ ಒಂದು ಮುಖ್ಯಕಾರಣವೆಂಬುದನ್ನು ನಾವಿಂದು ಅರಿಯಬೇಕಾಗಿದೆ.

ಪ್ರಜಾಪ್ರಭುತ್ವವು ಎಲ್ಲ ಮಟ್ಟದವರನ್ನೂ ಒಂದೇ ಎಂದುಬಿಡುತ್ತದೆ; ಹೆಬ್ಬೆಟ್ಟಿನವನನ್ನೇ ವಿದ್ಯಾಮಂತ್ರಿಯನ್ನಾಗಿಸಲೂ ಅದು ಹೇಸದಂತಾಗಿದೆ. ಹೀಗಾಗಿ ನಿಜವಾದ ವಿದ್ಯೆಗಳಿಗೂ ಕಲೆಗಳಿಗೂ ಯಾವ ಬೆಲೆಯುಳಿಯುವುದೂ ಕಷ್ಟವಾಗಿದೆ. ಎಲ್ಲರೂ ಸಮಾನ, ಎಲ್ಲ ವಿದ್ಯೆಗಳೂ ಸಮಾನ - ಎಂದು ಹೇಳಿಬಿಡುವುದೇ ಘನೌದಾರ್ಯದ ಲಕ್ಷಣ - ಎನ್ನುವ ಈ "ವ್ಯವಸ್ಥೆ"ಯಲ್ಲಿ, ಒಂದು ವಿದ್ಯೆಯನ್ನು, ಉದಾಹರಣೆಗೆ ನಾಟ್ಯವನ್ನು, ಶಾಸ್ತ್ರಾಧಾರದ ಮೇರೆಗೆ ಹದಿನೈದು ವರ್ಷ ಅಭ್ಯಾಸ ಮಾಡಿರುವವನೂ ಒಂದೇ; ಹದಿನೈದು ದಿನಗಳ ಅಭ್ಯಾಸವೂ ಬೇಕೆನಿಸದ ಯಾವುದೋ ಗುಡ್ಡಗಾಡಿನವರ ಕುಣಿತವೂ ಒಂದೇ - ಎಂದು ಹೇಳುವಂತಾಗಿದೆ. ಹೀಗಾಗಿ ವಿದ್ಯೆಗೆ ಬೆಲೆ ಕಟ್ಟುವುದರ ಅಳತೆಗೋಲೇ ಪ್ರಶ್ನಾರ್ಹವಾಗಿದೆ.

ಅನೇಕ ಗಹನವಿದ್ಯೆಗಳು ಗುರುತಿಸುವವರಿಲ್ಲದೆ, ಬೆಲೆಗೊಡುವವರಿಲ್ಲದೆ ಪಾಳುಬಿದ್ದುಹೋಗಾಗಿದೆ.

ಬೆಲೆ ಕಟ್ಟುವುದೆಲ್ಲಿ?

ವಿದ್ಯೆಗೆ ಬೆಲೆ ಕಟ್ಟುವುದೆಲ್ಲಿ? - ಎಂಬ ಪ್ರಶ್ನೆಯನ್ನೂ ಕಾಳಿದಾಸನು ಉತ್ತರಿಸದೆ ಬಿಟ್ಟಿಲ್ಲ. ನಾಟ್ಯಪರೀಕ್ಷೆಯು ಸುಲಭವಲ್ಲ; ಅದು ರತ್ನಪರೀಕ್ಷೆಯು ಹೇಗೋ ಹಾಗೆ: ಸೂಕ್ಷ್ಮಜ್ಞರಿಂದಲೇ ಆಗತಕ್ಕದ್ದು - ಎಂಬುದಾಗಿ ಕವಿಯು ಸೂಚಿಸುತ್ತಾನೆ. ರತ್ನಪರೀಕ್ಷೆಯನ್ನು ರತ್ನಪರಿಜ್ಞಾನವುಳ್ಳವರು ಯಾರೇ ಮಾಡಿದರೂ ಸರಿಯೇ - ಎಂಬ ವಿಷಯವೇನೋ ಸರಿಯೇ. ಆದರೂ, "ಹಾಳೂರಿಗುಳಿದವನೇ ಗೌಡ" - ಎಂಬ ರೀತಿಯ ಲೆಕ್ಕವಾದರೆ ಏನು ಪ್ರಯೋಜನ?

ಅರ್ಥಾತ್, ರತ್ನಪರೀಕ್ಷೆಯನ್ನು ಮಾಡಬಲ್ಲ ನಾಲ್ಕಾರು ಮಂದಿ ಇರುವೆಡೆಯಲ್ಲೇ ಉತ್ತಮಪರೀಕ್ಷಕನಾರೆಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಸಣ್ಣೂರಿಗೆ ಇರುವವನೊಬ್ಬನೇ ವೈದ್ಯ, ಒಬ್ಬನೇ ಚಿನಿವಾರ - ಎಂದೆಲ್ಲಾ ಆಗಿಬಿಟ್ಟಲ್ಲಿ, ಅಲ್ಲಿ ಅವರು ಹೇಳಿದ್ದೇ ನ್ಯಾಯ - ಎಂಬಂತಾಗಿಬಿಡುತ್ತದೆ. ಆಗ ವಾಸ್ತವವೇನೆಂಬುದೇ ತಿಳಿಯದಾಗುತ್ತದೆ. ಸಮರ್ಥಪರೀಕ್ಷಕರಿಲ್ಲದಿದ್ದಲ್ಲಿ ಪರೀಕ್ಷೆಯು ಸಮಂಜಸವಾಗಿ ನಡೆಯದೆಂಬುದನ್ನು ಕಾಳಿದಾಸನಿಲ್ಲಿ ಸೂಚಿಸಿದ್ದಾನೆ.

ಸೂಚನೆ : 21/05/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.