Sunday, May 22, 2022

ಕಾಳಿದಾಸನ ಜೀವನದರ್ಶನ – 11 ಗುರುವಿಗೇ ಉಪದೇಶವೇ? (Kalidasana Jivanadarshana - 11 Guruvige Upadeshave?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಕಾಳಿದಾಸನ ಮಾಳವಿಕಾಗ್ನಿಮಿತ್ರದಲ್ಲಿ ನಾಟ್ಯಾಚಾರ್ಯನಾದ ಗಣದಾಸನು ಶಿಷ್ಯೆ ಮಾಳವಿಕೆಗೆ ಹೇಳಿಕೊಟ್ಟದ್ದನ್ನು, ಹೇಳಿಕೊಟ್ಟಂತೆಯೇ ಹಾಗೂ ಹೇಳಿಕೊಡುತ್ತಿದ್ದಂತೆಯೇ, ಅದದನ್ನೇ (ತತ್-ತದ್) ಅವಳು ಅಭಿನಯಿಸಿ ತೋರಿಸಿಬಿಡುವಳು- ಎಂಬುದನ್ನು ನಿರೂಪಿಸುತ್ತಿದ್ದ ಸಂದರ್ಭವನ್ನು ಇಲ್ಲಿ ಮುಂದುವರೆಸಿದೆ. ಒಂದರ್ಥದಲ್ಲಿ ಏಕಸಂಧಿಗ್ರಾಹಿಯ ಲಕ್ಷಣವೇ ಇಲ್ಲಿ ಕಾಣುತ್ತಿದೆ. ಒಂದನ್ನು ಒಮ್ಮೆ ಹೇಳಿಕೊಟ್ಟರೆ, ಅಂತೆಯೇ ಒಡನೆಯೇ ಗ್ರಹಿಸಿಬಿಡುವವನು ಏಕಸಂಧಿಗ್ರಾಹಿ. ಅಲ್ಲಿಗೆ, ಅಂತಹ ಲಕ್ಷಣವು ಅವಳಲ್ಲಿದೆಯೆಂದು ಹೇಳಿದಂತೆಯೇ ಆಯಿತು. ಭಾವಿಕದಲ್ಲಿ ಹೀಗೆ ಸಾಧಿಸಬಲ್ಲ ಈ ಪರಿಯ ವಿದ್ಯಾರ್ಥಿ(ನಿ)ಗೆ ಯಾವ ಒಳ್ಳೆಯ ಗುರುವು ತಾನೆ ಪಾಠಹೇಳಿಕೊಡಲು ಬಯಸ?

ಭಾವಿಕವೆಂಬ ಪದದ ಬಗ್ಗೆ ಇನ್ನೊಂದು ಮಾತು: ಅದಕ್ಕೆ ಪಾರಿಭಾಷಿಕವಾದ ಈ ಅರ್ಥವು ಮಾತ್ರವಲ್ಲದೆ, ಬೇರೆ ಇನ್ನೊಂದೆರಡು ಅರ್ಥಗಳೂ ಉಂಟು: ಅವೂ ಇಲ್ಲಿ ಅನ್ವಿತವಾಗಬಹುದು. ಹೆಚ್ಚಿನ ಚರ್ಚೆ-ವಿವರಣೆಗಳು ಇಲ್ಲಿ ಪ್ರಸ್ತುತವಲ್ಲವೆಂಬ ಕಾರಣಕ್ಕಾಗಿ ವಿಸ್ತರಿಸಿಲ್ಲ.

ಪ್ರತ್ಯುಪದೇಶ

ಆಚಾರ್ಯಗಣದಾಸನು ಮಾಳವಿಕೆಯ ಬಗ್ಗೆ ಹೇಳುವಲ್ಲಿ ಮತ್ತೂ ಎರಡು ಅಂಶಗಳಿವೆ. ಒಂದೆಂದರೆ ಅವಳು ಹಾಗೆ ಒಡನೆಯೇ ಒಪ್ಪಿಸಿ ತೋರಿಸುತ್ತಿರುವುದರಿಂದ ಅವಳು ಆತನಿಗೆ ಪ್ರತ್ಯುಪದೇಶ ಮಾಡುತ್ತಿದ್ದಾಳೋ - ಎಂಬಂತೆ ಭಾಸವಾಗುವುದು - ಎಂಬುದೊಂದು. ಅಂದರೆ, ಥಟ್ಟನೆ ನೋಡಿದವರಿಗೆ ಯಾರು ಯಾರಿಗೆ ಹೇಳಿಕೊಡುತ್ತಿದ್ದಾರೆಂಬ ಭ್ರಮೆಯು ಉಂಟಾಗಬಹುದೆನ್ನುವಷ್ಟು ಶೀಘ್ರವಾಗಿ ಅವಳು ಕಲಿಯುತ್ತಿದ್ದಾಳೆ!

ಪ್ರಾಚೀನಶಿಕ್ಷಣಪದ್ಧತಿಯಲ್ಲಿದ್ದ ಒಂದು ವೈಶಿಷ್ಟ್ಯವನ್ನು ಇಲ್ಲಿ ಗಮನಿಸಬಹುದು. ಇಂದಿರುವ ಹಾಗೆ, ಇಷ್ಟು ಗಂಟೆಗಳ ಅವಧಿಯಲ್ಲಿ ಇಷ್ಟು ಪಾಠ ಬೋಧಿಸಿ ಪಾಠ್ಯಕ್ರಮವನ್ನು 'ಮುಗಿಸಿಬಿಡು'ವ ರಭಸದ ಕ್ರಮ ಅಲ್ಲಿರಲಿಲ್ಲ. ವಿದ್ಯಾರ್ಥಿಯು ನಿನ್ನೆ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿ ಅಭ್ಯಸಿಸಿ ಇಂದು ಪೂರ್ಣವಾಗಿ ಒಪ್ಪಿಸಿದರಷ್ಟೇ, ಒಪ್ಪಿಸಿದ ಮೇಲೆಯೇ, ಮುಂದಿನ ಪಾಠ. ಎಲ್ಲ ವಿದ್ಯೆಗಳಲ್ಲಿಯೂ ಇದೇ ಕ್ರಮವಾಗಿದ್ದರೂ, ವಿಶೇಷವಾಗಿ ಪ್ರಯೋಗಪ್ರಧಾನವಾದ ಗೀತ-ವಾದ್ಯ-ನೃತ್ಯ ಮುಂತಾದ ಪ್ರಕಾರಗಳಲ್ಲಂತೂ ಇದು ಅತ್ಯವಶ್ಯವಾಗಿ ಪ್ರಚಲಿತವಾದದ್ದು.

ಹೀಗಾಗಿ ಪಾಠವು ಮುಗಿಯುತ್ತಿದ್ದಂತೆಯೇ ಗುರುವಿಗೆ ಅದನ್ನು ಅಲ್ಲಿಯೇ ಅರ್ಪಿಸಿಬಿಡುವ ಈ ಬಗೆ ಅತಿಶಯವಾಗಿಯೇ ಅಭಿನಂದನೀಯವಾಗಿದೆ. ಪಾಠ ಕೇಳುವಾಗ ವಿದ್ಯಾರ್ಥಿಗೆ ಏಕಾಗ್ರತೆಯೆಂಬುದು ಅತ್ಯವಶ್ಯ. ಇದರ ಜೊತೆಗೆ ವಿದ್ಯೆಯಲ್ಲಿ ಪ್ರೀತಿ-ಶ್ರದ್ಧೆಗಳೂ ಜಾಗರೂಕತೆ-ನಿಷ್ಠೆಗಳೂ ಜೊತೆಯಾದಲ್ಲಿ ಶಿಷ್ಯನಿ(ಳಿ)ಗೆ ಸದ್ಯೋಗ್ರಹಣವು - ಎಂದರೆ ಒಡನೆಯೇ ಗ್ರಹಿಸುವಿಕೆಯು - ಸಾಧ್ಯವಾಗುವುದು. ಶಿಷ್ಯನು ಚೆನ್ನಾಗಿ ಕಲಿತು ಅಭಿವೃದ್ಧಿಹೊಂದಬೇಕೆಂಬ ಅಭಿಲಾಷೆಯುಳ್ಳ ಶಿಷ್ಟನಾದ ಆಚಾರ್ಯನಿಗೆ ಇದು ಅತ್ಯಂತ ತುಷ್ಟಿಕರವಾದದ್ದು. ಗುರುದಕ್ಷತೆ-ಶಿಷ್ಯದಕ್ಷತೆಗಳು ಮಧುರವಾಗಿ ಮೇಳೈಸಿದರಲ್ಲವೇ ವಿದ್ಯೆಯು ಬೆಳಗುವುದೂ! ಸಹ ವೀರ್ಯಂ ಕರವಾವಹೈ!

ಗುರುವನ್ನೇ ಮೀರಿಸುವುದು!

ಎರಡನೆಯ ಒಂದು ವಿಶೇಷಾಂಶವನ್ನೂ ಇಲ್ಲಿ ಗಮನಿಸಬಹುದು. ಅದೆಂದರೆ 'ತತ್-ತದ್-ವಿಶೇಷಕರಣ'ವೆಂಬುದರ ಮತ್ತೂ ಒಂದು ಅರ್ಥ. ವಿಶೇಷಕರಣವೆಂದರೆ ವಿಶೇಷವನ್ನಾಗಿಸುವುದು. ಎಂದರೆ ಗುರುವು ಎಷ್ಟು ಚೆನ್ನಾಗಿ ಹೇಳಿಕೊಟ್ಟನೋ ಅದನ್ನೂ ಅತಿಶಯಿಸುವುದು, ಮೀರುವುದು!

ಗುರುವು ಹೇಳಿಕೊಟ್ಟದ್ದಷ್ಟನ್ನೇ ಒಪ್ಪಿಸುವುದಕ್ಕಿಂತಲೂ ಮಿಗಿಲಾದುದೆಂದರೆ, ಗುರುವು ಉಪದೇಶಿಸಿದುದನ್ನು ಮತ್ತೂ ಪರಿಷ್ಕೃತವಾಗಿಯೇ ಆಡಿ, ಮಾಡಿ ತೋರಿಸುವುದು. ಅಂದರೆ, ಗುರುವು ಹೇಳಿಕೊಟ್ಟ ಪಾಠದ ಅಭಿಪ್ರಾಯವನ್ನು ಚೆನ್ನಾಗಿ ಗ್ರಹಿಸಿ, ಅದನ್ನೇ ಮತ್ತೂ ಸೊಬಗಾಗುವ ಬಗೆಯಲ್ಲಿ ಮೆರುಗಿನೊಡನೆ ವ್ಯಕ್ತಪಡಿಸುವುದು.

ಹೀಗಾದಾಗಂತಲೂ ಶಿಷ್ಯನಿಗೇ ಹೆಚ್ಚು ಗೊತ್ತೇನೋ! - ಎಂಬ ಭಾವನೆಯು ಬೇರೆಯವರಿಗೆ ಬಂದರೆ ಆಶ್ಚರ್ಯವಿಲ್ಲ. ಎಂದೇ, ಇಲ್ಲಂತೂ, ಮಾಳವಿಕೆಯೇ ತನಗೆ ಹೇಳಿಕೊಡುತ್ತಿರುವಳೋ ಎಂಬಂತಿದೆ - ಎಂಬುದಾಗಿ ಗುರುವಾದ ಗಣದಾಸನೇ ಮೆಚ್ಚಿ ಹೇಳಿಕೊಳ್ಳುತ್ತಿದ್ದಾನೆ. "ತತ್ತದ್-ವಿಶೇಷ-ಕರಣಾತ್ ಪ್ರತ್ಯುಪದಿಶತೀವ ಮೇ ಬಾಲಾ!"

ಹಿರಿಯರು ಕಿರಿಯರಿಗೆ ಬೋಧಿಸುವುದು ಸಹಜ; ಆದರಿಲ್ಲಿ, ವಯೋವೃದ್ಧರೂ ವಿದ್ಯಾವೃದ್ಧರೂ ಆದವರಿಗೆ ಈ ಬಾಲೆಯು ಬೋಧಿಸುವಂತಿದೆ!  ಹಾಗೆಂದು ಗುರುವೇ ತನ್ನ ಶಿಷ್ಯೆಯ ಬಗೆಗೇ ಹೇಳಿಕೊಳ್ಳುತ್ತಿರುವ ವಿಶಿಷ್ಟಸಂನಿವೇಶವಿದು! ಹೆಂಗಸರನ್ನೀ ದೇಶದಲ್ಲಿ ತುಳಿದುಬಿಟ್ಟಿದ್ದಾರೆಂದು ಅಹರ್ನಿಶಿ ಅರಚಿಕೊಳ್ಳುವವರಿಗಿಲ್ಲಿ ಕಣ್ತೆರೆಸುವ ಪ್ರಸಂಗವಿದೆ. ಹೆಂಗಸರು ಮೇಲೆ ಬರುವುದನ್ನು ಗಂಡಸರು ಸಹಿಸರು; ಅದಕ್ಕವಕಾಶವನ್ನೇ ಕೊಡರು; ಅನಾದಿಕಾಲದಿಂದಲೂ ಇದು ಹೀಗೆಯೇ ಇದೆ – ಎಂದೆಲ್ಲ ಆಕ್ರೋಶಮಾಡುವವರಿಗೆ ಸಿದ್ಧವಾದ ನಿದರ್ಶನವಿಲ್ಲಿದೆ: ಕ್ರಿಸ್ತಪೂರ್ವ ಮೊದಲನೆಯ ಶತಮಾನದ ಕವಿಯ ನಿರೂಪಣೆಯಿದು!

ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ "ಶಿಷ್ಯಾದ್ ಇಚ್ಛೇತ್ ಪರಾಜಯಮ್" ಎಂಬ ಅದ್ಭುತವಾದ ಗಾದೆಮಾತಿದೆ. "ಶಿಷ್ಯನು ತನ್ನನ್ನು ಮೀರಿಸಬೇಕೆಂದು ಗುರುವು ಆಸೆ ಪಡಬೇಕು" ಎಂದು ಅದರ ಅರ್ಥ. ಆಸೆ ಪಡುವುದೇ? ಉತ್ತಮವಾದ ಉನ್ನತಿ-ಪ್ರಗತಿಗಳನ್ನು ಶಿಷ್ಯನು ಮಾಡುತ್ತಿರುವುದನ್ನು ಕಂಡು ಸಾಧಾರಣಗುರುಗಳು ಕರುಬಿಯಾರು! ಛಾತ್ರನು ತನ್ನನ್ನೇ ಅತಿಶಯಿಸಿಯಾನೆಂದು ಆತಂಕಪಟ್ಟಾರು! ತನಗಿಂತಲೂ ಹಣ-ಹೆಸರುಗಳನ್ನು ಮಾಡಿಬಿಡುವನೋ ಏನೋ? - ಎಂದು ಚಿಂತೆಪಟ್ಟಾರು! ಇದುವೇ ಲೋಕಸಾಮಾನ್ಯವಾದರೂ, ವಿದ್ಯೆಯು ಬೆಳೆಯಬೇಕೆಂದೂ ಶಿಷ್ಯರು ಏಳ್ಗೆಹೊಂದಬೇಕೆಂದೂ ವಾಸ್ತವವಾಗಿ ಬಯಸುವ ಗುರುವರರು ಅಭಿಲಷಿಸುವುದು ಪರಮವಾದ ಶಿಷ್ಯೋನ್ನತಿಯನ್ನೇ. ಇಂತಹ ಆಚಾರ್ಯವರ್ಯರೇ ಗಣದಾಸರು.

ಅಂತೂ ಭಾವಿಕದಲ್ಲಿ ಹೀಗೆ ಗುರುವಿಗೇ ಉಪದೇಶಮಾಡುವಂತೆ ತೋರುವಂತಿರುವುದು ಪರಮವಿರಳವೇ ಸರಿ. ಪ್ರತಿಭಾವಿಶೇಷಸಂಪನ್ನರಿಗೆ ಮಾತ್ರವೇ ಅದು ಶಕ್ಯ. ಎಂದೇ ಹೆಣ್ಣೆಂದೋ ಕಿರಿಯಳೆಂದೋ ಅವಳನ್ನು ಅವಗಣನೆ ಮಾಡದೆ, ಅವಳನ್ನು ಕುರಿತು "ಪರಮನಿಪುಣಾ ಮೇಧಾವಿನೀ ಚ" ಎಂದು ಗಣದಾಸರೇ ಕಂಠೋಕ್ತವಾಗಿ ಕೊಂಡಾಡಿರುವುದು. ಹೀಗಾಗಿ ಮೇಧೆ-ನೈಪುಣ್ಯಗಳಿಂದ ಕೂಡಿದವಳು ಮಾಳವಿಕೆ. ಅವಳಂತಹವರು ಗುರುಗಳಿಗೆ ಅತಿಕ್ಲೇಶವನ್ನು ಕೊಡದೆಯೇ ಉಪದೇಶವನ್ನು ಗ್ರಹಿಸುವರು. ಗ್ರಹಿಸಿದ್ದನ್ನು ಧರಿಸುವರು. ಧರಿಸಿದ್ದನ್ನು ಬೆಳೆಸುವರು. ಉಪದಿಷ್ಟವಾದುದಕ್ಕೆ ಮತ್ತೂ ಮೆರುಗನ್ನು ಮೂಡಿಸಲೂ ಮರೆಯರು. ಗುರುವಿಗೆ ಕೀರ್ತಿಯನ್ನು ತರುವರು. ವಿದ್ಯೆಯನ್ನು ಬೆಳಗಿಸುವರು. 

ಸೂಚನೆ : 21/05/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.