Monday, March 30, 2026

ಪ್ರಶ್ನೋತ್ತರ ರತ್ನಮಾಲಿಕೆ 59 (Prasnottara Ratnamalike 59)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೯ - ಚಿಂತಿಸಬೇಕಾದ ವಿಷಯ ಯಾವುದು ? 

ಉ. ವೈಭವವಿದ್ದರೂ ಮತ್ತೊಬ್ಬರಿಗೆ ಕೊಡದಿರಿವ ಕೃಪಣತಾ.

ಅತ್ಯಂತ ವಿಷಾದದ ಸಂಗತಿ ಯಾವುದು? ಎಂಬುದು ಇಲ್ಲಿನ ಪ್ರಶ್ನೆ. ಇದಕ್ಕೆ ಉತ್ತರ -  ಒಬ್ಬ ವ್ಯಕ್ತಿಯಲ್ಲಿ ಸಾಕಷ್ಟು ಸಂಪತ್ತು ಇದೆ; ಆ ವ್ಯಕ್ತಿ ಒಂದರ್ಥದಲ್ಲಿ ಧನಿಕ. ತಾನು ಮಾತ್ರ ಆ ಸಂಪತ್ತನ್ನು ಬಳಸಿದರೂ ಅದು ಖರ್ಚಾಗದ ರೀತಿಯಲ್ಲಿ ಇದೆ. ಹಾಗಾದರೆ, ಇಷ್ಟು ಸಂಪತ್ತುಳ್ಳವನಾಗಿದ್ದರೂ ಕೂಡ ಅವನು ದೀನ ದರಿದ್ರರಿಗೆ ಆ ಸಂಪತ್ತನ್ನು ಕೊಡದೇ ತಾನೇ ಭೋಗಿಸಬೇಕು ಎಂಬ ಯಾವ ಆಸೆ ಇದೆಯೋ, ಅದೇ ವಸ್ತುತಃ ಕೃಪಣತಾ ಎಂಬುದಾಗಿ ಹೇಳಲಾಗಿದೆ. ಈ ಕಾರ್ಪಣ್ಯ ಎಂಬ ಅತಿಭಯಂಕರವಾದ ಅವಗುಣವು ಪ್ರಸ್ತುತ ವಿಷಾದ ಪಡಬೇಕಾದ ವಿಚಾರವಾಗಿದೆ. ಅಲ್ಲ, ವಿಷಾದಪಡುವ ಸಂಗತಿಯಾದರೂ ಏನು? ಸಂಪತ್ತುನ್ನು ಕೊಡಲೇಬೇಕೆಂಬ ನಿಯಮವಿದೆಯೇ? ಕೊಡದಿದ್ದರೆ ಏನು ಅಪರಾಧ? ನಿಜವಾಗಿಯೂ ಆ ವ್ಯಕ್ತಿ ತನ್ನ ಸಾಮರ್ಥ್ಯ, ಬುದ್ಧಿಮತ್ತೆ ಮತ್ತು ಶ್ರಮದ ಕಾರಣದಿಂದ ಸಂಪತ್ತನ್ನು ಗಳಿಸಿರುತ್ತಾನೆ. ಹಾಗಾಗಿ ಆ ಸಂಪತ್ತನ್ನು ಅವನೇ ಇಟ್ಟುಕೊಂಡು ಬಳಸಿ, ತನ್ನ ಪರಿವಾರದ ಪ್ರಗತಿಗಾಗಿ ಸೀಮಿತವಾಗಿ ಇಟ್ಟರೆ ಅದು ಹೇಗೆ ಆತಂಕದ ವಿಷಯ? ಅದನ್ನು ಏಕೆ ಕಾರ್ಪಣ್ಯ ಎಂಬುದಾಗಿ ಕರೆಯಬೇಕು? ಎಂಬುದು ಇಲ್ಲಿನ ಆಶಯ. ಹೀಗಿರುವಾಗ ವೈಭವವಿದ್ದಾಗ ಮತ್ತೊಬ್ಬರಿಗೆ ಕೊಡದ ಮನೋಧರ್ಮವು ಹೇಗೆ ವಿಷಾದದ ಸಂಗತಿ ಎಂಬುದನ್ನು ಯೋಚಿಸಬೇಕಾಗಿದೆ.

"ಸ್ತೋಕಾದಪಿ ಹಿ ದಾತವ್ಯಂ ಮುದಿದೇನ ಅಂತರಾತ್ಮನಾ। ಅಹನ್ಯಹನಿ ಯತ್ಕಿಂಚಿತ್ ಅಕಾರ್ಪಣ್ಯಮ್ ಇತಿ ಸ್ಮೃತಮ್॥" ಸ್ವಲ್ಪವನ್ನಾದರೂ ಕೊಡಲೇಬೇಕು, ಸ್ವಲ್ಪವನ್ನಾದರೂ ಅತ್ಯಂತ ಸಂತೋಷದಿಂದ ಕೊಡಬೇಕು, ಅದನ್ನು ಪ್ರತಿನಿತ್ಯವೂ ಕೊಡಬೇಕು ಎಂಬುದಾಗಿ ಅಕಾರ್ಪಣ್ಯದ ಸ್ವಭಾವವನ್ನು ಇಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ಮನುಷ್ಯನು ಕೂಡ ತಾನು ಸಂಪಾದಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ದಾನ ಮಾಡಬೇಕು ಎಂಬುದಾಗಿ ನಮ್ಮೆಲ್ಲಾ ಶಾಸ್ತ್ರ - ಸಂಪ್ರದಾಯಗಳು ಒಕ್ಕೊರಳಿನಿಂದ ಸಾರುತ್ತವೆ. ಅಂದರೆ ತ್ಯಾಗ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು; ಕೇವಲ ತಾನು ಮಾತ್ರ ಸಂಪತ್ತನ್ನು ಬಳಸಿಕೊಳ್ಳಬೇಕು ಎಂಬ ಭಾವನೆ ಸಲ್ಲದು ಎಂದು. ಸಂಪಾದಿಸಿದ ದ್ರವ್ಯದಲ್ಲಿ ಗೃಹಸ್ಥನಾದವನು ಪಂಚಮಹಾಯಜ್ಞಗಳನ್ನು ಮಾಡಬೇಕು ಎಂಬುದಾಗಿ ನಮ್ಮ ಸನಾತನ ಧರ್ಮದಲ್ಲಿ ಹೇಳಿರುವ ಅತ್ಯಂತ ಮಹತ್ವದ ವಿಷಯ. ಈ ಪಂಚಮಹಾಯಜ್ಞ ಎಂಬ ಶ್ರೇಷ್ಠವಾದ ಕರ್ಮವು ತನ್ನ ಸಂಪತ್ತನ್ನು ಸದ್ವಿನಿಯೋಗ ಮಾಡುವ ವಿಧಾನ ಎಂದು ಕರೆಯುತ್ತಾರೆ. ಇದರಿಂದ ಸಂಪತ್ತು ಸದ್ವಿನಿಯೋಗವಾದಂತಾಗುತ್ತದೆ. ಶ್ರೀರಂಗಮಹಾಗುರುಗಳ ಈ ಮಾತು ಕೊಡುವುದು ಎಷ್ಟು ಅಗತ್ಯ ಎಂಬುದನ್ನು ತಿಳಿಸುತ್ತದೆ. "ದಾನ ಪ್ರತಿಗ್ರಹಗಳ ಪ್ರಿನ್ಸಿಪಲ್ ಮೇಲೆಯೇ ಸೃಷ್ಟಿಯು ನಡೆದು ನಿಂತು ಮುಂದುವರಿಯುತ್ತಿದೆ. ಸೃಷ್ಟಿಕರ್ತನು ತನ್ನ ಸಂಪತ್ತುಗಳನ್ನು ತನ್ನ ಸಂತಾನಕ್ಕೆ ದಾನ ಮಾಡದಿದ್ದರೆ, ಸೃಷ್ಟಿ ಹೇಗೆ ಮುಂದುವರಿದೀತು? ತಂದೆ ತಾಯಿಗಳು ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಸ್ವತ್ತುಗಳನ್ನು ತಮ್ಮ ಸಂತಾನಕ್ಕೆ ದಾನ ಮಾಡುತ್ತಾರೆ. ಅವು ತಮ್ಮ ಮುಂದಿನ ಪೀಳಿಗೆಗೆ. ಒಬ್ಬನು ದಾನ ಮಾಡಿದ. ಇನ್ನೊಬ್ಬನೂ ಆ ದಾನ ಮಾಡಿದ. ಇದರ ಮೇಲೆಯೇ ಸೃಷ್ಟಿ ವ್ಯಾಪಾರವೆಲ್ಲವೂ ನಿಂತಿದೆ. ದಾನ ಮಾಡದಿದ್ದರೆ ಏನು ಫಲ? ಏನೂ ಫಲವಿಲ್ಲ. ದಾನ ಪ್ರತಿಗ್ರಹಗಳು ಸೃಷ್ಟಿಸಹಜವಾದ ಕ್ರಿಯೆಗಳು" ಎಂದು. ಹಾಗಾಗಿ ಎಷ್ಟು ವೈಭವವಿದ್ದರೂ ಅವನು ತನ್ನ ಗಳಿಕೆಯ ದ್ರವ್ಯವನ್ನು ಬೇರೊಬ್ಬರಿಗೆ ದಾನ ಮಾಡಲಿಲ್ಲವೆಂದರೆ ಅವನು ಶುದ್ಧನಾಗುವುದಿಲ್ಲ. ತ್ಯಾಗದ ಮನೋಭೂಮಿಕೆ ಬರೆದಿದ್ದರೆ ಶುದ್ದಿ ಎಲ್ಲಿಂದ ಬರುತ್ತದೆ! ಶುದ್ಧನಾಗದಿದ್ದರೆ ಅವನು ಹೇಗೆ ತಾನೇ ಪುರುಷಾರ್ಥಗಳನ್ನು ಪಡೆಯುತ್ತಾನೆ! ಇತ್ಯಾದಿ ಅನೇಕ ಆತಂಕಗಳಿಂದ ಕೇಳಿರುವ ಪ್ರಶ್ನೆ ಇದಾಗಿದೆ ಎಂಬುದಾಗಿ ಭಾವಿಸಬೇಕು.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.