Monday, March 23, 2026

ರಾಮಾಯಣದಲ್ಲಿ ಭ್ರಾತೃತ್ವದ ಆದರ್ಶ (Ramayanadalli Bhratrtvada Adarsha)


ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನು ತಮ್ಮ ದೊರೆಯಾಗುವನೆಂದು ಅಯೋಧ್ಯೆಯ ಪ್ರಜೆಗಳೂ, ತನ್ನ ಉತ್ತರಾಧಿಕಾರಿಯಾಗುವನೆಂದು ದಶರಥನೂ ಕನಸು ಕಂಡಿದ್ದರು. ಆ ತೇರನ್ನು ಕೈಕೇಯಿ ತಾನು ಕೇಳಿದ ವರಗಳಿಂದ ನುಚ್ಚುನೂರು ಮಾಡಿದ್ದಳು. ತನ್ನ ಮುಂದಿನ ದೊರೆಗಾಗಿ ಕಾದಿತ್ತು ಅಯೋಧ್ಯೆಯ ಸಿಂಹಾಸನ. ಭರತನು ಅಲ್ಲಿ ಕೂರುವನೆಂಬ ಆಸೆಯನ್ನು ಕೈಕೇಯಿ ಹೊತ್ತಿದ್ದಳು. ಆದರೆ ಆದದ್ದೇನು? ಸಿಂಹಾಸನವೇರಿದುದು ಭರತನಲ್ಲ, ಅವನಿಗೆ ಶ್ರೀರಾಮನಿತ್ತ ಪಾದುಕೆಗಳು. ತಾನು ರಾಮಚಂದ್ರನ ಸೇವಕನೆಂಬ ಭಾವನೆಯಿಂದಲೇ ಪುಣ್ಯಾತ್ಮನಾದ ಭರತನು ಹದಿನಾಲ್ಕು ವರ್ಷಗಳೂ ರಾಜ್ಯಭಾರ ಮಾಡಿದ್ದು. ಭ್ರಾತೃತ್ವದ ಆದರ್ಶವೆಂದರೆ ಇದಕ್ಕಿಂತ ಹೆಚ್ಚಾದದ್ದೇನಿದೆ?

ಶ್ರೀರಾಮನ ಅಮೋಘವಾದ ಕಥೆಯನ್ನು ಹೇಳುವುದರೊಂದಿಗೇ ಮನುಷ್ಯರು ಇಂತಿರಬೇಕು, ಇಂತಿರಬಾರದು ಎನ್ನುವುದನ್ನೂ ರಾಮಾಯಣವು ಬೋಧಿಸುತ್ತದೆ. ಅಣ್ಣ-ತಮ್ಮಂದಿರು ಹೇಗಿರಬೇಕು ಎನ್ನುವುದರ ಆದರ್ಶವು ರಾಮ-ಲಕ್ಷ್ಮಣ-ಭರತ-ಶತ್ರುಘ್ನರ ಮೂಲಕ ಮನಮುಟ್ಟುವಂತೆ ನಮಗೆ ತಿಳಿಯುತ್ತದೆ. ಅದಕ್ಕಾಗಿ ಈ ಮೇಲೆ ಹೇಳಿರುವಂತಹ ಒಂದೇ ಒಂದು ಸಂನಿವೇಶವನ್ನೇ ಕೂಲಂಕಷವಾಗಿ ಗಮನಿಸಿದರೆ ಸಾಕು. 

ಕೈಕೇಯಿಯು ಹೇಳಿದ್ದಕ್ಕೆ ಶ್ರೀರಾಮನ ಪ್ರತಿಕ್ರಿಯೆ ಹೇಗಿತ್ತು? ಯುವರಾಜನಾಗಬೇಕಾದವನು ವನವಾಸಕ್ಕೆ ಹೋಗಬೇಕು ಎಂದಾದರೂ, ರಾಮನ ಮನಸ್ಸು ಕಿಂಚಿತ್ತೂ ಹುಳಿಯಾಗಲಿಲ್ಲ. ತನ್ನ ಬದಲು ತನ್ನ ತಮ್ಮನಾದ ಭರತನಿಗೆ ಪಟ್ಟಾಭಿಷೇಕವೆಂದು ಅವನಿಗೆ ಸಂತೋಷವೇ ಆಯಿತು.  ತಂದೆ ಕೊಟ್ಟ ಮಾತನ್ನು ಉಳಿಸಲು ತಾನೇನು ಮಾಡಬೇಕು? - ಎನ್ನುವುದೊಂದೇ ಶ್ರೀರಾಮನ ಮನಸ್ಸಿನಲ್ಲಿದ್ದದ್ದು. (ಅಯೋಧ್ಯೆಗೆ ಹಿಂದಿರುಗುವಾಗಲೂ ರಾಮನು ಮೊದಲು ಹನುಮಂತನನ್ನು ಕಳುಹಿಸಿದನು – ಭರತನನ್ನು ಗಮನಿಸಲು. ಅಷ್ಟು ದಿನ ರಾಜ್ಯವಾಳಿದ ಭರತನಿಗೆ ಅದರಲ್ಲಿ ಅಕಸ್ಮಾತ್ ರುಚಿ ಮೂಡಿದ್ದರೆ? ಆಗ ಅವನಿಗೇ ರಾಜ್ಯಭಾರವನ್ನು ಒಪ್ಪಿಸಿಬಿಡಬೇಕೆಂಬ ಉದ್ದೇಶ ರಾಮನದು!) 

ಇನ್ನು ಲಕ್ಷ್ಮಣ. ರಾಮನಿಗೆ ಅನ್ಯಾಯವಾಯಿತೆಂದು ಅವನಿಗೆ ಉರಿಗೋಪವೇ ಬಂದಿತ್ತು. ಆದರೆ ಶ್ರೀರಾಮನು ತನ್ನ ನಿಲುವನ್ನೂ ಅದರ ಹಿಂದಿನ ತನ್ನ ಧಾರ್ಮಿಕನೋಟವನ್ನೂ ತಿಳಿಹೇಳಿದ ನಂತರ ಲಕ್ಷ್ಮಣನ ಚಿಂತನವೇ ಬದಲಾಯ್ತು! ನಾರುಮಡಿಯುಟ್ಟು ತನ್ನಣ್ಣನ ಹಿಂದೆ ಕಾಡಿಗೆ ಹೊರಡಲು ಲಕ್ಷ್ಮಣನು ಒಂದು ಕ್ಷಣವೂ ಯೋಚಿಸಲಿಲ್ಲ. ತನ್ನ ಪ್ರಧಾನಧರ್ಮವೇನೆಂಬುದು ಅವನಿಗೆ ಸುಸ್ಪಷ್ಟವಾಗಿತ್ತು. 

ಇತ್ತ ಭರತನ ಪ್ರತಿಕ್ರಿಯೆ: ತನ್ನ ತಾಯಿಯನ್ನು ಅವಳ ಅಕೃತ್ಯಕ್ಕೆ ಹಳಿದವನೇ, ರಾಮನಿಗೆ ರಾಜ್ಯವನ್ನೊಪ್ಪಿಸಲು ಹೊರಟೇಬಿಟ್ಟ! ಜನರ ಬಾಯಿಗೆ ಹೆದರಿ ತೆಗೆದುಕೊಂಡ ನಿರ್ಧಾರವಲ್ಲ ಭರತನದು. ತಾನು ಕೇಳದೆಯೇ ಬಂದ ರಾಜ್ಯವೆಂದು ಆತ ಪಟ್ಟಾಭಿಷಿಕ್ತನಾಗಲು ಒಪ್ಪಬಹುದಿತ್ತು. ತಾಯಿ ಮಾಡಿದ್ದು ಸರಿಯಲ್ಲವೆಂದು ಹೇಳಿ, ಭರತನು ರಾಜ್ಯಭಾರ ಮಾಡಲು ಒಪ್ಪಿದ್ದಿದ್ದರೆ ಆತನನ್ನು ಯಾರೂ ದೂಷಿಸಲು ಆಸ್ಪದವಿರಲಿಲ್ಲ. ಧರ್ಮ್ಯವಾದದ್ದೇನು ಎಂಬುದರ ಬಗ್ಗೆ ಭರತನ ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ದೃಢವಿಶ್ವಾಸಗಳಿದ್ದವು. ಆತನು ನೇರವಾಗಿ ಶ್ರೀರಾಮನಿರುವಲ್ಲಿಗೆ ಹೋಗಿ ರಾಜೋಚಿತವಾದ ಎಲ್ಲ ಸಮ್ಮಾನಗಳೊಡನೆ ಅವನನ್ನು ಅಯೋಧ್ಯೆಗೆ ಕರೆತರಲು ಪ್ರಯತ್ನಿಸಿದನು. ರಾಮನೊಪ್ಪದಿದ್ದಾಗ, ಅವನ ಪಾದುಕೆಗಳನ್ನೇ  ಪ್ರತಿನಿಧಿಯನ್ನಾಗಿಟ್ಟು ಆಡಳಿತವನ್ನು ನೋಡಿಕೊಂಡನು. ರಾಜ್ಯವಾಳುವ ಭರತನು ತನ್ನಿಬ್ಬರು ಭ್ರಾತೃಗಳು ಇದ್ದಂತೆಯೇ, ತಪಸ್ವಿಯಂತೆಯೇ, ಇದ್ದನು. 

ಶ್ರೀರಂಗಮಹಾಗುರುಗಳು ಭರತನ ಬಗ್ಗೆ ಹೇಳಿರುವುದು ಮಾರ್ಮಿಕವಾಗಿದೆ: "ತಾನೇ ರಾಜ್ಯಭಾರಮಾಡಿದರೂ ಅಲ್ಲಿ ತನ್ನದನ್ನೇನನ್ನೂ ಇಟ್ಟುಕೊಳ್ಳದೇ, ರಾಮನ ಆಶಯವರಿತು, ಅದರ ಸ್ಫೂರ್ತಿಗಾಗಿ ಆ ಪಾದುಕೆಯನ್ನಿಟ್ಟುಕೊಂಡು, ರಾಮನ ಅಪ್ಪಣೆಯಂತೆ ರಾಜ್ಯಪಾಲನ ಮಾಡಿದ ರೀತಿಯಾಗಿದೆ. ಪಾದುಕೆಗಳು ಮರವಾಗಿದ್ದರೂ ಅದರಲ್ಲಿರುವ ಅಮರವಾದ ಆತ್ಮಾರಾಮನ ಸ್ಫೂರ್ತಿಯಿಂದ ಅಮರತ್ವದಿಂದ ಅಮರರಾಜ್ಯವನ್ನಾಳಿದನು."

ಶತ್ರುಘ್ನನ ಬಗ್ಗೆ ವಾಲ್ಮೀಕಿರಾಮಾಯಣದಲ್ಲಿ ಹೆಚ್ಚೇನೂ ಬಂದಿಲ್ಲದಿದ್ದರೂ ರಾಮ-ಲಕ್ಷ್ಮಣರಂತೆ ಭರತ-ಶತ್ರುಘ್ನರೂ ಚಿಕ್ಕಂದಿನಿಂದಲೂ ಬಹಳ ಹತ್ತಿರವಾಗಿದ್ದರೆಂದು ತಿಳಿಯುತ್ತದೆ. ಶ್ರೀರಾಮನ ಪಟ್ಟಾಭಿಷೇಕ ತಪ್ಪಿದಾಗ ಅವನೂ ಭರತನಂತೆ ಬಹಳ ದುಃಖಿತನಾದನು. ತನ್ನ ತಂದೆಯ ಮೇಲೆ ಕೋಪವೂ ಬಂದಿತು. ಮಂಥರೆಯು ಕಣ್ಣಿಗೆ ಬಿದ್ದಾಗ, ಅವಳನ್ನು ದಂಡಿಸತೊಡಗಿದ, ಶತ್ರುಘ್ನ. ಒಬ್ಬ ಸ್ತ್ರೀಯನ್ನು ಕೊಲ್ಲಬಾರದೆಂದೂ, ಅವಳನ್ನು ಕೊಂದದ್ದೇ ಆದರೆ ಶ್ರೀರಾಮನು ಅವರಿಬ್ಬರನ್ನೂ ಕ್ಷಮಿಸನು ಎಂದೂ ಭರತನು ಅವನನ್ನು ತಡೆದನು. ಆಗ ಮಾತ್ರ ಶತ್ರುಘ್ನನು ತನ್ನ ರೋಷಕ್ಕೆ ಕಡಿವಾಣಹಾಕಿದನು. ರಾಮಚಂದ್ರನ ವಿಷಯದಲ್ಲಿ ಅಂತಹ ಗೌರವ-ಭಕ್ತಿ ಅವರಿಬ್ಬರಿಗೂ. 

ಸಣ್ಣಪುಟ್ಟ ವಿಷಯಗಳಿಗೂ ಕೌಟುಂಬಿಕ-ಕಲಹಗಳು ಈಗಂತೂ ಸರ್ವೇಸಾಮಾನ್ಯ. ಹಾಗಿರುವಾಗ, ತಂದೆಯ ಮಾತಿಗಾಗಿ ತಮ್ಮನಿಗೆ ರಾಜ್ಯ ಬಿಟ್ಟು ಕಾಡಿಗೆ ಹೊರಟವನೊಬ್ಬ; ಅಣ್ಣನಾಳಬೇಕಾದ ರಾಜ್ಯವನ್ನು ತಾನೊಲ್ಲೆ ಎಂದವನಿನ್ನೊಬ್ಬ; ಅಣ್ಣ ಕಾಡಿಗೆ ಹೊರಟರೆ ನಾನೂ ಹೊರಟೆ ಎಂದು ಮಗದೊಬ್ಬ; ಅಣ್ಣಂದಿರು ತಪಸ್ವಿಗಳಂತೆ ಜೀವನ ನಡೆಸುವಾಗ ತಾನೂ ಅಂತೆಯೇ ಇರುವೆನೆಂದಿಬ್ಬರು. ಅಧಿಕಾರಕ್ಕಾಗಲೀ, ರಾಜ್ಯಕ್ಕಾಗಲೀ ಹಾತೊರೆಯದೆ, ಧರ್ಮನಿಷ್ಠೆ, ಭ್ರಾತೃಪ್ರೇಮ, ತ್ಯಾಗ – ಇವೆಲ್ಲವನ್ನೂ ಮೆರೆದ ಈ ನಾಲ್ವರು ಯಾರಿಗೆ ಆದರ್ಶವಲ್ಲ? 


ಸೂಚನೆ : 21/03/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.