Monday, March 16, 2026

ಕೃಷ್ಣಕರ್ಣಾಮೃತ 98 ಜಗದೊಡೆಯನಾದರೂ ಮುಗ್ಧಜನ-ಸುಲಭ, ಈ ನಂದನಂದನ (Krishakarnamrta 98)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)


ನನ್ನ ಚಿತ್ತವು ಇಲ್ಲಿ ವಾಸ ಮಾಡಲಿ - ಎನ್ನುತ್ತಾನೆ, ಲೀಲಾಶುಕ. ಎಲ್ಲಿ? ನಂದಗೋಪನ ಸೂನುವಿನಲ್ಲಿ. ಸೂನುವೆಂದರೆ ಮಗ. ನಂದನಂದನನಲ್ಲಿ ನೆಲೆಸಬೇಕು ನನ್ನ ಮನಸ್ಸು.

ಅದೂ ಹೇಗೆ? ಆತನ ಪದಗಳಿಗೆ ಆಯತ್ತವಾಗಿರಬೇಕು, ಅದರ ವೃತ್ತ; ಆ ಪರಿಯಲ್ಲಿ ನೆಲೆಸಬೇಕು. ವೃತ್ತವೆಂದರೆ ವರ್ತನೆ, ನಡೆ. ಆಯತ್ತವೆಂದರೆ ಅಧೀನ. ಶ್ರೀಕೃಷ್ಣನ ಚರಣಗಳಿಗೆ ಅಧೀನವಾಗಿಯೇ ಇರಬೇಕು ಮನದ ನಡೆ. ಎಂದರೆ ನನ್ನ ಚಿತ್ತದ ವೃತ್ತವು ಶ್ರೀಕೃಷ್ಣಚರಣಗಳ ನಡೆಗೆ ಅನುಸಾರಿಯಾಗಿರಬೇಕು.

ಅದೇನು ವಿಶೇಷ ಕೃಷ್ಣನಲ್ಲಿರುವುದು, ನನ್ನ ಮನಸ್ಸನ್ನೆಲ್ಲ ಸಮರ್ಪಿಸಿಬಿಡಲು ಅರ್ಹವೆನಿಸಲು? ಐದು ಸಾರ್ಥಕವಾದ ವಿಶೇಷಣಗಳಿಂದ ಅದನ್ನು ಹೇಳುತ್ತಾನೆ.

ಮೊದಲನೆಯದಾಗಿ ಆತನು ವ್ರಜಯುವತಿಯರಿಗೆ, ಎಂದರೆ ಗೋಪನಾರಿಯರಿಗೆ, ಸಹಾಯನಾಗಿದ್ದವನು. ಏನು ಹಾಗೆಂದರೆ?

ಕಷ್ಟ-ಸುಖಗಳಲ್ಲಿ ಯಾರು ಜೊತೆಯಾಗಿರುವರೋ ಅವರೇ ನಿಜವಾದ ಸ್ನೇಹಿತರು, ಅಲ್ಲವೇ? ಜೊತೆಗಿರುವವನೆಂದರೆ ಸುಮ್ಮನೆ, ಎಂದರೆ ನಿಷ್ಪ್ರಯೋಜಕವಾಗಿ, ಇದ್ದುಬಿಡುವವನಲ್ಲ. ಒಂದಲ್ಲ ಒಂದು ಬಗೆಯಲ್ಲಿ ಉಪಕಾರಿಯಾಗಿರುವನೆಂದೇ ಅರ್ಥ.

ಅದು ಹೇಗೆ ತೋರಿಕೊಂಡಿದೆ, ಬೇರೆ ಬೇರೆ ಭಾಷೆಗಳಲ್ಲಿ – ಎಂಬುದನ್ನೊಮ್ಮೆ ಗಮನಿಸಬೇಕು. ಸಂಸ್ಕೃತದಲ್ಲಿ ಸಹಾಯನೆಂದರೆ ಜೊತೆಗಾರ. ಕನ್ನಡದಲ್ಲಿ ಸಹಾಯವೆಂದರೆ ಉಪಕಾರ. ಒಂದು ಭಾಷೆ ಕಾರಣದ ಅರ್ಥವನ್ನು ಹೇಳಿತು, ಮತ್ತೊಂದು ಭಾಷೆ ಕಾರ್ಯದ ಅರ್ಥವನ್ನು.

ಸರಿ, ಗೋಪಬಾಲಿಕೆಯರಿಗೆ ಈತನು ಜೊತೆಗಾರನಾಗಿದ್ದನೆಂದಾದರೆ, ಅಷ್ಟು ಮಾತ್ರದಲ್ಲಿ ಹೆಚ್ಚುಗಾರಿಕೆಯೇನಿದೆ? ಇದೆ. ಅದು ಹೀಗೆ: ತಾನು ಕ್ಷತ್ರಿಯನಾಗಿ, ರಾಜವಂಶಕ್ಕೆ ಸೇರಿದವನಾಗಿ, ಕೆಲಕಾಲದಲ್ಲಿ ರಾಜಪದವಿಯನ್ನೇ ಹೊಂದುವವನಿದ್ದನು; ಹಾಗಿದ್ದರೂ ಸರಳತೆ ತುಂಬಿದವನಾಗಿದ್ದನು!

ದನಗಾಹಿಗಳ ಗೊಲ್ಲತಿಯರು ಯಾವ ಲೆಕ್ಕ ತನಗೆ, ತನ್ನ ಅಂತಸ್ತಿಗೆ? - ಎಂದು ಅವರನ್ನು ತಾತ್ಸಾರಮಾಡಲಿಲ್ಲ, ತಿರಸ್ಕರಿಸಲಿಲ್ಲ. ಅವರ ಮುಗ್ಧತೆಗೆ ಮನಸೋತು ಅವರಿಗೆ ಸುಲಭನಾಗಿದ್ದನು.

ರಾಜ-ವಂಶದ ಮಾತೇನು? ತಾನು ಲೋಕ-ಪ್ರಭುವೆಂಬುದನ್ನೂ ಎಳಸಿನಲ್ಲೇ ಅರಿತಿದ್ದವನು ಅವನು. ಹಾಗಿದ್ದೂ ಸಹ ಅತ್ಯಂತ- ಸಾಧಾರಣವೆನಿಸುವವರೊಂದಿಗೂ ಕ್ರೀಡಿಸಿದನು. "ಶುದ್ಧ-ಚಿತ್ತರಿಗೆಲ್ಲರಿಗೂ ತಾನು ಲಭ್ಯ" - ಎನ್ನುವುದನ್ನು ಹೀಗೆ ಎಲ್ಲ ಬಗೆಗಳಿಂದ ತೋರಿಸಿಕೊಟ್ಟನಲ್ಲವೇ?

ಅವರಿಗೆ ಒಲಿದಂತೆ ನನಗೂ ಒಲಿಯಬಾರದೆ? ಶುದ್ಧ-ಮನಸ್ಕರಿಗೆಲ್ಲ ತನ್ನ ಕರಾವಲಂಬವನ್ನಿತ್ತ ಈ ಪರಮ-ಪ್ರಭು ನನ್ನ ವಿಷಯದಲ್ಲೂ ಅನುಗ್ರಹ-ಪರನಾಗಲಿ - ಎಂಬ ಕೋರಿಕೆಯೇ, ಲೀಲಾಶುಕನ ಅರಿಕೆಯೇ, ಇದು.

ಇನ್ನು ಕೃಷ್ಣನ ಮೈಕಟ್ಟು ಹೇಗಿದೆ? ಯೌವನೋಲ್ಲಾಸಿಯಗಿದೆ. ಯೌವನದಲ್ಲಿ ಉಲ್ಲಾಸಿ - ಎಂದರೆ ಯೌವನವು ತುಂಬಿತುಳುಕುವ ವಯಸ್ಸು. ಆಗಲ್ಲವೆ, ಮುಖದಲ್ಲಿ ಗೆಲವು, ಚಲನ-ವಲನಗಳಲ್ಲಿ ಚಿಮ್ಮುವ ಉತ್ಸಾಹ, ಕಣ್ಣಿನಲ್ಲಿ ಕಾಂತಿ ಮುಂತಾದುವು ಇರುವುದು?

ಮೋಸದ ಸೌಂದರ್ಯದವರು ಲೋಕದಲ್ಲಿ ರಬಹುದು. ಆದರಿದೋ ಶುದ್ಧ-ಸ್ವರೂಪನಾದ ಈತನ ಜವ್ವನದ ಸೊಬಗನ್ನು ಕೇಳಬೇಕೇ? ಇಂತಹ ಶರೀರ-ಸೌಷ್ಠವವನ್ನು ತುಂಬಿಕೊಂಡಿರುವ ಮೈಯೆಂದರೆ, ಅದರ ಧ್ಯಾನವು ರಸ-ವರ್ಧಕವೇ ಸರಿ. ಇದು ಎರಡನೆಯ ವಿಶೇಷ.

ಮೂರನೆಯದೆಂದರೆ, ಆತನು ಸಕಲ-ಶುಭಗಳ ವಿಲಾಸ. ಲೋಕದಲ್ಲಿ ಎಷ್ಟೋ ಮಂದಿ ಮಹಾಪುರುಷರಿರಬಹುದು. ಅವರಲ್ಲಿ ಏನೋ ಸಣ್ಣಪುಟ್ಟ ಓರೆಕೋರೆಗಳೂ ಇರಬಹುದು. ಅವು ನಮಗೆ ಅಕಸ್ಮಾತ್ತಾಗಿ ಗೋಚರಿಸಿದರೂ ಅವರ ಬಗ್ಗೆ ನಮ್ಮ ಚಿತ್ತದಲ್ಲಿ ಆದರವು ಕಡಿಮೆಯಾಗುವುದುಂಟು. ಎಂದೇ ಶುಭಗುಣ-ನಿಲಯನಾದವನೇ ಧ್ಯಾನಕ್ಕೆ ಶುಭಾಶ್ರಯನಾಗುವುದು - ಎನ್ನುವುದು.

ನಾಲ್ಕನೆಯದೆಂದರೆ, ಆತನ ಮೊಗದಲ್ಲಿಯ ಮಂದ-ಹಾಸ. ಮಂದ-ಹಾಸದಲ್ಲಿ ಹಲ್ಲುಗಳು ಕಿಂಚಿತ್ತಾಗಿ ಕಾಣಿಸಿಕೊಳ್ಳುವುವಷ್ಟೆ. ಹಲ್ಲುಗಳು ಬೆಳ್ಳಗಿದ್ದರೇ ಶೋಭೆಯಲ್ಲವೇ? ಕೃಷ್ಣನ ಹಲ್ಲುಗಳು ಹೇಗಿವೆ? ಅದಕ್ಕೆ ಎರಡು ಹೋಲಿಕೆಗಳನ್ನು ಕವಿ ಕೊಟ್ಟಿದ್ದಾನೆ: ಕುಂದ-ಮಂದಾರಗಳಂತೆ. ಕುಂದವೆಂದರೆ ಮೊಲ್ಲೆಹೂ. ಅದಕ್ಕೆ ಮನೋಹರ-ಮಹಾಮೋದಗಳೆಂಬ ಹೆಸರುಗಳೂ ಇವೆ. ಎಂದರೆ ನೋಡಲೂ ಚೆಂದ, ಸುಗಂಧವೂ ತುಂಬಿದೆ. ಸರಸ್ವತಿಯನ್ನೂಕುಂದದಂತೆ ಧವಳೆ ಎನ್ನುವರು. ಶುಕ್ರನನ್ನೂ ಅಷ್ಟೆ. ಹಯವದನನ ಹಸಿತಕ್ಕೂ ಅದೇ ಉಪಮೆ.

ಐದನೆಯದೆಂದರೆ ಆತನು ಮುನಿ-ಸರಸಿಜ-ಭಾನು. ಸರಸಿಜವೆಂದರೆ ಕಮಲ. ಮುನಿಗಳನ್ನೇ ಪದ್ಮಗಳೆಂದುಕೊಳ್ಳಿ. ಆ ತಾವರೆಗಳನ್ನು ಅರಳಿಸುವ ಸೂರ್ಯನಿವನು. ಸೂರ್ಯನ ಪ್ರಕಾಶವು ಬಿದ್ದರಲ್ಲವೇ ಕಮಲಗಳು ವಿಕಸಿಸುವುದು? ಅವುಗಳ ಸೌಂದರ್ಯ-ಸೌರಭ್ಯಗಳೂ ಮಧುರಮಕರಂದವೂ ಪ್ರಕಾಶಕ್ಕೆ ಬರುವುದು?

ಎಂತಹ ಮೋಸಗಾರ ನಮ್ಮ ಕೃಷ್ಣ! ಮೇಲ್ನೋಟಕ್ಕೆ ಗೋಪೀಜನರೊಂದಿಗೆ ವಿಹಾರಿ, ವಿಲಾಸಿ; ಒಳನೋಟಕ್ಕೆ ಮುನಿಕಮಲ-ವಿಕಾಸಕ್ಕೆ ಕಾರಣಭೂತನಾದವನು!

ವ್ರಜ-ಯುವತಿ-ಸಹಾಯೇ ಯೌವನೋಲ್ಲಾಸಿ-ಕಾಯೇ/

ಸಕಲ-ಶುಭ-ವಿಲಾಸೇ ಕುಂದ-ಮಂದಾರ-ಹಾಸೇ|

ನಿವಸತು ಮಮ ಚಿತ್ತಂ ತತ್-ಪದಾಯತ್ತ-ವೃತ್ತಂ

ಮುನಿ-ಸರಸಿಜ-ಭಾನೌ ನಂದಗೋಪಸ್ಯ ಸೂನೌ ||

ಈ ಶ್ಲೋಕದಲ್ಲಿ ಯತಿಸ್ಥಾನಗಳಲ್ಲಿಯ ಅನುಪ್ರಾಸವು ಮನೋಹರವಾಗಿದೆ: ಹಾಯೇ-ಕಾಯೇ; ಲಾಸೇ-ಹಾಸೇ; ಚಿತ್ತಂ-ವೃತ್ತಂ; ಭಾನೌ-ಸೂನೌ. ಕುಂದ-ಮಂದಾರದಲ್ಲಿಯೂ ಅದೇ ಇದೆ.

 

*****
ಮತ್ತೊಂದು ಶ್ಲೋಕ.

ಆ ಕೇಶವನು ನಮ್ಮನ್ನು ಕಾಪಾಡಲಿ - ಎಂದು ಪ್ರಾರ್ಥಿಸುತ್ತಾನೆ, ಲೀಲಾಶುಕ. ಕೇಶವನ ಹಿರಿಮೆಯು ಎಂತಹುದು? – ಎಂಬುದನ್ನು ಅದಕ್ಕಾಗಿ ಐದು ಬಗೆಗಳಲ್ಲಿ ನಿರೂಪಿಸುತ್ತಾನೆ.

ನಾರಾಯಣನ ನಾಭಿಯಿಂದ ಬ್ರಹ್ಮನು ಜನಿಸಿದನಷ್ಟೆ? ಅದನ್ನೇ ಕವಿಯು ಕಾವ್ಯಾತ್ಮಕವಾಗಿ ಹೇಳುತ್ತಾನೆ: ವಿಷ್ಣುವಿನ ನಾಭಿಯೇ ಒಂದು ಸರಸೀರುಹ, ಎಂದರೆ ಕಮಲ; ಮತ್ತು ಅದರ ಪುಟದೊಳಗೆ ವಿಧಿಯು ಭೃಂಗದಂತಿದ್ದಾನೆ. ಭೃಂಗವೆಂದರೆ ದುಂಬಿ. ಪುಟವೆಂದರೆ ಪೊಳ್ಳಾಗಿರುವ ಭಾಗ, ಕುಳಿಯಂತಹ ಎಡೆ; ಇಲ್ಲಿ ಕಮಲದ ಕೋಶ. ಬ್ರಹ್ಮನು ವಿಷ್ಣುವಿನ ನಾಭಿಕಮಲದೊಳಗಣ ಕೋಶದಲ್ಲಿ ಒಂದು ದುಂಬಿಯಂತೆ.

ಎರಡನೆಯದಾಗಿ, ವಿಷ್ಣುವಿನ ವಕ್ಷಸ್ಸು ಕಮಲೆಗೆ, ಎಂದರೆ ಲಕ್ಷ್ಮಿಗೆ, ವಿಲಾಸ-ಸದನ. ಎಂದರೆ ಕೇಲಿ-ಗೃಹ, ಅರ್ಥಾತ್ ಕ್ರೀಡಾ-ಮಂದಿರ.

ಮೂರನೆಯದಾಗಿ, ಆ ವಿಷ್ಣುವಿನ ಎರಡು ಕಣ್ಣುಗಳೇ ಇಂದು ಮತ್ತು ಇನಗಳು. ಇಂದುವೆಂದರೆ ಚಂದ್ರ; ಇನನೆಂದರೆ ಸೂರ್ಯ. ಸೂರ್ಯ-ಚಂದ್ರರೇ ವಿಷ್ಣುವಿನ ಕಣ್ಣುಗಳು - ಎಂದು ವಿಷ್ಣು-ಸಹಸ್ರನಾಮವೂ ಹೇಳುವುದಲ್ಲವೇ? ಸೂರ್ಯ-ಚಂದ್ರರಿಂದಲೇ ಜಗತ್ತಿಗೆ ಬೆಳಕು. ಕಾಲ-ಚಕ್ರದ ಹಗಲು-ರಾತ್ರಿಗಳು ಇವರಿಂದಲೇ ತಾನೆ?

ನಾಲ್ಕನೆಯದಾಗಿ, ವಿಷ್ಣುವಿನ ಪಾದಾರವಿಂದದಿಂದಲೇ ಗಂಗೆಯು ಹೊರಡುವುದು; ಅದುವೇ ಶಂಭುವಿಗೆ ಶಿರೋಭೂಷಣವೂ ಆಗಿರುವುದು. ಎಂದರೆ ತಲೆಗೆ ಅಲಂಕಾರ. ವಿಷ್ಣು-ಪಾದವು ಎಷ್ಟು ಶ್ರೇಷ್ಠವಾದುದೆಂದರೆ ಅಲ್ಲಿಂದ ಸ್ರವಿಸಿದ ಗಂಗೆಯು ಜಗತ್ಪಾವನಿಯೇ ಆದಳು. ಗಂಗೆಯ ಪಾವಿತ್ರ್ಯವೆಷ್ಟೆಂದರೆ ಶಿವ-ಶಿರಸ್ಸಿಗೂ ಅದು ಶೋಭೆಯನ್ನು ತಂದಿತು.

ಐದನೆಯದಾಗಿ, ಕೇಶವನಿರಲಿ, ಕೇಶವ-ನಾಮದ ಸ್ಮರಣೆಯೇ, ನಮ್ಮ ದುರಿತಗಳನ್ನು, ಎಂದರೆ ಪಾಪಗಳನ್ನು, ತೊಡೆದುಹಾಕಿಬಿಡುವುದು!

ಸಾರಾಂಶವಾಗಿ, ತ್ರಿಮೂರ್ತಿಗಳಲ್ಲಿ ಬ್ರಹ್ಮ-ಶಂಭುಗಳು ಅಸ್ತಿತ್ವ-ಶೋಭೆಗಳನ್ನು ಕೇಶವನಿಂದಲೇ ಪಡೆದರು. ಲಕ್ಷ್ಮೀ-ದೇವತೆಯು ಕೇಶವ-ವಕ್ಷೋವಿಹಾರಿಣಿ. ಕಾಲ-ತತ್ತ್ವದ ಎರಡು ರೂಪಗಳಾದ ಸೂರ್ಯ-ಚಂದ್ರರೇ ಕೇಶವನ ನೇತ್ರ-ದ್ವಯ. "ನಿನ್ನ ನಾಮದ ಬಲವೊಂದಿದ್ದರೆ ಸಾಕೋ!" ಎನ್ನಿಸಿಕೊಳ್ಳುವಂತಹ ದಿವ್ಯ-ನಾಮ ಕೇಶವನದು.

ಇಷ್ಟೊಂದೆಲ್ಲಾ ಮಹಿಮೆಗಳನ್ನು ಹೊಂದಿರುವವನನ್ನು "ಕಾಪಾಡು!" - ಎಂದು ಕೇಳಿಕೊಳ್ಳುವುದು ಸಹಜವೇ ತಾನೆ?

ಶ್ಲೋಕ ಹೀಗಿದೆ:

ಯನ್ನಾಭೀ-ಸರಸೀರುಹಾಂತರ-ಪುಟೇ ಭೃಂಗಾಯಮಾಣೋ ವಿಧಿಃ /
ಯದ್-ವಕ್ಷಃ ಕಮಲಾ-ವಿಲಾಸ-ಸದನಂ ಯಚ್ಚಕ್ಷುಷೀ ಚೇಂದ್ವಿನೌ |
ಯತ್-ಪಾದಾಬ್ಜ-ವಿನಿಃಸೃತಾ ಸುರ-ನದೀ ಶಂಭೋಃ ಶಿರೋಭೂಷಣಂ /
ಯನ್ನಾಮ-ಸ್ಮರಣಂ ಧುನೋತಿ ದುರಿತಂ ಪಾಯಾತ್ ಸ ನಃ ಕೇಶವಃ ||

ಸೂಚನೆ :14/3/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.