ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೫೫ - ಮಿಂಚಿನಂತೆ ಚಪಲವಾದುದು ಯಾವುದು?
ಉ. ದುರ್ಜನಸಂಗ ಮತ್ತು ಯುವತಿ.
ಪ್ರಕೃತ ಉತ್ತರದಲ್ಲಿ ಎರಡು ಸಂಗತಿಗಳನ್ನು ಅತ್ಯಂತ ಚಪಲವಾದವುಗಳು ಎಂಬುದಾಗಿ ಗಣಿಸಲಾಗಿದೆ. ಅದಕ್ಕೆ ಒಂದು ಉದಾಹರಣೆಯನ್ನೂ ಇಲ್ಲಿ ಕೊಡಲಾಗಿದೆ. ಉದಾಹರಣೆಯು ಆ ಚಪಲತೆ ಅಥವಾ ಚಂಚಲತೆಗೆ ತುಂಬಾ ಲಗತ್ತಾಗಿ ಹೊಂದಿಕೊಳ್ಳುವ ವಿಷಯವಾಗಿದೆ. ಇದರಿಂದ ಈ ಉತ್ತರದಲ್ಲಿ ಹೇಳಿರುವ ದುರ್ಜನಸಂಗ ಮತ್ತು ಯುವತಿ ಎರಡು ವಿಷಯಗಳು ಎಷ್ಟು ಚಪಲ? ಎಂಬುದನ್ನು ತಿಳಿಯಬಹುದಾಗಿದೆ. ಮಿಂಚು ಎಲ್ಲರಿಗೂ ತಿಳಿದಂತೆ ಒಂದು ಕ್ಷಣ ಆಕಾಶದಲ್ಲಿ ನಮ್ಮ ಕಣ್ಣಿಗೆ ಗೋಚರಿಸಿ ಮರೆಯಾಗುವ ವಿಷಯವಾಗಿದೆ. ಅಂತೆಯೇ ಈ ದುರ್ಜನಸಂಗ ಮತ್ತು ಯುವತಿಯ ಸಂಗವು ಕೂಡ ನಮ್ಮ ಜೀವನದಲ್ಲಿ ಅಷ್ಟು ಕ್ಷಣಿಕವಾದವುಗಳು. ಮಿಂಚು ಹೇಗೆ ಕಣ್ಣಿಗೆ ಕ್ಷಣಿಕ ಆನಂದವನ್ನು ಕೊಟ್ಟು ಮರೆಯಾಗುತ್ತದೆಯೋ ಅಂತೆಯೇ ಈ ಎರಡು ಸಂಗತಿಗಳೂ ಕೂಡ ಎಂಬ ಮಾರ್ಮಿಕ ವಿಷಯವನ್ನು ಈ ಪ್ರಶ್ನೋತ್ತರ ಸಾರುತ್ತದೆ. ಹಾಗಾದರೆ ಇವೆರಡು ಏಕೆ ಅಷ್ಟು ಚಂಚಲ? ಎಂಬುದನ್ನು ನಾವು ವಿಚಾರಿಸಬೇಕಾಗಿದೆ. ದುರ್ಜನರ ಸಂಗ ಮತ್ತು ಯುವತಿಯರ ಸಂಗ ಇವೆರಡೂ ನಮ್ಮನ್ನು ಸನ್ಮಾರ್ಗದಿಂದ ಚ್ಯುತಿಗೊಳಿಸುವ ವಿಧಾನವಾಗಿವೆ. ಹಾಗಾಗಿ ಇವೆರಡೂ ದೂರವಿಡಲು ಯೊಗ್ಯವಾದ ವಿಷಯಗಳು ಎಂಬುದನ್ನು ಅರಿಯಬೇಕಾಗಿದೆ.
ನಮ್ಮ ಜೀವನವು ಹೇಗೆ ಸಾಗಬೇಕಾಗಿದೆ? ಎಂಬುದನ್ನು ತಿಳಿದಾಗ, ಆ ಜೀವನಕ್ಕೆ ಎರಡು ಸಂಗತಿಗಳು ಎಷ್ಟು ವಿರೋಧವಾದವುಗಳು ಎಂಬುದನ್ನು ತಿಳಿಯಬಹುದು. ಅಂದರೆ ದುರ್ಜನರ ಸಂಪರ್ಕ ಮತ್ತು ಯುವತಿಯ ಸಾಂಗತ್ಯವು ಅತ್ಯಂತ ಚಂಚಲವಾಗಿದ್ದು, ಅವು ನಮ್ಮ ಜೀವನದಲ್ಲಿ ಮಿಂಚಿನಂತೆ ಬಂದುಹೋಗುತ್ತವೆ. ಶಾಶ್ವತವಾದವುಗಳಲ್ಲ. ಅವುಗಳನ್ನೇ ನೆಚ್ಚಿ ಕೂತರೆ ಬದುಕು ಅಸಾಧ್ಯ. ಹಾಗಾಗಿ ಇವೆರಡು ಕೂಡ ತ್ಯಾಜ್ಯ ಎಂಬುದು ಇದರ ಅರ್ಥ.
ವಯಸ್ಸಿಗೆ ಬಂದ ಯುವಕನಿಗೆ ಯುವತಿಯ ಸೆಳೆತ, ಹಾಗೆ ಯುವತಿಗೆ ಯುವಕನ ಸೆಳೆತ. ಈ ಎರಡು ಸೆಳೆತಗಳು ಆ ವಯಸ್ಸಿನಲ್ಲಿ ಅತ್ಯಂತ ಸಹಜವಾದವುಗಳು. ಅಕಾಲದಲ್ಲಿ ಬರುವ ಈ ಯುವಕ ಯುವತಿಯರ ಸೆಳೆತವು ಜೀವನದ ಉದ್ದೇಶವನ್ನು ಮರೆಸಬಹುದು. ಮತ್ತು ಯಾವಾಗ? ಯಾವುದು? ಹೇಗೆ? ಇತ್ಯಾದಿ ವಿವೇಕಪ್ರಜ್ಞೆಯನ್ನೂ ಸಹ ನಷ್ಟವಾಗಿಸಬಹುದು. ಇದನ್ನೇ ಸಾಮಾನ್ಯವಾಗಿ 'ರತಿ, ಪ್ರೀತಿ, ಕಾಮ' ಇತ್ಯಾದಿಯಾಗಿ ಹೇಳುವುದಂಟು. ರತಿ ಅಥವಾ ಪ್ರೀತಿಯಲ್ಲಿ ಮುಳುಗಿದ ವ್ಯಕ್ತಿಗೆ ಯಾವ ಪ್ರಪಂಚವು ಕೂಡ ಕಾಣಿಸದು. ಈ ಕಾರಣವಾಗಿ ತನ್ನ ಜೀವಿತದ ಉತ್ಕೃಷ್ಟ ಉದ್ದಿಶ್ಯವನ್ನು ಅವನು ಮರೆಯುವ ಸಂದರ್ಭ ಬರುತ್ತದೆ. ಹಾಗಾಗಿ ಯುವಕ ಯುವತಿಯರ ಆಕರ್ಷಣೆ ಎಂಬುದು ಮಿತಿಯಲ್ಲಿ ಇರಬೇಕು. ಅಂದರೆ ಯಾವ ಕಾಲದಲ್ಲಿ ಬರಬೇಕು? ಎಂಬುದಕ್ಕೆ ಒಂದು ನಿಯಮ ಇದೆ. ಅವರ ಪರಸ್ಪರ ಆಕರ್ಷಣೆಯು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಿಲ್ಲದ ಆಕರ್ಷಣೆಯು ಅವರ ಮನಸ್ಸಿನ ಏಕಾಗ್ರತೆಯನ್ನು ಭಂಗಗೊಳಿಸಬಹುದು. ಆದ್ದರಿಂದ ಅಕಾಲದ ಆಕರ್ಷಣೆಯು ಅತ್ಯಂತ ಅಪಾಯವಾದುದು. ಅದರಂತೆಯೇ ದುರ್ಜನರ ಸಂಗವೂ ಕೂಡ ಅತ್ಯಂತ ಅಪಾಯಕಾರಿ. ದುರ್ಜನರು ಎಂದರೆ ಧರ್ಮಪ್ರೀತಿ ಇಲ್ಲದ, ಧರ್ಮಕ್ಕೆ ವಿರೋಧವಾದ ನಡೆಯನ್ನು ಉಳ್ಳವರು. ಅವರ ಸಂಗವು ನಮ್ಮನ್ನು ಧರ್ಮದಿಂದ ಚ್ಯುತವಾಗಿಸುತ್ತದೆ. ಮತ್ತು ತತ್ಕಾಲದಲ್ಲಿ ಅದು ಬಹಳ ಅಪ್ಯಾಯಮಾನವಾಗಿ ಕಂಡುಬರುತ್ತದೆ. ಈ ಎರಡು ಸಂಗತಿಗಳು ಕೂಡ ತತ್ಕಾಲದಲ್ಲಿ ಆಕರ್ಷಕವಾಗಿಯೇ ಕಂಡು ಬರುತ್ತವೆ. ಆದರೆ ಪರಿಣಾಮದಲ್ಲಿ ಅವು ವಿಷಮತೆಯನ್ನು ಉಂಟುಮಾಡುತ್ತವೆ. ಆದ್ದರಿಂದ ಇವೆರಡನ್ನು 'ಮಿಂಚಿನಂತೆ ಅತ್ಯಂತ ಚಂಚಲವಾದವುಗಳು' ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.
ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.