ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣಾರ್ಜುನ-ಭೀಮಸೇನರು ಜರಾಸಂಧ-ಸಂಹಾರಕ್ಕಾಗಿ ಆಗಮಿಸುತ್ತಿರುವಲ್ಲಿ ಕೆಲವರು ವೇದ-ಪಾರಂಗತ ಬ್ರಾಹ್ಮಣರು ಕೆಲವು ಅಪಶಕುನಗಳನ್ನು ಕಂಡರು.
ಅವನ್ನವರು ಜರಾಸಂಧನ ಗಮನಕ್ಕೆ ತಂದರು. ಮತ್ತು ಅವಕ್ಕೆ ಪ್ರತಿಯಾಗಿ ಆತನ ಪುರೋಹಿತರು ಆತನನ್ನು ಆನೆಯ ಮೇಲೆ ಕೂರಿಸಿದರು; ಪರ್ಯಗ್ನಿ ಮಾಡಿದರು - ಎಂದರೆ ನಾಲ್ಕೂ ಎಡೆಗಳಲ್ಲಿ ಅಗ್ನಿಜ್ವಾಲನ ಮಾಡಿದರು.
ಸಂಭಾವ್ಯವಾದ ಅನಿಷ್ಟಗಳ ಪರಿಹಾರಕ್ಕಾಗಿ ಜರಾಸಂಧನೂ ಕ್ರಮಗಳನ್ನು ಕೈಗೊಂಡನು: ದೀಕ್ಷಿತನಾಗಿ ವ್ರತಿಯಾದನು, ಉಪವಾಸ ಮಾಡಿದನು.
ಇತ್ತ ಸ್ನಾತಕವ್ರತಸ್ಥರಾಗಿ ಬ್ರಾಹ್ಮಣವೇಷದಲ್ಲಿದ್ದ ಈ ಮೂವರು ಆಯುಧಗಳನ್ನು ತೆಗೆದಿಟ್ಟರು. ಅವರಿಗೋ, ಎಷ್ಟಾದರೂ ತಮ್ಮ ಬಾಹುಗಳೇ ಆಯುಧಗಳು! ಜರಾಸಂಧನೊಡನೆ ಯುದ್ಧಾಪೇಕ್ಷಿಗಳಾಗಿ ಅವರು ನಗರಪ್ರವೇಶವನ್ನು ಮಾಡಿದರು.
ಆ ನರೋತ್ತಮರಾದ ಕೃಷ್ಣ-ಭೀಮ-ಧನಂಜಯರು ಅಲ್ಲಿಯ ರಾಜಮಾರ್ಗಗಳಲ್ಲಿ ಕಂಡದ್ದೇನು?: ಭಕ್ಷ್ಯಾಪಣ-ಮಾಲ್ಯಾಪಣಗಳನ್ನು. ಎಂದರೆ, ಬೇಕಾದ್ದನ್ನು ತಿನ್ನಲು ಅಂಗಡಿಗಳು, ಹಾಗೂ ಹೂಮಾಲೆಗಳ ಅಂಗಡಿಗಳು – ಇವು ಅಲ್ಲಿದ್ದವು. ಅವುಗಳ ಸಿರಿಯನ್ನೂ, ಸರ್ವಕಾಮಗಳನ್ನೂ ಪೂರೈಸುವ ಅಲ್ಲಿಯ ಸಮೃದ್ಧಿಯನ್ನೂ ಅವರು ಕಂಡುಕೊಂಡರು.
ಮಹಾಬಲಶಾಲಿಗಳಾದ ಅವರು ಹೂಕಟ್ಟುವವನೊಬ್ಬನಿಂದ ಮಾಲೆಗಳನ್ನು ಬಲಾತ್ಕಾರವಾಗಿ ಸ್ವೀಕರಿಸಿದರು. ಮಾಲಾಧಾರಿಗಳಾದರು. ಅವರ ವಸ್ತ್ರಗಳೂ ನಾನಾವರ್ಣಗಳಿಂದ ಕೂಡಿದ್ದವು. ಹೊಳೆಯುವ ಕುಂಡಲಗಳನ್ನವರು ಧರಿಸಿದ್ದರು. ಜರಾಸಂಧನ ಅರಮನೆಯನ್ನು ಮುಟ್ಟಿದರು.
ಅವರು ನಡೆದು ಬರುತ್ತಿದ್ದ ರೀತಿಯು ಹೇಗಿತ್ತೆಂದರೆ, ಹಸುಗಳು ಎಲ್ಲೆಲ್ಲಿವೆಯೆಂದು ಗೋಶಾಲೆಯನ್ನು ನೋಡಿಕೊಂಡು ನಡೆಯುತ್ತಿರುವ ಹಿಮಾಲಯದ ಸಿಂಹಗಳಂತೆ. ಯುದ್ಧಗಳಲ್ಲಿ ಶೋಭಿಸುವ ಅವರ ತೋಳ್ಗಳು ಈಗ ಹೇಗಿದ್ದವು? ಚಂದನವನ್ನೂ ಅಗುರುವನ್ನೂ ಲೇಪಿಸಿದ್ದ ಅವು ಶಾಲಾ-ಸ್ತಂಭಗಳ ಹಾಗೆ, ಎಂದರೆ ಮಹಾಗೃಹದ ಕಂಭಗಳಂತೆ, ಇದ್ದುವು. ಒಟ್ಟಿನಲ್ಲಿ, ವಿಶಾಲವಕ್ಷಃಸ್ಥಳವುಳ್ಳವರೂ ಆನೆಗಳಂತಿರುವವರೂ ಆದ ಅವರನ್ನು ಕಂಡು ಮಾಗಧರಿಗೆ, ಎಂದರೆ ಮಗಧ-ದೇಶದ ಪ್ರಜೆಗಳಿಗೆ, ವಿಸ್ಮಯವೇ ಉಂಟಾಯಿತು.
ಜನಗಳು ಕಿಕ್ಕಿರಿದಿದ್ದ ಅಲ್ಲಿಯ ಮೂರು ಕಕ್ಷಗಳನ್ನು ದಾಟಿದರು, ಆ ಮೂವರು ಮಹಾಪುರುಷರು. ನಿರ್ಭಯರಾಗಿದ್ದ ಅವರು ಅಭಿಮಾನಿಗಳಾಗಿಯೇ ಜರಾಸಂಧನನ್ನು ಸಮೀಪಿಸಿದರು. ಜರಾಸಂಧನೂ ಅವರನ್ನು ಆದರದೊಂದಿಗೇ ಸತ್ಕರಿಸಿದನು. ಪಾದ್ಯ-ಮಧುಪರ್ಕಗಳಿಗೆ, ಗೋದಾನಕ್ಕೆ, ಅರ್ಹರಾದವರು ಅವರು. ಪ್ರತ್ಯುತ್ಥಾನ ಮಾಡಿ, ಎಂದರೆ ತಾನೇ ಎದ್ದು ಬಂದವನಾಗಿ, ಅವರಿಗೆ ವಿಧ್ಯನುಸಾರವಾದ ಆತಿಥ್ಯವನ್ನು ಸಲ್ಲಿಸಿದನು, ಜರಾಸಂಧ.
"ತಮಗೆ ಸ್ವಾಗತ" ಎಂದನು. ಆದರೆ ಭೀಮಾರ್ಜುನರು ಮೌನದಿಂದಿದ್ದರು. ಅವರಲ್ಲಿ ಕೃಷ್ಣನೇ ಎಷ್ಟಾದರೂ ಮಹಾಬುದ್ಧಿಶಾಲಿಯಲ್ಲವೇ? ಆತನೇ ಮಾತನಾಡಿದನು. "ರಾಜಶ್ರೇಷ್ಠನೇ, ಇವರಿಬ್ಬರೂ ನಿಯಮದಲ್ಲಿರುವವರು, ಎಂದರೆ ಮೌನವ್ರತದಲ್ಲಿರತಕ್ಕವರು. ಮಧ್ಯರಾತ್ರಿಯು ಕಳೆದ ನಂತರವೇ ನಿನ್ನೊಡನೆ ಇವರು ಮಾತನಾಡತಕ್ಕವರು" – ಎಂದನು.
ತದನುಸಾರ ಯಜ್ಞಗೃಹದಲ್ಲುಳಿದುಕೊಳ್ಳಲು ಅವರಿಗೊಂದು ವ್ಯವಸ್ಥೆ ಮಾಡಿ ತನ್ನ ಅಂತಃಪುರಕ್ಕೆ ತೆರಳಿದನು. ಅರ್ಧರಾತ್ರವು ಕಳೆಯಲು, ಆ ದ್ವಿಜರಿದ್ದೆಡೆಗೆ ತೆರಳಿದನು.
ಆ ರಾಜನ ಈ ವ್ರತವು ಜಗದ್-ವಿಶ್ರುತವಾಗಿದ್ದಿತು; ಏನೆಂದರೆ, ಸ್ನಾತಕಬ್ರಾಹ್ಮಣರು ಬಂದರೆಂದರೆ - ಅದು ಅರ್ಧರಾತ್ರವೇ ಆಗಿದ್ದರೂ ಸಹ -ಅವರನ್ನು ತಾನೇ ಎದುರ್ಗೊಂಡು ಸ್ವಾಗತಿಸುತ್ತಿದ್ದನು.
ಬಂದಿದ್ದವರ ವೇಷವೇ ಅಪೂರ್ವವಾಗಿದ್ದರಿಂದ, ಜರಾಸಂಧನು ವಿಸ್ಮಯದಿಂದಲೇ ಅವರ ಬಳಿ ಸಾರಿದನು. ಆತನನ್ನು ಕಾಣುತ್ತಲೇ, "ಸ್ವಸ್ತ್ಯಸ್ತು", "ನಿನಗೆ ಕಲ್ಯಾಣವಾಗಲಿ", ಎಂದು ಅವರೆಂದರು; ಪರಸ್ಪರ ಮುಖ ನೋಡಿಕೊಂಡರು. ಬ್ರಾ ಹ್ಮಣವೇಷದಲ್ಲಿದ್ದ ಆ ಪಾಂಡವ-ಯಾದವರಿಗೆ "ಕುಳಿತುಕೊಳ್ಳಿ" ಎಂದು ಹೇಳಿದನು.
ಸೂಚನೆ : 15/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.