Monday, April 13, 2026

ಪ್ರಶ್ನೋತ್ತರ ರತ್ನಮಾಲಿಕೆ 61 (Prasnottara Ratnamalike 61)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



image.png


ಪ್ರಶ್ನೆ - ೬೧ - ವಿದ್ವಾಂಸರನ್ನು ಪೂಜಿಸಲು ಯೋಗ್ಯರಾದವರು ಯಾರು?

ಉ. ಸ್ವಭಾವದಿಂದ ಯಾವಾಗಲೂ ವಿನಯವುಳ್ಳವನು.

‘ವಿದ್ವಾನ್ ಸರ್ವತ್ರ ಪೂಜ್ಯತೇ’ - ವಿದ್ವಾಂಸರಿಗೆ ಎಲ್ಲ ಕಡೆ, ಯಾವಾಗಲೂ ಗೌರವ ಇದೆ ಎಂದರ್ಥ. ವಿದ್ವಾಂಸನಿಗೆ ಗೌರವ ಬರಲು ಕಾರಣ, ಅವನು ಸಂಪಾದಿಸಿದ ವಿದ್ಯೆಯೇ ಆಗಿದೆ. ಈ ವಿದ್ಯೆ ಇರುವುದರಿಂದ ಅವನಿಗೆ ‘ವಿದ್ವಾನ್’ ಎಂಬುದಾಗಿ ಕರೆಯಲಾಗುತ್ತದೆ. ವಸ್ತುತಃ ‘ವಿದ್ಯೆ ಯಾವುದು?’ ಎಂಬುದರ ಬಗ್ಗೆ ಇಂದು ಸ್ಪಷ್ಟವಾದ ಅರಿವು ಇಲ್ಲವಾಗಿದೆ. ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಿದ್ಯೆಗೆ ಸಂಬಂಧಿಸಿದ ಮಾತು ನಿಜವಾದ ವಿದ್ಯೆ ಯಾವುದು? ಎಂಬುದನ್ನು ತಿಳಿಸುತ್ತದೆ. ವಿದ್ಯೆ ಎಂದರೆ ವಿದ್- ಜ್ಞಾನ, ಯಾ - ಪ್ರಾಪಣ. ಯಾವುದು ಜ್ಞಾನದ ಕಡೆ ನಮ್ಮನ್ನು ಕರೆದುಕೊಂಡು ಹೊಗುತ್ತದೆಯೋ ಅದಕ್ಕೆ ವಿದ್ಯೆ ಎಂಬುದಾಗಿ ಕರೆಯಬೇಕು ಎಂದು. ಇಂತಹ ವಿದ್ಯೆ ಉಳ್ಳವನು ವಿದ್ವಾಂಸ ಎಂಬುದಾಗಿ ಕರೆಸಿಕೊಳ್ಳುತ್ತಾನೆ. ಪ್ರಣವದಿಂದ ವಿಕಾಸವಾದ ಗಾಯತ್ರೀ, ವೇದಗಳು, ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೊದಲಾದವುಗಳನ್ನು ಈ ನೇರದಲ್ಲಿ ‘ವಿದ್ಯೆ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳ ತಾತ್ತ್ವಿಕಜ್ಞಾನ ಉಳ್ಳವನನ್ನು ‘ವಿದ್ವಾನ್’ ಎಂಬುದಾಗಿ ಕರೆಯಬಹುದು. ಇಂತಹ ವಿದ್ವಾಂಸನಿಗೆ ಮನ್ನಣೆ ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಿಗುವುದು ಅತ್ಯಂತ ಸಹಜ. ಈ ಬಗೆಯ ವಿದ್ವಾಂಸನಿಗೆ ಮನ್ನಣೆ ಬರಬೇಕು ಎಂಬುದಾದರೆ ಏನು ಬೇಕು? ಎಂಬ ಪ್ರಶ್ನೆ ಇಲ್ಲಿದೆ. ಅಂದರೆ ಇಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿಗೆ ಶೋಭಿಸುವಂತೆ ಮಾಡುವ ಇನ್ನೊಂದು ಗುಣ ಬೇಕೆ? ಎಂಬುದಾಗಿ ಸಂಶಯ ಬರಬಹುದು. ಅದಕ್ಕೆ ಪರಿಹಾರವನ್ನು ಈ ಉತ್ತರದಲ್ಲಿ ಕಾಣಬಹುದು. ಇದನ್ನೇ ಸಾರುವ ಸುಭಾಷಿತ ಹೀಗಿದೆ - “ವಿದ್ಯಾ ವಿನಯೇನ ಶೋಭತೇ”, “ವಿದ್ಯಾ ದದಾತಿ ವಿನಯಂ” ಎಂದು. ಅಂದರೆ ವಿದ್ಯೆ ಮತ್ತು ವಿನಯ ಈ ಎರಡು ಅನ್ಯೋನ್ಯವಾಗಿ ಇರುವಂಥವುಗಳು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ್ಲ, ಮೌಲ್ಯವಿಲ್ಲ ಎಂಬುದು ಇದರ ತಾತ್ಪರ್ಯ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ ವಿನಯ ಇರಬೇಕು ಎಂಬುದೇ ಅರ್ಥ. ಹಾಗಿಲ್ಲದಿದ್ದರೆ ಆ ವಿದ್ಯೆಯು ಅಪರಿಪೂರ್ಣ ಎಂದರ್ಥ. ಆಗ ಕೇವಲ ವಿದ್ಯೆ ಉಳ್ಳವರಿಗೆ ಗೌರವವೂ ಸಿಗದು. ಸಿಕ್ಕಿದ ಗೌರವೂ ಉಳಿಯದು. ಹಾಗಾಗಿ ವಿದ್ಯೆಯಿಂದ ಬರುವ ಗೌರವವು ಉಳಿಯಬೇಕಾದರೆ ವಿನಯ ಅತ್ಯಂತ ಮುಖ್ಯ ಎಂಬುದು ಸಾರಾಂಶ.

ಹಾಗಾದರೆ ವಿದ್ಯೆಯಿದ್ದವರಿಗೆ ವಿನಯ ಅಷ್ಟು ಮುಖ್ಯ ಏಕೆ? ಎಂದರೆ, ಸಾಮಾನ್ಯವಾಗಿ ವಿದ್ಯೆ ಇರುವವನು ಗರ್ವಕ್ಕೆ ಅಥವಾ ಮದಕ್ಕೆ ಈಡಾಗುತ್ತಾನೆ. ವಿದ್ಯೆಯು ಸರಿಯಾದ ಮಾರ್ಗದಲ್ಲಿ ಬರೆದಿದ್ದರೆ ಅದು ಅಹಂಕಾರಕ್ಕೆ ಕಾರಣವಾಗುತ್ತದೆ. ಹಾಗಾಗಿ ವಿದ್ಯೆಯ ಜೊತೆ ಎಲ್ಲಿ ವಿನಯ ಬಂದಿರುತ್ತದೆಯೋ, ಅಲ್ಲಿ ಬಂದ ವಿದ್ಯೆಯು ಸನ್ಮಾರ್ಗದಲ್ಲಿ ಬಂದಿದೆ ಎಂದರ್ಥ. ಆದ್ದರಿಂದ ವಿದ್ಯೆ ಮತ್ತು ವಿನಯಗಳಿಗೆ ಪರಸ್ಪರ ಸಂಬಂಧವಿರುವುದನ್ನು ಕಾಣಬಹುದು. ವಿದ್ಯೆಯಿಂದ ಬರುವ ವಿನಯವು ಪಾತ್ರತ್ವವನ್ನು ಅಂದರೆ ಮನ್ನಣೆಯನ್ನು ಕೊಡುತ್ತದೆ; ಆ ಮನ್ನಣೆಯು ಅವನಿಗೆ ಭದ್ರತೆಯನ್ನು ಉಂಟುಮಾಡುತ್ತದೆ. ಈ ಭದ್ರತೆಯು ಅವನಿಗೆ ಧರ್ಮ ಮತ್ತು ಶಾಶ್ವತವಾದ ಸುಖವನ್ನು ಕೊಡುತ್ತದೆ ಎಂಬುದಾಗಿ ಒಂದು ಸುಭಾಷಿತ ಸಾರುತ್ತದೆ. ಇವೆಲ್ಲವನ್ನು ಗಮನಿಸಿದಾಗ ವಿದ್ಯೆ ಮತ್ತು ವಿನಯಗಳಿಗೆ ಇರುವ ಸಂಬಂಧ ತಿಳಿಯುತ್ತದೆ. ಹಾಗಾಗಿ ವಿದ್ಯಾವಂತನಿಗೆ ಗೌರವ ಸಿಗಬೇಕಾದರೆ ಅವನು ವಿನಯ ಸ್ವಭಾವ ಉಳ್ಳವನಾಗಿರಬೇಕು ಎಂಬುದು ಪರಮ ಸತ್ಯವಾದ ವಿಷಯ.

ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.