ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಆರುಣಿ-ಉದ್ಧಾಲಕನಾದುದು. ಆರುಣಿ ಧೌಮ್ಯ ಮಹರ್ಷಿಗಳ ಶಿಷ್ಯರು. ಗುರುನಿಷ್ಠೆ ಅವರ ಉಸಿರು. ಗುರುಗಳು ಹೇಳಿದ್ದನ್ನು ಅನೂಚಾನವಾಗಿ ಪಾಲಿಸುವುದು ಜೀವನವ್ರತವಾಗಿ ಇಟ್ಟುಕೊಂಡವರು. ಒಮ್ಮೆ ಗುರುಗಳಿಂದ ಆಜ್ಞಾಪಿತರಾಗಿ, ಒಡೆದು ಹೋಗಿದ್ದ ಗದ್ದೆಯ ಬದುವನ್ನು ಕಟ್ಟಲು ಹೋದರು. ಕಲ್ಲಿಟ್ಟರು. ಮಣ್ಣಿನ ಗೋಡೆ ಮಾಡಲು ಪ್ರಯತ್ನಿಸಿದರು. ಏನು ಮಾಡಿದರೂ ಪ್ರವಾಹ ನಿಲ್ಲದಾಯಿತು. ಗುರುಗಳ ಆಜ್ಞೆ ಸರ್ವ ಪ್ರಕಾರದಿಂದಲೂ ನಡೆಸಬೇಕಾಗಿದೆ. ಕಡೆಯಲ್ಲಿ ತಾವೇ ಆ ಪ್ರವಾಹಕ್ಕೆ ಅಡ್ಡಲಾಗಿ ಇಡೀ ರಾತ್ರಿ ಮಲಗಿ ಪ್ರವಾಹಕ್ಕೆ ತಡೆ ಒಡ್ಡಿದರು. ಧೌಮ್ಯರು ಶಿಷ್ಯನನ್ನು ಹುಡುಕಿಕೊಂಡು ಬಂದರು. ನೋಡಿದರೆ ಮೈಎಲ್ಲಾ ಕೆಸರು. ಸರಿ ಆರುಣಿ ನಡೆದುದೆಲ್ಲವನ್ನು ಗುರುಗಳಿಗೆ ಹೇಳಿದರು. ಎಂತಹ ಗುರುನಿಷ್ಠೆ ! ಧೌಮ್ಯರ ಹೃದಯ ತುಂಬಿಬಂತು. ಜ್ಞಾನಿಗಳು ಅವರು. ದಯಾಮಯರು ಕೂಡ. ಶಿಷ್ಯನಿಗೆ ಉದ್ಧಾಲಕ ಎಂದು ಹೆಸರಿಟ್ಟರು. ಬದುವಿನಿಂದ ಎದ್ದುಬಂದವನು ಎಂಬುದಾಗಿ ಅವನ ಗುರುನಿಷ್ಠೆಯನ್ನು ಸದಾ ನೆನಪಿಸುವ ಹೆಸರು. ಅಷ್ಟೇ ಅಲ್ಲದೇ ತಮ್ಮ ಸಂಕಲ್ಪಮಾತ್ರದಿಂದ ಸಕಲ ವೇದ ಶಾಸ್ತ್ರಗಳ ಸಾರವೂ ಅವನ ಬುದ್ಧಿಯಲ್ಲಿ ಸ್ಫುರಿಸುವಂತೆ ಅನುಗ್ರಹಿಸಿದರು. ಉದ್ಧಾಲಕರೂ ತಮ್ಮ ಗುರುನಿಷ್ಠೆ ತಪಸ್ಸುಗಳಿಂದ,ಗುರುವಿನ ಪರಮಾನುಗ್ರಹದಿಂದ ಜ್ಞಾನಿಗಳಾದರು.
ವಿದ್ಯೆಯ ಉದ್ದೇಶ ಏನಿರಬೇಕು? ಅವರಿಗೊಬ್ಬ ಮಗ. ಶ್ವೇತಕೇತು. ಅವನು ಹನ್ನೆರಡು ವರ್ಷ ವಯಸ್ಸಾದರೂ ಮನೆಯ ಸಲಿಗೆಯಿಂದ ಉಂಡು, ತಿಂದು ಓಡಾಡಿಕೊಂಡಿದ್ದ. ಉದ್ಧಾಲಕರು ಅವನಿಗೆ ಗುರುಕುಲಕ್ಕೆ ಹೋಗಿ ವೇದ ವೇದಾಂಗಗಳನ್ನೂ, ಜೀವನ ಪದ್ಧತಿಗಳನ್ನೂ ಅಧ್ಯಯನ ಮಾಡಿಬರುವಂತೆ ಹೇಳಿದರು. ಶ್ವೇತಕೇತು ಬಹಳ ದೀರ್ಘಕಾಲ ಗುರುಕುಲದಲ್ಲಿದ್ದು ವೇದ ಶಾಸ್ತ್ರಗಳನ್ನೆಲ್ಲ ಅಧ್ಯಯನ ಮಾಡಿದ. ತಾನು ಕಲಿಯಬೇಕಾದುದು ಇನ್ನು ಏನೂ ಉಳಿದಿಲ್ಲ. ತನಗೆ ಎಲ್ಲವೂ ಗೊತ್ತಿದೆ. ತಾನು ಇನ್ನು ಯಾರಿಗೂ ತಲೆಬಾಗಬೇಕಿಲ್ಲ ಎಂಬ ಅಭಿಮಾನದಿಂದ ಮನೆಗೆ ಬಂದ. ಉದ್ಧಾಲಕರು ಜ್ಞಾನಿಗಳಲ್ಲವೇ.. ಮಗನನ್ನು ಗಮನಿಸಿದರು. ವಿದ್ಯಾ ದದಾತಿ ವಿನಯಂ .. ಇರಬೇಕಿತ್ತು. ಆದರೆ ಇವನಲ್ಲಿ ಅದು ಕಾಣಲಿಲ್ಲ. ಕೇಳಿದರು- ಏನನ್ನು ಕಲಿತೆ ಎಂದು. ಪೂರ್ಣ ಸಿಲಬಸ್ ಹೇಳಿದ. ಉದ್ಧಾಲಕರು –ಯಾವುದನ್ನು ತಿಳಿದರೆ ಇನ್ನೇನನ್ನೂ ತಿಳಿಯಬೇಕಿಲ್ಲವೋ, ಯಾವುದು ಎಲ್ಲದಕ್ಕೂ ಆಧಾರವಾಗಿದೆಯೋ ಅದನ್ನು ಕಲಿತಿದ್ದೀಯಾ? ಎಂದರು. ಶ್ವೇತಕೇತುವಿಗೆ ಅರ್ಥವಾಗಲಿಲ್ಲ. ಅಂತಹ ವಸ್ತು ಯಾವುದು ? ತಾವೇ ತಿಳಿಸಬೇಕು ಎಂದ.
ಉದ್ಧಾಲಕರು ಮಗನಿಗೆ ಪ್ರೀತಿಯಿಂದ ವಿಧ ವಿಧವಾದ ಸರಳ ಉದಾಹರಣೆಗಳಿಂದ ಆತ್ಮ ತತ್ತ್ವವನ್ನು ಉಪದೇಶಿಸುತ್ತಾರೆ.
ಗಂಗೆ-ಯಮುನೆಯರು ಸಾಗರ ಸೇರಿದಂತೆ: ಗಂಗಾದಿ ನದಿಗಳು ಹರಿಯುವಾಗ ಅದಕ್ಕೆ ನಾಮ ರೂಪಗಳು ಇರುತ್ತವೆ. ಆದರೆ ಸಾಗರ ಸೇರಿದಾಗ ಅದು ಸಾಗರವೇ ಆಗುತ್ತದೆ. ಅಲ್ಲಿ ಗಂಗೆ ಎಂಬ ಹೆಸರಿಲ್ಲ. ಹೇಗೆ ಸಮುದ್ರ ಸೇರಿದಮೇಲೆ, ನಾನು ಗಂಗೆ, ಯಮುನೆ ಎಂಬ ವ್ಯವಹಾರವಿಲ್ಲವೋ ಹಾಗೆಯೇ ಸದ್ವಸ್ತುವಿನಿಂದ ವಿಕಾಸವಾದ ಚೇತನರು ಅಂದರೆ ನಾವು ಮತ್ತೆ ಅಲ್ಲಿಗೆ ಸೇರಿದಾಗ ನಮ್ಮ ನಾಮ ರೂಪಗಳನ್ನು ಹೇಳಲಾರೆವು. ಅಲ್ಲಿಂದ ಬಂದೆವೆಂಬುದೂ ನಮ್ಮ ಅರಿವಿಗೆ ಬಾರದು, ಅಲ್ಲಿ ಲಯವಾದುದೂ ಅರಿವಿಗೆ ಬಾರದು. ಆದರೆ ಎಲ್ಲಕ್ಕೂ ಆ ಸದ್ವಸ್ತುವೇ ಆತ್ಮಾ. ಅದೇ ನೀನೂ ಆಗಿದ್ದೀ ಎನ್ನುತ್ತಾರೆ.
ವೃಕ್ಷದ ಆರಂಭ,ಮಧ್ಯ, ಅಂತ್ಯದಲ್ಲಿ ಯಾವ ರಸ ಹರಿಯುತ್ತಿದೆ? ಒಂದು ಮರವನ್ನು ಆರಂಭದಲ್ಲಿ, ಮಧ್ಯದಲ್ಲಿ ಅಂತ್ಯದಲ್ಲಿ ಕೆತ್ತಿದರೂ ರಸವನ್ನು ಸ್ರವಿಸುತ್ತದೆ. ಅದರೊಳಗೆ ಆ ಚೇತನ ಇರುವುದರಿಂದಲೇ ಹೀಗಾಗುತ್ತದೆ. ಆ ಚೇತನ ತನ್ನನ್ನು ಹಿಂತೆಗೆದುಕೊಂಡರೆ ಆ ಕೊಂಬೆ ಒಣಗುತ್ತದೆ. ಮರಣವೆಂಬುದೂ ಹೀಗೇ. ಜೀವನು ಶರೀರವನ್ನು ಬಿಡುವಾಗ ಆಗುವಂತಹದು. ಜೀವನಂತೂ ನಾಶವಾಗುವುದಿಲ್ಲ. ಎಂದೇ ಆತ್ಮ ವಸ್ತುವೇ ಎಲ್ಲದರ ಇರುವಿಕೆಗೆ ಕಾರಣ, ನಿನ್ನೊಳಗೂ ಅದೇ ಇರುವುದು. ನೀನು ಅದೇ ಆಗಿದ್ದೀ ಎನ್ನುತ್ತಾರೆ.
ಆಲದ ಬೀಜದಲ್ಲಿ ಆಲದ ಮರವೇ? ಉದ್ಧಾಲಕರು ಶ್ವೇತಕೇತುವಿಗೆ ಒಂದು ಆಲದ ಹಣ್ಣನ್ನು ತರಲು ಹೇಳುತ್ತಾರೆ. ತರುತ್ತಾನೆ. ಅದನ್ನು ತುಂಡುಮಾಡಲು ಹೇಳುತ್ತಾರೆ. ಅದರಲ್ಲಿ ಏನಿದೆ ಎನ್ನುತ್ತಾರೆ. ಬೀಜವಿದೆ ಎನ್ನುತ್ತಾನೆ.ಬೀಜವನ್ನು ಒಡೆಯಲು ಹೇಳುತ್ತಾರೆ. ಅದರಲ್ಲಿ ಏನು ಕಾಣಿಸಿತು ಎಂದು ಕೇಳುತ್ತಾರೆ. ಏನೂ ಇಲ್ಲವೆನ್ನುತ್ತಾನೆ. ಆಗ ಅವರು ಹೇಳುತ್ತಾರೆ. ಏನೂ ಕಾಣದ ಈ ಸೂಕ್ಷ್ಮವಾದ ಬೀಜದಲ್ಲಿ ದೊಡ್ಡ ಆಲದ ಮರವೇ ಇದೆ. ಕಾರ್ಯರೂಪದಲ್ಲಿ ಎದ್ದುನಿಂತಿದೆ. ಹಾಗೆಯೇ ಚರಾಚರ ರೂಪವಾದ ಸೃಷ್ಟಿ .ಎಲ್ಲದಕ್ಕೂ ಕಾರಣವಾಗಿ ಆ ಸದ್ವಸ್ತು ಇದೆ. ಅದು ನಿನ್ನಲ್ಲೂ ಇದೆ. ನೀನು ಅದೇ ಆಗಿದ್ದೀ ಎಂದು ಘೋಷಿಸುತ್ತಾರೆ.
ಶ್ರೀರಂಗವಾಣಿ : “ ಒಂದು ಉಗುರುಕಣ್ಣಿನಲ್ಲಿ ಅಡಗಬಹುದಾದ ಆಲದ ಬೀಜವು ತನ್ನನ್ನು ತಾನು ಬೆಳೆಸಿಕೊಂಡು ಮತ್ತೆ ಬೀಜರೂಪದಲ್ಲಿಯೇಇರುವುದಕ್ಕೆ ಇಷ್ಟಪಟ್ಟು ಉಪಸಂಹರಿಸಿಕೊಳ್ಳುತ್ತದೆ.ಅಂತೆಯೇ ಈ ಜೀವನ ವೃಕ್ಷವೂ ಆಗಿದೆ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಉಪ್ಪು ಹೋದುದು ಎಲ್ಲಿಗೆ? ಮುಂದೆ ಒಂದು ಉಪ್ಪಿನ ಕಲ್ಲನ್ನು ರಾತ್ರಿ ನೀರಿನ ಪಾತ್ರೆಯಲ್ಲಿ ಹಾಕಿ ಬೆಳಿಗ್ಗೆ ತರಲು ಹೇಳಿದರು. ಉಪ್ಪಿನ ಕಲ್ಲು ಶ್ವೇತಕೇತುವಿಗೆ ಸಿಗಲಿಲ್ಲ. ಆಗ ಉಪ್ಪು ಎಲ್ಲಿ ಹೋಯಿತು? ನೀರನ್ನು ಮೇಲಿಂದ ಮಧ್ಯದಿಂದ, ತಳದಿಂದ ಸೇವಿಸಲು ಹೇಳಿದರು. ಎಲ್ಲೆಡೆಯಲ್ಲೂ ಉಪ್ಪು. ಕಣ್ಣಿಂದ ಕಾಣಲಾಗದಿದ್ದರೂ ಉಪ್ಪು ಇರುವುದು ನಿಜ. “ಹಾಗೆಯೇ ಎಲ್ಲೆಲ್ಲೂ ವ್ಯಾಪಿಸಿರುವ ಪರಬ್ರಹ್ಮನು ಬರಿ ಕಣ್ಣಿಂದ ನೋಡಲಾಗದಿದ್ದಾರೂ ಅವನೇ ಎಲ್ಲೆಲ್ಲೂ ಇರುವನು. ನಿನ್ನಲ್ಲೂ . ಅದೇ ನೀನಾಗಿದ್ದೀ”. ಹೀಗೆ ಪರಮ ಸತ್ಯದ ಅರಿವನ್ನು ಶ್ವೇತಕೇತುವಿನಲ್ಲಿ ಮೂಡಿಸಿ ಅವನು ಅದರ ಅರಿವಿಗಾಗಿ ತಪಸ್ಸು ಮಾಡುವಂತೆ ಮಾಡಿದರು. ಶ್ವೇತಕೇತುವೂ ಸಹ ತಂದೆಯಂತೆಯೇ ಪರಬ್ರಹ್ಮದ ಅನುಭವವನ್ನು ಪಡೆದು ಜ್ಞಾನಿಯಾದನು. ಇದು ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಕಥೆ.
ಉಪನಿಷತ್ತುಗಳ ಮಹಾ ಧ್ಯೇಯ ಉಪನಿಷತ್ತುಗಳೆಂದರೆ ಬ್ರಹ್ಮ ವಿದ್ಯೆಯನ್ನು ಅರುಹಲು ಬಂದ ವಿದ್ಯೆ. ಅದಕ್ಕೆ ಬೇಕಾದ ಸಾಧನಾ ಮಾರ್ಗವನ್ನು ಹೇಳುವ ವಿದ್ಯೆ. ಜ್ಞಾನಿಯಾದ ಗುರುವಿನ ಸಮೀಪದಲ್ಲಿ ಕುಳಿತು ಉಪದೇಶವನ್ನು ಪಡೆದು ಜೀವನದ ಸಾರ್ಥಕ್ಯವನ್ನು ಪಡೆಯುವುದೇ ಉಪನಿಷತ್ತುಗಳ ಸಾರ. ಜೀವನದಲ್ಲಿ ಸಾಧನೆ-ಶೋಧನೆ-ಬೋಧನೆ ಮುಖ್ಯವಾಗಿ ಇರಬೇಕೆಂಬ ಸೂತ್ರವ್ರಾಯವಾದ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅಂತಹ ಗುರು-ಶಿಷ್ಯ ಪರಂಪರೆಯಿಂದ ಬೆಳೆದ ಸಂಸ್ಕೃತಿ ನಮ್ಮದು. ನಾವೆಲ್ಲರೂ ಅಂತಹ ಉಪದೇಶದ ಮರ್ಮವನ್ನು ಅರಿತು ಜೀವನ ಮಾಡುವಂತಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.